ಮಂಗಳವಾರ, ಸೆಪ್ಟೆಂಬರ್ 23, 2008

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 3)..



ನನ್ನ ಹಣೆಗಾದ ನೋವನ್ನೂ ಲೆಕ್ಕಿಸದೆ, “ಏನ್ರೀ ಬಹಳ ನೋವಾಯಿತಾ ನಿಮಗೆ?” ಎಂದು ಅವಳನ್ನು ಬಲು ಕನಿಕರದ ಮಾತುಗಳಿಂದ ಸಂತೈಸಲು ಮುಂದಾದೆನು. ಅವಳ ಮುದ್ದಾದ ಹಣೆಯ ಒಂದಂಚು ನೋವಿನಿಂದ ಊದಿಕೊಂಡಿರುವುದು ಸ್ಪಷ್ಟವಾಗಿ ನನಗೆ ಕಾಣಿಸುತ್ತಿತ್ತು. ತಕ್ಷಣವೇ ನನ್ನ ಬಳಿ ಇದ್ದ ನೋವುನಿವಾರಕ ಔಷಧವನ್ನು ಬ್ಯಾಗಿನಿಂದ ತೆಗೆದು, ಹಚ್ಚಿಕೊಳ್ಳಲು ಅವಳಿಗೆ ಕೊಟ್ಟೆನು. ಅದನ್ನು ಹಚ್ಚಿಕೊಂಡು ಮಲಗಲು ಅಣಿಯಾಗುತ್ತಾಳೆ ಎಂದು ನಾನು ಮನದಲ್ಲಿ ಎಣಿಸಿದ್ದೆ.

ಆದರೆ ಅದು ಹಾಗಾಗಲಿಲ್ಲ. ಮೃದುವಾದ ಅವಳ ಹಸ್ತವನ್ನು ನನ್ನತ್ತ ಚಾಚುತ್ತಾ, “ನೀವು ಆವಾಗಿನಿಂದಲೂ ನನ್ನ ಜೊತೆ ಮಾತನಾಡಲು ತುಂಬಾ ಇಚ್ಚಿಸಿದ್ದೀರಿ ಅಂತಾ ಕಾಣುತ್ತೆ. ಆದರೆ ನಾನೇ ಮಾತನಾಡ್ಲಿಲ್ಲ ಕ್ಷಮಿಸಿ! ನನ್ನ ಹೆಸರು ದೀಪಾ, ಹಾಸನದಲ್ಲಿ ಇಂಜಿನಿಯರಿಂಗ್ ಮಾಡ್ತಾ ಇದ್ದೀನಿ, ಗಣೇಶನ ಹಬ್ಬಕ್ಕೆಂದು ನನ್ನ ಸ್ನೇಹಿತೆಯರೊಂದಿಗೆ ಊರಿಗೆ ಹೋಗ್ತಾ ಇದ್ದೀನಿ" ಎಂದು ಒಂದೇ ನಿಟ್ಟುಸಿರಿನಲ್ಲಿ ಹೇಳದೆ ಬಲು ತಾಳ್ಮೆಯಿಂದ ನನ್ನಲ್ಲಿ ಹೇಳಿದಳು. ಆನಂತರ ನಿಮ್ಮ ಹೆಸರೇನು? ನಿಮ್ಮದು ಯಾವೂರು? ಎನ್ನುವುದನ್ನೂ ಸಹ ಅಷ್ಟೇ ತಾಳ್ಮೆಯಿಂದ ನನ್ನಲ್ಲಿ ಕೇಳಿದಳು. ತುಂಬಾ ಆನಂದಭರಿತನಾಗಿ ಅವಳು ಕೇಳಿದ ಎರಡೇ ಎರಡು ಪ್ರಶ್ನೆಗಳಿಗೆ ಇಡೀ ನನ್ನ ಜನ್ಮವೃತ್ತಾಂತವನ್ನೇ ಚಾಚೂ ತಪ್ಪದೇ ಅವಳಲ್ಲಿ ಹೇಳಿದೆ. ನಾನು ಹೇಳಿದ ಯಾವೊಂದು ಸಂಗತಿಯೂ ಅಷ್ಟು ಕುತೂಹಲವೆಂದು ಅವಳಿಗೆ ಅನ್ನಿಸಲಿಲ್ಲ. ಆದರೆ ನನಗೆ ಪ್ರಕೃತಿಯ ಬಗ್ಗೆ ಹಾಗೂ ಸಾಹಿತ್ಯ, ಕಲೆ ಬಗ್ಗೆ ಇಷ್ಟ ಎಂದು ಹೇಳಿದ ನುಡಿಗಳು ಅವಳಿಗೆ ಕುತೂಹಲ ತರಿಸಿದ್ದವು. ಅಲ್ಲದೇ ಅದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಳಾಗಿದ್ದಳು.

ತುಸುಸಮಯದ ಬಳಿಕ ಅವಳೇ ಮುಂದುವರೆದು, “ನೀವು ಯಾವ್ಯಾವ ಕಾದಂಬರಿ ಓದಿದ್ದೀರಾ? ಯಾರು ನಿಮಗೆ ಇಷ್ಟವಾದ ಸಾಹಿತಿ?” ಎಂದು ಕೇಳಿದಳು. ಮೊದಲೇ ಅವಳ ಜೊತೆ ಮಾತಾಡಲು ಚಡಪಡಿಸುತ್ತಿದ್ದ ನಾನು, "ಪಂಪನಿಂದ ಹಿಡಿದು ಜಯಂತ್ ಕಾಯ್ಕಿಣಿಯವರೆಗೂ ಎಲ್ಲಾ ಕನ್ನಡ ಸಾಹಿತಿಗಳ ಆ ಕಾದಂಬರಿ ಓದಿದ್ದೀನಿ..ಈ ಕಾದಂಬರಿ ಓದಿದ್ದೀನಿ, ದ.ರಾ ಬೇಂದ್ರೆಯವರ ಕವನಗಳು ಅಂದ್ರೆ ಇಷ್ಟ " ಅದು ಇದು ಎಂದು ಮನಸ್ಸಿಗೆ ಬಂದಿದ್ದನ್ನೆಲ್ಲ ಹೇಳಲು ಶುರುಮಾಡಿದೆ. ಆದರೂ ಅವಳು ಸ್ವಲ್ಪವೂ ಬೇಸರಗೊಳ್ಳಲೇ ಇಲ್ಲ ನಾನು ಹೇಳಿದ್ದನ್ನೆಲ್ಲ ತೀರ ಸಮಾಧಾನವಾಗಿ ಕೇಳುತ್ತಲೇ ಇದ್ದಳು. ಆಗಲೇ ನನಗೆ ಅರಿವಾದದ್ದು ಅವಳಿಗೆ ಸಾಹಿತ್ಯದ ಬಗ್ಗೆ ತುಂಬಾ ಒಲವಿದೆ ಎಂದು. ನಾ ಬರೆದ ಒಂದೆರಡು ಲೇಖನಗಳನ್ನು, ಕವನಗಳನ್ನು ಅವಳಿಗೆ ತೋರಿಸಿದೆ.
ಅವುಗಳನ್ನು ಓದಿ, "ತುಂಬಾ ಚೆನ್ನಾಗಿ ಬರೆದಿದ್ದೀರ, ಹೀಗೆಯೇ ಬರೆಯುತಾ ಇರಿ. ನಮ್ಮ ಕನ್ನಡಭಾಷೆ ನಿಮ್ಮಂತಹ ಪ್ರಜ್ಞಾವಂತ ಯುವಕರಿಂದಲೇ ಏಳಿಗೆಯ ಹಾದಿಯನ್ನು ಹಿಡಿಯಬೇಕು" ಎಂದಳು.

