ಮನದ ಸಂತೆಯಲ್ಲಿ ನಡೆದಿಹುದು ಕನ್ನಡ ಪದಗಳ ನಿನಾದ! ಈ ಬ್ಲಾಗಿನಲಿ ಪ್ರತಿಕ್ಷಣವೂ ಹರಿದಿಹುದು ಅ ನಿನಾದ ಸಂವಾದ! ಓದುಗರಿಗಂತೂ ದಿನನಿತ್ಯವೂ ಹೊಸ ವಿಚಾರದ ಆಸ್ವಾದ. ..
ಗುರುವಾರ, ಡಿಸೆಂಬರ್ 26, 2013
ಗೌರ ಅಂದುಕೊಂಡ ಬದುಕಲ್ಲ ಅದು..
ಬಂದವನನ್ನು ಕುರಿತು ಎಲ್ಲಿ ಹಾಳಾಗಿ ಹೋಗಿದ್ಯೋ ಶಂಕ್ರ? ಎಂದು ಕೇಳಿದಳು ಗೌರಕ್ಕ.
ಅಯ್ಯೋ ಶಿವ! ಊರ್ನಾಗ ನಿಂಗೆ ಒಬ್ನೂ ವಿಷ್ಯನ ಹೇಳಿಲ್ವ? ಎಂದು ಮಾತನ್ನು ಮುಂದುವರೆಸಲು ಹೊರಟ ಶಂಕ್ರನಿಗೆ ಮಾತನಾಡಲು ಬಿಡದೆ ಲೋ ಶಂಕ್ರ, ನಾನಿರೋದು ತೋಟದ ಮನೆಲಿ ಅದು ಅಲ್ಲದೆ ಊರೊಳಗೆ ಹೋಗಿ ಸರಿಯಾಗಿ ಹದಿನೈದು ದಿವಸವಾದ್ವು ನನ್ ಮನೆತಕ ದಿನ ತಪ್ಪದೆ ಬರೋನು ನೀನ್ ಒಬ್ನೇ ನೋಡಿದ್ರೆ ಒಂದ್ವಾರದಿಂದ ನೀನ್ ಅಡ್ರೆಸ್ಸೆ ಇಲ್ಲ! ಅಂತಾದ್ರಾಗ ನಂಗೆ ಹ್ಯಾಂಗೋ ಗೊತ್ತಾಬೇಕು ವಿಷ್ಯ? ಎಂದಳು.
ಏನೋ ಅಕಾ, ನನ್ ಮಗ ಗೋಪಿ ಆಟ ಆಡ್ವಾಗ ಮರದ ಮ್ಯಾಲಿಂದ ಜಾರಿಬಿದ್ದು ಕೈನ ಮುರ್ಕೊಂಡವನೆ.ಆ ಬೇಕುಪ್ಪನ ಕರಕೊಂಡು ಕೈ ಕಟ್ಟಿಸೊಕೆ ಸಿಂಗೇನಹಳ್ಳಿ ಬಸಜ್ಜನತಕ ಹೋಗಿದ್ನಕೋ. ಅಲ್ಲಿ ನೋಡಿದ್ರೆ ನಮ್ಮ ಹಾಗೆ ಕೈ ಕಟ್ಟಿಸೊಕೆ ಶ್ಯಾನೆ ಜನ ಬಂದಿದ್ರು ಅವನ ಕೈ ಕಟ್ಟಿಸ್ವೊತ್ತಿಗೆ ಸಾಯಂಕಾಲ ಆಯಿತು. ತಿರುಗಿ ಊರಿಗೆ ಬರೋಕೆ ರಾತ್ರಿ ಏಳಾದ್ರೂ ಹಾಳಾದವು ಯಾವೊಂದು ಬಸ್ ಬರದೆ ರಾತ್ರಿ ಉಳಿದುಕೊಂಡಗೂ ಆಗುತ್ತೆ ಹಾಗೆ ನನ್ನ ನಾದ್ನಿ, ಅವಳ ಗಂಡನ್ನು ನೋಡಿಕೊಂಡು ಬಂದಗೂ ಆಗುತ್ತೆ ಅಂತ ಅಂದುಕೊಂಡು ಸಿಂಗೇನಹಳ್ಳಿ ಹತ್ತಿರದಲ್ಲಿ ಇದ್ದ ತಾಂಡ್ಯಕ್ಕೆ ನೆಡೆದು ಅವರ ಮನೆ ತಲುಪುವಷ್ಟರಲ್ಲಿ ರಾತ್ರಿ ಹತ್ತಾಗಿತ್ತು.
ಅಲ್ಲಿ ನನ್ ನಾದ್ನಿ, ಬಹಳ ದಿನವಾದ ಮ್ಯಾಗೆ ಬಂದಿದ್ದೀರ ಬಾವೋ ಅಲ್ಲದೆ ಗೋಪಿ ಬೇರೆ ಈ ಪರಿಸ್ಥಿತಿಲಿ ಅವೌನೇ. ಒಂದೆರಡು ದಿನ ಉಳ್ಕಳಿ ಹೋಗ್ರೊಂತೆ ಎಂದು ಒತ್ತಾಯ ಮಾಡಿ ಉಳಿಸ್ಕೊಂಡ್ಲು.
ಬಿಡಪ್ಪ ನೀನ್ ರಾಮಾಯಣನ ಕೇಳೋಕ್ಕೆ ಪುರಸೊತ್ತಿಲ್ಲ, ಸರಿ ಈಗ ಹೆಂಗವ್ನೇ ನಿನ್ ಮಗ? ಎಂದು ಖಾರವಾದ ಧ್ವನಿಯಲ್ಲಿ ಕೇಳಿದಳು ಗೌರಕ್ಕ.
ಚನ್ನಾಗಿದ್ದಾನೆ. ಆದರೆ ಬಹಳ ಕೈ ನೋವು ಅಂತಿರ್ತಾನೇ ಅವನ ಕೈ ತುಂಬಾ ಏನು ಕಾಣದ ಹಾಗೆ ಬಿಳಿ ಬಟ್ಟೆನ ಸುತ್ತೌನೆ ಆ ಬಸಜ್ಜ ಎಂದ ಶಂಕ್ರ. ನೆತ್ತಿಗೆರಿ ಬಂದ ಕೋಪನ ತೋರ್ಪಡಿಸಿದೆ. ನಿಂಗೆ, ನಿಮ್ಮ ಹಟ್ಟಿ ಜನರಿಗೆ ಬುದ್ದಿ,ಗಿದ್ದಿ ಏನಾದರೂ ಇದ್ಯಾ? ಊರಿಗೊಬ್ರು ಡಾಕ್ಟ್ರು ಇರೋ ಇಂಥಾ ಕಾಲ್ದಾಗೆ, ಆ ಭದ್ರ ಹಾವಿಂತವ ಕಚ್ಚಿಸಿಕೊಂಡ ತನ್ನ ಅಪ್ಪನ ಆಸ್ಪತ್ರೆಗೆ ಕರಕೊಂಡು ಹೋಗೊದನ್ನು ಬಿಟ್ಟು, ನಾಟಿ ಔಷಧ ಕೊಡ್ಸೋಕ್ಕೆ ಹೋಗಿ ಅಪ್ಪನ ಕಳೆದುಕೊಂಡ. ಆ ಚಂದ್ರಿ, ಪೂಜಾರಪ್ಪನ ಮಾತು ಕೇಳಿಕೊಂಡು ಉಷಾರಿಲ್ಲದ ತನ್ನ ಗಂಡನ ದೇವಸ್ತಾನದಲ್ಲಿ ತಿಂಗಳುಗಟ್ಟಲೆ ಇಟ್ಕೊಂಡು ತಾಳಿ ಕಳೆದುಕೊಂಡಳು. ಈಗ ನೀನು..? ಆ ಮಗುನ ಹೋಗಿ, ಹೋಗಿ ಬಸಜ್ಜನತಕ ಕರಕೊಂಡು ಹೋಗಿದ್ದಿಯಲ್ಲ!
ಗೌರಕ್ಕನ ಮಾತುಗಳಿಂದ ಜ್ಞಾನೋದಯವಾದವನಂತೆ, ಈಗ ಏನು ಮಾಡೋದಕ್ಕ ಗೋಪಿಗೆ? ಎಂದು ತನಗೆ ಏನು ತೋಚದವನಾಗಿ ಮೂಕನಂತೆ ನಿಂತ ಶಂಕ್ರ. ಸರಿ ಹೋಗಿ ಮಿಕ್ಕ ಹೂವಿನ ಗಿಡಗಳಿಗೆ ನೀರನ್ನು ಹಾಕು ಅದಾದಮೇಲೆ ರಸ್ತೆ ಕಡೆಗೆ ತಂತಿ ಬೇಲಿ ಬಿಚ್ಚಿಕೊಂಡಿದೆ ಅದನ್ನ ಸರಿ ಮಾಡಿ ಬಾ, ಇಲ್ಲಾಂದ್ರೆ ದನಕರುಗಳು ನುಗ್ಗಿ ಗಿಡಗಳನ್ನು ತಿಂದು ಹಾಕ್ತಾವೆ. ಅಷ್ಟು ಹೊತ್ತಿಗೆ ಟೀ ಮಾಡಿರ್ತೀನಿ ಕುಡಿದು ಮನೆಗೆ ಹೋಗುವೆಯಂತೆ. ವತ್ತಾರೆ ಎದ್ದು ನೀನ್ ಮಗನ ಕರಕೊಂಡು ಬಾ, ಸಾರೋಗೆರೆನಾಗೆ ಇರೋ ಮೂಳೆಡಾಕ್ಟ್ರ ಹತ್ರಹೋಗೋಣ ಅವರ ಕೈಗುಣ ಬಹಳ ಚನ್ನಾಗಿ ಇದೆಯಂತೆ ಎಂದು ಹೇಳಿ ಮನೆಯೊಳಗಡೆ ನೆಡೆದಳು ಗೌರಕ್ಕ.
ಮಗನ ಧ್ಯಾನದಲ್ಲೇ ಹೂಗಿಡಗಳಿಗೆ ನೀರನ್ನು ಹಾಕಿ, ತಂತಿಬೇಲಿಯನ್ನು ಸರಿ ಮಾಡಿಬಂದು ಗೌರಕ್ಕನ ಮನೆಯ ಜಗುಲಿಯ ಮೇಲೆ ಕುಳಿತ ಶಂಕ್ರ. ಅಷ್ಟರಲ್ಲಿ ಟೀಯನ್ನು ಕುಡಿಯಲು ತಂದುಕೊಟ್ಟಳು ಗೌರಕ್ಕ. ಕೊಟ್ಟ ಟೀಯನ್ನು ಕುಡಿದು ಅಲ್ಲಿಂದ ಹೊರಡುತ್ತಾ "ವತ್ತಾರೆ ಎದ್ದು ಮಗನ ಜೊತೆ ಬರ್ತೀನಿ ಅಕ್ಕ " ಎಂದು ಹೇಳಿ ಹೊರಟ.
ಶಂಕ್ರನನ್ನು ಕಳುಹಿಸಿ ಮನೆಯೊಳಗೇ ಬಂದು ಕುಳಿತಳು. ಎಲ್ಲ ಮರೆತು ಹಗುರವಾಗಿದ್ದ ತನ್ನ ಮನಸು ಇಂದೇಕೋ ಭಾರವಾಗುತ್ತಿರುವಂತೆ ತೋರಿತು ಅವಳಿಗೆ ಊಟ ಸೇರದೆ ಹೊತ್ತಿಗೆ ಮುಂಚೆ ಮಲಗಲು ಹೋದವಳಿಗೆ ನಿದ್ರೆ ಬಾರದೆ, ಭುಗಿಲೆದ್ದ ಮನಸ್ಸಿನಿಂದ ತನ್ನ ಜೀವನದಲ್ಲಿ ಆಗಿಹೋದ ಘಟನೆಗಳು ಒಂದೊಂದಾಗಿ ನೆನಪಿಗೆ ಬರಲಾರಂಭಿಸಿದವು. ತಾನು ಎರಡನೇ ತರಗತಿಯಲ್ಲಿರುವಾಗ, ಅಷ್ಟು ಚಿಕ್ಕವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡದ್ದು, ಅಪ್ಪ ಲೋಕಾರೂಢಿಯಂತೆ ಬೇರೊಂದು ಮದುವೆಯಾದದ್ದು, ಚಿಕ್ಕಮ್ಮ ಮೊದಮೊದಲು ತನ್ನನ್ನು ಅಕ್ಕರೆಯಿಂದ ನೋಡಿಕೊಂಡದ್ದು, ಶಾಲೆಯಲ್ಲಿ ತನ್ನ ಬುದ್ಧಿ ಸಾಮತ್ತೆ ಮತ್ತು ಅಂದವಾದ ಬರವಣಿಗೆಗೆ ಗುರವೃಂದ ಮೆಚ್ಚಿ, ಬೆನ್ನು ತಟ್ಟುತ್ತಿದದ್ದು, ಓದುವ ವಿಷಯದಲ್ಲಿ ತನ್ನನ್ನು ಪ್ರತಿಸ್ಪರ್ಧಿಯೆಂದೇ ಪರಿಗಣಿಸಿದ್ದ ಪಟೇಲರ ಮಗ ನಾಗರಾಜ ಅಷ್ಟೇ ಪ್ರೀತಿಸುತ್ತಿದದ್ದು , ಹತ್ತನೆಯ ತರಗತಿಯ ಪರೀಕ್ಷೆಯಲ್ಲಿ ಹೋಬಳಿಗೆ ಮೊದಲಿಗಳಾಗಿ ತೇರ್ಗಡೆಯಾದದ್ದು, ಮುಂದೆ ಓದಬೇಕೆಂಬ ತನ್ನ ಆಸೆಗೆ ಚಿಕ್ಕಮ್ಮ ಅಡ್ಡಗಾಲು ಹಾಕಿದ್ದು, ಖುದ್ದು ಪಟೇಲರು ತಮ್ಮ ಮಗ ನಾಗರಾಜನಿಗೆ ನಿಮ್ಮ ಮಗಳನ್ನು ಕೊಡುವಿರಾ? ಎಂದು ಕೇಳಿದಾಗ ಅಪ್ಪ ಒಪ್ಪಿದ್ದರೂ, ಚಿಕ್ಕಮ್ಮ ಆಕೆಯ ತಮ್ಮನಿಗೆ ಕೊಟ್ಟು ಮದುವೆ ಮಾಡಲು ಸಂಚು ಹೂಡಿ, ಆತನು ಕುಡುಕನೆಂದು ಗೊತ್ತಿದ್ದರೂ ತನ್ನನ್ನು ಕೊಟ್ಟು ಮದುವೆ ಮಾಡಿಸಿ, ಜವಾಬ್ದಾರಿಯ ಕೈ ತೊಳೆದುಕೊಂಡದ್ದು. ನೆನಪುಗಳು ಹೀಗೆ ಒಂದರ ಹಿಂದೆ ಒಂದರಂತೆ ಗೌರಕ್ಕನ ಕಣ್ಮುಂದೆ ಬರತೊಡಗಿದವು.
ಇದರ ಮಧ್ಯೆ ಪಡಸಾಲೆಯಲ್ಲಿ ಸಾಕುನಾಯಿ ರಾಮ ಅರಚುತ್ತಿರುವುದನ್ನು ಕೇಳಿ. ಏನೆಂದು? ನೋಡಲು ಅಲ್ಲಿಗೆ ಬಂದಳು. ರಾತ್ರಿ ತಾನು ಊಟವನ್ನು ಮಾಡದೆ, ಅದಕ್ಕೂ ಹಾಕದೆ ಮಲಗಲು ಹೋಗಿದ್ದು ಜ್ಞಾಪಕಕ್ಕೆ ಬಂದು ಅಡುಗೆ ಕೋಣೆಗೆ ಹೋಗಿ ಮಧ್ಯಾಹ್ನ ಊಟಮಾಡಿ ಉಳಿದಿದ್ದನ್ನು ತಂದು ಅದರ ತಟ್ಟೆಗೆ ಹಾಕಿದಳು..
************************
ತನಗಾದ ಅನ್ಯಾಯ, ಅನುಭವಿಸುತ್ತಿರುವ ನೋವು ಎಲ್ಲವನ್ನು ಸಹಿಸಿಕೊಂಡು ಕೊಟ್ಟಮನೆಯಲ್ಲಿ ಕುಡುಕ ಗಂಡ, ಅತ್ತೆ ಮಾವ ಅವರೆಲ್ಲರ ಚಾಕರಿ ಮಾಡಿ. ತೋಟ, ಹೊಲಗಳಲ್ಲಿ ಕೆಲಸಗಾರರೊಡನೆ ತಾನು ಹೆಗಲು ಸೇರಿಸಿ ದುಡಿಯುತ್ತಿದ್ದ ಅವಳಿಗೆ ದಿನಗಳು ಕಳೆದುಹೋದದ್ದು ಗೊತ್ತೇ ಆಗುತ್ತಿರಲಿಲ್ಲ. ಬೆಳಗ್ಗೆ ಎದ್ದು ಹೆಂಡದ ಇಲ್ಲವೇ ಇಸ್ಪಿಟ್ ಮನೆ ಸೇರುತ್ತಿದ್ದ ಅವಳ ಗಂಡ, ರಾತ್ರಿಯೇ ಮತ್ತೆ ಮನೆ ಸೇರುತ್ತಿದದ್ದು. ತನ್ನೂರಲ್ಲಿ ಎಲ್ಲರ ಬಾಯಿಂದ ಗೌರ ಎಂದು ಕರೆಸಿಕೊಳ್ಳುತ್ತಿದ್ದವಳು. ಮನೆ ಒಳಗೂ, ಹೊರಗೂ ಬಿಡುವಿಲ್ಲದ ಕೆಲಸ ಮಾಡಿ ದೈಹಿಕವಾಗಿ ಸಾಕಷ್ಟು ಬಳಲಿ, ಮಾನಸಿಕ ನೋವಿನಿಂದ ಸೊರಗಿ ಅವಳು ತನ್ನ ಕೊಟ್ಟ ಊರಲ್ಲಿ ಗೌರಕ್ಕನಾಗಿದ್ದಳು.
ಇಷ್ಟೆಲ್ಲಾ ಕಷ್ಟ ನೋವುಗಳ ನಡುವೆ ಅವಳಿಗೆ ಆಶಾಕಿರಣವಾಗಿ ಕಂಡಿದ್ದು ಅವಳ ಮಗ. ತನ್ನ ಕೆಲಸಗಳು ಎಷ್ಟೇ ಇರಲಿ, ತನ್ನ ನೋವುಗಳು ಏನೇ ಇರಲಿ ಎಲ್ಲವನ್ನು ಸುಧಾರಿಸುತ್ತಾ. ತನ್ನ ಮಗ ವೀರಾಜ್ ನನ್ನು ಬಹಳ ಅಕ್ಕರೆಯಿಂದ ಪಾಲನೆ, ಪೋಷಣೆ ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದಳು. ಎಲ್ಲರ ಮನೆಯ ಮಕ್ಕಳಂತೆ ತನ್ನ ಮಗನನ್ನು ಕಾನ್ವೆಂಟ್ಗೆ ಕಳುಹಿಸಲು ನಿರ್ಧರಿಸಿ. ಅದರಂತೆ ಪ್ರತಿದಿನ ಅವನ ಸ್ನಾನ ಮಾಡಿಸಿ, ಸಮವಸ್ತ್ರ ತೊಡಿಸಿ, ತಿಂಡಿ ತಿನಿಸಿ ಹಾಗೂ ಬಸ್ ನಿಲ್ದಾಣದವರೆಗೂ ಹೋಗಿ ಬಸ್ ಹತ್ತಿಸಿ ಬರುತ್ತಿದ್ದಳು. ಕಳೆದುಹೋದ ನೆಮ್ಮದಿ ಹಾಗು ಬದುಕು ತನ್ನ ಮಗನಿಂದ ಗೌರಕ್ಕನಿಗೆ ಮತ್ತೆ ಸಿಕ್ಕಿತ್ತು.
************************
ರಾಮ ತಟ್ಟೆಯಲ್ಲಿ ಹಾಕಿದ್ದನ್ನು ತಿನ್ನುವರೆಗೂ ಅಲ್ಲಿದ್ದು ನಂತರ ಒಳ ನೆಡೆದು, ಮಂಚಕ್ಕೆ ಒರಗುತ್ತಾ ನೆಲದಮೇಲೆ ಕುಳಿತಳು. ನೆನಪುಗಳು ಮತ್ತೆ ಒಂದೊಂದಾಗಿ ಬರಲಾರಂಭಿಸಿದವು. ಸ್ವಾತಂತ್ರೋತ್ಸವ ದಿನಾಚರಣೆಗೆಂದು ಸುಭಾಶ್ ಚಂದ್ರ ಬೋಸ್ ರನ್ನು ಹೋಲುವ ಬಟ್ಟೆಗಳನ್ನು ಧರಿಸಿ ಹೋಗಿದ್ದ ಮಗ ವೀರಾಜ್, ತಾನು ಅವನ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದು. ಕಾರ್ಯಕ್ರಮ ಮುಗಿಸಿಕೊಂಡು, ಊರಿಗೆ ಹೊರಟುನಿಂತಿದ್ದ ಬಸ್ಸನ್ನು ಎರಲೆಂದು ಶಾಲಾ ಮೈದಾನದಿಂದ ಬೇಗನೆ ಬರುವಾಗ ಆಕಸ್ಮಿಕವಾಗಿ ನುಗ್ಗಿ ಬಂದ ಲಾರಿ ವೀರಾಜ್ ನ ಸಾವಿಗೆ ಕಾರಣವಾದದ್ದು. ತನ್ನ ಗಂಡ ಕುಡಿತವೆಂಬ ದುಶ್ಚಟಕ್ಕೆ ಬಲಿಯಾದದ್ದು, ವಿದಿಯಿಲ್ಲದೆ ಕೊಟ್ಟ ಮನೆಯಲ್ಲಿ ಒಬ್ಬಂಟಿಗಳಾಗಿರಲು ತೀರ್ಮಾನಿಸಿದ್ದು.
