ಗುರುವಾರ, ಆಗಸ್ಟ್ 28, 2014

ಗೌರಿ-ಗಣೇಶ ಹಬ್ಬದಾಚರಣೆಯ ನೆನಪು

ನೆನಪಿನ ಅಂಗಳದಲ್ಲಿ ಹಾಗೆ ಹತ್ತಾರು ಮೆಟ್ಟಿಲು ಕೆಳಗಿಳಿದು ಬಾಲ್ಯದ ಘಟನಾವಳಿಯ ಕೋಣೆಯನು ಹೊಕ್ಕು ಅಲ್ಲಿ ನಮ್ಮೂರ ಜನರು ಪ್ರತಿವರ್ಷವು ಅಪರಿಮಿತ ಉತ್ಸಾಹ, ಅನನ್ಯ ಭಕ್ತಿ, ಶ್ರದ್ಧೆಗಳಿಂದ ಆಚರಿಸುತ್ತಿದ್ದ ಗೌರಿ-ಗಣೇಶ ಹಬ್ಬದ ಆಚರಣೆಯ ದೃಶ್ಯಾವಳಿಯ ಏಳೆಯನ್ನು ಹಾಗೆಯೇ ಬಿಚ್ಚುತ್ತಾಹೋದರೆ ಹಿರಿಮೆವುಳ್ಳ ಚಿತ್ರಣಗಳ ಸರಮಾಲೆ ನನ್ನ ಕಣ್ಮುಂದೆ ಬರುತ್ತದೆ. ಅಂದಿನ ದಿನಗಳಲ್ಲಿ ನಮ್ಮೂರ ಜನರು ಗಣೇಶ ಚತುರ್ಥಿಯ ಆಗಮನಕ್ಕೂ ಮುನ್ನಾ ಒಂದು ಸಮಿತಿಯನ್ನು ರಚಿಸಿ, ಆ ಸಮಿತಿಯ ಮೂಲಕ ಆಚರಣೆಯ ನಿಮಿತ್ತವಾಗಿ ಬೇಕಾದ ತಕ್ಕ ಕಾರ್ಯ-ಯೋಜನೆಗಳನ್ನು ಕೈಗೆತ್ತಿಕೊಂಡು ಅದರಂತೆ ಸಮಿತಿಯ ಕೆಲ ಸದಸ್ಯರುಗಳು ಮಂಟಪ, ಚಪ್ಪರ ಕಟ್ಟುವುದರಲ್ಲಿ, ಕೆಲವರು ನಾಟಕ, ಸಾಂಸ್ಕೃತಿಕ ಅಭ್ಯಾಸದಲ್ಲಿ, ಮತ್ತೆ ಕೆಲವರು ಇನ್ನುಳಿದ ಕೆಲಸಗಳ ಜವಾಬ್ದಾರಿಯನ್ನು ವಹಿಸಿಕೊಂಡು ಮುತುವರ್ಜಿ ಮಾಡಿಬಿಡುತ್ತಿದ್ದರು.

ಚಿಕ್ಕವರಾದ್ದರಿಂದ ಆಚರಣೆಗೆ ಸಂಬಂಧಿಸಿದ ಯಾವುದೇ ಜವಾಬ್ದಾರಿಯಿಲ್ಲದೆ ಮುಕ್ತರಾಗಿ ಇರುತ್ತಿದ್ದ ನಾನು ಮತ್ತು ನನ್ನ ಸಂಗಡಿಗರೆಲ್ಲ ಮಂಟಪ-ಚಪ್ಪರ ಕಟ್ಟುವುದನ್ನು, ನಾಟಕ ಅಭ್ಯಾಸ ಮಾಡುವುದನ್ನು ಮತ್ತು ಮಾಡುವವರನ್ನು ನೆಟ್ಟ ಮನಸ್ಸಿನಿಂದ ನೋಡುತ್ತಾ ನಿಲ್ಲುವುದೇ ನಮ್ಮ ಕಾಯಕವಾಗಿ ಬಿಟ್ಟಿತ್ತು. ಕೆಲವೊಮ್ಮೆ ನಿಯೋಜಿತ ಸದಸ್ಯರುಗಳು ಕೊಡುತ್ತಿದ್ದ ಚಿಕ್ಕಪುಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾದಷ್ಟೂ ಪ್ರಯತ್ನಿಸಿ, ಕೊನೆಯಲ್ಲಿ ಅವರು ಸಂದಾಯ ಮಾಡುತ್ತಿದ್ದ ಹೊಗಳಿಕೆ, ತೆಗಳಿಕೆ ಎಲ್ಲವನ್ನು ಯಾವುದೇ ಪ್ರತ್ಯುತ್ತರ ನೀಡದೆ ಸ್ವೀಕರಿಸುತ್ತಿದ್ದೆವು. ಏಕೆಂದರೆ ಮನದೊಳಗೆ ಪಸರಿಸಿದ ಹಬ್ಬದ ವಾತಾವರಣ ತಂದುಕೊಡುತ್ತಿದ್ದ ಸಂಭ್ರಮ-ಸಡಗರದ ಮುಂದೆ ಇನ್ಯಾವ ವಿಚಾರವೂ ನಮ್ಮ ಪರಿಗಣನೆಗೆ ಎಳ್ಳಷ್ಟು ಬರುತ್ತಿರಲಿಲ್ಲ! ಪ್ರತಿವರ್ಷವೂ ಮಂಟಪ ಹಾಗೂ ಚಪ್ಪರವನ್ನು ಭಿನ್ನ-ವಿಭಿನ್ನ ರೀತಿಯಲ್ಲಿ ಸಿದ್ದಪಡಿಸುತ್ತಿದ್ದ ನಿಯೋಜಿತ ಸದಸ್ಯರು ಮತ್ತು ಅವರಲ್ಲಿ ಒಬ್ಬೊಬ್ಬರಲ್ಲೂ ಇದ್ದ ಒಂದೊಂದು ವಿಶಿಷ್ಟತೆ, ಚಾಣಕ್ಷತೆ ಮತ್ತು ಕೈಚಳಕ ಇವೆಲ್ಲವೂ ಸಮಪ್ರಮಾಣದಲ್ಲಿ ಕೂಡಿ ಒಂದು ಸುಂದರ ಮಂಟಪವಾಗಿ ಸೃಷ್ಟಿ ಪಡೆದು ಗಣೇಶನ ಪೀಠರೋಹಣಕ್ಕೆ ಕಾಯುತ್ತಾ ಇರುತ್ತಿತ್ತು.