ನಂತರದಲ್ಲೂ ಅವಳೇ ಮುಂದುವರೆದು, “ನನಗೆ ಹಾಡುವುದು, ನೃತ್ಯ ಮಾಡುವುದು ಅಂದ್ರೆ ತುಂಬಾ ಇಷ್ಟ ನಾನು ಜಂಬಕ್ಕೆ ಹೇಳ್ತಿಲ್ಲ ಸ್ಕೂಲ್ ಲೆವೆಲ್ನಲ್ಲಿ, ಕಾಲೇಜ್ ಲೆವೆಲ್ನಲ್ಲಿ ಅನೇಕಾನೇಕ ಬಹುಮಾನಗಳು ನನಗೆ ಬಂದಿವೆ” ಎಂದು ಭಾವಪರವಶಳಾಗಿ ನುಡಿದಳು.
ಮೊದಲೇ ಅವಳ ರೂಪರಾಶಿಯ ಬಲೆಯಲ್ಲಿ ಆಜೀವನ ಬಂಧಿಯಾಗಿದ್ದ ನಾನು, ಅವಳಿಗೆ ಕಲೆ, ಸಾಹಿತ್ಯದ ಬಗ್ಗೆ ಇರುವ ಅಭಿರುಚಿಯನ್ನು ಕೇಳಿ ಅವಳಲ್ಲಿ ಇನ್ನಷ್ಟು ಮಾರುಹೋದೆ, ಬಾಳಪಯಣದ ರಥದಲ್ಲಿ ಸಂಗಾತಿಯಾಗಿಸಿಕೊಳ್ಳುವ ಯೋಜನೆಯನ್ನು ಮನದಲ್ಲೇ ಹಾಕಿಕೊಂಡು ಅರೆಕ್ಷಣದಲ್ಲಿ ಒಂದೆರಡು ಕವನಗಳನ್ನು ಅಂತರಾಳದಲ್ಲೇ ಬರೆದುಕೊಂಡು ಅವಳಿಗೆ ಹೇಳಲು ಮುಂದಾದೆ. ಅವಳೂ ಸಹ ಕೇಳಲು ಬಲು ಕಾತರವಾಗಿದ್ದಳು...

ಓ ದೀಪ..
ಆ ನಿನ್ನ ರೂಪ..
ನನ್ನುಸಿರಿನ ಕಣಕಣಕ್ಕೂ ಪರಿಮಳದ ದೂಪ..
ಆ ರೂಪ ಕಂಡ ನಾ, ನಿತ್ಯ ನಿನಗಾಗಿ ಪ್ರೇಮಪತ್ರ ಬರೆಯೋದು ತಪ್ಪಾ..?
ಆ ನನ್ನ ಪ್ರೇಮಪತ್ರಕ್ಕೆ ಮರು ಉತ್ತರ ನೀ ಬರೀತಿಯಾ ಸ್ವಲ್ಪ..?

ಓ ದೀಪು
ಗುಣದಲಿ ನೀ ಮುಗ್ಧ ಪಾಪು..
ಜಗದ ಜನರಲಿ ಸ್ಪೂರ್ತಿ ತುಂಬಲು ನಿನ್ನ ನಗುವೊಂದೇ ಸಾಕು..
ನೀ ನಗು ನಗುತಾ ಜೊತೆಗಿರಲು ನನಗೆ ಇನ್ನೇನು ಬೇಕು?

ಓ ದೀಪು
ನಿನ್ನ ಚೆಲುವ ಸಿರಿ ಹೆಚ್ಚಿಸಲೆಂದು ನಾ ತಂದಿರುವೆ Dove ಸೋಪು..
ಅದನು ತಲುಪಿಸಲು ಒಮ್ಮೆ ನನಗೆ ತೋರುವೆಯಾ ನಿಮ್ಮೂರ Road ಮ್ಯಾಪು.

ಇದನ್ನೆಲ್ಲ ತುಂಬು ಮೌನದಿಂದ ಆಲಿಸುತ್ತಿದ್ದವಳು, ಕಿರುನಗೆ ಬೀರುತ್ತಾ “ನಿಮ್ಮಲ್ಲಿ Imagination Power ತುಂಬಾ ಚೆನ್ನಾಗಿದೆ. ಆದರೆ ಈ ರೀತಿ Silly Silly ಕವನಗಳನ್ನು ಬರೆಯೋದು ಬಿಟ್ಟು, ನೀವ್ಯಾಕೆ ಹೆಚ್ಚು ಅರ್ಥಪೂರ್ಣವಾದ ಕವನಗಳನ್ನು, ಲೇಖನಗಳನ್ನು ಬರೆಯಲು ಪ್ರಯತ್ನಿಸಬಾರದು?” ಎಂದು ನನ್ನಲ್ಲಿ ಪ್ರಶ್ನಿಸಿದಳು. ಅರೆಕ್ಷಣ ಏನೇಳಬೇಕೆಂದು ತೋಚದೆ ನಾನು ತಬ್ಬಿಬ್ಬಾದೆ. ನಂತರ ತಡವರಿಸಿಕೊಂಡು “ಹೌದು..ಹೌದು ನೀವೇಳೊದು ನಿಜ, ನಾ ಆಗಲೇ ಹೆಚ್ಚು ಅರ್ಥಪೂರ್ಣವಾದ ಹತ್ತಾರು ಕವನಗಳನ್ನು ಬರೆದಿದ್ದೀನಿ” ಎಂದೇಳಿದೆ. ಆದರಾಗಲೇ "ನನ್ನ ಮನಸ್ಸು ತನ್ನ ಸ್ಥಿಮಿತ ಕಳೆದುಕೊಳ್ಳುವತ್ತ ಸಾಗಿತ್ತು. ಭುಗಿಲೆದ್ದ ಅಂತರಾಳದ ಇಂಗಿತವು ಮಾತಿನ ರೂಪದಲ್ಲಿ ಬರುವ ಹವಣಿಕೆಯಲಿ ತೊಡಗಿತ್ತು. ಸರಿ ಯಾವುದನ್ನೇ ಆಗಲಿ ಬಚ್ಚಿಟ್ಟುಕೊಂಡಷ್ಟೂ ನೋವೇ ಜಾಸ್ತಿಯೆಂಬುದನ್ನು ಅರಿತು. ನಾನೇ ಮುಂದುವರೆದು, ಅಚಲ ಧೈರ್ಯವನ್ನು ಮನದಲ್ಲಿ ತಂದುಕೊಂಡು ಅಂತರಾಳದ "ಪ್ರೀತಿ ಇಂಗಿತವನ್ನು" ಒಂದೇ ಉಸಿರಲ್ಲಿ ಹೇಳಿಯೆಬಿಟ್ಟೆ!"

ಅದಕ್ಕವಳು ನಸುನಗುತ್ತಾ, "ನೀವಿದನ್ನ ನನ್ನಲ್ಲಿ ಕೇಳಿಯೇ ಕೇಳುತ್ತಿರಾ ಎಂದು ನಾನು ಆಗಲೇ ಊಹಿಸಿದ್ದೆ. ಸರಿ ನಾನೂ ಸಹ ನನ್ನ ಮನದ ಇಂಗಿತವನ್ನು ಹೇಳುತ್ತ್ತೇನೆ ಕೇಳಿ, ನನಗೆ ನೀವು ಇಷ್ಷವಾಗಿಲ್ಲವೆಂದಲ್ಲ ತುಂಬ ಇಷ್ಟವಾಗಿದ್ದೀರಿ, ನಿಮಗಿಂತ ನಿಮ್ಮ ಕವನಗಳು, ನಿಮ್ಮ ಮಾತೃಭಾಷಾ ಪ್ರೇಮ ಇನ್ನೂ ಇಷ್ಟವಾಯಿತು. ಆದರೆ ಇಷ್ಟವನ್ನು ಪ್ರೀತಿ, ಪ್ರೇಮ, ಹಾಗೂ ಬಾಂಧವ್ಯದಲ್ಲಿ ಕೊನೆಮಾಡಿಕೊಳ್ಳೋದು ನನಗೆ ಇಷ್ಟವಿಲ್ಲ. ನಿಮಗೆ, ನಿಮ್ಮ ಬರವಣಿಗೆಗೆ ನಾನು ಆಜೀವ ಪರ್ಯಂತ ಅಭಿಮಾನಿಯಾಗಿರುತ್ತೇನೆ. ಅಲ್ಲದೇ ನಿಮಗೆ ಗೊತ್ತಲ? ನಮ್ಮ ಸಮಾಜದಲ್ಲಿ ಮದುವೆಗೆ ಎದುರಾಗುವ ತೊಡಕುಗಳು ನೂರಾರು ಅಂತ. ಜಾತಿ, ಮತ, ಪಂಥ ಇತ್ಯಾದಿ. ನಮ್ಮದು ಮೊದಲೇ ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ "...ಇನ್ನೂ ಏನೇನೋ ಹೇಳಹೋಗಿದ್ದಳು.