ಅಕೋ.. ಬಾಗಿಲು ತಗಿಯಕೋ ಎನ್ನುವ ಶಬ್ಧ ಕೇಳುತ್ತಲೇ ಬೆಳಕಾಗಿ ಆಗಿರುವುದು ಗೊತ್ತಾಗಿ, ಎದ್ದವಳೇ ಬಾಗಿಲನ್ನು ತೆರೆದಳು. ಬಾಗಿಲಲ್ಲಿ ಇದ್ದ ಶಂಕ್ರ ಮತ್ತು ಗೋಪಿನ ಒಳ ಕರೆದು, ಕುಳಿತುಕೊಳ್ಳಲು ಹೇಳಿ. ಕೆಲವೇ ನಿಮಿಷಗಳಲ್ಲಿ ಸಾರೋಗೆರೆಗೆ ಹೊರಡಲು ಸಿದ್ದಳಾಗಿ ಬಂದಳು. ಇವರು ಸಾರೋಗೆರೆ ತಲುಪಿ, ಆಸ್ಪತ್ರೆ ಸೇರುವುದರಲ್ಲಿ ಆಗಲೇ ಡಾಕ್ಟರ ಭೇಟಿಗೆಂದು ರೋಗಿಗಳ ಉದ್ದನೆಯ ಸಾಲಿತ್ತು. ಗೋಪಿಯ ಸರದಿ ಬಂದಾಗ ಗೌರಕ್ಕ ಹಾಗೂ ಶಂಕ್ರ ಸಹ ಗೋಪಿ ಜೊತೆಗೂಡಿದರು. ಯಾರ್ರೀ? ಇದು ದನಕ್ಕೆ ಸುತ್ತಿದ ಹಾಗೆ ಈ ಹುಡುಗನ ಕೈಗೆ ಬಟ್ಟೆ ಸುತ್ತಿರೋದು? ಎಂದು ಕೇಳಿದರು ಮೂಳೆ ಕಟ್ಟಿಸುವರ ಹತ್ರ ಕರ್ಕೊಂಡು ಹೋಗಿದ್ದೆ ಸಾರ್ ಎಂದು ಶಂಕ್ರ. ಸುತ್ತಿದ ಆ ಬಟ್ಟೆಯನ್ನು ತೆಗೆದು ಗೋಪಿಯ ಕೈಯನ್ನು ಕೂಲಂಕುಶವಾಗಿ ಪರಿಶೀಲಿಸಿ ಬ್ಯಾಂಡೇಜ್ ಹಾಕಿ, ಅಗತ್ಯವಾದ ಚಿಕಿತ್ಸೆ ಕೊಟ್ಟು. ಹದಿನೈದು ದಿವಸ ಆದ ಮೇಲೆ ಬನ್ನಿ ಎಂದು ಕಳುಹಿಸಿದರು.
ಡಾಕ್ಟರು ಬರೆದು ಕೊಟ್ಟ ಔಷಧಿ, ಮಾತ್ರೆಗಳನ್ನು ಅಂಗಡಿಯಲ್ಲಿ ತೆಗೆದುಕೊಂಡು, ಅಲ್ಲಿಂದ ಊರಿಗೆ ಹೊರಡುವ ಬಸ್ನಲ್ಲಿ ಹತ್ತಿ ಕುಳಿತರು. ಬೆಳಗ್ಗೆ ಮನೆಯಿಂದ ಹೊರಟಾಗಿನಿಂದಲೂ ಗೌರಕ್ಕ ಏನೋ ಯೋಚನೆಯಲ್ಲಿ ಇರುವುದ ಗಮನಿಸಿದ ಶಂಕ್ರ. ಯಾಕಕ್ಕ ಬೇಜಾರನಲ್ಲಿ ಇದ್ದೀಯಾ? ನಿನ್ನ ಕಷ್ಟ ನಂಗೆ ಚನ್ನಾಗಿ ಅರ್ಥ ಆಗ್ತದೆ.ನೀನು ಇಷ್ಟು ದಿನ ಎಲ್ಲ ಮರೆತು ಹೇಗಿದ್ಯೋ, ಇನ್ಮುಂದೆ ಹಾಗೆ ಇದ್ಬಿಡು. ನಾವೆಲ್ಲಾ ನಿಮ್ಮ ಜೊತೆ ಇದ್ದೀವಿ.ಗೌರಕ್ಕನಿಗೆ ಕಣ್ಣುಗಳಲ್ಲಿ ನೀರು ತುಂಬಿಕೊಂಡವು. ಒಬ್ಬಳೇ ಎಷ್ಟು ದಿನ, ಈ ಭಾರವಾದ ಬದುಕನ್ನು ಸಾಗಿಸಲಿ ಎಂದ ಗೌರಕ್ಕನಿಗೆ. ಏನು ಉತ್ತರಕೊಡಬೇಕೆಂದು ಗೊತ್ತಾಗದೆ ಸುಮ್ಮನಾದ ಶಂಕ್ರ. ಅಷ್ಟರಲ್ಲಿ ಬಸ್ ಊರನ್ನು ತಲುಪಿತ್ತು. ಗೌರಕ್ಕನ ತೋಟದ ಮನೆಯತ್ತಿರ ಬಿಟ್ಟು. ಶಂಕ್ರ ಮತ್ತು ಗೋಪಿ ಮನೆಯ ದಾರಿಯನ್ನು ಹಿಡಿದರು.
ಟೀ ಮಾಡಿಕೊಂಡು, ಕುಡಿದು. ಮನೆಯೊಳಗೇ ಇದ್ದರೆ ಅದೇ ಯೋಚನೆಗಳು ಪದೇ ಪದೇ ಕಾಡುತ್ತವೆಂದು ತೋಟದ ಕಡೆ ಬಂದಳು ಗೌರಕ್ಕ. ಸೂರ್ಯನು ಪಡುವಣ ದಿಕ್ಕಿನಲ್ಲಿ ಬಂಗಾರದ ಒಕುಳಿಯನ್ನು ಎರಚಿ ಗುಡ್ಡದ ಕಡೆಯಿಂದ ಮುಳುಗುತ್ತಾ ಇದ್ದನು, ಪ್ರಕೃತಿಯ ವಿಸ್ಮಯ ಎಷ್ಟೊಂದು ಸೊಗಸು? ಎಂದು ಬೆರಗಾಗುತ್ತಾ, ಕೈಯಾರೆ ತಾನು ಬೆಳೆಸಿದ ಹೂಗಿಡಗಳನ್ನು ನೋಡಲು ಬಂದಳು. ಹೂಗಿಡಗಳಲ್ಲಿ ಬಿರಿದು ಮೊಗ್ಗುಗಳು ಇರವುದನ್ನು ಕಂಡು ಸಂತೋಷಪಟ್ಟಳು. ಅಷ್ಟರಲ್ಲಿ ಕೆಲವು ತಾಸುಗಳ ಕೆಳಗೆ ತಾನೇ ಮನೆಗೆ ಹೋಗಿದ್ದ ಶಂಕ್ರ ಪುನ: ಬರುತ್ತಿರುವುದನ್ನು ಕಂಡಳು. ಅವನನ್ನು ಕಾಣುತ್ತಲೇ ಲೋ ಶಂಕ್ರ ಯಾಕೋ ಮತ್ತೆ ಬಂದೇ?. ತೋಟದಲ್ಲಿ ಏನೋ ಕೆಲಸ ಇಲ್ಲ ಕಣೋ, ಒಂದೆರಡು ದಿನ ನೀನು ಬರದೆ ಹೋದರು ಪರವಾಗಿಲ್ಲ. ನಿನ್ನ ಮಗ ಗೋಪಿನ ಚನ್ನಾಗಿ ನೋಡಿಕೋ.
ಅಕೋ, ನಿನ್ ಹತ್ರ ಏನೋ ಮಾತಾಡೋಕ್ಕೆ ಬಂದಿದ್ದೀನಿ ಎಂದ ಶಂಕ್ರ. ಏನೋ ಅದು ವಿಷ್ಯ? ಅವಾಗಲೇ ಹೇಳಿಹೋಗಬಹುದಿತ್ತಲ್ಲ? ಮತ್ತೆ ಬರೋದು ತಪ್ಪುತ್ತಿತ್ತು ಎಂದಳು ಗೌರಕ್ಕ. ಹೆಂಗೆ ಹೇಳಬೇಕು ಅಂತ ಗೊತ್ತಾಗ್ತಿಲ್ಲ, ನಿಂಗೆ ಮೇಲ್ ಜಾತಿ, ಕೆಳಜಾತಿ ನಂಬಿಕೆ ಇಲ್ಲ ಅಂತಾದರೆ. ಗೋಪಿನ ನಿನ್ ಹತ್ರನೇ ಬೆಳಸೋಣ ಅಂತ ಇದ್ದೀವಿ. ಇದ್ರ ಬಗ್ಗೆ ನಾನು, ನಮ್ಮ ಮನೆಯವಳು ಕೂತು ಯೋಚನೆ ಮಾಡಿವಿ. ಮಗನನ್ನು ಕಳೆದುಕೊಂಡ ನೋವು, ಒಬ್ಬಳೇ ನಿನ್ ಇಲ್ಲಿ ಪಡೋ ಕಷ್ಟ ಏನು ಅಂತ ಹತ್ರದಿಂದ ನೋಡಿವಿ ಎಂದು ಹೇಳಿದ ಶಂಕ್ರ. ಶಂಕ್ರನ ಈ ಮಾತುಗಳಲ್ಲಿ ಕರುಣೆಗಿಂತ ವಾಸ್ತವತೆಯ ಅರಿವು ಹೆಚ್ಚು ಇದ್ದಂತೆ ತೋರುತಿತ್ತು.
ಇದರ ಬಗ್ಗೆ ಏನೋ ಹೇಳಲು ಇಚ್ಚಿಸದ ಗೌರಕ್ಕ. ಯಾವುದಕ್ಕೂ ಯೋಚ್ನೆ ಮಾಡಿ ನಾಳೆ ಹೇಳ್ತೀನಿ ಎಂದಷ್ಟೇ ಹೇಳಿ. ವಿದಿಯು ಇನ್ನಾದರೂ ತನಗೆ ನೆಮ್ಮದಿಯ ಬದುಕನ್ನು ನಡೆಸಲು ಬಿಡುವುದೇ? ಎಂದು ಮನಸ್ಸಿನಲ್ಲಿ ಅಂದುಕೊಂಡು ಮನೆಯತ್ತ ನೆಡೆದಳು.
ಮಂಗಳವಾರ, ಡಿಸೆಂಬರ್ 10, 2013
ಅಜ್ಜಿಯ ನೆನಪಲೊಂದು ಲೇಖನ..
ನಾವು ಹಿರಿಯವರಿಂದ ಕಲಿಯಬೇಕಾಗಿರುವುದು ಬಹಳಷ್ಟು ಇರುತ್ತೆ.ಅವರ ಜೀವನದ ಅನುಭವ,ಕಷ್ಟ-ಸುಖಗಳನ್ನು ಸರಿಸಮವಾಗಿ ತೆಗೆದುಕೊಳ್ಳುವ ಮನೋಭಾವ,ಎಲ್ಲಕ್ಕಿಂತ ಮುಖ್ಯವಾಗಿ ಸ್ವಾಭಿಮಾನ ಮತ್ತು ಸ್ವಾವಲಂಬನೆ ತುಂಬಿಕೊಂಡ ಅವರ ಬದುಕು.ನಮ್ಮೂರಿಂದ ಎರಡೂವರೆ ಮೈಲಿ ದೂರದಲ್ಲಿ ನನ್ನಜ್ಜಿಯ ಊರು,ಅಲ್ಲಿಗೆ ಬಸ್ಸುಗಳ ಸೌಕರ್ಯವಿಲ್ಲ,ನೆಡಿಗೆಯಲ್ಲಿ ಹೋಗಬೇಕು,ಇಲ್ಲವೇ ಸೈಕಲ್ಲು,ಮೋಟಾರು ವಾಹನಗಳಲ್ಲಿ ಹೋಗಬೇಕು.ನಾನು ಚಿಕ್ಕಂದಿನಲ್ಲಿ ಸೈಕಲ್ಲು ಕಲಿಯುವವರೆಗೂ ಅಜ್ಜಿಯೂರಿಗೆ ನೆಡಿಗೆಯಲ್ಲೇ ಹೋಗುತ್ತಿದ್ದೆ.ಮನೆಯಿಂದ ಹೊರಟ ಸ್ವಲ್ಪ ಸಮಯದಲ್ಲೇ ತೆಂಗಿನ ತೋಟಗಳ ಸಾಲು, ತೋಟಗಳ ಸಾಲಿನ ಕೊನೆಯಲ್ಲಿ ಬೃಹದಾಕಾರದ ನಮ್ಮೂರಿನ ಕಲ್ಲುಬಂಡೆ,ಬಂಡೆ ಕೆಳಗಡೆ “ಜಲರಕಟ್ಟೆ”ಎನ್ನುವ ಕಟ್ಟೆ. ಆ ದಿನಗಳಲ್ಲಿ ನಮ್ಮೂರಿನ ಹೆಂಗಸರು ತಮ್ಮ,ತಮ್ಮ ಮನೆಯ ಕೊಳೆತುಂಬಿದ ಬಟ್ಟೆಗಳನ್ನು ಇಲ್ಲೆಯೇ ತೊಳೆಯುತ್ತಿದ್ದದ್ದು (ಈಗ ಕಾಲ ಬಹಳಷ್ಟು ಬದಲಾಗಿದೆ!).ಆ ಕಟ್ಟೆಯನ್ನು ದಾಟಿ ಸ್ವಲ್ಪ ದೂರ ನೆಡೆದರೆ ಬಯಲು ಹೊಲಗಳು,ನಂತರದಲ್ಲಿ ನನ್ನಜ್ಜಿಯೂರಿನ ಕೆರೆ (ಅದರ ಹೆಸರು ಬೊಮ್ಮೇನಹಳ್ಳಿ ಕೆರೆ). ಆ ಕೆರೆಯನ್ನು ದಾಟಿ ಸ್ವಲ್ಪ ದೂರ ನೆಡೆದರೆ ಅಜ್ಜಿಯ ಊರು ಬೊಮ್ಮೇನಹಳ್ಳಿ. ಆ ಊರನ್ನು ಲಕ್ಷ್ಮೀಪುರ ಮತ್ತು ದಿಬ್ಬ ಅನ್ನುವ ಹೆಸರಗಳಿಂದ ಕರೆಯುತ್ತಿದ್ದದ್ದು ಉಂಟು.
ಚಿಕ್ಕಂದಿನಲ್ಲಿ ಬೊಮ್ಮೇನಹಳ್ಳಿಗೆ ಹೋದಾಗಲೆಲ್ಲ ‘ಅಜ್ಜಿಮನೆ’ಗೆ ಹೋಗದೆ ನೇರವಾಗಿ ತೋಟಕ್ಕೆ ಹೋಗುತ್ತಿದೆ. ಏಕೆಂದರೆ ಬಹಳಷ್ಟು ಸಮಯವನ್ನು ಅವರು ಅಲ್ಲೆಯೇ ಕಳೆಯುತ್ತಿದ್ದರು. ಅವಳ ಜೀವಾಳವೇ ಅಲ್ಲಿ ಇತ್ತು. ಬಡಕಲು ಶರೀರದ ನನ್ನಜ್ಜಿ ಬಿಸಿಲಿನ ಶಾಖ ತಲೆಗೆ ತಾಗದಂತೆ ಹರಿವೆಯೊಂದನ್ನು ಕಟ್ಟಿಕೊಂಡು,ಎರಡು-ಮೂರು ಆಕಳುಗಳನ್ನು ಹಗ್ಗದ ಸಹಾಯದಿಂದ ಹಿಡಿದುಕೊಂಡು ಬದುವಿನ ಮೇಲೆ ಬೆಳೆದ ಹಸಿರು ಹುಲ್ಲನ್ನು ಮೇಯಿಸುತ್ತಿರುತ್ತಿದ್ದರು.ನಾನು ಅವರನ್ನು ನೋಡಲು ಹೋದಾಗಲೆಲ್ಲ,ಅಮ್ಮ ಮಲ್ಲೇನಹಳ್ಳಿಯಿಂದ ಅಜ್ಜಿಗೆ ಏನಾದರೂ ತಿನ್ನಲು ಕೊಟ್ಟಿರುತ್ತಿದ್ದರು ಅದನ್ನು ಅಜ್ಜಿಗೆ ಕೊಡುತ್ತಿದ್ದೆ. ತೋಟದಲ್ಲಿ ಇರುತ್ತಿದ್ದ ಎಳನೀರಿನ ಕಾಯಿಯನ್ನು ಕುಡಿಯಲು ನನಗೆ ಕೊಡುತ್ತಿದ್ದರು ಅಜ್ಜಿ. ಮಲ್ಲೇನಹಳ್ಳಿಗೆ ಹೊರಡಲು ನಾನು ಇನ್ನೇನು ಸಿದ್ದನಾಗಬೇಕು ಅನ್ನುವಷ್ಟರಲ್ಲಿ ತಮ್ಮ ಸೆರಗಿನ ಗಂಟಿನಲ್ಲಿ ಕಟ್ಟಿಇಟ್ಟುಕೊಂಡಿರುತ್ತಿದ್ದ ಒಂದು ಅಥವಾ ಎರಡು ರೂಪಾಯಿ ಬಿಲ್ಲೆ ಅಥವಾ ನೋಟನ್ನು ನನಗೆ ಕೊಡುತ್ತಿದ್ದರು.ಆಗ ನನಗಂತೂ ಇನ್ನೀಲ್ಲದ ಖುಷಿಯಾಗುತ್ತಿತ್ತು.ನಾನು ಗಮನಿಸಿದ ಹಾಗೆ ಅವರಲ್ಲಿದ್ದ ಒಂದು ವಿಶೇಷ ಗುಣವೆಂದರೆ ಒಬ್ಬರಿಗೆ ಕೊಟ್ಟಿದ್ದನ್ನು ಮತ್ತೊಬ್ಬರಿಗೆ ಹೇಳುತ್ತಿರಲಿಲ್ಲ.‘ಅಜ್ಜಿಮನೆ’ಯೆಂದರೆ ಭವ್ಯವಾದ ಮನೆಯೇನು ಅದಾಗಿರಲಿಲ್ಲ ಅದು ಅಪ್ಪಟ ಗುಡಿಸಲು. ಆ ದಿನಗಳಲ್ಲಿ ಅದರಲ್ಲೇ ಅಜ್ಜಿ ಮತ್ತು ಇಬ್ಬರು ಮಾವಂದಿರು ವಾಸವಿದ್ದದ್ದು.
ನಮ್ಮಜ್ಜಿಯ ತೌರೂರು ನನ್ನೂರೇ. ನನಗೆ ಗೊತ್ತಿರುವ ಹಾಗೆ ನಾನು ಮೂರನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮಜಿಯ ಅಮ್ಮನಿಗೆ (ಅಂದರೆ ನನ್ನ ಮುತ್ತಜ್ಜಿ)ಆರೋಗ್ಯ ಸರಿಯಿಲ್ಲದೆ ಹಾಸಿಗೆಯನ್ನು ಹಿಡಿದಾಗ ಅವರ ಹಾರೈಕೆ ಮಾಡಲು ನಾಲ್ಕೈದು ತಿಂಗಳು ಕಾಲ ದಿನನಿತ್ಯ ನನ್ನೂರಿಗೆ (ಮಲ್ಲೇನಹಳ್ಳಿ) ಕಾಲು ನೆಡಿಗೆಯಲ್ಲೇ ಬಂದು ಹೋಗುತ್ತಿದ್ದರು.ಅಜ್ಜಿ ನಮ್ಮೂರಿಗೆ ಬಂದರೆ ಏನೋ ಒಂದು ತರಹ ಖುಷಿ ನಮಗೆ,ಏನಾದರೂ ತಿನ್ನಲು ತರುತ್ತಿದ್ದರು ಬಹಳಷ್ಟು ಸಮಯ ಸೌತೆಕಾಯಿ ರೂಪದ ಮೃದು ಹಣ್ಣನ್ನು ತರುತ್ತಿದ್ದರು(ನಮ್ಮ ಕಡೆ ಅದಕ್ಕೆ ಕ್ಯಾಕರಿಕೆ ಹಣ್ಣು ಎಂದು ಕರೆಯುತ್ತಾರೆ),ಅದಕ್ಕೆ ಸಕ್ಕರೆ ಮತ್ತು ತೆಂಗಿನಕಾಯಿ ತುರಿ ಮಿಶ್ರಣ ಮಾಡಿಕೊಂಡು ತಿನ್ನುತ್ತಿದ್ದೆವು.ಹಬ್ಬ,ಹರಿದಿನಗಳು ಇದ್ದಾಗ ಎದ್ದು ಹೋಳಿಗೆ,ಕೀಲ್ಸ(ರಾಗಿಯಿಂದ ಮಾಡುವ ಸಿಹಿ ತಿನಿಸು)ಮಾಡಿಕೊಂಡು ತರುತ್ತಿದ್ದರು.
೨೦೦೭ರಲ್ಲಿ ನನ್ನ ಅಪ್ಪಾಜಿ ತೀರಿ ಹೋದಾಗಿನಿಂದ ಅಮ್ಮನ ಜೊತೆಗೆ ಇರಲು ಒತ್ತಾಯ ಮಾಡಿ ಅಜ್ಜಿಯನ್ನು ನಮ್ಮೂರಿಗೆ ಕರೆದುಕೊಂಡು ಬಂದಿದ್ದೆವು. ನನ್ನ ಅಜ್ಜಿಯ ಬಗ್ಗೆ ಮೊದಲಿಗಿಂತ ಹೆಚ್ಚು ವಿಷಯಗಳು ತಿಳಿದುಬಂದದ್ದು ಆ ಸಮಯದಲ್ಲೇ.ಬೆಳಗ್ಗೆ ಆರರಿಂದ ಅವರ ದಿನ ಶುರುವಾಗುತ್ತಿತ್ತು.ದಿನನಿತ್ಯ ಮನೆ ಮತ್ತು ಅಂಗಳದ ಕಸ ಗೂಡಿಸುವುದು,ಮನೆಯ ಮುಂದೆ ಅಂಗಳ ಮತ್ತು ಹಟ್ಟಿಯಲ್ಲಿ ನೀರನ್ನು ಚುಮುಕಿಸುವುದು ಮತ್ತು ಹೂವನ್ನು ಹಾಕುವುದು, ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದು,ಸ್ನಾನ ಮಾಡಿ ದೇವರ ಪೂಜೆ ಮಾಡುವುದು,ಅಚ್ಚುಕಟ್ಟಾದ ಅಡುಗೆ ಮಾಡುವುದು. ಅಜ್ಜಿ ನಮ್ಮೂರಿನಲ್ಲಿ ಇರುವಾಗ ಅಮ್ಮನಿಗೆ ತೋಟದ ಕೆಲಸ ಬಿಟ್ಟು ಬೇರೇನು ಕೆಲಸವೇ ಇರುತ್ತಿರಲಿಲ್ಲ! ಊಟದ ವಿಷಯದಲ್ಲೂ ಅಜ್ಜಿ ಬಹಳ ಕಟ್ಟುನಿಟ್ಟು,ಅಪ್ಪಿತಪ್ಪಿಯು ಸಹ ಮಿತಿ ತಪ್ಪಿ ಊಟ ಮಾಡುತ್ತಿರಲಿಲ್ಲ,ಊಟಕ್ಕೆ ಒಪ್ಪುವ ಹಾಗೆ ಅಷ್ಟೇ ಮಿತವ್ಯಯದ ಮಾತು ಹಾಗು ಮನೆಯಲ್ಲಿ ಅದೇ ಎಷ್ಟೇ ಜನ ನೆಂಟರು ಇರಲಿ ಹರಟು ಮಾತಿಗೆ ಕೂರದೆ ರಾತ್ರಿ ಹತ್ತಕ್ಕೆ ಮಲಗಿಬಿಡುತ್ತಿದ್ದರು.