ಗಣೇಶ ಹಬ್ಬಕ್ಕೆ ಒಂದೆರಡು ತಿಂಗಳುಗಳ ಮುಂಚಿತವಾಗಿಯೇ ನಮ್ಮೂರ ಶಾಲಾವರಣದಲ್ಲಿ ಪ್ರತಿದಿನ ಸಂಜೆಯಿಂದ ರಾತ್ರಿಯವರೆಗೂ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಭ್ಯಾಸ ಜರಗುತ್ತಾ ಇರುತ್ತಿತ್ತು. ಅಲ್ಲಿ ಸಹಜವಾಗಿ ನಾನು ಮತ್ತು ನನ್ನ ಸಂಗಡಿಗರು ಇಂದೆಂದು ನೋಡಿರದ ಹಾವಭಾವ ತೋರಿಸುವ ಅಭ್ಯಾಸಿಗರು, ಅರ್ಥ-ದ್ವಂದ್ವರ್ಥಗಳಿಂದಾಗಿ ಒಮ್ಮೊಮ್ಮೆ ಒಡೆದು ಮೂಡುತ್ತಿದ್ದ ನಗೆ ಚಟಾಕಿ, ನಾಟಕದ ಮಾಸ್ತರರು ಹೋರ್ಮೊನಿಯಂ ನುಡಿಸುವುದು, ಅಭ್ಯಾಸಿಗರಿಗೆ ಹಾಡನ್ನು ಹೇಳಿಕೊಡುವುದು, ವೀರಗಾಸೆ ಅಭ್ಯಾಸಿಗರ ರಣಘರ್ಜನೆ ಒಟ್ಟಾರೆ ಎಲ್ಲವೂ ಒಂದು ರೀತಿಯ ಹಾಸ್ಯ, ವಿನೋದ, ಮನೋರಂಜನೆಯನ್ನು ನಮಗೆ ತಂದುಕೊಡುತ್ತಿತ್ತು. ಒಂದೊಂದು ದಿನ ಕಾರ್ಯಕ್ರಮಗಳ ಅಭ್ಯಾಸವನ್ನು ನೋಡುತ್ತಾ, ಅಲ್ಲೇ ಮಲಗಿ ಬಿಡುತ್ತಿದ್ದೆವು. ಕೊನೆಯಲ್ಲಿ ಅಭ್ಯಾಸಿಗರು ನಮ್ಮನ್ನು ಎದ್ದೇಳಿಸಿ, ನಮ್ಮ, ನಮ್ಮ ಮನೆಯವರೆಗೂ ಬಂದು ನಮ್ಮನ್ನು ಬಿಟ್ಟುಹೋಗುತ್ತಿದ್ದರು

ಗಣೇಶಮೂರ್ತಿಯ ಪೀಠರೋಹಣ ದಿನದಿಂದ ಆರಂಭಿಸಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ದಿನದವರೆಗೂ ಅಂದರೆ ಸುಮಾರು ಹದಿನೈದು ದಿನಗಳ ಕಾಲ ಮಿತಿಯಿಲ್ಲದ ಪುಳಕ, ನಿತ್ಯ ನವನವೀನ ಉತ್ಸಾಹ ನಮ್ಮ ಪಾಲಿಗೆ ಜಮಾವಾಗುತ್ತಿತ್ತು . ಊರಲ್ಲಿ ದೊಡ್ಡ ಗಣೇಶನನ್ನು ಕೂರಿಸುವುದರ ಜೊತೆಗೆ ನಾನು, ನನ್ನ ಸಹಪಾಠಿಗಳು ಸೇರಿದಂತೆ ಬಹುತೇಕ ಹುಡುಗರು ತಮ್ಮ,ತಮ್ಮ ಮನೆಗಳಲ್ಲಿ ಚಿಕ್ಕದಾದ ಮಂಟಪವನ್ನು ಕಟ್ಟಿ, ಚಿಕ್ಕ ಗಣೇಶಮೂರ್ತಿಯನ್ನು ಕೂರಿಸುತ್ತಿದ್ದೆವು. ಒಂದುಸಾರಿ ಗಣೇಶಮೂರ್ತಿ ಅಕ್ಕಪಕ್ಕದ ಊರಲ್ಲಿ ಎಲ್ಲೂ ಸಿಗದೇ, ನಮ್ಮೂರಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಊರಿಗೆ ಸೈಕಲ್ಲಿನಲ್ಲಿ ಪ್ರಯಾಣಿಸಿ ಗಣೇಶಮೂರ್ತಿಯನ್ನು ಖರೀದಿಸಿ ಬಂದದ್ದುಂಟು!

ಪ್ರತಿದಿನ ಬೆಳಗ್ಗೆ ಎದ್ದು ಮನೆಯಲ್ಲಿನ ಚಿಕ್ಕ ಗಣೇಶನಿಗೆ ಪೂಜೆ, ಪುನಸ್ಕಾರ ಅರ್ಪಿಸಿ, ಶಾಲೆಗೆ ಹೋಗುವ ವೇಳೆಯವರೆಗೂ ದೊಡ್ಡ ಗಣಪತಿಯ ಪೆಂಡಾಲ್ ನಲ್ಲೇ ಕಾಲ ಕಳೆಯುತ್ತಿದ್ದೆವು. ಪುನಃ ಸಂಜೆ ಶಾಲೆಯನ್ನು ಮುಗಿಸಿಕೊಂಡು ಬಂದ ನಂತರವೂ ಓಡೋಡಿ ಹೋಗಿ ಪೆಂಡಾಲ್ ಅನ್ನು ಸೇರಿ ಅಲ್ಲಿ ಆಟವಾಡುತ್ತಿದ್ದೆವು, ಕುಣಿಯುತ್ತಿದೆವು, ಪೂಜೆಯ ವೇಳೆಯಲ್ಲಿ ಕೈಮುಗಿದು ನಿಲ್ಲುತ್ತಿದ್ದೆವು ಮತ್ತು ಸಂಜೆ ಮಹಮಂಗಳಾರತಿಯ ನಂತರ ಕೊಡುವ ಫಲಾಹಾರಕ್ಕೆ ಮುಗಿಬೀಳುತ್ತಿದ್ದೆವು. ಇಷ್ಟೇ ಅಲ್ಲದೇ ಬೆಳಗ್ಗೆ ಹಾಗೂ ಸಂಜೆ ಊರಿನ ಎಲ್ಲ ಮನೆಗಳಿಗೆ ಕೇಳುಸುವಂತೆ ಧ್ವನಿ ವರ್ಧಕದಿಂದ ಮೂಡಿಬರುತ್ತಿದ್ದ ಭಕ್ತಿಗೀತೆಗಳನ್ನೂ ದಿನ-ದಿನ ಆಲಿಸುತ್ತಾ ಇದ್ದೆವು, ಕಾಲಕ್ರಮೇಣ ಕೆಲವು ಭಕ್ತಿಗೀತೆಗಳು ನಮಗೆ ಕಂಠಪಾಠವಾಗಿದ್ದವು. [ಉದಾಹರಣೆಗೆ :೧) ಗಜಮುಖನೇ ಗಣಪತಿಯ ನಿನಗೆ ವಂದನೆ|, ನಂಬಿದವರ ಬಾಳಿನ ಕಲ್ಪತರು ನೀನೇ|, ೨) ಅಷ್ಟ ಗಣಪತಿಯ ಆರಾಧನೆ,ವಿಶಿಷ್ಟ ರೀತಿಯಲ್ಲಿ ಔಪಾಸನೆ|, ೩)ಶರಣು ಶರಣಯ್ಯಾ, ಶರಣು ಬೆನಕ|, ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕ! ೪)ಮೂಷಿಕ ವಾಹನ ಮೋದಕ ಹಸ್ತ, ವಾಮನ ರೂಪ ಮಹೇಶ್ವರ ಪುತ್ರ| ಹೀಗೆ ಇತ್ಯಾದಿ ಭಕ್ತಿ ಗೀತೆಗಳು ನಮ್ಮನ್ನು ಬಹಳವಾಗಿ ಆವರಿಸಿಕೊಂಡಿದ್ದವು ಈಗಲೂ ಅಷ್ಟೇ, ಈ ಮೇಲೆ ಹೆಸರಿಸಿದ ಭಕ್ತಿಗೀತೆಗಳ ಸಾಲು ಶ್ರವಣದ ಅಂಚನ್ನು ತಾಗಿದ ಕ್ಷಣದಲ್ಲಿ ಮೈ-ಮನದಲ್ಲಿ ನವಿರು ಸ್ಪಂದನವಾಗುವುದು], ಎಲ್ಲಿ ಗಣೇಶನಿರುವನೋ ಅಲ್ಲಿ ತಾಯಿ ಗೌರಮ್ಮ ಇರಲೇ ಬೇಕಲ್ಲವೇ? ಹಾಗಾಗಿ ದೊಡ್ಡ ಗಾತ್ರದ ಗಣೇಶಮೂರ್ತಿಯ ಪಕ್ಕದಲ್ಲಿ ಅಂಗೈ ಉದ್ದದ ಗೌರಮ್ಮನ ಮೂರ್ತಿಯುನ್ನು ಸಹ ಕೂರಿಸುತ್ತಿದ್ದರು.