ಅಷ್ಟರಲ್ಲಿ ಏ ದೀಪಾ, ಊರು ಬಂತು ಕಣೇ. ಇಲ್ಲೇ ಸ್ಟಾಪ್ ಕೇಳೋಣ ಇಲ್ಲಾಂದ್ರೆ ಹೆಬ್ರಿಗೆ ಹೋಗಿ ಇಳಿದು ಕೊಳ್ಳಬೇಕಾಗುತ್ತೇ ಎಂದೇಳುತ್ತಾ ಆಕೆಯ ಗೆಳತಿಯರಿಬ್ಬರು ತಾವು ತಂದಿದ್ದ ಭಾರೀ ಗಾತ್ರದ ಲಗೇಜ್‌ಗಳನ್ನು ಕೈಯಲ್ಲಿ ಹಿಡಿದು ಇಳಿಯಲು ಸನ್ನದ್ಧರಾಗಿ ಮುಂದೆಹೋದರು.

ಅವರ ಆ ಮಾತುಗಳನ್ನು ಕೇಳುತ್ತಲೇ ದೀಪಾಳಿಗಿಂತ ಬಿರುಸಾಗಿ ನಾನೇ ಎದ್ದು ಲಗೇಜ್ ಕ್ಯಾಬಿನ್‌ನಿಂದ ಅವಳ ಲಗೇಜ್ ತೆಗೆದುಕೊಡುತ್ತಾ ಪಕ್ಕಕ್ಕೆ ಸರಿದು ಅವಳಿಗೆ ಇಳಿದುಹೋಗಲು ಅನುವು ಮಾಡಿಕೊಟ್ಟು ಅವಳನ್ನು ಕೊನೆಯದಾಗಿ ನೋಡಲು ಒಮ್ಮೆ ಕತ್ತನ್ನು ಎತ್ತಲು, ಅದೇ ಕ್ಷಣದಲ್ಲಿ ಡ್ರೈವರ್ ಲೈಟ್ ಹಾಕಿದನು. ನಾನು ಒಬ್ಬನೇ ಅಳುತ್ತಿರುವುದೆಂದು ನಾ ಅಂದುಕೊಂಡಿದ್ದೆ. ಆದರೆ ವಾಸ್ತವ್ಯದ ಚಿತ್ರಣ ಬೇರೆಯೇ ಹಾಗಿತ್ತು ಕ್ಷಣಾರ್ಧದಲ್ಲಿ ದೀಪಾಳ ನಯನಗಳು ಕಣ್ಣೀರಿನ ಹೊಳೆಯಲ್ಲಿ ಮಿಂದು ಕೆಂಪಾಗಿರುವುದು ಮುಗ್ಧಮಗುವಿಗೂ ತಿಳಿಯುವಂತೆ ಇತ್ತು. ಅವಳ ಆ ಮುಖವನ್ನೊಮ್ಮೆ ನೋಡಿ ತಡೆಯಲಾರದೆ ಬಿಕ್ಕಳಿಸಿ ಜೋರಾಗಿಯೇ ಅತ್ತುಬಿಟ್ಟೆ. ದೀಪಾಳಲ್ಲಿ ಅಳುವಿತ್ತು, ಆದರೆ ಮನದಲ್ಲಿ ಪ್ರೀತಿ ಅನ್ನುವುದರ ಬಗ್ಗೆ ಕೊಂಚವೂ ಕರುಣೆ ಇರಲ್ಲಿಲ್ಲ.

“ಯಾರ್ರೀ ಇಳಿಯೋರು? ಬೇಗ ಬನ್ರೀ, ಎಷ್ಟು ಹೊತ್ತು ಮಾಡ್ತೀರ?” ಎಂದು ಕಂಡಕ್ಟರ್ ಗಡುಸುಧ್ವನಿಯಲ್ಲಿ ಕೂಗಲು, ತಕ್ಷಣ ಎಚ್ಚೆತ್ತುಕೊಂಡ ದೀಪಾ ಅಳುತ್ತಾ ‌ಅಲ್ಲಿಂದ ಹೊರಟುಹೋದಳು. ಆ ಕ್ಷಣದಲ್ಲಿ ನನ್ನ ಕಣ್ಣಂಚಲ್ಲಿ ಕಣ್ಣೀರಿನ ಹನಿಬಿಂದುಗಳು ಹೆಚ್ಚಾಗುತ್ತಿದ್ದಂತೆ ಅವಳ ಭೌತಿಕ ಚಿತ್ರಣ ಅಸ್ಪಷ್ಟವಾಗುತ್ತಾ ಹೋಯಿತು.

ಅವಳು ಕೆಳಗೆ ಇಳಿಯುತ್ತಲೇ ಅವಳ ಗೆಳತಿಯೊಬ್ಬಳು, “ಯಾಕೆ ಅಳ್ತಿದ್ದೀಯಾ? ಏನೇ ವಿಷಯಾ? ಯಾರು ಆ ಹುಡುಗ?” ಎಂದು ಕೇಳಿದ ಪ್ರಶ್ನೆ ನನ್ನ ಕಿವಿಯಂಚನ್ನು ತಾಕುತ್ತಿದ್ದಂತೆ ಬಸ್ಸು ಹೊರಟಿತು.

ನಾನೇ ಹಚ್ಚಿಕೊಂಡಪ್ರೀತಿಯ ದೀಪದೂರ ಹೋಗಿ ಮನದ ಮನೆಯಲ್ಲಿ ಬೆಳಕನ್ನೇ ನುಂಗುವಂತೇ ಆವರಿಸಿದ್ದ ಕತ್ತಲೆ ಹಾಗೂ ನಯನಗಳ ಒಡಲಿನಿಂದ ತುಂಬಿಬರುತ್ತಿದ್ದ ಕಣ್ಣೀರಧಾರೆ ಇವುಗಳ ನಡುವೆಯೂ..... "ಸಹಪ್ರಯಾಣಿಕಳಾಗಿದ್ದ ಅವಳೊಂದಿಗೆ ಕಳೆದ ಪ್ರಯಾಣದ ಮಧುರ ಕ್ಷಣಗಳು ನನ್ನ ಅಂತರಾಳದಲ್ಲಿ ಬಾಲ್ಯದ ನೆನಪುಗಳಂತೆಯೇ ಅಚ್ಚಳಿಯದ ನೆನಪಾಗಲು ಆಗಲೇ ಯಥಾವತ್ತಾಗಿ ತರ್ಜುಮೆಯಾಗುತ್ತಿದ್ದವು" .-----------ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಮಂಗಳವಾರ, ಸೆಪ್ಟೆಂಬರ್ 16, 2008

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 2)..




