ಸೋಮವಾರ, ಜನವರಿ 12, 2009

"ನಮ್ಮ ಅಪ್ಪಾಜಿ ಅಂದ್ರೆ ನನಗಿಷ್ಟ"

ಬರಹಗಾರ ವಸುಧೇಂದ್ರ ಅವರು ಬರೆದ "ನಮ್ಮ ಅಮ್ಮ ಅಂದ್ರೆ ನನಗಿಷ್ಟ" ಅನ್ನುವ ಪುಸ್ತಕವನ್ನು ಓದುವ ಅವಕಾಶ ಈಗ್ಗೆ ಕೆಲವು ದಿನಗಳ ಹಿಂದೆ ನನಗೆ ಒದಗಿಬಂದಿತ್ತು. ವಸುಧೇಂದ್ರ ಅವರು ತಮ್ಮ ಪೂಜ್ಯ ತಾಯಿಯವರು ಬಾಳಿ, ಬದುಕಿ ಹೋದ ಪರಿಯನ್ನು ಬಹಳ ಚಂದವಾಗಿ ವರ್ಣಿಸಿ ಬರೆದ ಪುಸ್ತಕವದು.

ಆ ಪುಸ್ತಕವನ್ನು ಓದಿ ಮುಗಿಸಿದಾಗಿನಿಂದಲೂ ನನ್ನ ಅಪ್ಪಾಜಿಯವರ ಬಗ್ಗೆ ಏನಾದರೂ ಬರೆಯಬೇಕೆಂಬ ವಿಚಾರವೂ ಸದಾ ಮನದ ಕಾರ್ಮುಗಿಲಲ್ಲಿ ಮಿಂಚುತ್ತಲೇ ಇತ್ತು. ಎಲೆಮರೆ ಕಾಯಿಯಂತೆ ಬಾಳಿ, ಬದುಕಿ ಹೋದ ನನ್ನ ಬಾಳಿನ ದಿವ್ಯ ಧ್ರುವತಾರೆ ಅಪ್ಪಾಜಿ ಅವರು. ನನಗಂತೆ ಅಲ್ಲ ಎಲ್ಲರಿಗೂ ಅವರ, ಅವರ ಹೆತ್ತವರ ಬಗ್ಗೆ ಅದಮ್ಯ ಪ್ರೀತಿ, ಗೌರವ, ಪೂಜ್ಯನೀಯ ಭಾವ ಮನದಲ್ಲಿ ತನ್‌ತಾನೇ ಮನೆಮಾಡಿಕೊಂಡಿರುವುದು ಸಹಜ. ನಮ್ಮ ಹಾಗೂ ಅವರ ನಡುವಿನ ಸಂಬಂಧ ತ್ಯಾಗ, ಅಕ್ಕರೆ, ಮಮಕಾರ, ಸಹಕಾರ, ತೀರದ ಒಲವು ಇನ್ನು ಹಲವಾರು ಪವಿತ್ರ ಸಂಕೋಲೆಗಳಿಂದ ಆದಂತಹ ಒಂದು ಪವಿತ್ರ ಬಂಧನ ಅಲ್ಲವೇ?.

ನಿಜ ಹೇಳಬೇಕೆಂದರೆ ನನ್ನ ಅಪ್ಪಾಜಿಯವರು ಭೌತಿಕವಾಗಿ ಈ ಲೋಕದಿಂದ ಮರೆಯಾದ ಮೇಲೇನೆ “ಬರವಣಿಗೆ” ಅನ್ನುವ ಲೋಕಕ್ಕೆ ನಾನು ಕಾಲಿರಿಸಿದ್ದು. ಅದರಂತೆ ಇವರೆಗೂ ಕೆಲವಾರು ಪ್ರಕಾರಗಳ ಲೇಖನಗಳನ್ನು, ಕವನಗಳನ್ನು ಬರೆದು, ನಿಮ್ಮ ಮುಂದಿರಿಸಿದ್ದೀನಿ. ಏಕೆಂದರೆ ಒಂದೇ ಬಗೆಯ, ಒಂದೇ ವಿಚಾರದ ಲೇಖನಗಳು, ಕವನಗಳು ಎಂದೂ, ಯಾರಿಗೂ ಒಪ್ಪಿಗೆಯಾಗುವುದಿಲ್ಲ ಎನ್ನುವುದು ನನ್ನ ಭಾವನೆ.