ದಿನಂಪ್ರತಿ ಏನಾದರೂ ಒಂದು ಮನೋರಂಜನೀಯ ಕಾರ್ಯಕ್ರಮವಿರುತ್ತಿತ್ತು ಚಿಕ್ಕ-ಪುಟ್ಟ ನಾಟಕ, ಭಕ್ತಿ ಪ್ರಧಾನ ಚಲನಚಿತ್ರಗಳನ್ನು ಹಾಕುವುದು, ಹೀಗೆ ಇತ್ಯಾದಿ ಕಾರ್ಯಕ್ರಮಗಳು ಇರುತ್ತಿದ್ದವು. ಆದರೆ ಒಂದು ಸ್ವಲ್ಪವೂ ಹೇಳದೇ-ಕೇಳದೆ ಬರುತ್ತಿದ್ದ ಮಳೆ. ಮಳೆಯನ್ನು ಕಂಡು ಯಾರಿವನೆಂದು? ಅದೇಕೋ? ಮೂನಿಸಿಕೊಂಡು ಎರಡು-ಮೂರು ದಿನಗಳಾದರೂ ಬಾರದೆ ಇರುತ್ತಿದ್ದ ವಿದ್ಯುತ್, ಇವೆರಡು ಆ ಸಮಯದಲ್ಲಿ ನಮ್ಮ ದೊಡ್ಡ ಶತ್ರುಗಳಂತೆ ತೋರುತಿದ್ದವು.

ಹೀಗೆ ವಿಜ್ರುಂಬಣೆಯಿಂದ ನಡೆಯುತ್ತಿತ್ತು ಹಬ್ಬದ ಆಚರಣೆ ನಮ್ಮ ಊರಿನಲ್ಲಿ ಎಂದು ಹೇಳಲು ಕುಶಿಯಾಗುತ್ತದೆ. ಆ ಸಡಗರ ಈಗ ನೆನೆಸಿಕಂಡರೂ ಮನಸ್ಸಿಗೆ ಮುದನೀಡುತ್ತದೆ. ಹಬ್ಬದ ಈ ಸಂಬ್ರಮ-ಸಡಗರ ನಾಡಿನಲ್ಲಿ ಯಾವಾಗಲೂ ಹೀಗೆ ಇರಲಿ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಸಿಹಿ ಹಾರೈಕೆಗಳು!

ದಿನಾಂಕ ೨೬-ಆಗಸ್ಟು-೨೦೧೪ - ಸುನಿಲ್ ಮಲ್ಲೇನಹಳ್ಳಿ
ಸ್ಥಳ: ಸಂತ ಕ್ಲಾರ

(ಚಿತ್ರಕೃಪೆ: http://www.polyvore.com)

ಶನಿವಾರ, ಫೆಬ್ರವರಿ 1, 2014

ಕಂಪ್ಯೂಟರ್ ನಲ್ಲಿ ಕನ್ನಡ ಬರವಣಿಗೆ ಎಷ್ಟು ಸುಲಭ?


ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ನನ್ನನ್ನು ಕೇಳುತ್ತಾ ಕಂಪ್ಯೂಟರ್ ನಲ್ಲಿ ಕನ್ನಡದ ಅಕ್ಷರಗಳನ್ನು ಬರೆಯುವುದು ಹೇಗೆ? ಯಾವ ತಂತ್ರಾಂಶ (Software) ಅಳವಡಿಸಿಕೊಳ್ಳಬೇಕು? ಇಂಟರ್ನೆಟ್ ಸಹಾಯವಿಲ್ಲದೆ ಬರೆಯಬಹುದಾ? ವಿವರವಾಗಿ ತಿಳಿಸೆಂದು ಹೇಳಿದ್ದರು. ನಾಲ್ಕಾರು ವರುಷಗಳಿಂದ ಕಂಪ್ಯೂಟರ್ ನಲ್ಲಿ ಕನ್ನಡ ಪದಗಳನ್ನು ನಿಯತವಾಗಿ ಬರೆಯುವುದ ಅಭ್ಯಾಸ ಮಾಡಿಕೊಂಡು ಬಂದಿರುವ ಮತ್ತು ಬರವಣಿಗೆಯನ್ನೇ ಹವ್ಯಾಸವಾಗಿರಿಸಿಕೊಂಡಿರುವ ನನ್ನಂಥ ಬಹಳಷ್ಟು ಕನ್ನಡ ಬಾಂಧವರಿಗೆ ಕಂಪ್ಯೂಟರ್ ನಲ್ಲಿ ಕನ್ನಡ ಪದಗಳನ್ನು ಬರೆಯುವುದೆಂದರೆ ಅದರಲ್ಲೇನಿದೆ ಕಷ್ಟ? ಬಹಳ ಸುಲಭವಾಗಿ ಬರೆದುಬಿಡಬಹುದು ಎಂದು ನಿಸ್ಸಂಶಯವಾಗಿ ಹೇಳುತ್ತೇವೆ. ಆದರೆ ನಿತ್ಯ ಕಂಪ್ಯೂಟರ್ ಬಳಸುತ್ತಿದ್ದರೂ ಕನ್ನಡದ ಒಂದು ಪದವನ್ನು ಬರೆಯಲು ಪ್ರಯತ್ನಿಸದವರು ಅಥವಾ ಬರೆಯುವ ಇಚ್ಚೆ ಇದ್ದರೂ ಬರವಣಿಗೆಗಾಗಿ ಅಭಿವೃದ್ದಿಪಡಿಸಿರುವ ತಂತ್ರಾಂಶಗಳ ಬಗ್ಗೆ ಪೂರ್ಣವಾದ ಮಾಹಿತಿ ಸಂಗ್ರಹಿಸದವರು ಇಂತಹವರಿಗೆ ಕಂಪ್ಯೂಟರ್ ನಲ್ಲಿ ಕನ್ನಡದ ಪದಗಳನ್ನು ಬರೆಯುವುದೆಂದರೆ ತುಸು ತ್ರಾಸದ ಕೆಲಸವೇ ಸರಿ!