ಹೃದಯ ಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 2)
ಮುಂದುವರೆದ ಭಾಗ ೨ - ನಿಮ್ಮ ಸುನಿಲ್ ಮಲ್ಲೇನಹಳ್ಳಿ
http://mallenahallipages.blogspot.com
ಹೆಚ್ಚಾಗಿ ಕನ್ನಡ ಪುಸ್ತಕಗಳನ್ನೇ ಓದುವ ನಾನು ಪಕ್ಕದಲ್ಲಿ ಹುಡುಗಿ ಕುಳಿತಿರುವುದನ್ನು ಮನಗಂಡು ನನ್ನ ಲೆವಲ್ಅನ್ನು ಕಾಯ್ದುಕೊಳ್ಳುವ ಸಲುವಾಗಿ ಓದಲು ಚೇತನ ಭಗತ್‌ರ “Five Point Someone ಎಂಬ ಇಂಗ್ಲೀಷ್ ಪುಸ್ತಕವನ್ನು ಬ್ಯಾಗಿನಿಂದ ಹೊರ ತೆಗೆದು, ಖರೀದಿಸಿದ ನಾಲ್ಕರಲ್ಲಿ ಮೊರು ಸೀಬೆಕಾಯಿಗಳನ್ನು ಬ್ಯಾಗಿನ ಒಳಗೆ ಹಾಕಿ, ಓದಲು ಅಣಿಯಾದೆ. ಆದರೆ ಬರಿ ಪುಟಗಳನ್ನು ತಿರುವಿಹಾಕಲು ಸಾಧ್ಯವಾಯಿತೇ ವಿನಹ: ಓದಲು ಮನಸ್ಸಾಗಲೇ ಇಲ್ಲ! ಅದಕ್ಕೆ ಮೊಲಕಾರಣ “ಕಿರುನೋಟದಲ್ಲಿ ನನ್ನ ಕಣ್ಣುಗಳು ಸೆರೆಹಿಡಿದಿದ್ದ ಆ ಹುಡುಗಿಯ ಸುಂದರವದನದ ರಂಗುರಂಗಿನ ಚಿತ್ರಣವು ನನ್ನಯ ಮನಸ್ಸಲ್ಲಿ ಸದ್ದಿಲ್ಲದ ಯಾವುದೋ ಆಹ್ಲಾದಕರ ನಾದವ ಮೀಟುತಿತ್ತು!”
ಇದರ ನಡುವೆ ನನಗೇನೆ ನನ್ನ ಬಗ್ಗೆ ನಾಚಿಕೆ ತರುವ ಘಟನೆಯೊಂದು ನೆಡೆದುಹೋಯಿತು. ಪಕ್ಕದಲ್ಲಿ ಕುಳಿತ ಆ ತರುಣಿಯ ಎದುರು ನನ್ನ ಲೆವಲ್ಅನ್ನು ಕಾಯ್ದುಕೊಳ್ಳುವ ಸಲುವಾಗಿ ನಾನು ಇಂಗ್ಲೀಷ್ ಭಾಷೆಯ ಪುಸ್ತಕವನ್ನು ಬ್ಯಾಗಿನಿಂದ ಹೊರತೆಗೆದು ಓದಲು ಮಗ್ನನಾದುದ್ದೆನೋ ನಿಜ. ಆದರೆ ಯಾವ ಹುಡುಗಿಯನ್ನು ನಾನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೋ ಆ ಹುಡುಗಿನೇ ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳು” ಪುಸ್ತಕವನ್ನು ಆಕೆಯ ಬ್ಯಾಗಿನಿಂದ ಹೊರತೆಗೆದು ಓದತೊಡಗಿದಳು.

ಇದಕ್ಕಿಂತಾ ಅವಮಾನ ಬೇಕೆ?? ನಾನು ಓದುತ್ತಿದ್ದ ಆ ಇಂಗ್ಲೀಷ್ ಪುಸ್ತಕವನ್ನು ಹಾಗೆ ಬ್ಯಾಗಿನೊಳಗೆ ಇಟ್ಟು,
“ಹುಚ್ಚು ಮನಸ್ಸಿನ ಹನ್ನೊಂದನೆಯ ಮುಖ ನಾನೇ?” ಇರಬೇಕೆಂದು ಅಂದುಕೊಳ್ಳುತ್ತಾ ಕಿಟಕಿಯ ಗ್ಲಾಸ್ ಅನ್ನು ಸ್ವಲ್ಪ ಸರಿಸುತ್ತ ಹೊರಗಿನ ಗಿಡ, ಮರ, ಬೆಟ್ಟಗಳ ನಯನಾಕರ್ಷಕ ದೃಶ್ಯವನ್ನು ನೋಡುವ ಪ್ರಯತ್ನ ಮಾಡತೊಡಗಿದೆ. ಪ್ರಕೃತಿಯ ಈ ಸುಂದರ ದೃಶ್ಯಾವಳಿಯನ್ನೇ ನೋಡಲೇಬೇಕೆಂದು ಇಷ್ಟಪಟ್ಟು ಬಸ್ಸನ್ನೇರಿ ಬಂದಿದ್ದೇನೋ ನಿಜ. ಆದರೆ ಆ ಸೊಬಗನ್ನು ನೋಡಲು ಮನಸ್ಸಿದ್ದರೇ ತಾನೆ? ಮನಸ್ಸೆಲ್ಲಾ ಪಕ್ಕದಲ್ಲಿ ಆಸೀನಳಾಗಿದ್ದ “ಆ ತರುಣಿಯ ರೂಪರಾಶಿಯ ಬಲೆಯಲ್ಲಿ ಆಜೀವನ ಬಂಧಿಯಾಗಿತ್ತು!” ಅವಳನ್ನು ನಾನು ನೋಡಿದ “ಆ ಒಂದೇ ಒಂದು ಕುಡಿನೋಟ” ನನ್ನಲ್ಲಿ ಇಷ್ಟೆಲ್ಲಾ ಬದಲಾವಣೆ ತಂದಿತ್ತು!

“Excuse me, ದಯವಿಟ್ಟು Window Glass ಅನ್ನು ಪೂರ್ತಿ ತೆಗೆಯುತ್ತಿರಾ? ನನಗೆ ಗಿಡ, ಮರ, ಬೆಟ್ಟ, ಗುಡ್ಡಗಳನ್ನು ನೋಡುವುದೆಂದರೆ ತುಂಬಾ ಇಷ್ಟ” ಎಂದು ಮೃದುವಾದ ಮತ್ತು ಅಷ್ಟೇ ಸ್ಪಷ್ಟವಾದ ನುಡಿಗಳು ನನ್ನ ಪಕ್ಕದಲ್ಲಿ ಕುಳಿತ ಆ ತರುಣಿಯ ಬಾಯಿಯಿಂದ ಅಲೆ ಅಲೆಯಾಗಿ ಹೊರಬಂದವು. ನಾನು ಕಿಟಕಿಯ ಗ್ಲಾಸ್ ಅನ್ನು ಪೂರ್ತಿಯಾಗಿ ತೆರೆಯುತ್ತ “ಅಷ್ಟು ಇಷ್ಟವಿದ್ದರೆ ನೀವಿಲ್ಲಿ ಕೂರಬನ್ನಿ, ನಾನು ನಿಮ್ಮ ಜಾಗದಲ್ಲಿ ಕೂರುತ್ತಿನಿ” ಎಂದೇಳಿ ಅವಳಿಗೆ ಕಿಟಕಿಯ ಪಕ್ಕದಲ್ಲಿ ಕೂರಲು ಅನುವು ಮಾಡಿಕೊಟ್ಟೆ. ಕಿಟಕಿಯ ಪಕ್ಕದ ಸೀಟಿನಲ್ಲಿ ಕೂರುತ್ತಾ ಅವಳು “Thank you very much” ಎಂದು ನನ್ನ ಕಣ್ಣಲ್ಲಿ ಕಣ್ಣಿಡುತ್ತಾ ಹೇಳಿದಳು. “ಎಲ್ಲಾ ಹಲ್ಲುಗಳು ಕಾಣುವ ಹಾಗೆ ನಗುತ್ತಾ ಪರವಾಗಿಲ್ಲ ಬಿಡಿ” ಎಂದು ನಾನು ಹೇಳಿದೆ.