ನಮ್ಮಜ್ಜಿ ಅಂದರೆ ತೀರ ಸಾಧಾರಣ ವ್ಯಕ್ತಿತ್ವದ ವ್ಯಕ್ತಿ ಎಂದು ನನಗೆ ಯಾವತ್ತು ಅನ್ನಿಸಿಲ್ಲ. ಏಕೆಂದರೆ ಬದುಕಲಿ ಬಹಳ ಕಷ್ಟ ಅನುಭವಿಸಿದರು, ಕಷ್ಟಗಳನ್ನು ಸಹಿಸಿ, ಸಹಿಸಿ.ಕಷ್ಟಗಳಿಗೆ ಹೆದರದಷ್ಟು ಗಟ್ಟಿಯಾಗಿದ್ದ ಮನೋಸ್ಥೈರ್ಯ ಅವರದಾಗಿತ್ತು.ಅದರಂತೆಯೇ ಯಾವುದಕ್ಕೂ ಹೆದರದೇ,ಎಲ್ಲ ಕೆಲಸಗಳನ್ನು ತಾಳ್ಮೆ,ಶಿಸ್ತಿನಿಂದ ಮಾಡುತ್ತಿದ್ದರು. ನನ್ನ ದೃಷ್ಟಿಯಲ್ಲಿ ನನ್ನಜ್ಜಿಯೆಂದರೆ ಅವರು ಸದಾ ಮಂದಸ್ಮಿತ,ಚಟುವಟಿಕೆಯಿಂದ ಇರುವಂತಹ ವ್ಯಕ್ತಿ ಹಾಗು ನನಗೆ ತಿಳಿದ ಮಟ್ಟಿಗೆ ಬದುಕನ್ನು ಅರ್ಥಪೂರ್ಣವಾಗಿ ಬಾಳಿ ಹೋದ ಕೆಲವರಲ್ಲಿ ಒಬ್ಬರು.
ಕೊನೆಯಲ್ಲಿ ಹೇಳುವುದಾದರೆ ದೊಡ್ಡ,ದೊಡ್ಡ ವ್ಯಕ್ತಿಗಳನ್ನು ನಮ್ಮ ಬದುಕಿನ ಆದರ್ಶವಾಗಿ ಇರಿಸಿಕೊಳ್ಳುವುದಕ್ಕಿಂತ ನಮ್ಮ ಹತ್ತಿರವೇ ಇರುವ ಹಾಗು ನಮ್ಮಲ್ಲಿ ಆಗಾಧವಾದ ಕನಸು ಕಟ್ಟಿಕೊಂಡಿರುವ ನಮ್ಮ ತಂದೆ,ತಾಯಯಿಂದಿರು ಅಥವಾ ಅಜ್ಜ,ಅಜ್ಜಿಯಿಂದಿರು ಇಲ್ಲವೇ ನಮ್ಮ ಶಿಕ್ಷಕರುಗಳು ಇವರಲ್ಲಿ ಯಾರನ್ನಾದರೂ ನಮ್ಮ ಆದರ್ಶವಾಗಿ ನೋಡುವುದು ಹೆಚ್ಚು ಸೂಕ್ತವೆಂದು ನನಗೆ ತೋರುತ್ತೆ.
- ಸುನಿಲ್ ಮಲ್ಲೇನಹಳ್ಳಿ, ದಿನಾಂಕ ೬-ಡಿಸೆಂಬರ್ -೨೦೧೩
ಮಂಗಳವಾರ, ಮಾರ್ಚ್ 10, 2009
ನಮ್ಮ ಅಂತರಂಗ, ನಮ್ಮ ಬಹಿರಂಗ ಆಗಿರಲಿ ನಮ್ಮ ಕನ್ನಡ ಚಲನಚಿತ್ರರಂಗ!

ನಮ್ಮ ಕನ್ನಡ ಚಲನಚಿತ್ರರಂಗದ ಅಮೃತ ಮಹೋತ್ಸವನ್ನು (ಎಪ್ಪತ್ತೈದನೇಯ ವರುಷದ) ಬಹಳ ಸಂಭ್ರಮ, ಸಡಗರ ಹಾಗೂ ವಿಜೃಂಭಣೆಯಿಂದ ಕನ್ನಡ ಚಲನಚಿತ್ರರಂಗದ ಕುಟುಂಬ ವರ್ಗದವರು ಆಚರಣೆ ಮಾಡಿದ್ದನ್ನು ನಾವುಗಳು ಪೇಪರಗಳಲ್ಲಿ, ಟಿವಿಗಳಲ್ಲಿ ನೋಡಿದ್ದೇವೆ (ಕೆಲವರು ಕಣ್ಣಾರೆ!). ಈವೊಂದು ಅಮೃತ ಮಹೋತ್ಸವನ್ನು ಆಚರಣೆ ಮಾಡುವರೆಗೂ ನಮ್ಮ ಕನ್ನಡ ಚಿತ್ರರಂಗ ಬೆಳೆದದ್ದು ಕನ್ನಡಿಗರಾದ ನಮಗೆಲ್ಲ ನಿಜಕ್ಕೂ ಬಹಳ ಸಂತೋಷ ಮತ್ತು ಹೆಮ್ಮೆಯ ಪಡುವಂಥ ಸಂಗತಿ . ಯಾಕೆಂದರೆ ನಾವುಗಳು ಕಂಡಹಾಗೆಯೇ ನಮ್ಮ ಕನ್ನಡ ಚಿತ್ರರಂಗವು ಎದುರಿಸಿದ ಸಂಕಷ್ಟಗಳು, ಎಳು ಬೀಳುಗಳು ಒಂದಾ? ಎರಡಾ? ಬಹಳಷ್ಟು. ನೆರೆಹೊರೆ ಭಾಷೆಯ ಚಲನಚಿತ್ರ ಉದ್ಯಮೆಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದದ್ದು, ಒಮ್ಮೊಮ್ಮೆ ಸಾಲು ಸಾಲು ಕಳಪೆ ಚಿತ್ರಗಳನ್ನು ಕೊಟ್ಟಿದ್ದು, ಉತ್ತಮ ಚಿತ್ರಗಳನ್ನು ಕೊಡಲು ಸಾಕಷ್ಟು ಸಲ ವಿಫಲರಾಗುತ್ತಿದ್ದದ್ದು, ಬಂಡವಾಳದ ಅಭಾವ. ಇವುಗಳೆಲ್ಲವುಗಳ ನಡುವೆಯೂ "ಸತಿಸುಲೋಚನದಿಂದ ಪ್ರಾರಂಭವಾದ ಕನ್ನಡ ಚಲನಚಿತ್ರರಂಗದ ಓಟವು ನಾನಾ ವಿಧದ ತೊಂದರೆ, ತೊಡಕುಗಳನ್ನುಎದುರಿಸುತ್ತಾ, ಎಳುತ್ತಾ-ಬೀಳುತ್ತಾ ಎಪ್ಪತ್ತೈದನೇಯ ವರುಷದ ಮೈಲುಗಲ್ಲನ್ನು ತಲುಪಿದೆ. ನಮಗೆ ತಿಳಿದಿರೋ ಹಾಗೆಯೇ ಇಂದು ಬೃಹದಾಕಾರವಾಗಿ ಬೆಳೆದಿರೋ ಈ ನಮ್ಮ ಕನ್ನಡ ಚಿತ್ರರಂಗದ ಉದ್ಯಮದ ಏಳಿಗೆಗೆ ಶ್ರಮಿಸಿರುವರು ನೂರಾರು ಮಂದಿ. ಆ ಮಹನೀಯರುಗಳ ಕನ್ನಡ ತಾಯಿಯ ಬಗೆಗಿನ ಅಪಾರ ಅಭಿಮಾನ, ನಿಸ್ವಾರ್ಥ ಕಲಾಸೇವೆ ಕನ್ನಡ ಚಿತ್ರರಂಗವನ್ನು ಇಂದು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಕನ್ನಡ ಚಲನಚಿತ್ರರಂಗಕ್ಕೆ ನಾಟಕ ಮಂಡಳಿಗಳು ಹಾಗೂ ರಂಗಭೂಮಿಗಳ ಕೊಡುಗೆಯನ್ನು ಸಹ ಎಂದೂ ಮರೆಯುವಾಗಿಲ್ಲ".
ಕನ್ನಡ ಚಲನಚಿತ್ರರಂಗದಲ್ಲಿ ನಟರುಗಳ ನಟನೆಗೆ ಸಮವಾಗಿ ಮೂಡಿ ಬಂದಂತಹ ಚಲನಚಿತ್ರ ಸಾಹಿತಿಗಳ ಮಧುರ, ಭಾವನಾತ್ಮಕ ಪದಗಳಿಂದ ಕೂಡಿದ ಅರ್ಥಪೂರ್ಣ ಸಾಹಿತ್ಯ ರಚನೆಯ ಕೊಡುಗೆಯನ್ನು ಯಾವ ಸನ್ನಿವೇಶದಲ್ಲೂ ಮರೆಯುವಾಗಿಲ್ಲ. ಉದಯಶಂಕರ್, ಆರ್ ಎನ್ ಜಯಗೋಪಾಲ್, ವಿಜಯ ನಾರಸಿಂಹ ಹಾಗೂ ಈಚಿನ ದಿನಗಳಲ್ಲಿ ಜಯಂತ್ ಕಾಯ್ಕಿಣಿ, ಕವಿರಾಜ್ ಮುಂತಾದ ಸಾಹಿತಿಗಳು ಅತ್ಯದ್ಭುತವಾದ ಗೀತೆ ರಚನೆ ಮಾಡಿರುವರು.. ಮಾಡುತ್ತಲೂ ಇರುವರು. ಅಲ್ಲದೇ ಪಿಬಿ ಶ್ರೀನಿವಾಸ್, ಎಸ್.ಪಿ.ಬಿ ಯವರು, ಎಸ್ ಜಾನಕಿ ಕನ್ನಡಿಗರಲ್ಲದಿದ್ದರು ಕನ್ನಡದ ಬಹುಪಾಲು ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಗೀತೆಗಳನ್ನು ತಮ್ಮ ತಮ್ಮ ಮಧುರ ಕಂಠದಿಂದ ಹಾಡಿ ಕನ್ನಡ ಚಿತ್ರಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಹಂಸಲೇಖ ಅವರು ಗೀತೆರಚನೆಕಾರರಾಗಿ, ಸಂಗೀತ ನಿರ್ದೇಶಕರಾಗಿ ಹೊಸ ಹೊಸ ಪ್ರಯೊಗ ಮಾಡಿ ಎಂಬತ್ತು, ತೊಂಬತ್ತರ ದಶಕದಲ್ಲಿ ಕನ್ನಡ ಚಲನಚಿತ್ರರಂಗದಲಿ ಹೊಸ ಅಲೆಯನ್ನೇ ಎಬ್ಬಿಸಿದ್ದರು.
ನಮ್ಮ ಕನ್ನಡ ಸಿನಿಮಾ ಮಾಡುವವರಿಗೆ ಒಂದಷ್ಟು ಕಿವಿ ಮಾತುಗಳನ್ನು ಹೇಳಬೇಕಾದ ಪರಿಸ್ಥಿತಿ ಕನ್ನಡಿಗರದ್ದಾಗಿದೆ.
“ನಿರ್ದೇಶಕರೇ, ನಿರ್ಮಾಪಕರೇ ಈ ಬಣ್ಣದ ಲೋಕದ ಆಟದಲಿ
ಎಳು ಬೀಳು ಎಲ್ಲ ಮಾಮೂಲಿ ಆಗದಿರಲಿ ನಿಮ್ಮ ಸ್ವಂತಿಕೆಯು ಖಾಲಿ!
ಇನ್ನಾದರೂ, ಹೇಗದರೂ ಬಿಟ್ಟುಬಿಡಿ ರಿಮೇಕ್ ಗಳನ್ನು ಮಾಡುವ ಚಾಳಿ!
ಇಂದಾದರೂ ಎಲೆಲ್ಲೂ ಬೀಸುವನ್ತಾಗಲಿ ಕನ್ನಡ ತನದ ಸುಮಧುರ ಗಾಳಿ”
ಇನ್ನ ಹಲವರ ಪಾಲಿಗೆ ಈ ಬಣ್ಣದಲೋಕವು ಸಂಕಷ್ಟಗಳ ಸರಮಾಲೆಯನ್ನೇ ತಂದಿರುವುದುಂಟು. ಹಲವಾರು ದಿನಗಳಿಂದ ನನಗೇಕೋ http://mleelavathi.com/ ಈ ಲಿಂಕ್ನಲ್ಲಿ ಇರುವವರ ಬಗ್ಗೆ ಏನದರೂ ಬರೆಯಬೇಕೆಂದು ಆಸೆಯಿತ್ತು. ಅಂದಹಾಗೆ ಅದರಲ್ಲಿರುವ ಭಾವಚಿತ್ರಗಳು ಯಾವ ಖ್ಯಾತನಟಿಯದು ಎಂದು ಈ ವೇಳೆಗಾಗಲೇ ನೀವು ಗುರುತ್ತಿಸಿರುತ್ತಿರಿ.
ಕನ್ನಡಕ್ಕಾಗಿ, ಕನ್ನಡ ಚಿತ್ರರಂಗಕ್ಕಾಗಿ ದುಡಿದು, ಮಡಿದ ಜೀವಗಳ ಬಗ್ಗೆ ಸ್ವಲ್ಪವಾದರೂ ಬೆಲೆ, ಗೌರವ, ಅಭಿಮಾನ ಇಟ್ಟುಕೊಳ್ಳೋಣ.
ಕೊನೆಯದಾಗಿ.............
- ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಬುಧವಾರ, ಫೆಬ್ರವರಿ 11, 2009
ಪ್ರೀತಿ, ಪ್ರೇಮ ಅಂದರೆ ನನಗಿಷ್ಟು ಗೊತ್ತು..ನಿಮಗೆಷ್ಟು ಗೊತ್ತು??

ಪ್ರೀತಿ, ಪ್ರೇಮ ಅಂದರೆ ನನಗಿಷ್ಟು ಗೊತ್ತು..ನಿಮಗೆಷ್ಟು ಗೊತ್ತು??
"ಪ್ರೇಮಿಗಳ ದಿನದ" ಸುಸಂದರ್ಭದ ನಿಮಿತ್ತ ಎಲ್ಲರಿಗೂ ಒಪ್ಪಿಗೆ ಹಾಗೂ ಇಷ್ಟವಾಗುವಂತಹ ಒಂದು ಸರಳ, ಸುಂದರವಾದ ಲೇಖನವನ್ನು ಬರೆಯಬೇಕೆಂದು ಹಲವಾರು ಬಾರಿ ನಾನು ಮನದಲ್ಲೇ ಆಲೋಚಿಸಿದ್ದೆ. ಅದರಂತೆ ಪ್ರೀತಿ, ಪ್ರೇಮದ ಬಗ್ಗೆ ನನ್ನ ಮನದಾಳದ ಅನಿಸಿಕೆಗಳನ್ನು ತಿಳಿಸುವ ಸಲುವಾಗಿ ಒಂದು ಪರಿಪಕ್ವವೆನ್ನಿಸುವ ಲೇಖನವೊಂದನ್ನು ಬರೆದಿರುವೆನು. ದಯಮಾಡಿ ಬಿಡುವು ಇದ್ದಾಗ ಒಮ್ಮೆ ಓದಿರಿ..
ಮಿಂಚು, ಗುಡುಗು, ನ್ಯೂಕ್ಲಿಯರ್ ಪವರ್ ಗಳಿಗಿಂತಲೂ ಬಲಿಷ್ಟವಾದ "ಪ್ರೀತಿ ಹಾಗೂ ಪ್ರೇಮ"ಎನ್ನುವ ಎರಡು ಭಾವನಾತ್ಮಕ ಪದಗಳ ಬಗ್ಗೆ ಪ್ರೇಮಿಯಾಗದೆ ಬರೆಯುವ ಶಕ್ತಿ ನನಗೆ ಇರದಿದ್ದರೂ. ಅಲ್ಪ-ಸ್ವಲ್ಪ ಕವಿ ಚಿಂತನ ಮನೋಭಾವನ್ನು ನನ್ನಲಿ ಇಟ್ಟುಕೊಂಡಿರುವುದರಿಂದ, ಆ ಎರಡು ಭಾವನಾತ್ಮಕ ಪದಗಳ ಬಗ್ಗೆ ಬರೆಯುವ ಶಕ್ತಿ, ಸಾಮರ್ಥ್ಯ ನನ್ನಲಿ ಇದೆ ಎಂದು ಭಾವಿಸುತ್ತಾ. ಈ ಲೇಖನವನ್ನು ಬರೆದಿರುವೆನು.
“ಪ್ರೀತಿಯೆಂದರೇನು...?”
ಪ್ರೀತಿಯೆನ್ನುವುದು ಬಹುಮುಖ ಹಾಗೂ ಬಹುರೂಪವುಳ್ಳದ್ದು. ಅದರ ಬಾಹುಗಳ ವಿಸ್ತಾರ ಅಳತೆಗೆ ಮೀರಿದ್ದು, ಕಣ್ಣಿಗೆ ಕಾಣದ್ದು, ವಯಸ್ಸಿನ ಅಂಕೆಯಲ್ಲಿ ಒಳಪಡದ್ದು. ಸ್ವಾರ್ಥಕ್ಕೆ ಎಷ್ಟೂ ದೂರವಾದುದ್ದೋ ಅಷ್ಟೇ ಹತ್ತಿರವಾದುದ್ದು. ಇವರೆಗೂ ಎಷ್ಟೋ ಕವಿಗಳ, ಎಷ್ಟೋ ರಸಿಕರ ಕಾವ್ಯ ಕಾರಂಜಿಯ ಲಹರಿಯಲ್ಲಿ ಎಷ್ಟು ವಿಧವಾಗಿ ಬಣ್ಣಿಸಿದರೂ, ಎಷ್ಟು ವಿಧವಾಗಿ ವರ್ಣಿಸಿದರೂ ಮತ್ತೆ ಮತ್ತೆ ಎಲ್ಲೆಲ್ಲೋ, ಯಾರ್ಯಾರಿಂದಲೋ ಯಾರ್ಯಾರೋ ಮನದಲ್ಲೋ, ಕಲ್ಪನೆಯಲ್ಲೋ, ನರನಾಡಿಗಳ ಮಿಡಿತದಲ್ಲೋ ಚಿಗುರೊಡೆದು ಹೊಸ ಬಗೆಯ ರೂಪ, ಹೊಸ ಬಗೆಯ ಭಾವ, ಹೊಸ ಬಗೆಯ ಉತ್ಸಾಹ ಎಲ್ಲವನ್ನೂ ಪಡೆದು ಮತ್ತೆ ಮತ್ತೆ ವರ್ಣಿಸಲ್ ಪಡುವುದು, ಮತ್ತೆ ಮತ್ತೆ ಬಣ್ಣಿಸಲ್ ಪಡುವುದು... ಈ ಪ್ರೀತಿ!”
ಇದು ಕೇವಲ ಬರಿ ಹುಡುಗ-ಹುಡುಗಿ, ಗಂಡ-ಹೆಂಡತಿಗಳ ನಡುವೆ ಮಾತ್ರವೇ ವ್ಯಕ್ತವಾಗುವಂತಹದ್ದಲ್ಲ. ತಾಯಿ ತನ್ನ ಮಗುವಿನಲ್ಲಿ ಇರಿಸಿರುವ ಅನನ್ಯ ಮಮಕಾರ, ಅಕ್ಕರೆ ರೂಪದಲ್ಲೂ ಅಡಗಿರುತ್ತದೆ. ಬಂಧು-ಬಾಂಧವ್ಯ ರೂಪದಲ್ಲಿ ಇರುತ್ತದೆ, ಗೆಳೆತನದ ರೂಪದಲ್ಲೂ ಇರುತ್ತದೆ. ಆದರೆ ಇವುಗಳೆಲ್ಲವುಗಳಿಗಿಂತ ಸ್ವಲ್ಪ ವಿಭಿನ್ನವಾಗಿಯೂ, ಸ್ವಲ್ಪ ವಿಚಿತ್ರವಾಗಿಯೂ ಇರುವುದು ಹುಡುಗ-ಹುಡುಗಿ, ಗಂಡ-ಹೆಂಡತಿಯರ ನಡುವೆ ಇರುವ ಪ್ರೀತಿ! ಇವೊಂದು ಪ್ರೀತಿಯಲ್ಲಿ ವಯೋ ಸಹಜವಾದ ಆಕರ್ಷಣೆ ಇರುತ್ತದೆ, ನೂರಾರು ಹೊಂಗನಸುಗಳು ಇರುತ್ತವೆ, ಬರಿ ಇಷ್ಟೇ ಅಲ್ಲದೆ ಮನದ ಮೂಲೆಯಲ್ಲಿ ಎಲ್ಲೋ ಅದಮ್ಯ ಕಾಳಜಿ, ನವಿರು ರೋಮಾಂಚನ, ಮತ್ತೆಲ್ಲೋ ಒಂದು ಕಡೆಯಲ್ಲಿ ಸಮಾಜದ ಭೀತಿ, ಬೆಸುಗೆ ಕಳಚಿ ಬೀಳುವ ಭಯ ಹೀಗೆ ಎಲ್ಲವೂ ಸಂಮಿಶ್ರಣವಾಗಿರುತ್ತದೆ.