2006ರ ಮಧ್ಯಭಾಗದಲ್ಲಿ ನಾನು ಕಂಪ್ಯೂಟರ್ ಎಂಬ ಮಾಯಾ ಪೆಟ್ಟಿಗೆಯಲ್ಲಿ ಕನ್ನಡದ ಪದಗಳನ್ನು ಹೇಗೆ ಬರೆಯುವುದು ಎಂದು ತಲೆ ಕೆಡಿಸಿಕೊಂಡು, ಏನೂ ತೋಚದೆ ಸುಮ್ಮನಿದ್ದೆ. ಇದಕ್ಕೆ ಹೊಂದುವಂತೆ ಅಂತರ್ಜಾಲದಲ್ಲಿ (Internet) ಯಾವ್ಯಾವ ತಂತ್ರಾಂಶಗಳು ಕನ್ನಡದ ಬರವಣಿಗೆಗಾಗಿಯೇ ಜನ್ಮ ಪಡೆದುಕೊಂಡಿದ್ದಾವೆ ಎನ್ನುವ ವಿಚಾರವೂ ನನಗೆ ಆಗ ಗೊತ್ತಿರಲಿಲ್ಲ. ಒಮ್ಮೊಮ್ಮೆ ಕನ್ನಡ ರಾಜ್ಯೋತ್ಸವದ ಶುಭ ಸಂದೇಶಗಳನ್ನು ಕಳುಹಿಸುವಾಗ MS Paintನಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯವೆಂದು (ಕಲರ್ ಕಲರಾಗಿ)ಬರೆದು JPEGಗೆ ಪರಿವರ್ತಿಸಿ ಸ್ನೇಹಿತರಿಗೆಲ್ಲ ಇ-ಮೇಲ್ ಮಾಡುತ್ತಿದ್ದದ್ದುಂಟು!

ದಿನಗಳು ಕಳೆದಂತೆ ಗೆಳೆಯರಿಂದ ಬರಹ ಹಾಗೂ ನುಡಿ ತಂತ್ರಾಂಶಗಳ ಬಗ್ಗೆ ಅಲ್ಪ-ಸ್ವಲ್ಪ ಅರಿವು ಸಂಪಾದಿಸಿ. ಈ ಎರಡೂ ತಂತ್ರಾಂಶಗಳನ್ನು ನನ್ನ ಕಂಪ್ಯೂಟರ್ ನಲ್ಲಿ ಅಳವಡಿಸಿ (Install) ಕನ್ನಡದಲ್ಲಿ ಬರೆಯುವುದನ್ನು ರೂಢಿ ಮಾಡಿಕೊಂಡೆ. ಆ ಸಮಯದಲ್ಲಿ ಯೂನಿಕೋಡ್ (Unicode) ಬಗ್ಗೆ ಗೊತ್ತಿರಲಿಲ್ಲವಾದ್ದರಿಂದ ಬರಹ ಅಥವಾ ನುಡಿಯನ್ನು ಉಪಯೋಗಿಸಿಕೊಂಡು ಬರೆದ ಲೇಖನಗಳನ್ನು PDF ರೂಪಕ್ಕೆ ತಂದು ಸ್ನೇಹಿತರಿಗೆ ಕಳುಹಿಸುತ್ತಿದ್ದೆ! ನಂತರದ ದಿನಗಳಲ್ಲಿ ಬರಹ ಅಥವಾ ನುಡಿಯಲ್ಲಿ ಬರೆದ ಲೇಖನಗಳನ್ನು ಯೂನಿಕೋಡ್ ರೂಪಕ್ಕೆ ಪರಿವರ್ತಿಸುವುದನ್ನು ಕಲಿತೆ, ಇದರಿಂದ ಬ್ಲಾಗ್ ನಲ್ಲಿ ಲೇಖನಗಳನ್ನು ಪ್ರಕಟಿಸಲು ಅನುಕೂಲವಾಯಿತು (ಬ್ಲಾಗ್ ಅನ್ನು ಕಟ್ಟಿದ್ದು ಸ್ನೇಹಿತರ ಸಹಾಯದಿಂದಲೇ!). ನೋಡು, ನೋಡುತ್ತಿದ್ದಂತೆಯೇ ಭಾಷಾ ಬರಹಗಳ ಬಗ್ಗೆ ಮಾಹಿತಿ ತಂತ್ರಜ್ಞಾನದಲ್ಲಿ ವಿವಿಧ ಅವಿಷ್ಕಾರಗಳಾಗಿ ಕನ್ನಡ ಹಾಗೂ ಇನ್ನಿತರ ಭಾರತೀಯ ಭಾಷೆಗಳಲ್ಲಿ ಬರೆಯಲು ಗೂಗಲ್ ನವರು “Google Indic Transliteration” ಅನ್ನುವುದನ್ನು ಸುಲಭವಾಗಿ ಮತ್ತು ಸರಾಗವಾಗಿ ಬರೆಯುವ ರೀತಿಯಲ್ಲಿ ಅಭಿವೃದ್ದಿಪಡಿಸಿದ್ದರು.

ಕೆಲವು ವರುಷಗಳ ಸಾರ್ಥಕ ಸೇವೆಯ ನಂತರ ಈಗ್ಗೆ ಬೆರಳೆಣಿಕೆ ದಿನಗಳ ಹಿಂದೆಯಷ್ಟೆ “Google Indic Transliteration” ಅನ್ನು ಅಂತರ್ಜಾಲ ಜಗತ್ತಿನಿಂದ ಹಿಂತೆಗೆದು ಅದಕ್ಕಿಂತಲೂ ಹೆಚ್ಚು ಸ್ನೇಹಿಯಾದ ತಂತ್ರಜ್ಞಾನವನ್ನು http://www.google.com/inputtools/ ನಲ್ಲಿ ಗೂಗಲ್ ನವರು ಅಭಿವೃದ್ದಿಪಡಿಸಿದ್ದಾರೆ. ಗೂಗಲ್ ನವರ ಈ ಹೊಸ ಉತ್ಪನ್ನದ ಬಗ್ಗೆ ಸ್ವಲ್ಪ ವಿಸ್ತಾರವಾಗಿ ಬರೆಯುವುದು ಹೆಚ್ಚು ಸೂಕ್ತವೆಂದು ನನ್ನ ಅಭಿಪ್ರಾಯ. ಏಕೆಂದರೆ ಇದರಲ್ಲಿರುವ ತಂತ್ರಜ್ಞಾನವು ಉಪಯೋಗಿಸುವವರ ಅಪ್ತ ಸ್ನೇಹಿಯಾಗಿದೆ ಮತ್ತು “Google Indic Transliteration” ಗಿಂತ ಹೆಚ್ಚು ನಿಖರ ಹಾಗೂ ಸರಾಗತೆಯನ್ನು ಹೊಂದಿದೆ ಅಲ್ಲದೆ ಇಂಟರ್ನೆಟ್ ಸಹಾಯವಿಲ್ಲದೆ ವರ್ಡ್ ಡಾಕ್ಯುಮೆಂಟ್ ಅಥವಾ ನೋಟ್ ಪ್ಯಾಡ್ ನಲ್ಲಿ ಕನ್ನಡದ ಪದಗಳನ್ನು ಬರೆಯಬಹುದು.