ಇನ್ನೇನಾದರೂ ಮುಂದುವರೆದು ಮಾತನಾಡೋಣವೆಂದರೆ ಹೊರಗಿನ ನಯನಮನೋಹರ ದೃಶ್ಯವನ್ನು ನೋಡಲು ಅತ್ತ ತಲೆಹಾಕಿದವಳು ಅರ್ಧತಾಸಾದರೂ ನನ್ನತ್ತ ತಿರುಗಲೇ ಇಲ್ಲ! ಆನಂತರ ನಾನೇ ಬೇಕಂತಲೇ ನನ್ನ ಬ್ಯಾಗಿನಿಂದ Chips ಪ್ಯಾಕೇಟ್ ಅನ್ನು ಹೊರತೆಗೆದು, ಒಂದೆರಡು ಚೂರುಗಳನ್ನು ಬಾಯಿಗೆ ಇಟ್ಟುಕೊಂಡು. ಅವಳತ್ತಾ ತಿರುಗಿ “Excuse me ನೀವು ಸ್ವಲ್ಪ ತಗೋಳಿ” ಎಂದೇಳುತ್ತಾ, ಆ ಪ್ಯಾಕೆಟ್‌ನ್ನು ಅವಳ ಮುಂದೆ ಹಿಡಿದೆ. ಕಿರುನಗೆ ಬೀರುತ್ತಾ “No Thanks” ಎಂದೇಳಿ, ಹೊರಗಿನ ರಮಣೀಯಚಿತ್ರಣವನ್ನು ನೋಡುವುದರಲ್ಲಿ ಮತ್ತೆ ತಲ್ಲಿನಳಾದಳು.

ಅವಳನ್ನು ಮಾತಾನಾಡಿಸುವ ನನ್ನೆಲ್ಲ ಪ್ರಯತ್ನಗಳು ಸತತವಾಗಿ ವಿಫಲವಾಗುತ್ತಿರುವಾಗಲೇ, ನನ್ನ ಮನದ ತೊಳಲಾಟವನ್ನು ಅರಿತ ಆ ಭಗವಂತ ನನಗೆ ಸಹಾಯ ಮಾಡಲೆಂದು ಮಳೆರಾಯನನ್ನು ಧರೆಗೆ ಕಳುಹಿಸಿದನು. ಮಳೆರಾಯನ ಆರ್ಭಟಕ್ಕೆ ವಿಧಿಯಿಲ್ಲದೆ ಅವಳು ಕಿಟಕಿಯ ಗ್ಲಾಸ್ ಅನ್ನು ಮುಚ್ಚಿದಳು. ಚಡಪಡಿಸುತ್ತಿದ್ದ ನನ್ನ ಬಾಯಿಗೆ ಹಾಕಿದ್ದ ಗಾಳವನ್ನು ಬಿಚ್ಚಿದಂತಾಯಿತು. “ಅಯ್ಯೋ ಹಾಳಾದ್ದು ಮಳೆ ಇವಾಗಲೇ ಬರಬೇಕಿತ್ತೇ?” ಎಂದು ಒಂದೇ ಸಮನೆ ಇನ್ನೂ ಏನೇನೋ ಹೇಳಲುಹೋದೆ. ಆದರೆ ಅವಳೇ ಮಧ್ಯದಲ್ಲಿ “ಬಾಯಿ ಹಾಕುತ್ತಾ ಪರವಾಗಿಲ್ಲ ಬಿಡಿ ಬರೋ ಮಳೆಗೆ ಹಾಗೆಲ್ಲ ಹೇಳಬಾರದು” ಎಂದಳು.

ಸ್ವಲ್ಪ ಸಮಯ ಕಾದು ನಿಮ್ಮ ಹೆಸರೇನು? ನಿಮ್ಮದು ಯಾವೂರು? ಇನ್ನು ಏನೇನೋ ಕೇಳಲು ಅವಳತ್ತಾ ತಿರುಗಿದರೆ ಅವಳಾಗಲೇ ನಿದ್ರಾದೇವಿಯ ವಶವಾಗಿದ್ದಳು. ತಲೆ ಕೆಟ್ಟಂತೆ ಆಯಿತು. ಮಲಗಿದ್ದ ಅವಳನ್ನು ನೋಡುತ್ತಲೇ ಬಾಯಿಯಿಂದ ಮಾತುಗಳು ತನ್ತಾನೇ ಬಾರದಾದವು. ಅರೆಕ್ಷಣದಲ್ಲಿ ನನ್ನ ಕಣ್ಣುಗಳು ಇದ್ದಕ್ಕಿದ್ದಂತೆ ಕಾರ್ಯೊನ್ಮುಖವಾದವು. ಶಿಲಾಬಾಲಕೆಯಂತಿದ್ದ ಅವಳ ಆ “ಚೆಲುವಿನ ಚಿತ್ರಣವನ್ನು ನೋಡಲೆಂದು ನನ್ನ ಕಣ್ಣುಗಳು ಸಹಜ ಸ್ಥಿತಿಯಿಂದ ೬೦ ಡಿಗ್ರಿ ಓರೆಯಾಗಿದ್ದವು. ನಿಜಕ್ಕೂ ಇವಳು ಅಪ್ಸರೆಯರ ಪ್ರತಿರೂಪವೋ? ಏನೋ? ಒಂದೂ ನಮ್ಮಗರಿಯದು ಎನ್ನುವ ಸಂದೇಶವನ್ನು ನನ್ನ ಕಣ್ಣುಗಳು ಮನಸ್ಸಿಗೆ ರವಾನೆ ಮಾಡಿದವು”.

ಆಹಾ...! ಅವಳು!, ಬಣ್ಣಿಸಲು ಯಾವ ಭಾಷೆಯ ಪದಗಳಿಗೂ ನಿಲುಕದಂತಹ “ಆಗರ್ಭ ಚೆಲುವು” ಅವಳದು. ಅಂಥವಳನ್ನು ಕಂಡಾಗ ನನ್ನ ಕಣ್‌ರೆಪ್ಪೆಗಳು ಒಂದನ್ನೊಂದು ಆಲಂಗಿಸುವುದನ್ನೇ ಅರೆಗಳಿಗೆ ಮರೆತವು, ನಯನಗಳೆರಡೂ ಎಂದೂ ಕಾಣದ ಆ ನೋಟವನ್ನು ಕಂಡು ಹಿರಿಹಿರಿ ಹಿಗ್ಗಿದ್ದವು, ತುಂಬು ತಂಪನೀಯುವ ಆಹ್ಲಾದಕರ ಸಂಚಾರ ನರನರದಲ್ಲಿ ಆರಂಭವಾಗಿತ್ತು, ಮನವು ಕಲ್ಪನಾಲೋಕಕ್ಕೆ ಲಗ್ಗೆಯಿಟ್ಟು ಅವಳ ಆ “ಅಪೂರ್ವ ಸೌಂದರ್ಯ”ದ ವರ್ಣನೆಗಾಗಿ ಪದಗಳ ಹುಡುಕಾಟದಲ್ಲಿ ತೊಡಗಿತ್ತು, ಹೃದಯದ ಊರೊಳಗೆ ಎಲ್ಲೆಲ್ಲೂ ಪ್ರೀತಿ ನಿನಾದ ಮೊಳಗಿತ್ತು, ಆ ನಿನಾದಕ್ಕೆ ಮೈಯಲ್ಲಿನ ರೋಮ ರೋಮವೂ ಹುಚ್ಚೆದ್ದು ಕುಣಿಯುತ್ತಿದ್ದವು. “ಹಿಂದೂಸಂಸ್ಕೃತಿಯ ಭವ್ಯಪ್ರತಿರೂಪವಾಗಿದ್ದ ಅವಳನ್ನು ನೋಡುನೋಡುತ್ತಲೇ ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಕೊಡುಗೆ ಇವಳೆಂದು ಕ್ಷಣಾರ್ಧದಲ್ಲೇ ನನಗರಿವಾಯಿತು”.

ಹೌದು ನಿಜವಾಗಿಯೂ ಅವಳ ರೂಪ ಹಾಗೆಯೇ ಇತ್ತು! ನುಣುಪಾದ ಕೂದಲುವುಳ್ಳ ಅವಳ ನೀಳವಾದ ಜಡೆ, ಅವಳ ಆ ರೂಪಕ್ಕೆ ಮೆರುಗು ನೀಡುವಂತೆ ಎಷ್ಟು ಬೇಕೋ ಅಷ್ಟು ಮಾತ್ರ ಹೊರಚಾಚಿದ ಮುಂಗುರುಳು, ಪ್ರಾಯದ ಸುಳಿವನ್ನು ಸಾರುವ ಒಂದು ಮೊಡವೆ ಕೂಡ ಇರದ ಮುದ್ದಾದ ಮುಖ, ಮೊದಲ ನೋಟದಲ್ಲೇ ನಾನು ಕಂಡಿದ್ದ ಭಯವೇ ಇರದ, ಬರಿ ನಿರ್ಮಲತೆ ತುಂಬಿಕೊಂಡಿರುವ, ಹುಣ್ಣಿಮೆಯ ಚಂದಿರನ ಕಾಂತಿಯನ್ನೂ ತುಸು ಮೀರಿಸುವ ಕಣ್ಣುಗಳು, ಇನ್ನೂ ಮೂಗುತಿಯನ್ನು ಚುಚ್ಚಿಸಿಕೊಂಡಿರದ ಮುಖಕ್ಕೆ ತಕ್ಕವಾದ ಕಿರುಮೊಗು, ಯಾವುದೇ ಸೌಂದರ್ಯವರ್ಧಕ ಲೇಪಿಸದೇ ಹೋದರೂ ಪಳಪಳನೆ ಹೊಳೆಯುತ್ತಿದ್ದ ಅವಳ ಆ ಕೆಂದುಟಿ, ಮೆಲ್ದುಟಿಯ ಸ್ವಲ್ಪ ಪಕ್ಕಕ್ಕೆ ಇದ್ದ ಕಿರುಕಪ್ಪನೆಯ ಮಚ್ಚೆ, ಕಿರುನಗೆಯನ್ನು ಬೀರುವಾಗ ಮಂಜಿನ ಹೊಳಪಿನಂತೆ ಇದ್ದ ಹಲ್ಲುಗಳು, ತನ್ನ ಸುಂದರ ಉಡುಪಿನ ಬಣ್ಣಕ್ಕೆ ಹೋಲುವ ಹಾಗೆ ಇಟ್ಟುಕೊಂಡ ಬಿಂದಿಗೆ, ಹಚ್ಚಿಕೊಂಡ ಉಗುರು ಬಣ್ಣ, ತೊಟ್ಟ ಕೈ ಬಳೆಗಳು, ನೀಳವಾದ ಜಡೆಗೆ ಹಾಕಿಕೊಂಡ ರಿಬ್ಬನ್ ಒಟ್ಟಾರೆ “ಅರಸಿಕನಲ್ಲೂ ರಸಿಕತೆಯನ್ನ ಬಡಿದೆಬ್ಬಿಸಿ ತರುವ ರೂಪರಾಶಿಯನ್ನು ಮೈಗೂಡಿಸಿಕೊಂಡಿದ್ದ ಅಪ್ರತಿಮ ಲಾವಣ್ಯದ ದಿವ್ಯಾಂಗನೆ ಅವಳು”.

ಅವಳ ಆ “ಸೌಂದರ್ಯರಾಶಿಯನ್ನು ನನ್ನ ನಯನಗಳಲ್ಲಿ ತುಂಬಿಕೊಂಡು, ನಿದ್ರಾದೇವಿಯ ಪರವಶವಾಗುತ್ತಿರುವಾಗಲೇ” ಬಸ್ಸಿನ ಚಾಲಕನು ಹಠಾತ್ತನೆ ವಾಹನದ ಬ್ರೇಕ್ ಹಾಕಿದನು. ಕ್ಷಣಾರ್ಧದಲ್ಲಿ ನನ್ನ ಅವಳ ಹಣೆಗಳೆರಡು ಎದುರಿನ ಸೀಟಿಗೆ ನೋವು ತರುವ ಮುತ್ತನ್ನಿಟ್ಟವು...
(ಮುಂದುವರೆಯುವುದು..........) - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಸೋಮವಾರ, ಸೆಪ್ಟೆಂಬರ್ 8, 2008

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ...


ಪ್ರಿಯ ಓದುಗ ವೃಂದಕ್ಕೆ ನನ್ನ ಹೃದಯಪೂರ್ವಕ ನಮನ. ನೀವೇನೋ ಗೌರಿ,ಗಣೇಶ ಹಬ್ಬ ಮಾಡೊದಕ್ಕೆ ನಿಮ್ಮ ನಿಮ್ಮ ಊರಿಗೆ ಹೊರಟ್‌ಹೋಗಿಬಿಟ್ಟಿದ್ರಿ. ಆದ್ರೆ ಇಲ್ಲಿ..ನನ್ನ ಬ್ಲಾಗಿನಲ್ಲಿ ನಾ ಬರೆದ ಕವನಗಳು, ಲೇಖನಗಳು ಓದುವವರು ಯಾರೂ ಇಲ್ವಲಪ್ಪ ಅಂತ ಒಂದೇ ಸಮನೆ ಅಳ್ತಾ ಇದ್ದವು. ಅದನ್ನು ಬಿಟ್ಟ್‌ಹಾಕಿ ಅವುಗಳದ್ದು ಯಾವಾಗಲೂ ಅದೇ ಗೋಳು ಒಂದೊಂದು ಸಲ ಅಳ್ತವೆ, ಒಂದೊಂದು ಸಲ ನಗ್ತಾ ಇರುತ್ತವೆ. ಹೌದು ಮರೆತೇಬಿಟ್ಟಿದ್ದೆ! ಗೌರಿ,ಗಣೇಶ ಹಬ್ಬದ ಆಚರಣೆ ಹೇಗಿತ್ತು? “ನಿಮಗೆಲ್ಲ ತಡವಾದ ಗೌರಿ,ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು”.



ಗೌರಿ, ಗಣೇಶ ಹಬ್ಬದ ಅಂಗವಾಗಿಯೇ ಒಂದು ಲೇಖನ ಬರೆದಿರುವೆನು. ಸ್ವಲ್ಪ ದೀರ್ಘಲೇಖನವಾದ್ದರಿಂದ ಈ ಲೇಖನವನ್ನು ಕಂತುಗಳಲ್ಲಿ ಪ್ರಕಟಿಸುತ್ತಾ ಹೋಗುತ್ತೇನೆ.ಬಿಡುವು ಸಿಕ್ಕಾಗಲೆಲ್ಲ ಓದಿ.ಪ್ರತಿಯೊಂದು ಕಂತು ನಿಮಗೆ ಮೆಚ್ಚಿಗೆಯಾಗುವುದೆಂದು ನನ್ನ ಭಾವನೆ. ಇಷ್ಟವಾದರೆ ಮಾಮೂಲಿಯಂತೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಅಂಕಣ-೧


ಆಗುಂಬೆಯ ಹತ್ತಿರ ಹೆಬ್ರಿಯಲ್ಲಿ ಶಿಕ್ಷಕನಾಗಿರುವ ನನ್ನ ಬಾಲ್ಯ ಸ್ನೇಹಿತ ಸತಿ ಫೋನ್ ಮಾಡಿದಾಗಲೆಲ್ಲ, "ಓ ಮಾರಾಯ ಅಲ್ಲೇನ್ ಬರಿ ಕಾಂಕ್ರೀಟ್ ಕಟ್ಟಡಗಳನ್ನು ನೋಡಿಕೊಂಡು ಇರ್ತಿ, ಒಮ್ಮೆ ಇಲ್ಲಿಗೆ ಬಂದೋಗಪ್ಪ, ಪ್ರಕೃತಿ ಮಾತೆಯೇ ಇಲ್ಲಿ ಹಚ್ಚಹಸಿರಿನ ಮನೆ ಮಾಡಿಕೊಂಡವ್ಳೆ. ಸ್ವರ್ಗಕ್ಕೂ ಇಲ್ಲಿಗೂ ಬರಿ ಮೂರೇ ಗೇಣು ಕಣೋ" ಎಂದು ಘಟ್ಟದ ಕೆಳಗಿನ ಜನರ ಭಾಷೆಯ ಶೈಲಿಯಲ್ಲಿ ಹೇಳ್ತಾ ಇದ್ದ. ಹಲವಾರು ಸಾರಿ ಅಲ್ಲಿಗೆ ಹೋಗಿ ಬರುವ ಯೋಜನೆಯನ್ನು ನಾನು ಹಾಕಿಕೊಂಡರೂ ಅದು ವ್ಯರ್ಥಪ್ರಯತ್ನವಾಗುತ್ತಿತ್ತೇ ಹೊರತು ಎಂದೂ ಕೈಗೂಡಿರಲಿಲ್ಲ!