ಯುವಕ, ಯುವತಿಯರು ಪ್ರೀತಿ ಮಾಡಬಾರದೆಂದು ನಮ್ಮ ಸಂಪ್ರದಾಯ, ನಮ್ಮ ಧರ್ಮ ಎಂದೂ, ಯಾವತ್ತೂ ಹೇಳಿಲ್ಲ. ಇದಕ್ಕೆ ಪೂರಕವಾಗಿರುವಂತೆ ಆಗಿನ ಕಾಲದಲ್ಲೇ ನಳ ದಮಯಂತಿ ಪ್ರೀತಿ ಮಾಡಿರಲಿಲ್ಲವೇ? ರಾಧಾ ಕೃಷ್ಣರು ಪ್ರೀತಿ ಮಾಡಿರಲಿಲ್ಲವೇ? ಹೆತ್ತವರು, ಒಡಹುಟ್ಟಿದವರು, ಬಂಧು-ಬಾಂಧವರು ಹಾಗೂ ಗೆಳೆಯರು ಇವರೆಲ್ಲರ ಪ್ರೀತಿಯ ಜೊತೆಗೆ ನಮ್ಮನ್ನು, ನಮ್ಮಷ್ಟೇ ಅರ್ಥಮಾಡಿಕೊಂಡು ಪ್ರೀತಿ ಮಾಡುವ ಜೀವವಿದ್ದರೆನೇ ಈ ನಮ್ಮ ಬದುಕು ಒಂದು ಪರಿಪೂರ್ಣವಾದದ್ದು ಎಂದು ಹೇಳಿಕೊಳ್ಳಬಹುದು.
ಆದರೆ ನಾವು ಮಾಡುವ ಈ ಪ್ರೀತಿ, ಪ್ರೇಮ ಬರಿ ವಯೋ ಸಹಜವಾದ ಆಕರ್ಷಣೆಯಿಂದ ಬಂದಂತದ್ದು ಆಗಿರಬಾರದು. ಏಕೆಂದರೆ ಆ ರೀತಿ ಬಂದಂತದ್ದು ತಾತ್ಕಾಲಿಕವಾಗಿರುತ್ತದೆ. ನಮ್ಮ ಭವ್ಯ ಸಂಸ್ಕೃತಿ, ಪರಂಪರೆಗಳನ್ನು, ಕಟ್ಟುಪಾಡುಗಳನ್ನು ಮುರಿಯಲು ದಾರಿಯಾಗುತ್ತದೆ. ಅದ್ದರಿಂದ ನಮ್ಮ ಅಂತರಾಳದಲ್ಲಿ ಮೂಡಿ ಬಂದ ಪ್ರೀತಿ, ಪ್ರೇಮ, ಆಕರ್ಷಣೆ ಶಾಶ್ವತವಾಗಿರಬೇಕು, ನಂಬಿಕೆಯುತವಾಗಿರಬೇಕು ಮತ್ತು ಎಲ್ಲರೂ ಒಪ್ಪಿ ಮೆಚ್ಚುವಂತಿರಬೇಕು
ನಮಗೆ ಇಷ್ಟವಾದವರ ಪ್ರೀತಿಯನ್ನು ಹೇಗೆ ಒಲಿಸಿಕೊಳ್ಳುವುದು??
ಕೆಲವರಿಗೆ ಪ್ರೀತಿಯ ವಿಚಾರವೊಂದೇ ಅಲ್ಲ ಮಿಕ್ಕೆಲ್ಲ ವಿಚಾರದ ಬಗ್ಗೆಯೂ ಸಹ ತಮ್ಮ ಮನದಾಳದಲ್ಲಿ ಹೊಮ್ಮಿಬಂದ ಹೊಸ ಬಯಕೆಯನ್ನ, ಹೊಸ ಭಾವನೆಯನ್ನ, ನವಿರು ಪುಳಕವನ್ನ ಹಾಗೆ ಬರಲು ಕಾರಣರಾದವರ ಮುಂದೆ ಸುಂದರವಾಗಿ ಹೇಳಿ ಅವರ ಪ್ರೀತಿಯನ್ನ, ಅವರ ಒಲವನ್ನ, ಅವರ ಪ್ರೇಮವನ್ನ, ಕೊನೆಗೆ ಅವರ ಬಾಂಧವ್ಯವನ್ನೂ ಸಹ ಪಡೆದುಕೊಳ್ಳುವ ಕಲೆ ಇರುತ್ತದೆ (ಸಿದ್ದಿಸಿರುತ್ತದೆ). ಹೌದು ಇದು ಅದ್ಬುತವಾದ ಒಂದು ಕಲೆ. ಪ್ರೀತಿ ಮಾಡುವ ಅವಕಾಶ, ಸೌಭಾಗ್ಯ, ಎಲ್ಲರಿಗೂ ಒಲಿದು ಬರುವುದಿಲ್ಲ.
ಆದರೆ ಪಾಪ ಇನ್ನು ಕೆಲವರಿಗೆ ತಮ್ಮ ಮನದಲ್ಲಿ ಮೂಡಿಬಂದ ಅಪರಿಮಿತ ಮಧುರ ಭಾವ, ಹೊಚ್ಚ ಹೊಸ Feelingsಗಳನ್ನು, ಆಸೆ, ಆಕಾಂಕ್ಷೆಗಳನ್ನು ಹೇಳುವ ಧೈರ್ಯ ಬಾರದೆ ತಮ್ಮ ಮನದಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ತಮ್ಮೊಳಗೇನೆ ಆ ಮಧುರ ಭಾವವನ್ನು ಹೆಮ್ಮರವಾಗಿಸಿ ಬಿಡುತ್ತಾರೆ.
ನೆನಪಿರಲಿ, ಎಲ್ಲೂ ಹೇಳಲಾರದೆ ಮನದ ತಿಜೋರಿಯ, ಮಧುರ ಭಾವಗಳ ಖಾನೆಯೊಳಗೆ ಬಚ್ಚಿಟ್ಟುಕೊಂಡ ಪ್ರೀತಿಯು ನಿಜಕ್ಕೂ ಬಹಳ ಪ್ರಬಲವಾದುದ್ದು, ಅದರ ಜೊತೆಗೆ ಅಷ್ಟೇ ನೋವನ್ನು ಯಾತನೆಯನ್ನು ತರುವಂತಹದ್ದು...ಮತೆ ಹಾಗೆ ಇರದೆ ನಮ್ಮ ಪ್ರೀತಿಯನ್ನು ಹೇಗೆ ವ್ಯಕ್ತ ಪಡಿಸುವುದು? ಪ್ರೇಮಿಗಳ ದಿನದೊಂದು ಅದ್ದೂರಿಯಾಗಿ ಮಾಡುವ ಆಚರಣೆ ತರವೇ?? ಎಲ್ಲವನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ!!
ಒಂದು ಸರಳವಾದ ಕವನವನ್ನೂ ಕೆಳಗೆ ಬರೆದಿರುವೆನು ಒಮ್ಮೆ ಓದಿರಿ
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಆ ಹಾಲು ಬೆಳದಿಂಗಳ ಚಂದಿರ│ ಅವನಿದ್ದರೂ ಅಷ್ಟು ಸುಂದರ│
ನಿನ್ನಯ ಚೆಲುವಿನಲಿ ಒಂದಿಷ್ಟು ಪಾಲು│ ಪಡೆಯಲು ತೋರಿಹನಂತೆ ಕಾತರ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಹೊನ್ನಕಾಂತಿ ತುಂಬಿಕೊಂಡ ಆ ನೇಸರ│
ಕಂಡು ನಿನ್ನ ಕಣ್ಣಕಾಂತಿ ತಾಳಿಹನಂತೆ ಬೇಸರ│
ನಿನ್ನ ಭೇಟಿಗೊಮ್ಮೆ ತೋರಿಹನಂತೆ ಬಲು ಆತುರ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ನಿನ್ನ ಮುದ್ದುನಗು│ ಕಂಡ ಮುಗ್ದ ಮಗು│
ಮಾಡಿವುದಂತೆ ಹಠ│ ನಿನ್ನ ಜೊತೆಯಲಿ ಆಡಬೇಕೆಂದು ಆಟ!
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಇರಲಿ ಇರಲಿ ಗೆಳತಿ, ಹೀಗೆ ಇರಲಿ ಇರಲಿ
ನಿನ್ನ ಚಲುವಿನಲಿ ಕಾಂತಿ│ ನಿನ್ನ ನಯನದಲೂ ಕಾಂತಿ│
ನಿನ್ನ ನಗುವಿನಲಿ ಸ್ಫೂರ್ತಿ│ ನಿನ್ನ ಬದುಕಲಿ ಕೀರ್ತಿ│
ಆದರೆ ನಿನ್ನಲಿ ನಾ ಇಟ್ಟಿರುವ ಪ್ರೀತಿ│ ಎಂದೂ ಆಗದಿರಲಿ ಒಂದು ಭ್ರಾಂತಿ!
ಭಾನುವಾರ, ಫೆಬ್ರವರಿ 1, 2009
ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│

ಕಾಯಕ ಕೈ ತಪ್ಪಿ ಹೋದವರಿಗೆ
ಬಂದಿದೆ ಬಂದಿದೆ ಬಂದಿದೆ│ ಪ್ರಬಲ ಆರ್ಥಿಕ ಹಿಂಜರಿತ│
ಎಲ್ಲರ ಸಂಕಷ್ಟದಲ್ಲಿ ಸ್ವಲ್ಪವಾದರೂ ಸಹಭಾಗಿಯಾಗೋಣ
ಕಾಲಕ್ರಮೇಣ ಆರ್ಥಿಕ ಹಿಂಜರಿತವನು ಹಿಮ್ಮೆಟ್ಟಿಸೋಣ!
ರಚನೆ ಸುನಿಲ್ ಮಲ್ಲೇನಹಳ್ಳಿ
ಸೋಮವಾರ, ಜನವರಿ 19, 2009
ಓ ನನ್ನ ಬಡಕನ್ನಡವೇ..ನಿನಗೆಲ್ಲರಿಂದಲೂ ಸಂಕಟವೇ??

ಎಲ್ಲರಿಗೂ ಹೃತ್ಪೂರ್ವಕ ನಮಸ್ಕಾರ,
ಜನವರಿ ೨೬ ರ ಗಣರಾಜ್ಯೋತ್ಸವದ ಪ್ರಯುಕ್ತ ಎಲ್ಲ ಪ್ರಾಂತೀಯ ಭಾಷೆಗಳ ಪ್ರಾಮುಖ್ಯತೆಯನ್ನು ಮನಗಂಡು ಬರೆದ ಲೇಖನವಿದು.
ಮೊನ್ನೆ ಮೊನ್ನೆ ದೆಹಲಿಯಲ್ಲಿ ದುಂಡು ಮೇಜಿನ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸಕ್ರಿಯಾವಾಗಿ ಪಾಲ್ಗೋಳ್ಳಲು ಭಾರತ ದೇಶದ ಎಲ್ಲಾ ಪ್ರಾದೇಶಿಕ ಸಮ್ಮೇಳನಕ್ಕೆ ತುಂಬು ಹೃದಯದಿಂದ ಆಹ್ವಾನಿಸಲಾಗಿತ್ತು. ಆಯಾ ರಾಜ್ಯಗಳಲ್ಲಿ, ಆಯಾ ಭಾಷೆಗಳು ಎದುರಿಸುತ್ತಿರುವ ಎಡರು, ತೊಡರುಗಳನ್ನು ಕುರಿತು ಚರ್ಚಿಸುವುದು ಹಾಗೂ ಭಾರತೀಯ ಭಾಷೆಗಳಲ್ಲೇ ಇರುವ ಒಳಜಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ಮೂಲನೆ ಮಾಡುವುದು ಎನ್ನುವುದರ ಬಗ್ಗೆ ನಿರ್ಣಯ ಕೈಗೊಳ್ಳುವುದು, ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿತ್ತು. ಹಿಂದಿ ಭಾಷೆಯು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.
ಸಮಯಕ್ಕೆ ಸರಿಯಾಗಿ ಸಮ್ಮೇಳನ ಶುರುವಾಯಿತು. ಒಂದೊಂದೇ ಭಾಷೆಗಳು ತಮ್ಮ, ತಮ್ಮ ರಾಜ್ಯಗಳಲ್ಲಿ ತಾವುಗಳು ಗಳಿಸಿಕೊಂಡಿರುವ ಹಿರಿಮೆ ಹಾಗೂ ತಾವುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರವಾಗಿ ಹೇಳುತ್ತಾ ಬಂದವು. ಬಹುಮುಖ್ಯವಾಗಿ ಎಲ್ಲ ಭಾಷೆಗಳು ತೋಡಿಕೊಂಡಿದ್ದು ಒಂದೇ ಅಳಲು, ಅದು “ಇಂಗ್ಲೀಷ್ ಭಾಷೆಯು ತಮ್ಮ ನಾಡಿನ ಜನರ ಮೇಲೆ ಬೀರುತ್ತಿರುವ ಗಾಢ ಪ್ರಭಾವ ಹಾಗೂ ಅದರಿಂದ ತಮ್ಮ ಉಳಿವಿಗೆ ಬಂದಿರುವ ಆಪತ್ತು”.
ಉತ್ತರ ಭಾರತದ ಎಲ್ಲಾ ಭಾಷೆಗಳ ಸರದಿ ಮುಗಿಯುತ್ತಿದ್ದಂತೆಯೇ, ದಕ್ಷಿಣ ಭಾರತೀಯ ಭಾಷೆಗಳ ಸರದಿ ಬಂತು. ಅದರಲ್ಲಿ ಮೊದಲನೇ ಸರದಿ ಮಲೆಯಾಳಂ ಭಾಷೆಯದಾಗಿತ್ತು. ಸಮಾರಂಭಕ್ಕೆಂದು ಚೆನ್ನಾಗಿಯೇ ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದ ಮಲೆಯಾಳಂ ಭಾಷೆಯು ಎಲ್ಲ ಭಾಷೆಗಳಿಗೂ ನಮಸ್ಕಾರ ಹೇಳುತ್ತಾ, ತನ್ನ ಮಾತನ್ನು ಮುಂದುವರೆಸಿತು, “ನಾನು ಬಳಸಲ್ಪಡುವ ಕೇರಳ ರಾಜ್ಯ ದಕ್ಷಿಣ ಭಾರತದ ರಾಜ್ಯಗಳಲ್ಲೇ ಬಹಳ ಚಿಕ್ಕದಿರುಬಹುದು. ಆದರೆ ನನ್ನ ಜನ ನನ್ನನ್ನು ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ, ಅಲ್ಲದೇ ಈ ಭೂಮಿಯ ಮೇಲಿರುವ ಪ್ರತಿಯೊಂದು ದೇಶಗಳಲ್ಲೂ ಮಲಯಾಳಂ ಜನರಿದ್ದಾರೆ. ಅವರುಗಳು ಅಲ್ಲಿ ಮಲಯಾಳಂ ನಾಡು, ನುಡಿ ಸಂಸ್ಕೃತಿಯನ್ನು ಬಹಳ ಅಚ್ಚುಕಟ್ಟಾಗಿ ಮೆರೆಸುತ್ತಿದ್ದಾರೆ. ಅವರ ಬಗ್ಗೆ ನನಗೆ ತುಂಬು ಹೆಮ್ಮೆ ಇದೆ. ಸದ್ಯಕ್ಕಂತೂ ನನಗೆ ನನ್ನ ನಾಡಿನಲ್ಲಿ ಯಾವುದೇ ಎಡರು ತೊಡರುಗಳಿಲ್ಲ, ಜೊತೆಗೆ ಇಲ್ಲಿಯವರೆಗೂ ನನಗಾಗಲಿ, ನನ್ನ ನಾಡಿಗಾಗಲಿ ನೆರೆಹೊರೆಯ ಸಹೋದರಿಯರ ನಾಡಿನ ಜನರಿಂದ ಯಾವ ತೊಂದರೆ ಉಂಟಾಗಿಲ್ಲ!” ಎಂದು ಹೇಳುತ್ತಾ.. ಬಹಳ ಸಂತೋಷದಿಂದ ತನ್ನ ಮಾತನ್ನು ಮುಗಿಸಿತು.
ನಂತರದ ಸರದಿ ಕನ್ನಡ ಭಾಷೆಯದಾಗಿತ್ತು. ಇವರೆಗೂ ಎಲ್ಲ ಭಾಷೆಗಳು ಹಿಂದಿಯಲ್ಲೇ ತಮ್ಮ ಅಭಿಪ್ರಾಯಗಳನ್ನು ಪ್ರಸ್ತಾವಿಸಿ, ಮಂಡಿಸಿದ್ದರಿಂದ ಕನ್ನಡ ಭಾಷೆಯು ಸಹ ಹಿಂದಿಯಲ್ಲೇ ತನ್ನ ಮನದಾಳದ ಮಾತುಗಳನ್ನು ತಿಳಿಸಲು ಮುಂದಾಯಿತು...
ಎಲ್ಲರಿಗೂ ನನ್ನ ನಮಸ್ಕಾರ, ಇಲ್ಲಿಯವರೆಗೂ ನೀವೆಲ್ಲರು ನಿಮ್ಮ, ನಿಮ್ಮ ನಾಡಿನಲ್ಲಿ, ನಿಮ್ಮ ಏಳಿಗೆಗೆ ಹಾಗೂ ಉಳಿವಿಗೆ ಇರುವ ಎಡರು ತೊಡರುಗಳನ್ನು ಮನ ಮುಟ್ಟುವಂತೆ ವಿವರಿಸಿ ಹೇಳಿದ್ದೀರಿ. ನಿಜ ಹೇಳಬೇಕೆಂದರೆ ಇವೊಂದು ಪರಿಸ್ಥಿತಿಯಿಂದ ನಾನು ಸಹ ಹೊರತಲ್ಲ. ನಿಮ್ಮಂತೆಯೇ ಜಾಗತೀಕರಣದ ಫಲವಾಗಿ ನನ್ನ ಉಳಿವು ಸಹ ಅನುಮಾನದ ವಿಷಯವಾಗಿ ಹೋಗಿದೆ.
“ಜಾಗತೀಕರಣ”ಇದು ಒಂದು ನೋವಿನ ವಿಷಯವಾದರೆ. ಇದರ ಜೊತೆಗೆ ನನ್ನವೇ ವೈವಿಧ್ಯಮಯವಾದ ನೋವುಗಳು ಇವೆ. ಅವುಗಳನ್ನು ಈ ಸಮಾರಂಭದಲ್ಲಿ ಹೇಳಲು ನನಗೆ ಹಕ್ಕು ಇದೆ ಎನ್ನುವ ಭಾವನೆ ನನ್ನದು, ಅದನ್ನು ಕೇಳುವ ಸಂಯಾಮ ನಿಮ್ಮಲ್ಲಿ ಇದೆ ಎಂದು ನಾ ಭಾವಿಸಿರುತ್ತೇನೆ,
1) ಈ ವಿಚಾರದಲ್ಲಿ ಮೊದಲನೆಯದಾಗಿ, ನನ್ನ ನಾಡಿನ ನೆರೆಹೊರೆಯಲ್ಲಿ ನಾಲ್ಕಾರು ಸಹೋದರಿಯರ ನಾಡುಗಳು ಇರುವುದು ನಿಮಗೆ ಗೊತ್ತಿದೆ. ಆ ನಾಡುಗಳ ಜನರಿಗಂತೂ ನನ್ನಿಂದ, ನನ್ನ ನಾಡಿನಿಂದ ಆದಷ್ಟು ಬೇಗ ಎಲ್ಲವನ್ನೂ ಕಸಿದುಕೊಳ್ಳುವ ಆಸೆ, ಕೇಂದ್ರ ಸರಕಾರವನ್ನೇ ಅಂಗೈಯಲ್ಲಿ ಇಟ್ಟಿಕೊಂಡಿರುವ ಆ ಜನರಿಗೆ ಹೆಜ್ಜೆ ಹೆಜ್ಜೆಗೂ ನನ್ನ ಏಳಿಗೆಗೆ ಮುಳ್ಳಾಗುವ ಆಸೆ. ಮತ್ತೊಂದೆಡೆ ನನ್ನ ನಾಡಿನ ಅವಿಭಾಜ್ಯ ಅಂಗವಾದ ಬೆಳಗಾವಿಯನ್ನು ಸಂಪೂರ್ಣವಾಗಿ ಕಸಿದುಕೊಳ್ಳುವ ಪ್ರಯತ್ನ. ಒಟ್ಟಾರೆ ನನ್ನ ನಾಡಿನ ಹೊರಗೂ ಎಲ್ಲೆಲ್ಲೂ ನನಗೆ ಉಳಿಗಾಲವೇ ಇಲ್ಲ.
2) ನನ್ನ ಉಳಿವಿಗಾಗಿ ಚಿಂತನೆಗಳನ್ನು ಮಾಡುವವರಿಗೆ, ಕನ್ನಡದ ವಾತಾವರಣದಲ್ಲಿ ಇರೋರಿಗೆ, ಕನ್ನಡಕ್ಕಾಗಿ ಶ್ರಮಿಸುವವರಿಗೆ, ಕೆಲವೊಂದು ಸತ್ಯಾಸತ್ಯಗಳು ತಿಳಿಯಬೇಕಾಗಿದೆ. ಪಾಪ ಅವರು ಕನ್ನಡ ಎಲ್ಲ ಕಡೆ ಬೆಳೆಯುತ್ತಿದೆ ಎಂದು ತಿಳಿದಿದ್ದಾರೆ.. "ನನ್ನ ನಾಡಿನ ರಾಜಧಾನಿ ಬೆಂಗಳೂರು ಒಂದರಲ್ಲೇ ಲಕ್ಷಾಂತರ ಜನ ಕನ್ನಡಿಗರು ಒಳ್ಳೊಳ್ಳೆ ಉನ್ನತ ದರ್ಜೆಯ ಕೆಲಸಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅವರುಗಳು ಬಹಳ ಸುಖಮಯವಾದಂತಹ ಜೀವನವನ್ನೂ ನಡೆಸುತ್ತಿದ್ದಾರೆ. ಆದರೆ ಅವರುಗಳಲ್ಲಿ ಬಹುಪಾಲು ಮಂದಿ “ಮಾತೃ ಭಾಷೆ” ಎನ್ನುವ ವಿಷಯದಲ್ಲಿ ಎಂತಹ ಹೃದಯ ಶೂನ್ಯರಾಗಿದ್ದಾರೆ. ನನ್ನ ಉಳಿವಿನ ಮಹತ್ವದ ಬಗ್ಗೆ ತಿಳುವಳಿಕೆಯನ್ನು ಮೂಡಿಸುವಂತಹ ಒಂದು ಕಾರ್ಯಕ್ರಮವನ್ನು ಅವರಿಂದ ಏರ್ಪಡಿಸಲು ಆಗಿಲ್ಲ. ಒಮ್ಮೆಯಾದರೂ ಹಳ್ಳಿಗಾಡುಗಳ ಕಡೆ ಹೋಗಿ ಅಲ್ಲಿ ಇಂಗ್ಲೀಷ್ ಭಾಷೆಯ ಬಗ್ಗೆ ಹೆಚ್ಚು, ಹೆಚ್ಚು ಒಲವು ತೋರುತ್ತಿರುವರಿಗೆ ಕನ್ನಡ ಮಾಧ್ಯಮದಲ್ಲಿ ಓದಿ ಏನ್ನೆಲ್ಲ ಸಾಧಿಸಬಹುದೆಂದು ಅರಿವು ಮೂಡಿಸಿ ಬರಲು ಅವರಿಗೆ ಸಮಯವಿಲ್ಲದಂತಾಗಿದೆ".