ಗೂಗಲ್ ಇನ್ಪುಟ್ ಟೂಲ್ (Google Input Tools)ಅನ್ನು ಕಂಪ್ಯೂಟರ್ ನಲ್ಲಿ ಅಳವಡಿಸಿಕೊಳ್ಳುವ ವಿಧಾನಗಳು;

೧. http://www.google.com/inputtools/ ಈ ಲಿಂಕ್ ಅನ್ನು ಇಂಟರ್ನೆಟ್ ನಲ್ಲಿ ತೆರೆದಾಗ, ಕಾಣಸಿಗುವ “on windows”ನ ಮೇಲೆ ಕ್ಲಿಕ್ಕಿಸಿ. ನಂತರ ಬರುವ Choose Your Language ಅನ್ನುವಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಂಡು ತಂತ್ರಾಂಶವನ್ನು ಡೌನ್ಲೋಡ್ ಮಾಡಿ ನಿಮ್ಮ ಕಂಪ್ಯೂಟರ್ ನಲ್ಲಿ ಅಳವಡಿಸಿಕೊಳ್ಳಿ. ಅಲ್ಲಿಗೆ ಅಳವಡಿಸಿಕೊಳ್ಳುವ ಕೆಲಸ ಮುಗಿದ ಹಾಗೆ. ನಿಮ್ಮ ಕಂಪ್ಯೂಟರ್ ನಲ್ಲಿರುವ "ಟ್ಯಾಸ್ಕ್ ಬಾರ್" ಬಲ ಬದಿಯಲ್ಲಿ "EN" ಅಥವಾ "KD" ಎಂದು ಇರುತ್ತೆ. "EN" ಅನ್ನು ಆಯ್ಕೆ ಮಾಡಿಕೊಂಡರೆ ಇಂಗ್ಲೀಷ್ ನಲ್ಲಿ ಬರೆಯಲು , "KD" ಅನ್ನು ಆಯ್ಕೆ ಮಾಡಿಕೊಂಡರೆ ಕನ್ನಡದಲ್ಲಿ ಬರೆಯಲು ತಂತ್ರಾಂಶವು ಅನುವುಮಾಡಿಕೊಡುತ್ತೆ.

ಬರಿ ಗೂಗಲ್ ನವರ ತಂತ್ರಾಂಶವಲ್ಲದೆ ಕನ್ನಡ ಹಾಗೂ ಇನ್ನಿತರ ಭಾರತೀಯ ಭಾಷೆಗಳ ಬರವಣೆಗೆಗೆ ಹುಟ್ಟಿಕೊಂಡಿರುವ ವೈವಿದ್ಯ ರೀತಿಯ ತಂತ್ರಾಂಶಗಳನ್ನು ಈ ಕೆಳಗೆ ನಮೂದಿಸಿರುವ ಬೇರೆ,ಬೇರೆ ವೆಬ್ ಲಿಂಕ್ ಗಳಿಂದ ಡೌನ್ಲೋಡ್ ಮಾಡಕೊಳ್ಳಬಹುದು.

೨. http://www.baraha.com/ (ಇದು ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾದ ಮತ್ತು ಬಹಳಷ್ಟು ಕನ್ನಡ ಬರಹಗಾರರು ಉಪಯೋಗಿಸುವ ವೆಬ್ ತಾಣ. ಬರಹ ಡಾಟ್ ಕಾಮ್ ನಲ್ಲಿ ತಂತ್ರಾಂಶದ ಜೊತೆ ಇಂಗ್ಲೀಷ್ ಪದಗಳಿಗೆ ಕನ್ನಡ ಪದಗಳನ್ನು ತಿಳಿಸುವ “ಕನ್ನಡ ನಿಘಂಟು” ಕೂಡ ಇದೆ, ಅದಲ್ಲದೆ ಓದಲು ಸಾಕಷ್ಟು ಕನ್ನಡದ ಬ್ಲಾಗ್ ಬರಹಗಳು ಸಹ ಇಲ್ಲಿವೆ)

೩. http://www.quillpad.in/index.html

೪. http://kannada.indiatyping.com/

೫. http://www.karunadu.gov.in/pages/nudi.aspx

ಇಲ್ಲಿಯವರೆಗೂ ಕಂಪ್ಯೂಟರ್ ಗಾಗಿ ಅಭಿವೃದ್ದಿಪಡಿಸಿರುವ ಕನ್ನಡ ತಂತ್ರಾಂಶಗಳ ಬಗ್ಗೆ ತಿಳಿದುಕೊಂಡೆವು. ಅದೇ ರೀತಿ ಮೊಬೈಲ್ ಗಳಲ್ಲಿ ಕನ್ನಡ ಬರಹವನ್ನು ಬರೆಯಬಹುದೇ? ಹೌದೆನ್ನುವುದಾದರೆ, ಹೇಗೆ ಬರೆಯಬಹುದು ಅನ್ನುವುದನ್ನು ತಿಳಿಯೋಣ.

ಮೊಬೈಲ್ ಗಳು ಅನ್ ಡ್ರಾಯಿಡ್ ದಾಗಿದ್ದರೆ ವಿಭಿನ್ನ ಭಾಷಾ ಬರಹಕ್ಕೆ ಸಹಾಯ ಮಾಡುವ Application (App)ಗಳನ್ನು ಪ್ಲೇ ಸ್ಟೋರ್ ನಿಂದ ಉಚಿತವಾಗಿ ಡೌನ್ ಲೋಡ್ ಮಾಡಿ ಮೊಬೈಲ್ ನಲ್ಲಿ ಅಳವಡಿಸಿಕೊಳ್ಳಬೇಕು. ಅವುಗಳಲ್ಲಿ ಪ್ರಮುಖವಾದ Appsಗಳೆಂದರೆ
೧. ಮಲ್ಟಿ ಲಿಂಗ್ ಕೀಬೋರ್ಡ್ ( https://play.google.com/store/apps)

೨. ಕನ್ನಡ ಪ್ರೈಡ್ ಎಡಿಟರ್ (https://play.google.com/store/apps/details?id=nichetech.kannad.editor&hl=en)

ಕಂಪ್ಯೂಟರ್ ನಲ್ಲೋ ಇಲ್ಲವೇ ಮೊಬೈಲ್ ನಲ್ಲೋ ಒಮ್ಮೆ ಕನ್ನಡ ಅಕ್ಷರಗಳ ಬರೆಯುವ ಪ್ರಯತ್ನ ಮಾಡಿನೋಡಿ. ಮತ್ತೆ ಇಂಗ್ಲೀಷ್ ನಲ್ಲಿ ಬರೆಯುವ ಮನಸ್ಸು ನಿಮ್ಮದಾಗಿರುವುದಿಲ್ಲ. ನೀವೇ ಹೇಳುವಿರಿ ಕಂಪ್ಯೂಟರ್ ನಲ್ಲಿ ಕನ್ನಡ ಬರವಣಿಗೆ ಎಷ್ಟು ಸುಲಭ ಅಲ್ಲವೇ? ಎಂದು.