(ಅಂಕಣ ೨ ಮುಗಿದ ನಂತರ ಮತ್ತೆ ಅಂಕಣ ೧ ಶುರುವಾಗುವುದು)

ಅಂಕಣ ೨


ಯಾರು ಈ ಸತಿ? ಸರಿಸರಿ ಮೊದ್ಲು ಸತಿ ಬಗ್ಗೆ ಸ್ವಲ್ಪ ಹೇಳ್‌ಬಿಡ್ತಿನಿ, ಇವ ನನ್ನ ಬಾಲ್ಯದ ಗೆಳೆಯ. ಹತ್ತನೇಯ ತರಗತಿಯವರೆಗೂ ನಾನು, ಅವ ಒಟ್ಟೊಟ್ಟಿಗೆ ಬೆಳೆದವರು. ಪಾಠ, ಆಟ, ಊಟ ಎಲ್ಲದರಲ್ಲೂ ಎಷ್ಟು ಜಗಳವಾಡುತ್ತಿದ್ದೇವೋ ಅದಕ್ಕಿಂತ ಒಂದುಪಾಲು ಹೆಚ್ಚಾಗಿಯೇ ಆತ್ಮೀಯತೆಯಿಂದ ಇರ್ತಾಇದ್ವಿ.

ಚಿಕ್ಕಂದಿನಲ್ಲಿ ನಮ್ಮ ಗ್ಯಾಂಗಿನ ಸದಸ್ಯರುಗಳು ಮಾಡುತ್ತಿದ್ದ ಅನೇಕಾಕ ತುಂಟಾಟ ಕೆಲಸಗಳಲ್ಲಿ ನನ್ನಷ್ಟೇ ಸಹಭಾಗಿಯಾಗಿರುತ್ತಿದ್ದ. ಮುಗ್ಧತನ ಹಾಗೂ ಪೆದ್ಧತನಗಳ ಮಿಶ್ರಣದ ಫಲವಾಗಿ ನಾವು ಮಾಡುತ್ತಿದ್ದ ಕೀಟ್ಲೆ ಕೆಲ್ಸಗಳು ಒಂದಾ-ಎರಡಾ? ನಾನು ಸಹ ಆಗ ಈಗಿನಷ್ಟೂ ನಾಚಿಕೆ, ಹಿಂಜರಿಕೆ ಸ್ವಭಾವದ ಹುಡುಗನಾಗಿರಲಿಲ್ಲ, ಎಲ್ಲದರಲ್ಲೂ ಬಹಳ ಚಲಾಕು ಇದ್ದೆ! “ಬಾಲ್ಯದಲ್ಲಿ ಹಾಗೆ ಮಾಡಿದ್ದ ಹಲವಾರು ಘಟನೆಗಳು ಈಗಲೂ ಸಹ ಅಚ್ಚಳಿಯದ ನೆನಪಿನ ಚಿತ್ರಣಗಳಾಗಿ ನನ್ನ ಮನದಲ್ಲಿ ಹಾಗೆಯೇ ಉಳಿದಿವೆ!” ಸತಿಯ ಬಗ್ಗೆ ಹೇಳಲುಹೋಗಿ ಇಷ್ಟೆಲ್ಲ ಹೇಳಬೇಕಾಯಿತು ಈಗ "ಮೂಲಕಥೆ"ಗೆ ಬರೋಣ...

(ಅಂಕಣ ೧ ರ ಮುಂದುವರಿಕೆ..)


ಆದರೆ ಕಳೆದ ವಾರ ಇದ್ದಕ್ಕಿದ್ದ ಹಾಗೆ ಎಲ್ಲಾದರೂ ಹೋಗಿಬರಬೇಕೆಂಬ ಆಲೋಚನೆಯು ಮನಸ್ಸಲ್ಲಿ ಮೂಡಿತು. ನನ್ನ ಕವನ, ಲೇಖನಗಳನ್ನು ಬರೆವ ಹವ್ಯಾಸಕ್ಕೆ ತಾತ್ಕಾಲಿಕ ತಿಲಾಂಜಲಿಯನ್ನಿಟ್ಟು, ಶುಕ್ರವಾರ ಮಧ್ಯಾಹ್ನ ಹನ್ನೆರಡಕ್ಕೆ ಮೆಜೆಸ್ಟಿಕ್ ತಲುಪಿ, ಅಲ್ಲಿಂದ ಹೆಬ್ರಿಯತ್ತ ಹೋಗುವ ರಾಜಹಂಸ ಬಸ್ಸನ್ನೇರಿ ಹೇಗೋ ಮಟ್ಟಮಧ್ಯದಲ್ಲೇ ಸೀಟುದಕ್ಕಿಸಿಕೊಂಡು ಕುಳಿತೆ.

ಹಾಸನ ಮಾರ್ಗವಾಗಿ ಇದೇ ಮೊದಲ ಸಲ ಪ್ರಯಾಣಿಸುತ್ತಿದ್ದೆನಾದ್ದರಿಂದ ಅಲ್ಲಿನ ಪ್ರಕೃತಿ ಸೊಬಗು “ಹಾಗೆ ಇರಬಹುದು..ಹೀಗೆ ಇರಬಹುದು” ಎಂದು ಮನದಲ್ಲಿ ಕಲ್ಪಿಸುತ್ತಾ, ಪಕ್ಕದಲ್ಲಿ ಯಾರು? ಕುಳಿತಿರುವರು ಎಂದು ನೋಡುವ ಗೋಜಿಗೆ ಹೋಗದೆ ಹಾಗೆಯೇ ನಿದ್ರೆಹೋದೆ. ಹಾಸನ ಹತ್ತಿರ, ಹತ್ತಿರವಾಗುತ್ತಿದ್ದಂತೆ ನನಗೆ ಎಚ್ಚರವಾಯಿತು. ಕಣ್ತೆರದು ನೋಡಿದಾಗ ನನ್ನ ಪಕ್ಕದಲ್ಲಿ ಕುಳಿತಿರುವರು 60ರ ಆಸುಪಾಸಿನ ಹಿರಿಯ ನಾಗರೀಕರು ಎಂದು ಆಗಲೇ ನನಗರಿವಾದುದ್ದು. ಅವರು ಪರಿಚಯ ಮಾಡಿಕೊಳ್ಳದಿದ್ದರೆ ಏನೆಂದುಕೊಂಡಾರು? ಎಂದು ಯೋಚಿಸಿ, ನಾನೇ ಅವರ ಹೆಸರು, ಊರು ಕೇಳುತ್ತಾ ಔಪಚಾರಿಕವಾಗಿ ಒಂದೆರಡು ಮಾತನಾಡಿದೆ. ಅಷ್ಷರಲ್ಲಿ ಹಾಸನದ ಬಸ್ಸ್ ನಿಲ್ದಾಣ ಬಂದೇಬಿಟ್ಟಿತು. ಸರಿ ನಮ್ಮೂರು ಬಂತಪ್ಪ ಮತ್ತೆಸಿಗೋಣ ಎಂದು ಹೇಳಿ ಆ ಹಿರಿಯರು ಬಸ್ಸಿನಿಂದ ಇಳಿದುಹೋದರು.