ಅಪ್ಪಾಜಿಯವರ ಬದುಕಿನಲ್ಲಿ ನೆಡೆದ ವಿವಿಧ ಘಟನೆಗಳ ಚಿತ್ರಣವನ್ನು ಬರೆಯಲೇಬೇಕು ಅನ್ನುವ ಪಣವನ್ನು ಮನದಲ್ಲಿ ತೊಟ್ಟು. ಈ ಬಾರಿ ಕ್ರಿಸ್ಮಸ್ ಸಲುವಾಗಿ ಸಿಕ್ಕ ರಜೆಯಲ್ಲಿ ಈ ಲೇಖನವನ್ನು ಬರೆದಿರುವೆನು. ಒಂದು ಹತ್ತಾರು ನಿಮಿಷಗಳ ಕಾಲ ಬಿಡುವು ಮಾಡಿಕೊಂಡು ಓದಿರಿ,
ನನ್ನ ಅಪ್ಪಾಜಿಯವರ ಹೆಸರು ಶಾಂತಲಿಂಗಪ್ಪ ಅಂತ, ನನ್ನ ಅಪ್ಪಾಜಿಯವರ ತಾತನವರ ಹೆಸರು ಸಹ ಶಾಂತಲಿಂಗಪ್ಪ ಅಂತ ಇತ್ತಂತೆ. ಅವರ ನೆನಪಿನಗಾಗಿ ನನ್ನ ಅಪ್ಪಾಜಿಯವರಿಗೆ "ಶಾಂತಲಿಂಗಪ್ಪ" ಅನ್ನುವ ಹೆಸರನ್ನು ನನ್ನ ಅಜ್ಜ ಇಟ್ಟರಂತೆ.
ಅಪ್ಪಾಜಿಯವರು ಹೆಸರಿಗೆ ತಕ್ಕಹಾಗೆ ಬಲು ಶಾಂತ,ಅಷ್ಟೇ ಮೃದು ಸ್ವಭಾವದವರಾಗಿದ್ದರು. ತಾವಾಯಿತು, ತಮ್ಮ ಕೆಲಸವಾಯಿತು ಒಂದು ದಿನವೂ, ಒಂದು ಕ್ಷಣವೂ ಬೇರೆಯವರ ಗೋಜಿಗೆ ಹೋದವರಲ್ಲ. ಆದರೆ ವ್ಯವಹಾರದ ವಿಷಯದಲ್ಲಿ ಮಾತ್ರ ಯಾರಿಗೂ, ಎಂದೂ ತಲೆಬಾಗಿದವರಲ್ಲ ಅಷ್ಟೂ ಕಠಿಣ, ಅಷ್ಟೂ ಪಾರದರ್ಶಕ ಕೈಯಿ ಅವರದಾಗಿತ್ತು.