ಭಾನುವಾರ, ಜನವರಿ 19, 2014

ಕ್ಯಾಲಿಫೋರ್ನಿಯಾದಲ್ಲಿ ನಾ ನೋಡಿದ ಪ್ರವಾಸಿ ಸ್ಥಳಗಳು: ಮೊದಲನೆಯದಾಗಿ ಸಂತ ಕ್ರುಜ್

ನಾನಿರುವ ಸಂತಕ್ಲಾರವೂ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಹಾಗೂ ಸಿಲಿಕಾನ್ ವ್ಯಾಲಿ ಸಮುದಾಯದಲ್ಲಿನ ಚಿಕ್ಕ ಪಟ್ಟಣ. ಈ ಚಿಕ್ಕ ಪಟ್ಟಣದಲ್ಲಿ ವಿಮಾನ ನಿಲ್ದಾಣ ಇಲ್ಲವಾದ್ದರಿಂದ ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಇಲ್ಲಿಗೆ ಬರಬೇಕು. ಬೆಂಗಳೂರಿನಲ್ಲಿ ನಮಗೆ ಕಾಣುವಂತಹ ಹತ್ತಾರು ಅಂತಸ್ತುಗಟ್ಟಲೆ ಎತ್ತರದ ಕಟ್ಟಡಗಳಾಗಲಿ, ಅಪಾರ್ಟ್ ಮೆಂಟ್ ಗಳಾಗಲಿ ಸಂತಕ್ಲಾರದಲ್ಲಿ ನಮಗೆ ಕಾಣಸಿಗುವುದಿಲ್ಲವಾದ್ದರಿಂದ, ಬಂದ ಕೆಲದಿನಗಳವರೆಗೂ ಈ ಪಟ್ಟಣದ ಬಗ್ಗೆ ಯಾವುದೇ ತರಹದ ಆಕರ್ಷಣೀಯ ಮನೋಭಾವ ನನ್ನಲ್ಲಿ ಮೂಡಿರಲೇ ಇಲ್ಲ! ಆದರೆ ಕೆಲದಿನಗಳು ಕಳೆದ ಮೇಲೆ ಇಲ್ಲಿ ಏಕೆ? ಕಟ್ಟಡಗಳನ್ನು, ಅಪಾರ್ಟ್ ಮೆಂಟ್ ಗಳನ್ನು ಅಂತಸ್ತುಗಟ್ಟಲೇ ಕಟ್ಟುವುದಿಲ್ಲ ಅನ್ನುವುದಕ್ಕೆ ಕಾರಣ ಗೊತ್ತಾದದ್ದು.

ಕ್ಯಾಲಿಫೋರ್ನಿಯಾದ ಉದ್ದಕ್ಕೂ “ಸ್ಯಾನ್ ಆಂಡ್ರಿಯಾಸ್” ಹೆಸರಿನ ಭೂ "ತಪ್ಪು ರೇಖೆ" (Earth Faultline) ಹಾದುಹೋಗಿದ್ದು, ಅದು ಈ ಪ್ರದೇಶದಲ್ಲಿ ಭೂ ಕಂಪನದ ಸಾಧ್ಯತೆಯನ್ನು ಹೆಚ್ಚಿಸಿದೆ, ಅಲ್ಲದೆ ಆಗಾಗ ಚಿಕ್ಕದಾಗಿ ಭೂಮಿ ಕಂಪಿಸುವ ಅನುಭವವು ಆಗುತ್ತಿರುತ್ತೆ! ಹಾಗಾಗಿ ಈ ಊರಲ್ಲಿ ಅಂತಸ್ತುಗಟ್ಟಲೇ ಎತ್ತರದ ಕಟ್ಟಡಗಳನ್ನು ಕಟ್ಟುವ ಪ್ರಯತ್ನ ಮಾಡಿರುವುದು ಕಡಿಮೆ.

ಇಲ್ಲಿಗೆ ಬಂದ ಆರಂಭದಿಂದ ಈ ದಿನಗಳವರೆಗೂ ಸ್ನೇಹಿತರೊಡಗೂಡಿ ನೋಡಿ ಬಂದಿರುವ ಪ್ರವಾಸಿ ಸ್ಥಳಗಳಲ್ಲಿ ಬಹುತೇಕ ಪೆಸಿಫಿಕ್ ಮಹಾಸಾಗರಕ್ಕೆ ಹೊಂದಿಕೊಂಡ ಅಥವಾ ಅಲ್ಲಿಗೆ ತೀರ ಸಮೀಪದಲ್ಲಿರುವ ಸ್ಥಳಗಳಾಗಿವೆ. ಅವುಗಳಲ್ಲಿ ಕೆಲ ಪ್ರವಾಸಿ ಸ್ಥಳಗಳ ಹೆಸರಿಸುವುದಾದರೆ ಸಂತ ಕ್ರುಜ್, ಮಾಂಟೆರೇರಿ ಬೇ, ೧೭ನೇ ಮೈಲಿ ಡ್ರೈವ್, ಬಿಗ್ ಸುರ್ ಹಾಗೂ ಪಾಯಿಂಟ್ ರೆಯೇಸ್ (Point Reyes). ನಂಬುವಿರೋ? ಇಲ್ಲವೋ? ಇಲ್ಲಿ ನಾನು ಬರೆದಿರುವ ಒಂದೊಂದು ತಾಣಕ್ಕೂ ನಾಲ್ಕೈದು ಸಲ ಹೋಗಿಬಂದಿದ್ದೇನೆ. ಇಷ್ಟು ಸಲ ಹೋಗಿ ಬಂದಿದ್ದರೂ ಏಕೋ? ಆ ತಾಣಗಳಿಗೆ ಮತ್ತೆ ಮತ್ತೆ ಹೋಗಬೇಕೆನ್ನುವ ಕಾತುರ ಮಾತ್ರ ಇದ್ದೇ ಇದೆ.