3) ಅಲ್ಲದೇ ನನ್ನ ನಾಡಿನಲ್ಲಿ ನೂರಾರು ಕನ್ನಡ ಪರ ಸಂಘಟನೆಗಳನ್ನು ಸಂಘಟಿಸಿದ್ದಾರೆ. ಅವುಗಳು ಒಂದಿಷ್ಟು ಗಮನಾರ್ಹ ಕೆಲಸಗಳನ್ನು ಮಾಡಿವೆ. ಆ ವಿಷಯವಾಗಿ ಅವರುಗಳನ್ನು ಮೆಚ್ಚಲೇಬೇಕು. ಆದರೆ ಅವುಗಳಲ್ಲಿ ಹಲವಾರು ಸಂಘಟನೆಗಳ ಸದಸ್ಯರುಗಳ ಮಧ್ಯೆ ವೈಮನಸ್ಸು ಮೂಡಿ, ಕೆಲವೊಂದು ಸಂಘಟನೆಗಳು ಹರಿದು ಚೂರು, ಚೂರಾಗಿ ಅವುಗಳಲ್ಲಿ ಮತ್ತೊಂದೊಂದು ಬಣಗಳು ಹುಟ್ಟಿಕೊಂಡಿವೆ. ಇಂತಹ ಒಂದು ಪರಿಸ್ಥಿತಿ ಬೇಕಿತ್ತೇ? ಒಂದು ನಾಡು, ನುಡಿಯ ಬಗ್ಗೆ ಹೋರಾಡುವವರಿಗೆ ಮನಸ್ಸು, ಮೈಯಿ, ಅವನು, ಇವನು ಎಲ್ಲವೂ ಒಂದೇ ಆಗಿರಬೇಕು. ತನ್ನಲ್ಲೂ, ಅವನಲ್ಲೂ, ಎಲ್ಲದರಲ್ಲೂ ತನ್ನ ಭಾಷೆಯ ತನವನ್ನು ಕಾಣಬೇಕು ಆಗಲೇ ಒಂದು ನಾಡಿನ, ಒಂದು ಭಾಷೆಯ ಪರಿಪೂರ್ಣ ಏಳಿಗೆ ಸಾಧ್ಯ. ಇದನ್ನು ನನಗೆ ಮಾತ್ರ ಅನ್ವಯಿಸಿಕೊಂಡು ಹೇಳುತ್ತಿಲ್ಲ, ನನ್ನಂತೆಯೇ ನೂರಾರು ಸಮಸ್ಯೆಗಳನ್ನು, ಒಳನೋವುಗಳನ್ನು ಎದುರಿಸುತ್ತಿರುವ ಸಹೋದರಿಯ ಭಾಷೆಗಳಾದ ನಿಮ್ಮನ್ನೂ ಅನ್ವಯಿಸಿಕೊಂಡು ಹೇಳುತ್ತಿರುವೆನು. ಯಾಕೆಂದರೆ ನನ್ನ ನಾಡಿನಲ್ಲಿ, ನನ್ನ ಅಭ್ಯುದಯದ ಜೊತೆಗೆ ನೀವು ನಿಮ್ಮ, ನಿಮ್ಮ ನಾಡಿನಲ್ಲಿ ಬೆಳೆಯಬೇಕೆಂಬುದು ನನ್ನ ಮನೋಭಿಲಾಷೆ.
4) ಇನ್ನೂ ನನ್ನ ನಾಡಿನ ಪ್ರಾಧಿಕಾರಗಳು, ಪರಿಷತ್ತುಗಳು ಹಾಗೂ ಸರಕಾರ ಇವರುಗಳು ಕಲಿಯಬೇಕಿರುವುದು ಬಹಳಷ್ಟು ಇದೆ. ಚಿಕ್ಕಪುಟ್ಟ ಮಕ್ಕಳ ತರ ಸಣ್ಣ ಸಣ್ಣದಕ್ಕೂ ಜಗಳ ಕಾಯೋದನ್ನು ಬಿಟ್ಟು, ನನ್ನ ಹಾಗು ನನ್ನ ನಾಡಿನ ಏಳಿಗೆಗೆ ದಾರಿದೀಪಗಳಾಗಬೇಕಿದೆ. ಕನ್ನಡ ನಾಮಾಫಲಕ ಕಡ್ಡಾಯ ಅನ್ನುವ ನಿಯಮವನ್ನು ಇಷ್ಟು ವರುಶವಾದರೂ ಸರಿಯಾಗಿ ಅನುಷ್ಟಾನಕ್ಕೆ ತರಲಾಗಿಲ್ಲ ಅವರಿಗೆ. ಎರಡು ವರುಷಗಳಿಗೊಮ್ಮೆ ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೂರಾರು ಎಡರು-ತೊಡರುಗಳು ಜೊತೆಗೆ ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಾದ ಕೂಗುಗಳು.
4) ಬೆಳಗಾವಿಯಂತ ನಗರದಲ್ಲಿ ಹತ್ತು ದಿನಗಳ ಕಾಲ ಸರಕಾರದ ಕಾರ್ಯಕಲಾಪಗಳನ್ನು ನಡೆಸುವುದು ಸ್ವಾಗತರ್ಹ ಕ್ರಮ. ಆದರೆ ಹತ್ತು ದಿನದ ಸಮಾವೇಶಕ್ಕೆ ಇಪ್ಪತೈದು ಕೋಟಿ ಖರ್ಚು ಮಾಡುವ ಇವರು. ನಾಡಿನಲ್ಲಿ ಇರುವ ನಿರುದ್ಯೋಗಿ ಪಧವಿದರರಿಗೆ ಮಾಸಿಕವಾಗಿ ಒಂದು ಐದುನೂರು ರೂಪಾಯಿಗಳನ್ನು ಸಹಾಯ ಧನವಾಗಿ ಕೊಡುವ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗುದಿಲ್ಲವೇ? ವರುಶಕ್ಕೆ ಇನ್ನೂರರಿಂದ ಮೂನ್ನೂರು ಕೋಟಿ ವೆಚ್ಚವಾಗಬಹುದು ಸರಕಾರದ ಬೊಕ್ಕಸಕ್ಕೆ. ಅಷ್ಟನ್ನೂ ಭರಿಸಲಾಗುವುದಿಲ್ಲವೇ?
ನನ್ನ ನಾಡಿನ ಜನತೆಗೆ, ಪರಿಷತ್ತುಗಳಿಗೆ, ಪ್ರಾಧಿಕಾರಗಳಿಗೆ ಹಾಗೂ ನನ್ನ ನಾಡಿನ ಸರಕಾರಕ್ಕೆ ನನ್ನ ಏಳಿಗೆ ಬಗ್ಗೆ ಸಾಕಷ್ಟು ಕಾಳಜಿ ಬರಲೆಂದು ಭಾರತಮಾತೆಯಲ್ಲಿ ಪ್ರಾರ್ಥಿಸುತ್ತಾ, ಇಷ್ಟು ಹೊತ್ತು ಮಾತನಾಡಲು ಅವಕಾಶ ಕೊಟ್ಟ ಎಲ್ಲ ಸಹೋದರಿಯ ಭಾಷೆಗಳಿಗೆ ವಂದನೆಗಳನ್ನು ಹೇಳುತ್ತಾ... ಕನ್ನಡ ಭಾಷೆಯು ತನ್ನ ಮಾತುಗಳನ್ನು ಮುಗಿಸಿತು!!!!
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಸೋಮವಾರ, ಜನವರಿ 12, 2009
"ನಮ್ಮ ಅಪ್ಪಾಜಿ ಅಂದ್ರೆ ನನಗಿಷ್ಟ"
ಬರಹಗಾರ ವಸುಧೇಂದ್ರ ಅವರು ಬರೆದ "ನಮ್ಮ ಅಮ್ಮ ಅಂದ್ರೆ ನನಗಿಷ್ಟ" ಅನ್ನುವ ಪುಸ್ತಕವನ್ನು ಓದುವ ಅವಕಾಶ ಈಗ್ಗೆ ಕೆಲವು ದಿನಗಳ ಹಿಂದೆ ನನಗೆ ಒದಗಿಬಂದಿತ್ತು. ವಸುಧೇಂದ್ರ ಅವರು ತಮ್ಮ ಪೂಜ್ಯ ತಾಯಿಯವರು ಬಾಳಿ, ಬದುಕಿ ಹೋದ ಪರಿಯನ್ನು ಬಹಳ ಚಂದವಾಗಿ ವರ್ಣಿಸಿ ಬರೆದ ಪುಸ್ತಕವದು.
ಆ ಪುಸ್ತಕವನ್ನು ಓದಿ ಮುಗಿಸಿದಾಗಿನಿಂದಲೂ ನನ್ನ ಅಪ್ಪಾಜಿಯವರ ಬಗ್ಗೆ ಏನಾದರೂ ಬರೆಯಬೇಕೆಂಬ ವಿಚಾರವೂ ಸದಾ ಮನದ ಕಾರ್ಮುಗಿಲಲ್ಲಿ ಮಿಂಚುತ್ತಲೇ ಇತ್ತು. ಎಲೆಮರೆ ಕಾಯಿಯಂತೆ ಬಾಳಿ, ಬದುಕಿ ಹೋದ ನನ್ನ ಬಾಳಿನ ದಿವ್ಯ ಧ್ರುವತಾರೆ ಅಪ್ಪಾಜಿ ಅವರು. ನನಗಂತೆ ಅಲ್ಲ ಎಲ್ಲರಿಗೂ ಅವರ, ಅವರ ಹೆತ್ತವರ ಬಗ್ಗೆ ಅದಮ್ಯ ಪ್ರೀತಿ, ಗೌರವ, ಪೂಜ್ಯನೀಯ ಭಾವ ಮನದಲ್ಲಿ ತನ್‌ತಾನೇ ಮನೆಮಾಡಿಕೊಂಡಿರುವುದು ಸಹಜ. ನಮ್ಮ ಹಾಗೂ ಅವರ ನಡುವಿನ ಸಂಬಂಧ ತ್ಯಾಗ, ಅಕ್ಕರೆ, ಮಮಕಾರ, ಸಹಕಾರ, ತೀರದ ಒಲವು ಇನ್ನು ಹಲವಾರು ಪವಿತ್ರ ಸಂಕೋಲೆಗಳಿಂದ ಆದಂತಹ ಒಂದು ಪವಿತ್ರ ಬಂಧನ ಅಲ್ಲವೇ?.
ನಿಜ ಹೇಳಬೇಕೆಂದರೆ ನನ್ನ ಅಪ್ಪಾಜಿಯವರು ಭೌತಿಕವಾಗಿ ಈ ಲೋಕದಿಂದ ಮರೆಯಾದ ಮೇಲೇನೆ “ಬರವಣಿಗೆ” ಅನ್ನುವ ಲೋಕಕ್ಕೆ ನಾನು ಕಾಲಿರಿಸಿದ್ದು. ಅದರಂತೆ ಇವರೆಗೂ ಕೆಲವಾರು ಪ್ರಕಾರಗಳ ಲೇಖನಗಳನ್ನು, ಕವನಗಳನ್ನು ಬರೆದು, ನಿಮ್ಮ ಮುಂದಿರಿಸಿದ್ದೀನಿ. ಏಕೆಂದರೆ ಒಂದೇ ಬಗೆಯ, ಒಂದೇ ವಿಚಾರದ ಲೇಖನಗಳು, ಕವನಗಳು ಎಂದೂ, ಯಾರಿಗೂ ಒಪ್ಪಿಗೆಯಾಗುವುದಿಲ್ಲ ಎನ್ನುವುದು ನನ್ನ ಭಾವನೆ.
ಅಪ್ಪಾಜಿಯವರ ಬದುಕಿನಲ್ಲಿ ನೆಡೆದ ವಿವಿಧ ಘಟನೆಗಳ ಚಿತ್ರಣವನ್ನು ಬರೆಯಲೇಬೇಕು ಅನ್ನುವ ಪಣವನ್ನು ಮನದಲ್ಲಿ ತೊಟ್ಟು. ಈ ಬಾರಿ ಕ್ರಿಸ್ಮಸ್ ಸಲುವಾಗಿ ಸಿಕ್ಕ ರಜೆಯಲ್ಲಿ ಈ ಲೇಖನವನ್ನು ಬರೆದಿರುವೆನು. ಒಂದು ಹತ್ತಾರು ನಿಮಿಷಗಳ ಕಾಲ ಬಿಡುವು ಮಾಡಿಕೊಂಡು ಓದಿರಿ,
ನನ್ನ ಅಪ್ಪಾಜಿಯವರ ಹೆಸರು ಶಾಂತಲಿಂಗಪ್ಪ ಅಂತ, ನನ್ನ ಅಪ್ಪಾಜಿಯವರ ತಾತನವರ ಹೆಸರು ಸಹ ಶಾಂತಲಿಂಗಪ್ಪ ಅಂತ ಇತ್ತಂತೆ. ಅವರ ನೆನಪಿನಗಾಗಿ ನನ್ನ ಅಪ್ಪಾಜಿಯವರಿಗೆ "ಶಾಂತಲಿಂಗಪ್ಪ" ಅನ್ನುವ ಹೆಸರನ್ನು ನನ್ನ ಅಜ್ಜ ಇಟ್ಟರಂತೆ.
ಅಪ್ಪಾಜಿಯವರು ಹೆಸರಿಗೆ ತಕ್ಕಹಾಗೆ ಬಲು ಶಾಂತ,ಅಷ್ಟೇ ಮೃದು ಸ್ವಭಾವದವರಾಗಿದ್ದರು. ತಾವಾಯಿತು, ತಮ್ಮ ಕೆಲಸವಾಯಿತು ಒಂದು ದಿನವೂ, ಒಂದು ಕ್ಷಣವೂ ಬೇರೆಯವರ ಗೋಜಿಗೆ ಹೋದವರಲ್ಲ. ಆದರೆ ವ್ಯವಹಾರದ ವಿಷಯದಲ್ಲಿ ಮಾತ್ರ ಯಾರಿಗೂ, ಎಂದೂ ತಲೆಬಾಗಿದವರಲ್ಲ ಅಷ್ಟೂ ಕಠಿಣ, ಅಷ್ಟೂ ಪಾರದರ್ಶಕ ಕೈಯಿ ಅವರದಾಗಿತ್ತು.
ನಾನು ಚಿಕ್ಕವನಿರುವಾಗ ಪ್ರತಿದಿನ ರಾತ್ರಿಯ ಬೀಡುವಿನ ವೇಳೆಯಲ್ಲಿ ತಮ್ಮ ಜೀವನದಲ್ಲಿ ನೆಡೆದ ಅನೇಕಾನೇಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಅಪ್ಪಾಜಿಯವರು ಹೇಳುತ್ತಾ ಇದ್ದರು. ಅವರು ಹೇಳಿದ ಹಲವಾರು ಘಟನೆಗಳಲ್ಲಿ ನನ್ನ ನೆನಪಿನಂಗಳದಲ್ಲಿ ಮಾಸದಂತೆ ಇರುವ ಕೆಲವನ್ನು ಇಲ್ಲಿ ಬರೆದಿರುವೆನು. ಓದುತ್ತಾ ಸಾಗಿರಿ...
*************************
1977 ರಲ್ಲಿ ನಡೆಯಲ್ಪಟ್ಟ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಫರ್ಧಿಸಿದ್ದರು. ಎಲ್ಲ ಪಕ್ಷದವರಿಂದ ಅಬ್ಬರದ ಚುನಾವಣಾ ಪ್ರಚಾರ ನಡೆಯುತ್ತಿತ್ತಂತೆ. ಇಂತಹ ಸನ್ನಿವೇಶದಲ್ಲಿ ಚುನಾವಣಾ ಪ್ರಚಾರಕ್ಕೆಂದು ಖುದ್ದಾಗಿ ಇಂದಿರಾಗಾಂಧಿ ನಮ್ಮೂರಿಗೆ ಬಂದಾಗ ನಮ್ಮೂರಿನ ಹೊರಭಾಗದಲ್ಲಿರುವ ಬಸ್ಸ್‌ಸ್ಟ್ಯಾಂಡಿನ ಸುತ್ತಲೂ ಬಹಳ ಜನ ಸೇರಿದ್ದರಂತೆ. ಆ ಸಂದರ್ಭದಲ್ಲಿ ಇಂದಿರಾಗಾಂಧಿಯವರು ತಾವು ಹಾಕಿಕೊಂಡಿದ್ದ ಹೂವಿನ ಹಾರವನ್ನು ಮಹಾ ಜನತೆಯತ್ತಾ ಎಸೆದಾಗ, ಇದ್ದ ಭಾರಿ ನೂಕುನುಗ್ಗಲಲ್ಲೂ ಇಂದಿರಾಗಾಂಧಿಯವರು ಎಸೆದ ಹಾರವನ್ನು ಅಪ್ಪಾಜಿಯವರು ಹಿಡಿದು, ಮನೆಯಲ್ಲಿ ತುಂಬಾ ದಿನಗಳವರೆಗೆ ಇಟ್ಟುಕೊಂಡಿದ್ದರಂತೆ.
*************************
ಅಪ್ಪಾಜಿಯವರು ಚಿಕ್ಕವರಿದ್ದಾಗ ಅವರ ಮೂರನೇ ಅಣ್ಣನ (ಅಂದರೆ ನನ್ನ ಮೂರನೇ ದೊಡ್ಡಪ್ಪ) ಜೊತೆ ದಿನಾಲೂ ತೋಟಕ್ಕೆ ಹೋಗಿ ಬರುತ್ತಿದ್ದರಂತೆ. ಆಗಿನ ಸಮಯದಲ್ಲಿ ಹಳ್ಳಿಗಾಡುಗಳ ಕಡೆ ಬೋರ್‌ವೇಲ್ ವ್ಯವಸ್ಥೆ ಇರಲಿಲ್ಲವಾದ್ದರಿಂದ ಕೆರೆ ನೀರನ್ನು ಹೊತ್ತು ತಂದು, ತೆಂಗಿನ ಸಸಿಗಳಿಗೆ ಹಾಯಿಸಿ ಅವುಗಳನ್ನು ಬೆಳೆಸುತ್ತಿದ್ದರು. ರಸ್ತೆಯ ಪಕ್ಕದಲ್ಲಿ ತೋಟವಿದ್ದರಿಂದ ಆಗಾಗ ಓಡಾಡುವ ವಾಹನಗಳಿಗೆಲ್ಲ ತೆಂಗಿನ ಗರಿಗಳು ಬಡಿಯುತ್ತಿದ್ದವಂತೆ. ತೆಂಗಿನ ಗರಿಗಳಿಗೆ ಆಗುತ್ತಿದ್ದ ನೋವನ್ನು ಸಹಿಸಲಾಗದೆ, ನಮ್ಮ ದೊಡ್ಡಪ್ಪ ಕೋಪಗೊಂಡು ತೆಂಗಿನ ಗರಿಯೊಂದಕ್ಕೆ ಕಲ್ಲು ಕಟ್ಟಿದ್ದರಂತೆ. ಪಂಚನಹಳ್ಳಿಯ ಕಡೆಯಿಂದ ಬಂದ ಗಜಾನನ ಎನ್ನುವ ಬಸ್ಸಿನ ಮುಂಭಾಗದ ಗ್ಲಾಸಿಗೆ ಕಲ್ಲು ಬಡಿದು ಗ್ಲಾಸು ಕ್ಷಣಾರ್ಧದಲ್ಲಿ ಪುಡಿಪುಡಿಯಾಯಿತಂತೆ. ನಮ್ಮ ದೊಡ್ಡಪ್ಪ ಅಲ್ಲಿಂದ ಮಿಂಚಿನ ವೇಗದಲ್ಲಿ ಪರಾರಿಯಾಗಿ ಹೋದರಂತೆ. ಆದರೆ ಅಪ್ಪಾಜಿಯವರು ಬಸ್ಸಿನವರ ಕೈಗೆ ಸಿಕ್ಕು ಅವರಿಂದ ಒಂದೆರಡು ಒದೆಯನ್ನು ತಿಂದಿದ್ದರಂತೆ. ಅದೂ ಅಲ್ಲದೇ ಬಸ್ಸಿನವರು ಅಪ್ಪಾಜಿಯವರನ್ನು ಬಸ್ಸಿನಲ್ಲಿ ಕೂರಿಸಿಕೊಂಡು ಹೋಗಿ ನಮ್ಮೂರಿನಿಂದ ನಾಲ್ಕು ಕೀಲೋಮೀಟರು ದೂರದಲ್ಲಿರುವ ಬಿದರೆ ಗುಡ್ಡದ ಹತ್ತಿರ ಬಿಟ್ಟು ಹೋಗಿದ್ದರಂತೆ!