ಅವರು ಹೋದ ಕ್ಷಣಾರ್ಧದಲ್ಲೇ ಭಾರಿಗಾತ್ರದ ಲಗೇಜ್‌ಗಳನ್ನೊತ್ತು ಮೂರುಜನ ತರುಣಿಯರ ಗುಂಪೊಂದು ಬಸ್ಸಿನ ಒಳಗಡೆ ಪ್ರವೇಶಿಸಿ ಖಾಲಿ ಇರುವ ಸೀಟುಗಳನ್ನು ಹುಡುಕತೊಡಗಿದರು. ಬಸ್ಸು ಭಾಗಶ: ಭರ್ತಿಯಾಗಿದ್ದರಿಂದ ಅವರಿಗೆ ಸೀಟು ಸಿಗುವುದು ದುಸ್ತರವಾಗಿತ್ತು. ನನ್ನ ಪಕ್ಕದಲ್ಲಿ ಇದ್ದ ಒಂದು ಸೀಟ್ ಬಿಟ್ಟರೆ ತೀರಾ ಹಿಂದಗಡೆಯಲ್ಲಿ ಒಂದೆರಡು ಸೀಟ್‌ಗಳು ಖಾಲಿ ಇದ್ದವೂ. ಆ ಗುಂಪಿನ ಇಬ್ಬರು ತರುಣಿಯರು ಮತ್ತೊಬ್ಬಳನ್ನು ಕುರಿತು ನೀನು ಇಲ್ಲೇ ಕುಳಿತುಕೋ ನಾವಿಬ್ಬರು ಹಿಂದಗಡೆ ಹೋಗಿ ಕುಳಿತುಕೊಳ್ಳುತ್ತೇವೆ ಎಂದೇಳಿ ಹಿಂದೆ ಖಾಲಿ ಇದ್ದ ಸೀಟುಗಳತ್ತ ಹೆಜ್ಜೆ ಹಾಕಿದರು.

ಇದನ್ನೆಲ್ಲಾ ಮೂಕಪ್ರೇಕ್ಷಕನಾಗಿ ನೋಡುತ್ತಾ ಇದ್ದ ನಾನು ಪಕ್ಕಕ್ಕೆ ಸರಿದು “ಆ ಹುಡುಗಿ” ಕುಳಿತುಕೊಳ್ಳಲು ಅನುವು ಮಾಡಿಕೊಟ್ಟೆ. ಲಗೇಜ್ ಕ್ಯಾಬಿನ್‌ನಲ್ಲಿ ತನ್ನ ಲಗೇಜ್ ಇಟ್ಟು ನನ್ನ ಪಕ್ಕದಲ್ಲಿ ಕುಳಿತಳು ಆ ಹುಡುಗಿ. ನಾನಾಗಿಯೇ ಮೇಲೆಬಿದ್ದು ಮಾತನಾಡಿಸುವ ಗೋಜಿಗೆ ಹೋಗದೆ ನನ್ನ ಪಾಡಿಗೆ ನಾನು ಇರಲು ನಿಶ್ಚಯಿಸಿದೆ. ಅಷ್ಷರಲ್ಲಿ ಬಸ್ಸುಹೊರಡುವ ವೇಳೆಯಾಗುತ್ತಿತ್ತು. ಕಿಟಕಿಯ ಸಮೀಪ ಬಂದ ಸೀಬೆಕಾಯಿ ಮಾರುವವನಲ್ಲಿ ನಾಲ್ಕು ಸೀಬೆಕಾಯಿ ಖರೀದಿಸಿ, ಹತ್ತು ರೂಪಾಯಿಯನ್ನು ಅವನ ಕೈಯಲ್ಲಿಡುತ್ತಾ,..ಚಿಲ್ಲರೆ ನೀನೇ ಇಟ್ಟುಕೊಳ್ಳಪ್ಪ ಎಂದೇಳಿದೆ. “ಪಕ್ಕದಲ್ಲಿ ಹುಡುಗಿ ಕುಳಿತ್ತಿದ್ದರಿಂದಲೋ ಏನೋ? ನನ್ನಲ್ಲಿ ಧಾರಾಳತನ ತಾನಾಗಿಯೇ ಮನೆ ಮಾಡಿತ್ತು!” ಬಸ್ಸು ಹಾಸನದ ನಿಲ್ದಾಣವನ್ನು ಬಿಟ್ಟು ಹೊರಟ್ಟಿತು.

(ಮುಂದುವರೆಯುವುದು...)

ಮಂಗಳವಾರ, ಸೆಪ್ಟೆಂಬರ್ 2, 2008

ಗೌರಿ ಗಣೇಶ ಹಬ್ಬಕ್ಕೊಂದು ಕವನ


ಹಬ್ಬ..ಹಬ್ಬ..ಗೌರಿ ಗಣೇಶ ಹಬ್ಬ ಬಂತು ನಾಡಲಿ|
ಹಬ್ಬಕ್ಕೆಂದು ಅಮ್ಮ ಮಾಡಿದ ಬಿಸಿಬಿಸಿ ಚಕ್ಕುಲಿ
ತಿನ್ನುತಾ ನಾ ಏರಿದ ಮನೆಯಂಗಳದ ಜಗುಲಿ|

ಪೂಜೆಗೆ ಮುಂಚಿತವಾಗಿ ಚಕ್ಕುಲಿ ನಾ ತಿನ್ನವುದಾ
ಮರೆಯಲಿ ಓರೆಗಣ್ಣಲಿ ಕಂಡ ದಪ್ಪನೆಯ ಮೂಗಿಲಿ|
ದೂರನು ಹೇಳಲು ಶರವೇಗದಲಿ ಓಡಿತು ಗಣಪನ ಬಳಿ|

ಗಜಾನನನಲಿ ನನ್ನ ಬಗ್ಗೆ ಚಾಡಿ ಹೇಳಿತು ವಿಧವಿಧ ಪರಿ|
ಚಾಡಿ ಮಾತನು ಕೇಳಿ ಮೈಯೆಲ್ಲ ಹಸಿ ಕೋಪ ಮೂಡಿ|
ಗೌಡರ ಮನೆಯಲಿ ಕಡುಬನು ತಿನ್ನುವುದಾ ಅರ್ಧಕ್ಕೆ ಬಿಟ್ಟೆದ್ದ ಗಣಪ|
ಮೂಗಿಲಿಯೊಡನೆ ಪ್ರತ್ಯಕ್ಷನಾದ ನಮ್ಮ ಮನೆಯಂಗಳದ ಸಮೀಪ|

ಆದರೆ ತಿನ್ನುತ್ತಾ ತಿನ್ನುತ್ತಾ ಬಿಸಿಬಿಸಿ ಚಕ್ಕುಲಿ
ನಾ ಆಗಲೇ ಸೆರೆಯಾಗಿದ್ದೆ ನಿದ್ರಾದೇವಿಯ ಮಡಿಲಲಿ
ಇನ್ನೂ ವಿನಾಯಕ ಬಂದ ಅರಿವು ನನಗೆಲ್ಲಿ?

ಇದನ್ನು ಕಂಡು ಕೋಪದಲಿ ಮೂಗಿಲಿ ಏರಿತು ಜಗುಲಿ
ನನ್ನ ಮೈ ಮೇಲೆ ಓಡಾಡುತಾ ಇಟ್ಟಿತು ಕಚಗುಳಿ
ನಂತರದಲಿ ಕೈಯಲಿ ಇದ್ದ ಚಕ್ಕುಲಿ ಕಿತ್ತೊಯ್ದಿತು ಮೂಗಿಲಿ
ನಿಂತಿತು ಗಣಪನ ಸನಿಹದಲಿ! ನಾ ತಪ್ಪಿನ ಅರಿವಿನಲಿ
ಗಣಪನ ಕ್ಷಮೆ ಕೇಳಲು| ಜಗುಲಿಯಿಂದ ಎದ್ದೇಳಲು
ಇದ್ದೆನು ಹಾಸಿಗೆಯಲಿ| ಸೊಗಸಾದ ಕನಸ ಕಂಡಿದ್ದೆನು ನಿದ್ರೆಯಲಿ!

- ನಿಮ್ಮ ಸುನಿಲ್ ಮಲ್ಲೇನಹಳ್ಳಿ