ಈ ತಾಣಗಳ ಬಗ್ಗೆ ನನ್ನಲ್ಲಿ ತುಂಬಿಕೊಂಡಿರುವ ಕುತೂಹಲಕ್ಕೆ, ಹಂಬಲಕ್ಕೆ ಮುಖ್ಯ ಕಾರಣಗಳೆಂದರೆ ಹೋಗುವ ಹಾದಿಯುದ್ದಕ್ಕೂ ಕಾಣಸಿಗುವ ಪರ್ವತಗಳ ಸಾಲು.ಇವುಗಳಲ್ಲಿ ಕೆಲವೆಡೆ ಹಸಿರು ಇಲ್ಲವೇ ಒಣಗಿದ ಹುಲ್ಲಿನಿಂದ ಆವರಿಸಿದ ಬೊಳು ಪರ್ವತಗಳು ಮತ್ತೆ ಕೆಲವೆಡೆ ಉದ್ದನೆಯ ಮರಗಳನ್ನು ದಟ್ಟವಾಗಿ ತುಂಬಿಕೊಂಡಿರುವ ಪರ್ವತಗಳು. ಆ ಪರ್ವತಗಳನ್ನು ಕಡಿದು ಇಲ್ಲವೇ ಕೊರೆದು ಮಾಡಿರುವ ಹಾವಿನ ಚಲನೆಯಾಕಾರದಂತೆ ಇರುವ ರೋಮಂಚನಭರಿಸುವ ರಸ್ತೆಗಳು ಮತ್ತು ಹಾದಿಯುದ್ದಕ್ಕೂ ಅನತಿ ದೂರದಲ್ಲೇ ಆಗುವ ಆಗಾಧ ಜಲರಾಶಿಯನ್ನು ತುಂಬಿ ಕೊಂಡಿರುವ ಪೆಸಿಫಿಕ್ ಮಹಾಸಾಗರದ ದಿಗ್ದರ್ಶನ! ನಿಜಕ್ಕೂ ಆ ದೃಶ್ಯಾವಳಿಗಳನ್ನು ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದೆಂದು ನನಗನ್ನಿಸಿದೆ.

ಸಂತಕ್ರುಜ್.

ಸಂತಕ್ಲಾರಕ್ಕೆ ಮೂವತ್ತೆರಡು ಮೈಲಿ ದೂರದಲ್ಲಿರುವ ಸಾಗರತೀರದ ಪ್ರೇಕ್ಷಣಿಯ ಸ್ಥಳ ಸಂತಕ್ರುಜ್. ಅಲ್ಲಿಗೆ ಹೋಗಿಬರುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ, ನಮಗೆ ಅಲ್ಲಿನ ಕೊರೆಯುವ ಚಳಿಯದ್ದೆ ದೊಡ್ಡ ಚಿಂತೆಯಾಗಿತ್ತು! ಆದರೂ ಧೈರ್ಯಮಾಡಿ ಅಂದು ಭಾನುವಾರ ಬೆಳಗಿನ ಉಪಹಾರ ತಿಂದು, ಮಧ್ಯಾಹ್ನದ ಊಟದ ಬುತ್ತಿಯನ್ನು ಕಟ್ಟಿಕೊಂಡು ಸಂತ ಕ್ರುಜ್ಗೆ ಹೋಗಲೆಂದು ಕಾರನೊಳಗೆ ಕುಳಿತಾಗ ಘಂಟೆ ಹತ್ತಾಗಿತ್ತು. ಸಂತಕ್ಲಾರದಿಂದ ಸಂತ ಕ್ರುಜ್ಗೆ ಹೋಗುವ ಹಾದಿಯು ನೇರವಾಗಿರದೆ ಕ್ಲಿಷ್ಟಕರವಾದ ಹೆಚ್ಚು ತಿರುವುಗಳನ್ನು ಹೊಂದಿದೆ. ಈ ಹಾದಿಯಲ್ಲಿ ವಾಹನಗಳನ್ನು ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ಬೆಟ್ಟ, ಕಣಿವೆ, ದಟ್ಟನೆಯ ಹಸಿರಿನ ಕಾಡು, ತಿರುವು-ಮುರುವಿನ ರಸ್ತೆ ಇವೆಲ್ಲವ ನೋಡಿಕೊಂಡು ಸಂತಕ್ರುಜ್ ತಲುಪಿದಾಗ ಘಂಟೆ ೧೧.೧೫ ಆಗಿತ್ತು. ನಮ್ಮ ಅದೃಷ್ಟಕ್ಕೆ ಅಂದು ಚಳಿ ಜಾಸ್ತಿ ಇರದೇ ಸ್ವಲ್ಪ ಬೆಚ್ಚಗಿನ ವಾತಾವರಣವಿತ್ತು

ಮೊದಲ ನೋಟದಲ್ಲೇ ಯಾವುದೋ ಒಂದು ಹಳೆಪಟ್ಟಣದ ರೀತಿ ಕಂಡಿತು ಸಂತಕ್ರುಜ್. ಅಲ್ಲಿನ ಹಳೆ ಶೈಲಿಯ ಕಟ್ಟಡಗಳು, ಮಾಸಲು ಬಣ್ಣದ ಮನೆಗಳು ಹಾಗೆ ನನಗನ್ನಿಸಲು ಕಾರಣ ಇದ್ದಿರಬಹುದು. ನಮ್ಮ ಮೋಟಾರು ಬಂಡಿಯನ್ನು ಒಂದುಕಡೆ ಪಾರ್ಕ್ ಮಾಡಿ ಸಂತಕ್ರುಜ್ ಅನ್ನುವ ಸಾಗರ ತಡಿಯ ಊರಿನ ವಿಹಾರ ಹೊರಟ ನಮ್ಮನ್ನು ಗಮನ ಸೆಳೆದದ್ದು ತುಂಡರಿಸಿದ ರೆಡ್ ವುಡ್ ಮರಗಳನ್ನು ಆಧಾರ ಸ್ತಂಭವಾಗಿರಿಸಿಕೊಂಡು ಬರಿ ಮರದಲ್ಲಿಯೇ ಕಟ್ಟಿರುವ "ಬೀಚ್ ಬ್ರಾಡ್ ವಾಕ್", ಇದು ಸಾಗರದೊಳಗೆ ಉದ್ದವಾಗಿ ನಾಲಗೆ ರೀತಿ ಚಾಚಿಕೊಂಡಿದೆ. ಅಲ್ಲಿ ಹಾಗೆಯೇ ನೆಡೆಯುತ್ತಾ ಹೋದರೆ ನಮ್ಮನ್ನು ಅಂದರೆ ನೋಡುಗರನ್ನು ಕಣ್ಮನ ಸೆಳೆಯುವ ಸಂಗತಿಗಳೆಂದರೆ ಕಣ್ಣಳತೆ ದೂರದಲ್ಲೇ ಕಾಣಸಿಗುವ ಸಮುದ್ರಸಿಂಹಗಳ (Sea Lion) ಗುಂಪು, ಬೀಚ್ ಬ್ರಾಡ್ ವಾಕ್ ಅನ್ನು ಕಟ್ಟಲು ಕೆಳಗೆ ಉಪಯೋಗಿಸಿರುವ ಮರದ ಆಧಾರ ಪಟ್ಟಿಗಳ ಮೇಲೆ ಇವು ಗುಂಪಾಗಿ ನಿದ್ರಿಸುತ್ತಿರುತ್ತವೆ. ಅಲ್ಲಲ್ಲಿ ಕಾಣಸಿಗುವ ಶುಭ್ರ ಬಿಳಿ ಹಾಗೂ ಬೂದು ಬಣ್ಣದ ಸೀಗಲ್ (Seagull) ಎನ್ನುವ ಮುದ್ದಾದ ಪಕ್ಷಿ ಮತ್ತು ಜನಗಳನೇಕ ಕಪ್ಪು ಬಣ್ಣದ ಉಡುಗೆ ತೊಟ್ಟು ಸಾಗರದಲ್ಲಿ ಸರ್ಫಿಂಗ್ ಮಾಡುತ್ತಾ ಎಳುತ್ತಾ, ಬಿಳುತ್ತಾ, ತೇಲುತ್ತಿರುವುದು.