ನಾನು ಚಿಕ್ಕವನಿರುವಾಗ ಪ್ರತಿದಿನ ರಾತ್ರಿಯ ಬೀಡುವಿನ ವೇಳೆಯಲ್ಲಿ ತಮ್ಮ ಜೀವನದಲ್ಲಿ ನೆಡೆದ ಅನೇಕಾನೇಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಅಪ್ಪಾಜಿಯವರು ಹೇಳುತ್ತಾ ಇದ್ದರು. ಅವರು ಹೇಳಿದ ಹಲವಾರು ಘಟನೆಗಳಲ್ಲಿ ನನ್ನ ನೆನಪಿನಂಗಳದಲ್ಲಿ ಮಾಸದಂತೆ ಇರುವ ಕೆಲವನ್ನು ಇಲ್ಲಿ ಬರೆದಿರುವೆನು. ಓದುತ್ತಾ ಸಾಗಿರಿ...
*************************
1977 ರಲ್ಲಿ ನಡೆಯಲ್ಪಟ್ಟ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಫರ್ಧಿಸಿದ್ದರು. ಎಲ್ಲ ಪಕ್ಷದವರಿಂದ ಅಬ್ಬರದ ಚುನಾವಣಾ ಪ್ರಚಾರ ನಡೆಯುತ್ತಿತ್ತಂತೆ. ಇಂತಹ ಸನ್ನಿವೇಶದಲ್ಲಿ ಚುನಾವಣಾ ಪ್ರಚಾರಕ್ಕೆಂದು ಖುದ್ದಾಗಿ ಇಂದಿರಾಗಾಂಧಿ ನಮ್ಮೂರಿಗೆ ಬಂದಾಗ ನಮ್ಮೂರಿನ ಹೊರಭಾಗದಲ್ಲಿರುವ ಬಸ್ಸ್‌ಸ್ಟ್ಯಾಂಡಿನ ಸುತ್ತಲೂ ಬಹಳ ಜನ ಸೇರಿದ್ದರಂತೆ. ಆ ಸಂದರ್ಭದಲ್ಲಿ ಇಂದಿರಾಗಾಂಧಿಯವರು ತಾವು ಹಾಕಿಕೊಂಡಿದ್ದ ಹೂವಿನ ಹಾರವನ್ನು ಮಹಾ ಜನತೆಯತ್ತಾ ಎಸೆದಾಗ, ಇದ್ದ ಭಾರಿ ನೂಕುನುಗ್ಗಲಲ್ಲೂ ಇಂದಿರಾಗಾಂಧಿಯವರು ಎಸೆದ ಹಾರವನ್ನು ಅಪ್ಪಾಜಿಯವರು ಹಿಡಿದು, ಮನೆಯಲ್ಲಿ ತುಂಬಾ ದಿನಗಳವರೆಗೆ ಇಟ್ಟುಕೊಂಡಿದ್ದರಂತೆ.
*************************
ಅಪ್ಪಾಜಿಯವರು ಚಿಕ್ಕವರಿದ್ದಾಗ ಅವರ ಮೂರನೇ ಅಣ್ಣನ (ಅಂದರೆ ನನ್ನ ಮೂರನೇ ದೊಡ್ಡಪ್ಪ) ಜೊತೆ ದಿನಾಲೂ ತೋಟಕ್ಕೆ ಹೋಗಿ ಬರುತ್ತಿದ್ದರಂತೆ. ಆಗಿನ ಸಮಯದಲ್ಲಿ ಹಳ್ಳಿಗಾಡುಗಳ ಕಡೆ ಬೋರ್‌ವೇಲ್ ವ್ಯವಸ್ಥೆ ಇರಲಿಲ್ಲವಾದ್ದರಿಂದ ಕೆರೆ ನೀರನ್ನು ಹೊತ್ತು ತಂದು, ತೆಂಗಿನ ಸಸಿಗಳಿಗೆ ಹಾಯಿಸಿ ಅವುಗಳನ್ನು ಬೆಳೆಸುತ್ತಿದ್ದರು. ರಸ್ತೆಯ ಪಕ್ಕದಲ್ಲಿ ತೋಟವಿದ್ದರಿಂದ ಆಗಾಗ ಓಡಾಡುವ ವಾಹನಗಳಿಗೆಲ್ಲ ತೆಂಗಿನ ಗರಿಗಳು ಬಡಿಯುತ್ತಿದ್ದವಂತೆ. ತೆಂಗಿನ ಗರಿಗಳಿಗೆ ಆಗುತ್ತಿದ್ದ ನೋವನ್ನು ಸಹಿಸಲಾಗದೆ, ನಮ್ಮ ದೊಡ್ಡಪ್ಪ ಕೋಪಗೊಂಡು ತೆಂಗಿನ ಗರಿಯೊಂದಕ್ಕೆ ಕಲ್ಲು ಕಟ್ಟಿದ್ದರಂತೆ. ಪಂಚನಹಳ್ಳಿಯ ಕಡೆಯಿಂದ ಬಂದ ಗಜಾನನ ಎನ್ನುವ ಬಸ್ಸಿನ ಮುಂಭಾಗದ ಗ್ಲಾಸಿಗೆ ಕಲ್ಲು ಬಡಿದು ಗ್ಲಾಸು ಕ್ಷಣಾರ್ಧದಲ್ಲಿ ಪುಡಿಪುಡಿಯಾಯಿತಂತೆ. ನಮ್ಮ ದೊಡ್ಡಪ್ಪ ಅಲ್ಲಿಂದ ಮಿಂಚಿನ ವೇಗದಲ್ಲಿ ಪರಾರಿಯಾಗಿ ಹೋದರಂತೆ. ಆದರೆ ಅಪ್ಪಾಜಿಯವರು ಬಸ್ಸಿನವರ ಕೈಗೆ ಸಿಕ್ಕು ಅವರಿಂದ ಒಂದೆರಡು ಒದೆಯನ್ನು ತಿಂದಿದ್ದರಂತೆ. ಅದೂ ಅಲ್ಲದೇ ಬಸ್ಸಿನವರು ಅಪ್ಪಾಜಿಯವರನ್ನು ಬಸ್ಸಿನಲ್ಲಿ ಕೂರಿಸಿಕೊಂಡು ಹೋಗಿ ನಮ್ಮೂರಿನಿಂದ ನಾಲ್ಕು ಕೀಲೋಮೀಟರು ದೂರದಲ್ಲಿರುವ ಬಿದರೆ ಗುಡ್ಡದ ಹತ್ತಿರ ಬಿಟ್ಟು ಹೋಗಿದ್ದರಂತೆ!
*************************
ನಾನು ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಓದುತ್ತಾ ಇದ್ದೆ. ಮನೆಯ ಖರ್ಚು, ನನ್ನ ಓದಿನ ಖರ್ಚು ಹಾಗೂ ಇನ್ನಿತರೆ ಖರ್ಚುಗಳು ಅಪ್ಪಾಜಿಯವರಿಗೆ ಸ್ಪಲ್ಪ ಹೊರೆಯಾಗಿದ್ದವು. ಅಲ್ಲದೆ ಅವರಿಗೆ ಪಿತ್ರಾರ್ಜಿತವಾಗಿ ಬಂದದ್ದು ಕಣ್ಣ ಅಳತೆಯಲ್ಲೇ ಅಳೆಯ ಬಹುದಾದಷ್ಟು ಆಸ್ತಿ. ಆದರೆ ಇದರ ಬಗ್ಗೆ ಅರೆಕ್ಷಣ ಯೋಚಿಸುತ್ತಾ ಕುಳಿತವರಲ್ಲ. ಅವರಲ್ಲಿದ್ದ ಮುಗ್ಧ ಉತ್ಸಾಹ ಹಾಗೂ ಗಾಢ ಅಲೋಚನಾ ಲಹರಿಯ ಪರಿಣಾಮವಾಗಿ ಎಲ್ಲವನ್ನೂ ಬಹಳ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು. ಅದೇ ಸಮಯದಲ್ಲಿ ಅಪ್ಪಾಜಿಯವರು ನಮ್ಮ ಜಮೀನಿನ ಪಕ್ಕದಲ್ಲಿ ಒಂದಿಷ್ಟು ಹೊಸ ಜಮೀನನ್ನು ಖರೀದಿಸಿದರು. ಆಳುಗಳ ಸಹಾಯದಿಂದ ಅದರ ಸುತ್ತಲೂ ತಂತಿ ಕಂಬ ಹಾಕಿಸಿ, ತೆಂಗಿನಸಸಿಗಳನ್ನು ನೆಡಿಸಿದರು. ಅಮ್ಮನಿಗೆ ಇದು ಎಳ್ಳಷ್ಟೂ ಇಷ್ಟವಾಗದೇ ಅಪ್ಪಾಜಿಯವರ ಜೊತೆ ಜಗಳ ಮಾಡಿಕೊಂಡಿದ್ದರು. ಎಷ್ಟೋ ಸಾರಿ ಆಳುಗಳು ಕೆಲಸಕ್ಕೆ ಬರುತ್ತೇವೆ ಎಂದು ಹೇಳಿ ಕೈಕೊಡುತ್ತಿದ್ದಂತಹ ಸಮಯದಲ್ಲಿ ಅಮ್ಮ,, ಅಪ್ಪಾಜಿ ಇಬ್ಬರೂ ಸೇರಿ ಕೆರೆಯಿಂದ ನೀರನ್ನು ಹೊತ್ತುತಂದು ತೆಂಗಿನ ಸಸಿಗಳಿಗೆ ಹಾಕುತ್ತಿದ್ದರು. ಅವರ ಒಂದು ಅವಿರತ ಪರಿಶ್ರಮದ ಫಲವಾಗಿ ಐದಾರು ವರುಷಗಳಲ್ಲಿ ತೆಂಗಿನ ಸಸಿಗಳು ಫಲಕೊಡಲು ಆರಂಭಿಸಿದವು.