*************************
ನಾನು ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಓದುತ್ತಾ ಇದ್ದೆ. ಮನೆಯ ಖರ್ಚು, ನನ್ನ ಓದಿನ ಖರ್ಚು ಹಾಗೂ ಇನ್ನಿತರೆ ಖರ್ಚುಗಳು ಅಪ್ಪಾಜಿಯವರಿಗೆ ಸ್ಪಲ್ಪ ಹೊರೆಯಾಗಿದ್ದವು. ಅಲ್ಲದೆ ಅವರಿಗೆ ಪಿತ್ರಾರ್ಜಿತವಾಗಿ ಬಂದದ್ದು ಕಣ್ಣ ಅಳತೆಯಲ್ಲೇ ಅಳೆಯ ಬಹುದಾದಷ್ಟು ಆಸ್ತಿ. ಆದರೆ ಇದರ ಬಗ್ಗೆ ಅರೆಕ್ಷಣ ಯೋಚಿಸುತ್ತಾ ಕುಳಿತವರಲ್ಲ. ಅವರಲ್ಲಿದ್ದ ಮುಗ್ಧ ಉತ್ಸಾಹ ಹಾಗೂ ಗಾಢ ಅಲೋಚನಾ ಲಹರಿಯ ಪರಿಣಾಮವಾಗಿ ಎಲ್ಲವನ್ನೂ ಬಹಳ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು. ಅದೇ ಸಮಯದಲ್ಲಿ ಅಪ್ಪಾಜಿಯವರು ನಮ್ಮ ಜಮೀನಿನ ಪಕ್ಕದಲ್ಲಿ ಒಂದಿಷ್ಟು ಹೊಸ ಜಮೀನನ್ನು ಖರೀದಿಸಿದರು. ಆಳುಗಳ ಸಹಾಯದಿಂದ ಅದರ ಸುತ್ತಲೂ ತಂತಿ ಕಂಬ ಹಾಕಿಸಿ, ತೆಂಗಿನಸಸಿಗಳನ್ನು ನೆಡಿಸಿದರು. ಅಮ್ಮನಿಗೆ ಇದು ಎಳ್ಳಷ್ಟೂ ಇಷ್ಟವಾಗದೇ ಅಪ್ಪಾಜಿಯವರ ಜೊತೆ ಜಗಳ ಮಾಡಿಕೊಂಡಿದ್ದರು. ಎಷ್ಟೋ ಸಾರಿ ಆಳುಗಳು ಕೆಲಸಕ್ಕೆ ಬರುತ್ತೇವೆ ಎಂದು ಹೇಳಿ ಕೈಕೊಡುತ್ತಿದ್ದಂತಹ ಸಮಯದಲ್ಲಿ ಅಮ್ಮ,, ಅಪ್ಪಾಜಿ ಇಬ್ಬರೂ ಸೇರಿ ಕೆರೆಯಿಂದ ನೀರನ್ನು ಹೊತ್ತುತಂದು ತೆಂಗಿನ ಸಸಿಗಳಿಗೆ ಹಾಕುತ್ತಿದ್ದರು. ಅವರ ಒಂದು ಅವಿರತ ಪರಿಶ್ರಮದ ಫಲವಾಗಿ ಐದಾರು ವರುಷಗಳಲ್ಲಿ ತೆಂಗಿನ ಸಸಿಗಳು ಫಲಕೊಡಲು ಆರಂಭಿಸಿದವು.
*************************
ಮದುವೆ ಇಲ್ಲವೇ ಇನ್ನಿತರ ಶುಭ ಸಮಾರಂಭಗಳಿಗೆ ಆಹ್ವಾನ ಬಂದಾಗಲೆಲ್ಲ ಅಪ್ಪಾಜಿಯವರು ಹೋಗುತ್ತಿದ್ದದ್ದು ತೀರ ಕಡಿಮೆ. ಆದರೆ ಅಮ್ಮ ಯಾವ ಸಮಾರಂಭಗಳಿಗೆ ತಪ್ಪಿಸದೆ ಹೋಗುತ್ತಿದ್ದರು. ಅಮ್ಮ ಮನೆಯಲ್ಲಿ ಇರದ ಸಂದರ್ಭದಲ್ಲಿ ಅಡುಗೆ ಮನೆಯ ಉಸ್ತುವಾರಿಯನ್ನು ಅನ್ಯಮಾರ್ಗವಿಲ್ಲದೇ ಅಪ್ಪಾಜಿಯವರೇ ವಹಿಸಿಕೊಳ್ಳಬೇಕಾಗಿತ್ತು.ಅಪ್ಪಾಜಿಯವರಿಗೆ ಮಾಡಲು ಬರುತ್ತಿದ್ದ ಅಡುಗೆ ಒಂದೇ ಒಂದು ಅದು ಉಪ್ಪಿಟ್ಟು! ಬೆಳಗಿನ ತಿಂಡಿಗೆಂದು ಮಾಡಿದ ಉಪ್ಪಿಟ್ಟುನ್ನು ಮಧ್ಯಾಹ್ನದ ಊಟಕ್ಕೂ ಅದನ್ನೇ ತಿನ್ನಬೇಕಾಗಿತ್ತು.ರಾತ್ರಿ ಊಟಕ್ಕೆ ಅನ್ನ ಮಾಡುತ್ತಿದ್ದರು ಅವರಿಗೆ ಸಂಬಾರು ಮಾಡಲು ಬರುತ್ತಿರಲ್ಲಿಲ್ಲವಾದ್ದರಿಂದ ಅನ್ನಕ್ಕೆ ಕಲಸಿಕೊಳ್ಳಲು ಮೊಸರೇ ಗತಿಯಾಗಿರುತ್ತಿತ್ತು, ಅದರ ಜೊತೆಗೆ ಉಪ್ಪಿನಕಾಯಿ ನೆಂಚಿಕೆಗೆ ಇರುತ್ತಿತ್ತು. ಅಮ್ಮ ಏನಾದರೂ ದೀರ್ಘ ದಿನಗಳ ಕಾಲ ನೆಂಟರ ಊರುಗಳಿಗೆ ಪ್ರವಾಸ ಹೋದರೆ ಅಪ್ಪಾಜಿಯವರು ತಮ್ಮ ಅಡುಗೆ ಮಾಡುವ ಕೆಲಸಕ್ಕೆ ತೀಲಾಂಜಲಿಯನ್ನು ಇಟ್ಟು. ಬೆಳಗಿನ ತಿಂಡಿಗೆಂದು ನಮ್ಮೂರ ಪಕ್ಕದ ಬಿದರೆಯ ನಟರಾಜ್ ಅಣ್ಣನ ಹೋಟೆಲಿನಿಂದ ಬಿಸಿ ಬಿಸಿ ಇಡ್ಲಿ ತರುತ್ತಿದ್ದರು. ಆ ದಿನಗಳಲ್ಲಿ ಹತ್ತು ರೂಪಾಯಿಗಳಲ್ಲಿ ಅಪ್ಪಾಜಿ, ನಾನು ಹಾಗೂ ಶೀಲಾ ಮೂವರು ತಿಂದರೂ ಇನ್ನೂ ಮಿಗುವಷ್ಟು ಇಡ್ಲಿ ಬರುತ್ತಿದ್ದವು. ಒಮ್ಮೊಮ್ಮೆ ರಾತ್ರಿಯ ವೇಳೆಯ ಊಟಕ್ಕೆ ಮೊದಲನೇ ದೊಡ್ಡಪ್ಪನವರ ಮನೆಗೆ ಹೋಗುತ್ತಿದ್ವಿ. ನಮ್ಮ ದೊಡ್ಡಮ್ಮನ ಕೈಯಿಯ ಬಹಳ ಖಾರವಾದ ಸಂಬಾರಿನ ಸವಿಯನ್ನು ಸವಿದು ಬರುತ್ತಿದ್ದೇವು/ (ಮುಂದುವರೆಯುವುದು.....).
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಸೋಮವಾರ, ಜನವರಿ 5, 2009
ಈ ಹೊಸದಾದ ವರುಷ│ ಪ್ರತಿ ಕ್ಷಣ ಪ್ರತಿ ನಿಮಿಷ│
ಹೊಸ ವರುಷಕ್ಕೆರಡು ಕವನಗಳು, ಕವನ ೧
ಈ ಹೊಸದಾದ ವರುಷ│ ಪ್ರತಿ ಕ್ಷಣ ಪ್ರತಿ ನಿಮಿಷ│
ಎಲ್ಲರ ಬಾಳಲಿ ತರಲಿ ತುಂಬು ಹರುಷ│
ಈ ದಿನದಿಂದ│ ಈ ಕ್ಷಣದಿಂದ│
ಮುಖದಲಿ ಸದಾ ಬೀರುತಾ ಸಂತಸ│
ಬದುಕಲಿ ಸದಾ ತೋರುತಾ ಸೊಗಸ│
ಇರುವೆಡೆಯೆಲ್ಲ ನಾವ್ ಹಂಚುತಾ ಉಲ್ಲಾಸ│
ಧರೆಯ ಆಗಿಸೋಣ ನವಿರು ಕಳೆಯ ನಿವಾಸ│
ಅದ ನೋಡಿ ಬೆಕ್ಕಸ ಬೆರಗು ಆಗಲಿ ಆ ಕೈಲಾಸ!
ಹೀಗೆ ಮೂಡಿಬಂದ ಮುಗುಳ್ನಗೆ│
ನಾಂದಿಯಾಗಲಿ ಹೊಸ ಬಗೆಯ ಗೆಲುವಿಗೆ│
ಔಷದವಾಗಲಿ ಒಳಮನದ ನೋವಿಗೆ│
ಅರಳಿಸಲಿ ಹೊಸಬಯಕೆಗಳ ಮಲ್ಲಿಗೆ│
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
(ಚಿತ್ರಕೃಪೆ http://www.shubhashaya.com)
ಬನ್ನಿ ಗೆಳೆಯರೇ ಬನ್ನಿ
ಎಲ್ಲರೂ ಒಂದುಗೂಡಿ ಬನ್ನಿ│
ನಾವು ನೀವೆಲ್ಲರೂ ಸೇರಿ
ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ│
ಆಚರಿಸುವ ಹೊಸ ವರುಷವ│
ಸಂಭ್ರಮಿಸಿ ಸವಿಯುವ ನವ ಹರುಷವ│
ಹಿಂದಣದ ಕಹಿಯನು
ಮರೆವಿನ ಹಾದಿಯಲ್ಲೇ ಮರೆತು│
ಮುಂದಣದ ಏಳಿಗೆಯ ಹಾದಿಯನು
ಮರೆಯದ ಮನದಿಂದ ನೆನೆದು│
ಒಬ್ಬರನೊಬ್ಬರು ಅಂತರಾಳದಿಂದ ಅರಿತು│
ಸಂತಸದ ಸವಿ ಸೊದೆಯಲಿ ಬೆರೆತು│
ನಮ್ಮೆಲ್ಲರ ಭವಿಷ್ಯದ ಹಾಡಿಗೆ ಬೆಳಕಾಗುವ ರಸ ಕವಿತೆಯೊಂದು
ರಚಿಸುತಾ ಕಣಿದು ಕುಣಿದು ಹಾಡುವ ಬನ್ನಿ!
- ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಬುಧವಾರ, ಡಿಸೆಂಬರ್ 17, 2008
ಓ ಮೌನವೇ ನೀ ಮಾತಾಡು│

ಓ ಮೌನವೇ ನೀ ಮಾತಾಡು│
ಹೊಳಪು ತುಂಬಿದ ಕಣ್ಣಲೇ
ನೀ ನನ್ನ ಕೊಲ್ಲುವುದ ಸಾಕು ಮಾಡು│
ಓ ಮೌನವೇ ನೀ ಮಾತಾಡು│
ತೆರೆದು ನಿನ್ನ ತುಟಿಯಂಚು│
ಮಾತಾಗಲಿ ನಿನ್ನ ಮೌನ│ಹಾಡಾಗಲಿ ನಿನ್ನ ಮಾತು│
ಆ ಹಾಡಲಿ ನನ್ನೆಡೆಗೆ ಒಲವಿನ ಭಾವ ಇರಲಿ│
ಪ್ರೀತಿ ಪ್ರಣಯದ ರಾಗವಿರಲಿ│
ಎಲ್ಲರೆದುರು ಆ ಹಾಡ ಗೆಳತಿ ಮನಬಿಚ್ಚಿ ನೀ ಹಾಡು│
ಕೇಳಿ ಆ ನಿನ್ನ ಹಾಡು ಮೆಚ್ಚಲಿ ನಾಡು│
ನನ್ನೆದೆಯ ಮರುಭೂಮಿಯಾಗಲಿ ಹಸಿರು ಕಾಡು│
ಓ ಗೆಳತಿ ಹೇಳು.. ಗುಟ್ಟಾಗಿ ನನಗೆ ಹೇಳು
ಎಂದು ತೊರೆಯುವೆ ಆ ನಿನ್ನ ಮೌನ?
ಎಂದು ಹಾಡಾಗುವುದು ಆ ನಿನ್ನ ಮಾತು?
ಇದನು ನೀ ಹೇಳುವವರೆಗೂ ನೆಮ್ಮದಿಯಾಗಿ
ನಿದ್ರಿಸೆನು ನಾನಂತು!
ಬುಧವಾರ, ಡಿಸೆಂಬರ್ 10, 2008
ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)

ನಿಲ್ಲು ನಿಲ್ಲು ನನ್ನ ಕಂಡು
ಏಕೆ ನೀ ಕಂಗೆಟ್ಟು ಓಡುತ್ತಿರುವೇ? ನಿಲ್ಲು
ಓ ಭಯೋತ್ಪಾದಕ ನಾನಲ್ಲ ನಿನ್ನ ಪಾಲಿನ ಅಂತಕ
ನಾ ಭಾರತ ಮಾತೆಯ ಮಡಿಲ ಎಳೆಯ ಬಾಲಕ
ಅವಳ ಸೇವೆಯೇ ನನ್ನ ಪಾಲಿಗೆ ಒಲಿದಿರುವ ಕಾಯಕ
ನಾ ನಿನ್ನಲಿಗೆ ಬಂದಿರುವೆ ಕೇಳಲೆಂದು ನಿನಗೆ ಹಲವು ಪ್ರಶ್ನೆ
ಮಾಡದೆ ನನಗೆ ಹಿಂಸೆ ಬಗೆ ಹರಿಸುವೆಯಾ ನನ್ನಯ ಪ್ರಶ್ನೆ?
ಓ ಭಯೋತ್ಪಾದಕನೇ..
ಜಗದಲಿ ಅಮಾಯಕ ಜನರ ನೀ ಏಕೆ ಕೊಲ್ಲುವೇ?
ಇದಕ್ಕೆಲ್ಲ ನಿನಗೆ ಯಾರು ಅಂತಹ ಪ್ರೇರಣೆ?
ಪ್ರೇರಣೆ ಯಾರಾದರೇನು? ಜಗದಲಿ ನೆಡೆವ
ವಿದ್ವಂಸಕ ಕೃತ್ಯಗಳಿಗೆಲ್ಲ ನೀನ್ ತಾನೆ ನೇರ ಹೊಣೆ?
ಓ ಭಯೋತ್ಪಾದಕನೇ..
ಬುದ್ದಿ ಮಾತೊಂದು ನಾ ಹೇಳುವೆ ನೀ ಕೇಳು ಸುಮ್ಮನೆ
ಮನುಜನೇ ನೀ ಆದರೆ ಒಮ್ಮೆ ಮಾಡಿ ಸರಿ ಯೋಚನೆ
ಈ ಭಯೋತ್ಪಾದನೆಯ ಇಂದಿಗೆ ನೀ ಮಾಡು ಕೊನೆ
ಧರೆಯನು ಆಗಲು ಬಿಡು ಶಾಂತಿ ತುಂಬಿದ ಮನೆ
ಓ ಭಯೋತ್ಪಾದಕನೇ..
ನಾ ಆದ ಮೇಲೆ ಯುವಕ ತೊಟ್ಟು ಶಾಂತಿ ದ್ಯೋತಕ
ಆಗಲಿರುವೆನು ಮಾನವೀಯತೆಯ ಪೊರೆವ ಸೇವಕ
ಆಗಲಿರುವೆನು ನಿನಗೆ ನೀತಿಪಾಠವ ಕಲಿಸುವ ಸೈನಿಕ
ಭೂವಿಯಲಿ ಎಲ್ಲೆಡೆ ಮಾಡಿ ಅಹಿಂಸೆಯ ಸಂಗ್ರಾಮ
ಭಯೋತ್ಪಾದನೆಗೆ ನಾ ಇರಿಸುವೆನು ಪೂರ್ಣವಿರಾಮ!
ಅಬ್ಬಾ! ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?

(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ್ಲೇನಹಳ್ಳಿ). ಒಮ್ಮೆ ಓದಲು ಮರೆಯದಿರಿ.
ನಾನು ನಾಲ್ಕನೇ ತರಗತಿ ಓದುತ್ತಿರುವಾಗಿನಿಂದಲೇ ನಮ್ಮೂರಲ್ಲಿ ತರಿಸುತ್ತಿದ್ದ ಪ್ರಜಾವಾಣಿ ದಿನಪತ್ರಿಕೆಯನ್ನು ಪ್ರತಿನಿತ್ಯ ತಪ್ಪಿಸದೆ ಓದುತ್ತಿದೆ. ಆಗ ಪತ್ರಿಕೆಯ ಮುಖಪುಟದಲ್ಲಿ ಬರುತ್ತಿದ್ದ ಪ್ರಮುಖ ವಿಷಯಗಳಾದ, ಶ್ರೀಲಂಕಾದಲ್ಲಿ ಎಲ್.ಟಿ.ಟಿ.ಇ ಹಾಗೂ ಸೇನೆ ನಡುವೆ ಭೀಕರ ಕದನ ಇನ್ನೂರಕ್ಕು ಹೆಚ್ಚು ಸಾವು, ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ ನೂರ ಜನರ ಸಾವು ಈ ರೀತಿಯ ಇನ್ನೂ ಹತ್ತು ಹಲವಾರು ವಿಷಯಗಳನ್ನು ಓದಿದ ಆ ಕ್ಷಣದಲ್ಲಿ “ಅಬ್ಬಾ! ಆ ದೇಶಗಳಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?” ಎನ್ನುವ ಭಯ ಆವರಿಸಿದ ಚಿಂತನೆಯಲ್ಲಿ ನಾನು ಮುಳುಗಿಬಿಡುತ್ತಿದ್ದೆ.
ಆದರೆ ಮೊನ್ನೆ ಅಂದರೆ ನವೆಂಬರ್-26 ರಂದು ಮುಂಬಯಿ ಮಹಾನಗರಿಯಲ್ಲಿ ಉಗ್ರರಿಂದ ನೆಡೆಯಲ್ಪಟ್ಟ ರಕ್ತಸಿಕ್ತ ಕೃತ್ಯಕ್ಕೆ ಬರಿ ಭಾರತ ದೇಶವಲ್ಲದೆ ಇಡಿ ಮನುಕುಲ ಜಗತ್ತೆ ಮಮ್ಮಲು ಮರುಗಿತು. ಈವರೆಗೆ ವಿಶ್ವದಲ್ಲಿ ನೆಡೆದು ಹೋಗಿರುವ ಸಾವಿರಾರು ಮಾನವೀಯತೆಗೆ ಕಳಂಕ ತಂದಿರುವ ಘಟನೆಗಳ ಸಾಲಿಗೆ ನವೆಂಬರ್ 26ರ ಘಟನೆಯೂ ಸೇರಿ ಹೋಯಿತು.
ಈವೊಂದು ಸಂದರ್ಭದಲ್ಲಿ ವಿಶ್ವದ ಇನ್ನಿತರ ದೇಶಗಳ ಜನರುಗಳು, “ಅಬ್ಬಾ ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?” ಎಂದು ನಾನು ಚಿಕ್ಕಂದಿನಲ್ಲಿ ಶ್ರೀಲಂಕಾ, ಪಾಕಿಸ್ತಾನಗಳ ಜನರ ಬಗ್ಗೆ ಯೋಚಿಸಿದ ರೀತಿ ಈಗ ಅವರುಗಳು ನಮ್ಮ ಭಾರತದ ಜನರ ಕುರಿತು ಯೋಚಿಸುತ್ತಿರುತ್ತಾರೆ.
ನಮ್ಮ ದೇಶ 1947ರಲ್ಲಿ ಸ್ವಾತಂತ್ರಗಳಿಸಿಕೊಂಡ ನಂತರದಿಂದ ಕಾಶ್ಮೀರದಲ್ಲಿ ಆಗಾಗ ಉಗ್ರರಿಂದ ನೆಡೆಯುತ್ತಿರುವ ಮರಣಹೋಮದ ಘಟನೆಗಳನ್ನು ಬಿಟ್ಟು ಮಿಕ್ಕೆಲ್ಲ ರಾಜ್ಯಗಳಲ್ಲಿ ಉಗ್ರರಿಂದ ಅಂತಹ ಅಘಾತಕಾರಿ ಸನ್ನಿವೇಶಗಳು ನೆಡೆದದ್ದು ಬಲುವಿರಳ. ಆದರೆ 1993ರಲ್ಲಿ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ನಂತರ ದಿನಗಳಲ್ಲಿ ಭಾರತದ ಬಹುತೇಕ ನಗರ ಪ್ರದೇಶಗಳು ಬದುಕಲು ಒಂದು ನೆಮ್ಮದಿಯ ತಾಣವಾಗಿ ಉಳಿದಿವೆಯೇ? ಎನ್ನುವ ಪ್ರಶ್ನೆಗೆ, ಇಲ್ಲ ಎನ್ನುವುದೊಂದೆ ಇರುವ ಪ್ರಮಾಣಿಕ ಉತ್ತರ. ಕನಿಷ್ಟ ಪಕ್ಷ ವರುಷಕ್ಕೆ ಮೂರು-ನಾಲ್ಕು ಹೃದಯ ವಿದ್ರಾವಕ ಘಟನೆಗಳು ಉಗ್ರರಿಂದ ಮುಂಬಯಿ, ದೆಹಲಿ, ಬೆಂಗಳೂರು ಅಹಮದಬಾದ್‌ಗಳಂತಹ ನಗರಗಳಲ್ಲಿ ನೆಡೆಯುತ್ತಲೇ ಇರುತ್ತವೆ.
ಇದಕ್ಕೆ ಪೂರಕವಾಗಿ 2007-2008ರಲ್ಲಿ ಭಾರತದಲ್ಲಿ ನೆಡೆದಿರುವ ಮಾರಕ ಘಟನೆಗಳು ಒಂದಾ-ಎರಡಾ? ದೆಹಲಿಯಲ್ಲಿ ಬಾಂಬ್ ಸ್ಪೋಟ ಐವತ್ತಕ್ಕೂ ಹೆಚ್ಚು ಸಾವು, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಮೇಲೆ ದಾಳಿ, ಮತ್ತೆ ಅದೇ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟ, ಅಹಮದಬಾದ್‌ನಲ್ಲಿ ಬಾಂಬ್ ಸ್ಪೋಟ, ಮತಾಂತರದ ಗಲಭೆ, ನಕ್ಸಲರ ಗಲಭೆ, ಕಾಶ್ಮೀರದಲ್ಲಂತೂ ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅಮಾಯಕ ಜನರ ಮರಣಹೋಮ ನೆಡೆಯುತ್ತಲೇ ಇರುತ್ತದೆ.. ಈಗ ಮುಂಬಯಿಯಲ್ಲಿ 2೦೦ಕ್ಕೂ ಹೆಚ್ಚು ಅಮಾಯಕ ಜನರ ರಕ್ತದೊಕುಳಿ ಹರಿಸಿದ್ದಾರೆ ಉಗ್ರರು..ಹೀಗೆ ಹೇಳುತ್ತಾ ಹೋದರೆ ಇನ್ನೂ ಬಹಳಷ್ಟಿವೆ.