ಬೀಚ್ ಬ್ರಾಡ್ ವಾಕ್ ನಲ್ಲೇ ಹಿಂತಿರುಗಿ ಬಂದು ಬಲ ಪಾರ್ಶ್ವದಲ್ಲಿ ಕೆಳಗಿಳಿದು ಹಾಗೆಯೇ ನೆಡೆಯುತ್ತಾ ಹೋದರೆ ಒಂದು ಕಡೆ ಅಬ್ಬರದ ಅಲೆಗಳಿರದ ಪ್ರಶಾಂತ ಪೆಸಿಫಿಕ್ ಸಾಗರ, ಹಸಿ ಮರಳಿನ ಮೇಲೆ ಓಡಾಡುತ್ತಾ ಇರುವ ಪಕ್ಷಿಗಳ ದೊಡ್ಡ ಸಮೂಹ ಮತ್ತೊಂದು ಕಡೆ ಅನತಿ ದೂರದಲ್ಲೇ ಹತ್ತಾರು ಕೋರ್ಟ್ ಗಳಲ್ಲಿ ಬೀಚ್ ವಾಲಿಬಾಲ್ ಆಡುತ್ತಿರುವ ತರುಣ-ತರುಣೆಯರು ಮತ್ತು ನಮ್ಮ ವಂಡರ್ ಲಾಕ್ಕಿಂತ ದೊಡ್ಡದಾದ ಹಾಗೂ ಮೈ ನವೀರೆಳಿಸುವ ಬಗೆಬಗೆಯ ಆಟಗಳಿರುವ ಗೇಮ್ ಪಾರ್ಕ್ ನಮಗಾಗಿ ದರ್ಶನ ತೋರಲು ಕಾದಿರುವವು. ಅಲ್ಲಿಂದ ಪ್ಲೇಸರ್ ಪಾಯಿಂಟ್ ಅನ್ನುವ ಸ್ಥಳಕ್ಕೆ ಬಂದು ಸರ್ಫಿಂಗ್ ಮಾಡುತ್ತಿರುವವರನು ತೀರ ಹತ್ತಿರದಿಂದ ನೋಡಿ ಸಂಭ್ರಮಿಸಿ, ಅಲ್ಲೇ ಹಾಸುಗಲ್ಲಿನ ಮೇಲೆ ಕುಳಿತು ಮಧ್ಯಾಹ್ನದ ಊಟ ಮುಗಿಸಿ ನ್ಯಾಚುರಲ್ ಬ್ರಿಡ್ಜ್ ಅನ್ನು ನೋಡಲು ಹೊರಟೆವು. ಉದ್ದವಾಗಿದ್ದ ಈ ಬ್ರಿಡ್ಜ್ ಕಾಲಕ್ರಮೇಣ ಸಾಗರದ ಅಲೆಗಳ ಸವೆತಕ್ಕೆ ಸಿಲುಕಿ ಚಿಕ್ಕದಾಗಿ ಹೋಗಿದೆ. ಲೇಖನದೊಟ್ಟಿಗೆ ಲಗತ್ತಿಸಿರುವ ಫೋಟೋದಲ್ಲಿ ತೋರಿಸಿರುವಷ್ಟು ಇದೆ.


ಒಟ್ಟಾರೆ ಸಂತ ಕ್ರುಜ್ ನ ಬಹುತೇಕ ಪ್ರವಾಸಿ ತಾಣಗಳನ್ನು ನೋಡಿ ನಲಿದು, ಆನಂದಿಸಿ ಅಲ್ಲಿಂದ ನಾಲ್ಕು ಮೈಲಿಗಳ ದೂರದಲ್ಲಿ ದಟ್ಟಅರಣ್ಯದೊಳಗಿರುವ ಮಿಸ್ಟರಿ ಸ್ಪಾಟ್ (Mystery Spot) ಎಂಬ ಕುತೂಹಲಕಾರಿ ಸ್ಥಳಕ್ಕೆ ಬಂದೆವು.

ಈ ಸ್ಥಳದಲ್ಲಿ ಭೌತಿಕ ಹಾಗೂ ಗುರುತ್ವಾಕರ್ಷಣದ ನಿಯಮಗಳು ಅನ್ವಯಿಸುವುದಿಲ್ಲ ಅನ್ನುವ ಕಾರಣಕ್ಕೆ ತುಂಬಾ ಜನಪ್ರಿಯವಾಗಿದೆ. ನಾವು ಇಲ್ಲಿಗೆ ಬರುವ ವೇಳೆಗೆ ಸಂಜೆ ನಾಲ್ಕಾಗಿ ಸುತ್ತ ಮಬ್ಬುಮಬ್ಬು ಕತ್ತಲು ಆವರಿಸಿತ್ತು. ಮಿಸ್ಟರಿ ಸ್ಪಾಟ್ ಅನ್ನು ನೋಡಿಕೊಂಡು ಕಾರಿನೊಳಗೆ ಕೂತು, ಬೆಳಗಿನಿಂದ ನೋಡಿದ್ದೆಲ್ಲವ ವಿಚಾರ ಮಾಡುತ್ತಾ, ಸಂತಕ್ಲಾರದ ಹಾದಿಯನ್ನು ಹಿಡಿದಾಗ ಸಂಜೆ ಐದರ ವೇಳೆಗೆ ಆಗಲೇ ರಾತ್ರಿಯಂತಾಗಿ ಕರಿ ಕಗ್ಗತ್ತಲು ತುಂಬಿಕೊಂಡಿತ್ತು. ಒಟ್ಟಾರೆ ಮತ್ತೆ ಹೋಗಿ ನೋಡಬೇಕೆನ್ನಿಸುವ ಪ್ರವಾಸಿ ಸ್ಥಳಗಳಲ್ಲಿ ಸಂತಕ್ರುಜ್ ಒಂದೆಂದು ನನಗನ್ನಿಸಿತು. -ಸುನಿಲ್ ಮಲ್ಲೇನಹಳ್ಳಿ


ಚಿತ್ರ ಕೃಪೆ: ಅಂತರ್ಜಾಲ