*************************
ಮದುವೆ ಇಲ್ಲವೇ ಇನ್ನಿತರ ಶುಭ ಸಮಾರಂಭಗಳಿಗೆ ಆಹ್ವಾನ ಬಂದಾಗಲೆಲ್ಲ ಅಪ್ಪಾಜಿಯವರು ಹೋಗುತ್ತಿದ್ದದ್ದು ತೀರ ಕಡಿಮೆ. ಆದರೆ ಅಮ್ಮ ಯಾವ ಸಮಾರಂಭಗಳಿಗೆ ತಪ್ಪಿಸದೆ ಹೋಗುತ್ತಿದ್ದರು. ಅಮ್ಮ ಮನೆಯಲ್ಲಿ ಇರದ ಸಂದರ್ಭದಲ್ಲಿ ಅಡುಗೆ ಮನೆಯ ಉಸ್ತುವಾರಿಯನ್ನು ಅನ್ಯಮಾರ್ಗವಿಲ್ಲದೇ ಅಪ್ಪಾಜಿಯವರೇ ವಹಿಸಿಕೊಳ್ಳಬೇಕಾಗಿತ್ತು.ಅಪ್ಪಾಜಿಯವರಿಗೆ ಮಾಡಲು ಬರುತ್ತಿದ್ದ ಅಡುಗೆ ಒಂದೇ ಒಂದು ಅದು ಉಪ್ಪಿಟ್ಟು! ಬೆಳಗಿನ ತಿಂಡಿಗೆಂದು ಮಾಡಿದ ಉಪ್ಪಿಟ್ಟುನ್ನು ಮಧ್ಯಾಹ್ನದ ಊಟಕ್ಕೂ ಅದನ್ನೇ ತಿನ್ನಬೇಕಾಗಿತ್ತು.ರಾತ್ರಿ ಊಟಕ್ಕೆ ಅನ್ನ ಮಾಡುತ್ತಿದ್ದರು ಅವರಿಗೆ ಸಂಬಾರು ಮಾಡಲು ಬರುತ್ತಿರಲ್ಲಿಲ್ಲವಾದ್ದರಿಂದ ಅನ್ನಕ್ಕೆ ಕಲಸಿಕೊಳ್ಳಲು ಮೊಸರೇ ಗತಿಯಾಗಿರುತ್ತಿತ್ತು, ಅದರ ಜೊತೆಗೆ ಉಪ್ಪಿನಕಾಯಿ ನೆಂಚಿಕೆಗೆ ಇರುತ್ತಿತ್ತು. ಅಮ್ಮ ಏನಾದರೂ ದೀರ್ಘ ದಿನಗಳ ಕಾಲ ನೆಂಟರ ಊರುಗಳಿಗೆ ಪ್ರವಾಸ ಹೋದರೆ ಅಪ್ಪಾಜಿಯವರು ತಮ್ಮ ಅಡುಗೆ ಮಾಡುವ ಕೆಲಸಕ್ಕೆ ತೀಲಾಂಜಲಿಯನ್ನು ಇಟ್ಟು. ಬೆಳಗಿನ ತಿಂಡಿಗೆಂದು ನಮ್ಮೂರ ಪಕ್ಕದ ಬಿದರೆಯ ನಟರಾಜ್ ಅಣ್ಣನ ಹೋಟೆಲಿನಿಂದ ಬಿಸಿ ಬಿಸಿ ಇಡ್ಲಿ ತರುತ್ತಿದ್ದರು. ಆ ದಿನಗಳಲ್ಲಿ ಹತ್ತು ರೂಪಾಯಿಗಳಲ್ಲಿ ಅಪ್ಪಾಜಿ, ನಾನು ಹಾಗೂ ಶೀಲಾ ಮೂವರು ತಿಂದರೂ ಇನ್ನೂ ಮಿಗುವಷ್ಟು ಇಡ್ಲಿ ಬರುತ್ತಿದ್ದವು. ಒಮ್ಮೊಮ್ಮೆ ರಾತ್ರಿಯ ವೇಳೆಯ ಊಟಕ್ಕೆ ಮೊದಲನೇ ದೊಡ್ಡಪ್ಪನವರ ಮನೆಗೆ ಹೋಗುತ್ತಿದ್ವಿ. ನಮ್ಮ ದೊಡ್ಡಮ್ಮನ ಕೈಯಿಯ ಬಹಳ ಖಾರವಾದ ಸಂಬಾರಿನ ಸವಿಯನ್ನು ಸವಿದು ಬರುತ್ತಿದ್ದೇವು/ (ಮುಂದುವರೆಯುವುದು.....).