ನಮ್ಮ ಬಡಭಾರತವು ಮೊದಲೇ ಒಂದು ಅಭಿವೃದ್ಧಿಶೀಲ ರಾಷ್ಟ್ರ, ಉಗ್ರಗಾಮಿಗಳು ಹೀಗೆ ಸಾಲು ಸಾಲು ಹೀನಕೃತ್ಯಗಳನ್ನು ನೆಡೆಸುತ್ತಾ ಹೋದರೆ, ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಯಾವ ಅಂತಕ್ಕೆ ಬರಬಹುದು? ನೀವೇ ಯೋಚಿಸಿ? ಮೊನ್ನೆಯ ಘಟನೆಯಲ್ಲಿ ಬರಿ ಹತ್ತು ಜನ ಉಗ್ರರಿಂದ ಉಂಟಾದ ಜೀವ ನಷ್ಟ ಹತ್ತಿರ ಹತ್ತಿರ ಇನ್ನೂರು, ಉಂಟಾದ ಆರ್ಥಿಕ ನಷ್ಟ ಸುಮಾರು ನಾಲ್ಕು ಸಾವಿರ ಕೋಟಿಗಳು. ಅಂದರೆ ಕೇವಲ ಮೂರು ದಿನಗಳಲ್ಲಿ ಆದ ನಷ್ಟ ನಮ್ಮ ದೇಶದ ರಕ್ಷಣಾ ವೆಚ್ಚದ ಹತ್ತನೇಯ ಒಂದು ಪಾಲು (1/1೦).
ನಮ್ಮ ಕೇಂದ್ರ ಹಾಗೂ ನಮ್ಮ ನಮ್ಮ ರಾಜ್ಯ ಸರಕಾರಗಳ ಅಸಡ್ಡೆತನವನ್ನು ಕಂಡು ನಗಬೇಕೋ? ಇಲ್ಲವೇ ಅಳಬೇಕೋ? ಒಂದು ತಿಳಿಯದು. ಇಂತಹ ಈ ಹೇಯ ಘಟನೆಗಳು ನೆಡೆದ ಮುರುಕ್ಷಣದಲ್ಲೇ ಉಗ್ರಗಾಮಿಗಳಿಗೆ ಹಾಗೆ ಮಾಡುತ್ತೇವೆ..ಹೀಗೆ ಮಾಡುತ್ತೇವೆ ಎನ್ನುವ ಪೊಳ್ಳು ಅಶ್ವಾಸನೆಯನ್ನು ನಮ್ಮ ಸರಕಾರ ಕೊಡುವುದು ಸರ್ವೇಸಾಮಾನ್ಯ. ಆದರೆ ಕಾಲಕ್ರಮೇಣ ಇದೇ ಸರಕಾರ ಎಲ್ಲವನ್ನು ಮರೆತು ಸುಮ್ಮನಾಗಿ ಬಿಡುತ್ತದೆ. ಮತ್ತೊಂದು ಇಂತಹ ಅಹಿತಕರ ಘಟನೆ ನೆಡೆದಾಗ ಮತ್ತೆ ಅದೇ ಲೋಕ ಮೆಚ್ಚುವ ಹೇಳಿಕೆಗಳನ್ನು ಕೊಡುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಉಗ್ರಗಾಮಿಗಳು ನೆಡೆಸುವ ಇಂತಹ ಹೀನ ಕೃತ್ಯಗಳಿಗೆ ನೂರಾರು ಅಮಾಯಕರು ಹಾಗೂ ನಮ್ಮ ಯೋಧರು ಬಲಿಯಾಗುವುದಂತು ಸತ್ಯ. ಮಿಕ್ಕೆಲ್ಲ ವಿಚಾರಗಳು ಮಿಥ್ಯ ಅಂದರೆ ಉಗ್ರರನ್ನು ಮಟ್ಟ ಹಾಕುವ, ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸುವ, ನಮ್ಮ ದೇಶವನ್ನು ಶಾಂತಿನಾಡಾಗಿಸುವ ವಿಚಾರ.. ಇನ್ನೂ ಮುಂತಾದವು.
"ಇದನ್ನೆಲ್ಲ ಗಮನಿಸುತ್ತಾ ಹೋದರೆ ಸರಕಾರ ಭಯೋತ್ಪಾದನೆಯನ್ನು ನಿಯಂತ್ರಸುತ್ತದೇಯೋ? ಇಲ್ಲ ಭಯೋತ್ಪಾದನೆಯೇ ಸರಕಾರವನ್ನು ನಿಯಂತ್ರಸುತ್ತಿದೇಯೋ?" ಎನ್ನುವ ಅನುಮಾನ ನಮ್ಮನ್ನು ಕಾಡುವುದು ಸಹಜ. “ನಮ್ಮ ಸರಕಾರ ಎಚ್ಚೆತ್ತು ಕೊಳ್ಳುವುದಾದರೂ ಎಂದು? ನಮ್ಮ ರಕ್ಷಣಾ ವ್ಯವಸ್ಥೆ ಇಡಿ ವಿಶ್ವದಲೇ ಅಷ್ಟನೇ ಸ್ಥಾನದಲ್ಲಿ ಇದೇ, ಇಷ್ಟನೇ ಸ್ಥಾನದಲ್ಲಿ ಇದೇ ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟು ಉಗ್ರರನ್ನು ತ್ವರಿತವಾಗಿ ಹೇಗೆ ಮಟ್ಟ ಹಾಕಬೇಕು” ಎನ್ನುವ ವಿಚಾರದ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ.
ಪ್ರತಿವರುಷವೂ ಬಜೆಟ್‌ನಲ್ಲಿ ಕೇಂದ್ರ ಸರಕಾರ ನಮ್ಮ ದೇಶದ ರಕ್ಷಣಾ ವ್ಯವಸ್ಥೆಗೆಂದೆ ಸುಮಾರು 40 ಸಾವಿರದಿಂದ 45 ಸಾವಿರ ಕೋಟಿಗಳವರೆಗೂ ಮೀಸಲು ಇಡುತ್ತದೆ. ಆದರೆ ರಕ್ಷಣಾ ಇಲಾಖೆಯಲ್ಲಿರುವ ಬಹುತೇಕ ಪೋಲಿಸ್‌ರ ಬಳಿಯಾಗಲಿ ಇಲ್ಲವೇ ಯೋಧರ ಬಳಿಯಾಗಲಿ ಇರುವುದು 303 ರೈಫಲ್‌ಗಳಂತೆ (ಸುಮಾರು ನಲವತ್ತು ವರುಷಗಳಿಂದ ನಮ್ಮೂರ ನಂಜುಂಡಜ್ಜನ ಬಳಿಯಲ್ಲೂ ಇರೊದು ಅದೇ ಮಾಡೆಲ್‌ನ ರೈಫಲ್!), ಗುಂಡು ನಿರೋಧಕ ಕವಚಗಳು ನೂರಕ್ಕೆ ಹತ್ತು ಇಲ್ಲವೇ ಇಪ್ಪತ್ತು ಜನರ ಇವೆಯಂತೆ. ಇದು ಎಂತಹ ವಿಪರ್ಯಾಸ ನೋಡಿ. ಅಲ್ಲದೇ ಕಠಿಣ ತರಬೇತಿ ಪಡೆದ ಬಹುತೇಕ ಕುಶಲಯೋಧರು (ಊದಾ: NSG Commands). ನಮ್ಮ ದೇಶದ ರಕ್ಷಣೆಯಲ್ಲಿ ಕಾರ್ಯನಿರ್ವಹಿಸದೆ ನಮ್ಮ ರಾಜಕಾರಣಿಗಳ ಕಾವಲುಗಾರನಾಗಿ ಕೆಲಸ ಮಾಡಬೇಕು. “ಮಳ್ಳರೂಪದ ಕಳ್ಳರ ರಕ್ಷಣೆಗೆ ಕಾವಲುಗಾರರಾಗಿ ನಮ್ಮ ಯೋಧರುಗಳು ಇರಬೇಕೇ??”
ಇಷ್ಟೆಲ್ಲಾ ಉಪಯೋಗ ಪಡೆದುಕೊಳ್ಳುವ ರಾಜಕಾರಣಿಗಳು ಬೊಕ್ಕಸದಿಂದ ಹಣವನ್ನು ನೆರವಿನ ರೂಪದಲ್ಲಿ ಕೊಡುವ ಬದಲು ತಮ್ಮ ಒಂದು ತಿಂಗಳ ವೇತನವನ್ನು (ಸಂಸತ್ ಸದಸ್ಯರು, ರಾಜ್ಯಗಳ ವಿಧಾನ ಸಭೆಯ ಸದಸ್ಯರುಗಳು) ನೆರವಿನ ರೂಪದಲ್ಲಿ ಕೊಡಲಿ. ಆಗ ಅದು ನಿಜವಾದ ನೆರವಿನ ಧನವೆಂದು ಅನಿಸಿಕೊಳ್ಳತ್ತದೆ.
ಇನ್ನೂ ಇಡಿ ದೇಶವೇ ಶೋಕಸಾಗರದಲ್ಲಿ ಮುಳುಗಿದ್ದ ಆ ದಿನದಂದು ನಮ್ಮ ದೇಶದ ಭಾವಿ ಪ್ರಧಾನಿಯೆಂದು ಬಿಂಬತವಾಗಿರುವ ರಾಹುಲ್‌ಗಾಂಧೀ ಗೆಳೆಯನ ಮದುವೆ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದನಂತೆ. ನೋಡಿ ದೇಶವನ್ನು ಆಳುವುದಕ್ಕೆ ಇಂತಹವರುಗಳನ್ನು ನಾವುಗಳು ಆಯ್ಕೆಮಾಡಿ ಕಳಿಸುತ್ತೇವೆ. ಇಷ್ಟೆಲ್ಲಾ ಮಾಡುವ ಅವರಿಗೆ, ನಮ್ಮ ಕೇಂದ್ರ ಸರಕಾರಕ್ಕೆ ಉಗ್ರರನ್ನು ಹತ್ತಿಕ್ಕಲು ಹೋರಾಡಿ ಪ್ರಾಣತೆತ್ತ ಯೋಧರ ಗೌರವರ್ಥವಾಗಿ ಒಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಬೇಕೆಂಬ ಒಂದು ಸಾಮಾನ್ಯ ಪರಿಜ್ಞಾನ ಇದ್ದಂತಿಲ್ಲ!
ಒಂದೆಡೆ ಉಗ್ರರು ನಮ್ಮ ದೇಶದ ಮಾನವನ್ನು, ಅಮಾಯಕ ಜನರ ಪ್ರಾಣವನ್ನು ಬಹಿರಂಗವಾಗಿ ಹರಾಜು ಹಾಕುತ್ತಿದ್ದರೆ, ಇನ್ನೊಂದೆಡೆ ಈ ನಮ್ಮ ರಾಜಕಾರಣಿಗಳು ಹಾಗೂ ಭ್ರಷ್ಟಸರಕಾರಿ ಅಧಿಕಾರಿಗಳು ಅಂತರಿಕವಾಗಿ ನಮ್ಮ ದೇಶವನ್ನು ಸುಲಿಗೆ ಮಾಡುತ್ತಿದ್ದಾರೆ.
“ಇಂತಹ ಒಂದು ದೇಶವನ್ನು ರಾಮರಾಜ್ಯವಾಗಿಸುವ ಕನಸನ್ನು ನಾನು ಕಂಡಿದ್ದೆನಾ?” ಎಂದು ಪರಲೋಕದಲ್ಲಿರುವ ಮಹಾತ್ಮ ಗಾಂಧೀಜಿಯವರ ಆತ್ಮ ಅಂದುಕೊಂಡೀತು ಜೋಕೆ!
ಕೊನೆಯದಾಗಿ.. ಭಾರತ ದೇಶದ ಪ್ರಜೆಗಳಾದ ನಾವುಗಳು ಸಹ ಕಲಿಯಬೇಕಿರುವುದು ಬಹಳಷ್ಟಿದೆ.
“ಕ್ರಿಕೆಟ್” ಎನ್ನುವ ಆಟಕ್ಕೆ ಕೊಡುವ ಮಹತ್ವವನ್ನು ನಾವುಗಳು ದೇಶವು ಶೋಚನೀಯ ಪರಿಸ್ಥಿತಿಯಲ್ಲಿರುವಾಗಲೂ ಕೊಡುವುದಿಲ್ಲ. ಅವರುಗಳು ಆಟದಲ್ಲಿ ಗೆಲ್ಲಲಿ ಎಂದು ಹೋಮ, ಪೂಜೆ, ಪುನಸ್ಕಾರ ಎಲ್ಲ ಮಾಡುತ್ತೇವೆ. ಕ್ರಿಕೆಟ್ ಆಟಗಾರರಿಂದ ದೇಶಕ್ಕೆ ಆಗಿರುವ, ಇಲ್ಲವೇ ನಮಗೆ ಆಗಿರುವ ಅನುಕೂಲಗಳೇನು? ಎಂದು ನಾವು ಯಾವತ್ತಾದರೂ ಯೋಚಿಸಿದ್ದೇವೆಯೇ? ಇದು ಒಂದು ಉದಾಹರಣೆಯಷ್ಟೇ, ಇಂತಹ ನೂರೆಂಟು ಉದಾಹರಣೆಗಳಿವೆ. ಹಾಗಂತ ಕ್ರಿಕೆಟ್ ಆಟಗಾರರನ್ನು ದೂಶಣೆ ಮಾಡುವ ಪ್ರಯತ್ನ ನಾ ಮಾಡುತ್ತಿಲ್ಲ. ಆದರೆ ನಮ್ಮ ಭಾರತದಲ್ಲಿ ಇರುವ ಪ್ರಸ್ತುತ ಚಿತ್ರಣವನ್ನು ಹೇಳಿರುವೆನು. ಅದನ್ನೆಲ್ಲಾ ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದುಕೊಂಡಿರುತ್ತೇನೆ......
ನನ್ನ ಈ ಲೇಖನವೂ ಸಮಯೋಚಿತವಾಗಿಯೂ ಹಾಗೂ ತರ್ಕಬದ್ಧವಾಗಿಯೂ ಇರುವುದೆನ್ನುವ ಆಶಯದೊಂದಿಗೆ ಈ ಲೇಖನವನ್ನು ಮುಕ್ತಾಯಗೊಳಿಸುತ್ತಿದ್ದೇನೆ. .
ಜೈ ಭಾರತ ಮಾತೆ..
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಗುರುವಾರ, ಅಕ್ಟೋಬರ್ 23, 2008
ದೀಪಾವಳಿಯು ಬಂದಿಹುದು..

ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು..
ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು..
- ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಮಂಗಳವಾರ, ಅಕ್ಟೋಬರ್ 21, 2008
ಮುಂಬರುವ ದಿನಗಳಲ್ಲಿ ಬೆಂಗಳೂರು ಉದ್ಯಾನ ನಗರಿಯಾಗಿ ಉಳಿಯಲಿದೆಯೇ?

(ಹಸಿರೇ ಉಸಿರು ಎಂದನ್ನುವವರು ಇವರೇ.. ಕಂಡ ಕಂಡಲೇಲ್ಲ ಹಸಿರಿನ ಉಸಿರನು ತೆಗೆಯಲು ಅನುಮತಿ ಕೊಡುವವರೂ ಇವರೇ..)
ಅದಕ್ಕೆ ಮೂಲಕಾರಣವೇನೆಂದರೆ? “ಮೆಟ್ರೋರೈಲು”ಯೆಂಬ ಮಹತ್ವಾಕಾಂಕ್ಷಿ ಯೋಜನೆಯ ಅಡಿಯಲ್ಲಿ ರೈಲು ಮಾರ್ಗವನ್ನು ನಿರ್ಮಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿ ಮೈತುಂಬ ಹಸಿರು ಎಲೆಗಳನ್ನು ಹೊದ್ದುಕೊಂಡು ಬೃಹದಾಕಾರದಲ್ಲಿ ಬೆಳೆದು ನಿಂತಿದ್ದ ಹೆಮ್ಮರಗಳನ್ನು ನಿಕೃಷ್ಟವಾಗಿ ಬುಡ ಸಮೇತ ಕಡಿದು ಉರುಳಿಸುತ್ತಿದ್ದ ದೃಶ್ಯವನ್ನು ನಾನು ಕಣ್ಣಾರೆ ಕಂಡದ್ದೇ ಕಾರಣ. ನಾನೊಬ್ಬ ಅಂತ ಅಲ್ಲ ಆ ಹೃದಯ ವಿದ್ರಾವಕ ದೃಶ್ಯವನ್ನು ಕಂಡ ಬಹುತೇಕ ನಾಗರೀಕರು ಸಹ ಅಯ್ಯೋ ಎಂದು ಮಮ್ಮಲು ಮರುಗಿಯೇ ಇರುತ್ತಾರೆ. ಏಕೆಂದರೆ ಅವು ಸರ್ವೇಸಾಮಾನ್ಯವಾದಂತಹ ಮರಗಳಲ್ಲ ಬೆಂಗಳೂರಿನ ಗತವೈಭವನ್ನು ಸಾರುವಂತಿದ್ದ ತೀರ ಹಳೆಯ ಮರಗಳವು.
ಈಂತಹ ಸನ್ನಿವೇಶಗಳನ್ನು ನೋಡುತ್ತಿದ್ದರೆ ನಮ್ಮ ಕಣ್ಣೆದುರಿಗೆ ನಮ್ಮ ಬೆಂಗಳೂರಿನ ಪರಿಸ್ಥಿತಿ ಹೀಗಾಗಿ ಹೋಗುತ್ತಿರುವುದಲ್ಲಾ ಎನ್ನುವ ಕ್ರೂರ ನೋವು ಹಾಗೂ ಸಂಕಟ ಹಿತೈಷಿಗಳಾದ ನಮ್ಮನ್ನು ಕಾಡುತ್ತಿರುವುದು ನಿಜ. ಒಮ್ಮೆ ಮಹಾತ್ಮ ಗಾಂಧಿ ರಸ್ತೆ, ರೇಸ್‌ಕೋರ್ಸ್ ರಸ್ತೆ ಇನ್ನೂ ಹತ್ತು ಹಲವಾರು ಕಡೆ ಹೋಗಿ ನೋಡಿದರೆ ಗೊತ್ತಾಗುತ್ತೆ ಎಷ್ಟು ಅಂದವಾಗಿ ಮರಗಳನ್ನು ಬುಡ ಸಮೇತ ನಿರ್ನಾಮ ಮಾಡಿದ್ದಾರೆ ಎಂದು.
ನಮ್ಮ ಬೆಂಗಳೂರಿನ ಹಿರಿಮೆ-ಗರಿಮೆಗೆ ಇಲ್ಲಿನ ವಾತಾವರಣ, ಇಲ್ಲಿರುವ ಅತಿಸುಂದರ ಉದ್ಯಾನವನಗಳು ಹಾಗೂ ಯಥೇಚ್ಛಾಗಿ ಬೆಳೆದು ನಿಂತಿರುವ ಕರಿಹಸಿರಿನ ಗಿಡಮರಗಳೇ ಕಾರಣ ಅಂತ ನಮಗೆ ಗೊತ್ತು.
ಆದರೆ ಜಾಗತೀಕರಣದ ಫಲವಾಗಿ 1997ರ ಈಚೆಗೆ ಸಾವಿರಾರು ಸಾಪ್ಟ್‌ವೇರ್ ಕಂಪನಿಗಳು ಹಾಗೂ ಬೆರಳೆಣಿಕೆಗೆ ಸಿಗದಷ್ಟು ಹಲವಾರು ಬೇರೆ ಬೇರೆ ಉದ್ಯಮೆಗಳು ಈ ನಮ್ಮ ಉದ್ಯಾನ ನಗರಿಗೆ ಕಾಲಿರಿಸಿದವು. ಅದರ ಜೊತೆ ಜೊತೆಗೇನೆ ಲಕ್ಷೋಪ ಲಕ್ಷ ವಿದ್ಯಾವಂತರುಗಳು ನಮ್ಮ ದೇಶದ ನಾನಾ ಮೂಲೆ ಮೂಲೆ ಗಳಿಂದ ಉದ್ಯೋಗವನ್ನು ಅರಸಿ ಇಲ್ಲಿಗೆ ಬಂದರು. ಅಲ್ಲದೇ ಕುಬೇರನ ವಂಶಜರೆಂದೇ ಪರಿಗಣಿಸಲಾದ ಅನೇಕಾನೇಕ ವ್ಯಾಪಾರಸ್ಥರುಗಳು ಸಹ ತಮ್ಮ ವ್ಯಾಪಾರಿ ಮಳಿಗೆಗಳನ್ನು ತೆರೆಯಲು ಇಲ್ಲಿಗೆ ಬಂದರು. ಎಲ್ಲ ಇಷ್ಟೇ ಆಗಿದ್ದರೇ ಹೋಗ್ಲಿ ಬಿಡಿ ಅನ್ನಬಹುದಿತ್ತು.
ಆದರೆ ಹೀಗೆ ಬಂದವರು ಸುಮ್ಮನೆ ಇದ್ದರೆ? ಇಲ್ಲ, ಬರುತ್ತಿದ್ದ ಕೈ ತುಂಬ ಸಂಬಳ, ಆದಾಯ ತಂದ ಆಸೆ, ದುರಾಸೆಗಳು ಇವರಲ್ಲಿ ಚಿತ್ರವಿಚಿತ್ರದ ಕನಸುಗಳಿಗೆ ದಾರಿ ಮಾಡಿಕೊಟ್ಟವು. ಅದರಂತೆ ಈ ಉದ್ಯಾನ ನಗರಿಯಲ್ಲಿ ತಮ್ಮದೇ ಆದ ಮನೆ ಇರಬೇಕೆಂದು ಇಚ್ಚಿಸಿದರು ಅದರ ಜೊತೆಗೆ ಶಾಪಿಂಗ್ ಮಾಡಲು, ವಾರಾಂತ್ಯದಲ್ಲಿ ಮೋಜು ಮಾಡಲು ದೊಡ್ಡ ದೊಡ್ಡ ಮಹಲುಗಳು ಇದ್ದರೆ ಇನ್ನೂ ಚೆಂದ ಎಂದೆಣಿಸಿದರು. ಇವರುಗಳ ಆಸೆಯನ್ನು ತಣಿಸಲು ರಿಯಲ್‌ಎಸ್ಟೇಟ್ ಎಜೆನ್ಸಿಗಳು ಹಾಗೂ ದೊಡ್ಡ ದೊಡ್ಡ ಪ್ರಭಾವಿ ಬಂಡವಾಳಗಾರರು ಸಹಕಾರಿಯಾಗಿ ನಿಂತರು.