-ನಿಮ್ಮ ಸುನಿಲ್ ಮಲ್ಲೇನಹಳ್ಳಿ

5 ಕಾಮೆಂಟ್‌ಗಳು:

shivu.k ಹೇಳಿದರು...

ಸುನಿಲ್,
ಅಪ್ಪಾಜಿಯವರ ಬಗ್ಗೆ ತುಂಬಾ ಚೆನ್ನಾಗಿದೆ ಲೇಖನ....ನನ್ನ ಗೆಳೆಯ ಮತ್ತು ಗೆಳತಿಯಾದ ಚಿತ್ರ ಇಬ್ಬರೂ ಅಪ್ಪನಿಲ್ಲದ ಕೊರಗನ್ನೂ ತಮ್ಮ ಬ್ಲಾಗಿನಲ್ಲಿ ಬರೆದಿದ್ದರು....
ನೀವು ಅಪ್ಪನ ಅದ್ಭುತ ವ್ಯಕ್ತಿತ್ವದ ಬಗ್ಗೆ ಬರೆದಿದ್ದೀರಿ....ನಮಗೆ ಎಲ್ಲಾ ವಿಧದ ಲೇಖನಗಳು ಸಿಗುತ್ತಿವೆ...ಥ್ಯಾಂಕ್ಸ್....
ನೀವು ಬಿಡುವು ಮಾಡಿಕೊಂಡು ನನ್ನ ಬ್ಲಾಗಿಗೊಮ್ಮೆ ಬನ್ನಿ....

Unknown ಹೇಳಿದರು...

ಉತ್ತಮವಾಗಿ ಮೂಡಿಬಂದಿದೆ.
ಮತ್ತೆಹರಿದುಬರಲಿ

ಕವಿತ ಹೇಳಿದರು...

ನೀವು ನಿಮ್ಮ ತಂದೆ ಬಗ್ಗೆ ಮೊದಲೊಮ್ಮೆ ಬರೆದದ್ದು ಒದಿದ್ದೇನೆ. ಇದು ಚೆನ್ನಾಗಿದೆ.
ತಂದೆ ತಾಯಿಯರ ಬಗ್ಗೆ ಗೌರವ ಒಳ್ಳೆಯ ಸಂಸ್ಕಾರವನ್ನು ಸೂಚಿಸುತ್ತದೆ.ನನ್ನ ಸಲಹೆ ಏನೆಂದರೆ ಒಂದು ಕತೆ ಬರೆದು, ಅದರಲ್ಲಿ ನಿಮ್ಮ ತಂದೆಯ ಪಾತ್ರವನ್ನು ತಂದು, ಅವರ ಅನುಭವಗಳನ್ನು ಅದರಲ್ಲಿ ಮೂಡಿಸಿದರೆ ಸೊಗಸಾಗಿರುತ್ತದೆ.

ಅನಾಮಧೇಯ ಹೇಳಿದರು...

lekana chennagi hagu mana thattuva hage moodi bandide hagu prakatisida yella lakanagaliginta binnavagide good & freshness we can feel

thanks for your effort

Kumar H R

PaLa ಹೇಳಿದರು...

ಸುನಿಲ್,

ಕೆಲಸದ ಒತ್ತಡದ ನಡುವೆ ನಿಮ್ಮ ಬ್ಲಾಗಿಗೆ ಭೇಟಿ ಕೊಡಲಾಗದ್ದಕ್ಕೆ ಕ್ಷಮೆಯಿರಲಿ. ನಿಮ್ಮ ತಂದೆಯ ಮೇಲೆ ನೀವಿಟ್ಟ ಪ್ರೀತಿ, ನಿಮ್ಮ ಬರಹದಲ್ಲಿ ಸೊಗಸಾಗಿ ಮೂಡಿದೆ.
ಮುಂದಿನ ಕಂತಿಗೆ ಕಾಯುತ್ತಾ...

--
ಪಾಲ