ಅಂಧಾಭಿಮಾನವಿದೆಂದು ಎನ್ದೆಣಿಸದಿರಿ. ಇರುವ ವಾಸ್ತವ್ಯತೆಯನ್ನು ಹೇಗೆ ಹೇಳಬೇಕೋ ಹಾಗೆ ಹೇಳಿರುವೆನು.
ನಂತರ ಮುಂದೇನು ಮಾಡಿದರು ಅಂತ ನಿಮಗೆ ಚೆನ್ನಾಗಿಯೇ ತಿಳಿದಿದೆ. ಈ ಉದ್ಯಾನ ನಗರದ ಹೊರವಲಯ, ಒಳವಲಯ ಎಲ್ಲೆಂದರಲ್ಲಿ ಸೊಂಪಾಗಿ ಬೆಳೆದು ನಿಂತಿದ್ದ ಅಮಾಯಕ ಗಿಡ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಪರ್ವತಗಳ ಸಾಲುಗಳನ್ನೇ ನೆನಪಿಸುವಂತಹ ಎತ್ತರೆತ್ತರದ ಸಾವಿರಾರು ಅಪಾರ್ಟ್‌ಮೆಂಟ್, ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಕಟ್ಟಿದರು, ಈಗಲೂ ಕಟ್ಟುತ್ತಿರುವರು.
ಇದಕ್ಕೆ ಉದಾಹರಣೆಯಂತೆ, ವೈಟ್‌ಫೀಲ್ಡ್‌ನ ಸುತ್ತಾಮುತ್ತಾ, ಎಲೆಕ್ಟ್ರಾನಿಕ್ಸ್ ಸಿಟಿ ಸುತ್ತಾಮುತ್ತಾ, ಮಾರುತಹಳ್ಳಿ ಸುತ್ತಾಮುತ್ತಾ, ಯಲಹಂಕ ಉಪನಗರದ ಸುತ್ತಾಮುತ್ತಾ ಇನ್ನೂ ಹಲವಾರು ಕಡೆ ಕಣ್ಣಳತೆಗೂ ನಿಲುಕದಷ್ಟು ಉದ್ದಗಲವಾಗಿ ನಾನಾ ಆಕೃತಿಗಳುಳ್ಳ ಬಿಲ್ಡಿಂಗ್‌ಗಳನ್ನು ಕಟ್ಟುತ್ತಿರುವರು.
ಇಷ್ಟೆಲ್ಲ ಆದರೂ ಬೆಂಗಳೂರು ತನ್ನ ಹಿರಿಮೆಯನ್ನು ಇನ್ನು ಕಳೆದುಕೊಂಡಿಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದಲ್ಲಿ ಇರುವ ಕಾರ್ಖಾನೆಗಳ ಹಾಗೂ ಕಛೇರಿಗಳ ಆವರಣದಲ್ಲಿ ಗಿಡಮರಗಳು ಈಗಲೂ ಸಹ ಬಹಳ ಸುರಕ್ಷಿತವಾಗಿ ಇವೆ. ಅಲ್ಲದೇ ನೂರಾರು ಉದ್ಯಾನವನಗಳು ಸಹ ಅದಕ್ಕೆ ಪೂರಕವಾಗಿ ಇವೆ. ಆದರೆ ಬರೀ ಇಷ್ಟಿದ್ದರೆ ಸಾಕೇ?
ಈವೂರಿನಲ್ಲಿ ಹೇಗೆ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ಕಟ್ಟಡಗಳ ಸಂಖ್ಯೆ ವೃದ್ಧಿಯಾಗುತ್ತಿದೆಯೋ ಅದೇ ರೀತಿ ಗಿಡಮರಗಳ ಸಂಖ್ಯೆಯಲ್ಲೂ ದುಪ್ಪಟ್ಟು ವೃದ್ಧಿಯಾಗಬೇಕು ಅಲ್ಲವೇ? ಆಗ ಮಾತ್ರ ನಮ್ಮ ಬೆಂಗಳೂರು ಸುಂದ ನಗರಿ, ಉದ್ಯಾನ ನಗರಿ ಎನ್ನುವ ಹೆಸರನ್ನು ಉಳಿಸಿಕೊಳ್ಳಲು ಸಾಧ್ಯ ಅಲ್ಲವೇ? ಇಲ್ಲವೆಂದರೆ ಬೆಂಗಳೂರು ಎಂಬ ಹೆಸರು ಹೋಗಿಬಿಟ್ಟು “ಬೋಳೂರು” ಎಂದ ಹೆಸರು ಬಂದರೂ ಬರಬಹುದು
ಇದಕ್ಕೆ ಯಾರನ್ನು ದೂಷಿಸಬಹುದು??
ಹೀಗೆ ಕಂಡ ಕಂಡವರಿಗೆಲ್ಲ ಭರ್ಜರಿ ಸುತ್ತಳತೆಗಳುಳ್ಳ ವಾಣಿಜ್ಯ ಸಂಕೀರ್ಣಗಳನ್ನು, ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲು ಅಸ್ತು ಎಂದು ಹೇಳುವ ಸರಕಾರವನ್ನೇ?
ಇಲ್ಲ ಒಳಗೊಳಗೆ ಕೋಟ್ಯಾನುಕೋಟಿ ಹಣವನ್ನು ಗುಳುಂ ಮಾಡಿ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲು ಅನುಮತಿಯನ್ನು ಮಂಜೂರು ಮಾಡಿಸಿಕೊಡುವ ತುಚ್ಛಮಟ್ಟದ ಪಟ್ಟಭದ್ರ ಹಿತಾಸಕ್ತಿಯುಳ್ಳ ಸರಕಾರಿ ಅಧಿಕಾರಿಗಳನ್ನೇ?
ಇಲ್ಲ ಇವೆಲ್ಲವನ್ನೂ ನೋಡಿಯೂ ಕಿಂಚಿತೂ ಪ್ರತಿಭಟನೆ ಮಾಡದೆ ತಮ್ಮ ಪಾಡಿಗೆ ತಮ್ಮ ಬದುಕನ್ನು ಸಾಗಿಸುತ್ತಿರುವ ಬೆಂಗಳೂರಿಗರನ್ನು ಅರ್ಥಾತ್ ಕನ್ನಡಿಗರನ್ನು ದೂಷಿಸಬಹುದೇ?
ಸಧ್ಯಕ್ಕೆ ನಮ್ಮ ಸರಕಾರ ಮಾಡಬೇಕಾಗಿರುವ ಕೆಲಸಗಳೇನು?
೧.ಬೆಂಗಳೂರಿನಲ್ಲಿ ಸಾಪ್ಟವೇರ್ ಕಂಪನಿಗಳು ಮಿತಿ ಮೀರಿಯೇ ಇವೆ. ಅಲ್ಲದೇ ಇಲ್ಲಿ ಇರುವ ಕಂಪನಿಗಳಲ್ಲಿ ಕನ್ನಡಿಗರು ಇರುವುದು ಅಷ್ಟಕ್ಕೆ ಅಷ್ಟೆಯೇ. ಇನ್ನು ಮುಂದೆ ಯಾವುದೇ ಕಂಪನಿಗಳ ಅಂಗ ಕಛೇರಿಯನ್ನು ಬೆಂಗಳೂರಿನಲ್ಲಿ ತೆರೆಯಲು ಅನುಮತಿ ಕೊಡಬಾರದು. ಇದಕ್ಕೆ ಪರ್ಯಾಯವಾಗಿ ಧಾರವಾಡ, ಮಂಗಳೂರು, ಹಾಸನ ಇನ್ನೂ ಮುಂತಾದ ನಗರಗಳಲ್ಲಿ ಕಂಪನಿಗಳನ್ನು ತೆರೆಯಲು ಆಹ್ವಾನ ನೀಡುವುದು. ಅಲ್ಲಿ ಅವರಿಗೆ ಎಲ್ಲ ವಿಧದ ಸೌಕರ್ಯಗಳನ್ನು ಕಲ್ಪಸಿ ಕೊಡುವುದು.
೨.ಇನ್ನು ಮುಂದೆ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು , ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಲು ಕೊಡುವ ಅನುಮತಿಯನ್ನು ಖಡಾ ಖಂಡಿತವಾಗಿ ನಿರಾಕರಿಸುವುದು. ಒಂದು ಅಪಾರ್ಟ್‌ಮೆಂಟ್ ಇಲ್ಲವೇ ವಾಣಿಜ್ಯ ಸಂಕೀರ್ಣಗಳಲ್ಲಿ ದಿನನಿತ್ಯ ಉಪಯೋಗಿಸುವ ನೀರು, ವಿದ್ಯುತ್. ಅವುಗಳ ಬೆಲೆಯನ್ನು ಸರಕಾರ ಇನ್ನು ಅರಿತು ಕೊಂಡಿಲ್ಲವೇ? ಅರಿತು ಕೊಂಡರೆ ಗೊತ್ತಾಗುವುದು ಮಾನವನ ಆಸೆಗೆ ಕೊನೆಯಲ್ಲಿ?
೩.ಈಗಿರುವ ಕಂಪನಿಗಳು, ವಾಣಿಜ್ಯ ಸಂಕೀರ್ಣಗಳ ಆವರಣದಲ್ಲಿ ಇಂತಿಷ್ಟು ಅಂತ ಮರಗಳನ್ನು ಬೆಳೆಸಲೇ ಬೇಕೆಂದು ತಾಕೀತು ಮಾಡುವ ನಿಯಮವನ್ನು ಕೂಡಲೇ ಜಾರಿಗೆ ತರುವುದು.
೪.ಯಾವುದೇ ಪರಿಸ್ಥಿತಿಯಲ್ಲೂ ಮರಗಳನ್ನು ಕಡಿಯಲು ಅವಕಾಶ ಮಾಡಿಕೊಡಬಾರದು. ಮರವನ್ನು ಕಡಿಯಲೇಬೇಕೆಂಬ ಸಂದರ್ಭ, ಪ್ರಸಂಗಗಳು ಒದಗಿಬಂದ ಪಕ್ಷದಲ್ಲಿ ಅದಕ್ಕೆ ಪರ್ಯಾಯವಾಗಿ ಕನಿಷ್ಟ ಪಕ್ಷ 5 ಮರಗಳನ್ನಾದರೂ ಬೆಳೆಸಲೇಬೇಕು ಎಂಬ ಕಠಿಣ ಕಾನೂನು ಜಾರಿಗೆ ತರುವುದು.
೫.ಎಲ್ಲ ಕನ್ನಡ ಕುಲ ಬಾಂಧವರಲ್ಲಿ ಒಂದು ಕಳಕಳಿಯ ಮನವಿ ನಾವುಗಳೂ ಸಹ ನಮ್ಮ ನಮ್ಮ ಜೀವಿತಾವಧಿಯಲ್ಲಿ ಹೆಚ್ಚಿಗೆ ಅಲ್ಲ ಒಂದೊಂದು ಗಿಡ ನೆಟ್ಟು ಅದನ್ನು ಮರವಾಗಿ ಬೆಳೆಸುವ ಪ್ರಯತ್ನ ಮಾಡೋಣ.
ಕೊನೆಯದಾಗಿ ಹೇಳಬೇಕೆಂದರೆ ನಮ್ಮ ಬೆಂಗಳೂರು ನಮಗೆ ಬರಿ ದುಡ್ಡು ಗಳಿಸಿ ಕೊಡುವ ತಾಣವಾಗಬಾರದು ಜೊತೆಗೇನೇ ನೆಮ್ಮದಿಯನ್ನು, ಉಲ್ಲಾಸವನ್ನು, ಆರೋಗ್ಯವನ್ನು ವೃದ್ಧಿಸುವ ತಾಣವಾಗಬೇಕು ಅಲ್ಲವೇ?
ಇದು ಒಬ್ಬ ಕನ್ನಡಿಗನ ಆಶಯವಲ್ಲ, ಪಂಚ ಕೋಟಿ ಕನ್ನಡಿಗರ ಆಶಯವೆಂದು ನಾನು ಭಾವಿಸಿರುತ್ತೇನೆ.-
ಮಂಗಳವಾರ, ಸೆಪ್ಟೆಂಬರ್ 23, 2008
ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 3)..
ಆದರೆ ಅದು ಹಾಗಾಗಲಿಲ್ಲ. ಮೃದುವಾದ ಅವಳ ಹಸ್ತವನ್ನು ನನ್ನತ್ತ ಚಾಚುತ್ತಾ, “ನೀವು ಆವಾಗಿನಿಂದಲೂ ನನ್ನ ಜೊತೆ ಮಾತನಾಡಲು ತುಂಬಾ ಇಚ್ಚಿಸಿದ್ದೀರಿ ಅಂತಾ ಕಾಣುತ್ತೆ. ಆದರೆ ನಾನೇ ಮಾತನಾಡ್ಲಿಲ್ಲ ಕ್ಷಮಿಸಿ! ನನ್ನ ಹೆಸರು ದೀಪಾ, ಹಾಸನದಲ್ಲಿ ಇಂಜಿನಿಯರಿಂಗ್ ಮಾಡ್ತಾ ಇದ್ದೀನಿ, ಗಣೇಶನ ಹಬ್ಬಕ್ಕೆಂದು ನನ್ನ ಸ್ನೇಹಿತೆಯರೊಂದಿಗೆ ಊರಿಗೆ ಹೋಗ್ತಾ ಇದ್ದೀನಿ" ಎಂದು ಒಂದೇ ನಿಟ್ಟುಸಿರಿನಲ್ಲಿ ಹೇಳದೆ ಬಲು ತಾಳ್ಮೆಯಿಂದ ನನ್ನಲ್ಲಿ ಹೇಳಿದಳು. ಆನಂತರ ನಿಮ್ಮ ಹೆಸರೇನು? ನಿಮ್ಮದು ಯಾವೂರು? ಎನ್ನುವುದನ್ನೂ ಸಹ ಅಷ್ಟೇ ತಾಳ್ಮೆಯಿಂದ ನನ್ನಲ್ಲಿ ಕೇಳಿದಳು. ತುಂಬಾ ಆನಂದಭರಿತನಾಗಿ ಅವಳು ಕೇಳಿದ ಎರಡೇ ಎರಡು ಪ್ರಶ್ನೆಗಳಿಗೆ ಇಡೀ ನನ್ನ ಜನ್ಮವೃತ್ತಾಂತವನ್ನೇ ಚಾಚೂ ತಪ್ಪದೇ ಅವಳಲ್ಲಿ ಹೇಳಿದೆ. ನಾನು ಹೇಳಿದ ಯಾವೊಂದು ಸಂಗತಿಯೂ ಅಷ್ಟು ಕುತೂಹಲವೆಂದು ಅವಳಿಗೆ ಅನ್ನಿಸಲಿಲ್ಲ. ಆದರೆ ನನಗೆ ಪ್ರಕೃತಿಯ ಬಗ್ಗೆ ಹಾಗೂ ಸಾಹಿತ್ಯ, ಕಲೆ ಬಗ್ಗೆ ಇಷ್ಟ ಎಂದು ಹೇಳಿದ ನುಡಿಗಳು ಅವಳಿಗೆ ಕುತೂಹಲ ತರಿಸಿದ್ದವು. ಅಲ್ಲದೇ ಅದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಳಾಗಿದ್ದಳು.
ತುಸುಸಮಯದ ಬಳಿಕ ಅವಳೇ ಮುಂದುವರೆದು, “ನೀವು ಯಾವ್ಯಾವ ಕಾದಂಬರಿ ಓದಿದ್ದೀರಾ? ಯಾರು ನಿಮಗೆ ಇಷ್ಟವಾದ ಸಾಹಿತಿ?” ಎಂದು ಕೇಳಿದಳು. ಮೊದಲೇ ಅವಳ ಜೊತೆ ಮಾತಾಡಲು ಚಡಪಡಿಸುತ್ತಿದ್ದ ನಾನು, "ಪಂಪನಿಂದ ಹಿಡಿದು ಜಯಂತ್ ಕಾಯ್ಕಿಣಿಯವರೆಗೂ ಎಲ್ಲಾ ಕನ್ನಡ ಸಾಹಿತಿಗಳ ಆ ಕಾದಂಬರಿ ಓದಿದ್ದೀನಿ..ಈ ಕಾದಂಬರಿ ಓದಿದ್ದೀನಿ, ದ.ರಾ ಬೇಂದ್ರೆಯವರ ಕವನಗಳು ಅಂದ್ರೆ ಇಷ್ಟ " ಅದು ಇದು ಎಂದು ಮನಸ್ಸಿಗೆ ಬಂದಿದ್ದನ್ನೆಲ್ಲ ಹೇಳಲು ಶುರುಮಾಡಿದೆ. ಆದರೂ ಅವಳು ಸ್ವಲ್ಪವೂ ಬೇಸರಗೊಳ್ಳಲೇ ಇಲ್ಲ ನಾನು ಹೇಳಿದ್ದನ್ನೆಲ್ಲ ತೀರ ಸಮಾಧಾನವಾಗಿ ಕೇಳುತ್ತಲೇ ಇದ್ದಳು. ಆಗಲೇ ನನಗೆ ಅರಿವಾದದ್ದು ಅವಳಿಗೆ ಸಾಹಿತ್ಯದ ಬಗ್ಗೆ ತುಂಬಾ ಒಲವಿದೆ ಎಂದು. ನಾ ಬರೆದ ಒಂದೆರಡು ಲೇಖನಗಳನ್ನು, ಕವನಗಳನ್ನು ಅವಳಿಗೆ ತೋರಿಸಿದೆ.
ಅವುಗಳನ್ನು ಓದಿ, "ತುಂಬಾ ಚೆನ್ನಾಗಿ ಬರೆದಿದ್ದೀರ, ಹೀಗೆಯೇ ಬರೆಯುತಾ ಇರಿ. ನಮ್ಮ ಕನ್ನಡಭಾಷೆ ನಿಮ್ಮಂತಹ ಪ್ರಜ್ಞಾವಂತ ಯುವಕರಿಂದಲೇ ಏಳಿಗೆಯ ಹಾದಿಯನ್ನು ಹಿಡಿಯಬೇಕು" ಎಂದಳು.
ನಂತರದಲ್ಲೂ ಅವಳೇ ಮುಂದುವರೆದು, “ನನಗೆ ಹಾಡುವುದು, ನೃತ್ಯ ಮಾಡುವುದು ಅಂದ್ರೆ ತುಂಬಾ ಇಷ್ಟ ನಾನು ಜಂಬಕ್ಕೆ ಹೇಳ್ತಿಲ್ಲ ಸ್ಕೂಲ್ ಲೆವೆಲ್ನಲ್ಲಿ, ಕಾಲೇಜ್ ಲೆವೆಲ್ನಲ್ಲಿ ಅನೇಕಾನೇಕ ಬಹುಮಾನಗಳು ನನಗೆ ಬಂದಿವೆ” ಎಂದು ಭಾವಪರವಶಳಾಗಿ ನುಡಿದಳು.
ಓ ದೀಪ..
ಆ ನಿನ್ನ ರೂಪ..
ನನ್ನುಸಿರಿನ ಕಣಕಣಕ್ಕೂ ಪರಿಮಳದ ದೂಪ..
ಆ ರೂಪ ಕಂಡ ನಾ, ನಿತ್ಯ ನಿನಗಾಗಿ ಪ್ರೇಮಪತ್ರ ಬರೆಯೋದು ತಪ್ಪಾ..?
ಆ ನನ್ನ ಪ್ರೇಮಪತ್ರಕ್ಕೆ ಮರು ಉತ್ತರ ನೀ ಬರೀತಿಯಾ ಸ್ವಲ್ಪ..?
ಓ ದೀಪು
ಗುಣದಲಿ ನೀ ಮುಗ್ಧ ಪಾಪು..
ಜಗದ ಜನರಲಿ ಸ್ಪೂರ್ತಿ ತುಂಬಲು ನಿನ್ನ ನಗುವೊಂದೇ ಸಾಕು..
ನೀ ನಗು ನಗುತಾ ಜೊತೆಗಿರಲು ನನಗೆ ಇನ್ನೇನು ಬೇಕು?
ಓ ದೀಪು
ನಿನ್ನ ಚೆಲುವ ಸಿರಿ ಹೆಚ್ಚಿಸಲೆಂದು ನಾ ತಂದಿರುವೆ Dove ಸೋಪು..
ಅದನು ತಲುಪಿಸಲು ಒಮ್ಮೆ ನನಗೆ ತೋರುವೆಯಾ ನಿಮ್ಮೂರ Road ಮ್ಯಾಪು.
ಇದನ್ನೆಲ್ಲ ತುಂಬು ಮೌನದಿಂದ ಆಲಿಸುತ್ತಿದ್ದವಳು, ಕಿರುನಗೆ ಬೀರುತ್ತಾ “ನಿಮ್ಮಲ್ಲಿ Imagination Power ತುಂಬಾ ಚೆನ್ನಾಗಿದೆ. ಆದರೆ ಈ ರೀತಿ Silly Silly ಕವನಗಳನ್ನು ಬರೆಯೋದು ಬಿಟ್ಟು, ನೀವ್ಯಾಕೆ ಹೆಚ್ಚು ಅರ್ಥಪೂರ್ಣವಾದ ಕವನಗಳನ್ನು, ಲೇಖನಗಳನ್ನು ಬರೆಯಲು ಪ್ರಯತ್ನಿಸಬಾರದು?” ಎಂದು ನನ್ನಲ್ಲಿ ಪ್ರಶ್ನಿಸಿದಳು. ಅರೆಕ್ಷಣ ಏನೇಳಬೇಕೆಂದು ತೋಚದೆ ನಾನು ತಬ್ಬಿಬ್ಬಾದೆ. ನಂತರ ತಡವರಿಸಿಕೊಂಡು “ಹೌದು..ಹೌದು ನೀವೇಳೊದು ನಿಜ, ನಾ ಆಗಲೇ ಹೆಚ್ಚು ಅರ್ಥಪೂರ್ಣವಾದ ಹತ್ತಾರು ಕವನಗಳನ್ನು ಬರೆದಿದ್ದೀನಿ” ಎಂದೇಳಿದೆ. ಆದರಾಗಲೇ "ನನ್ನ ಮನಸ್ಸು ತನ್ನ ಸ್ಥಿಮಿತ ಕಳೆದುಕೊಳ್ಳುವತ್ತ ಸಾಗಿತ್ತು. ಭುಗಿಲೆದ್ದ ಅಂತರಾಳದ ಇಂಗಿತವು ಮಾತಿನ ರೂಪದಲ್ಲಿ ಬರುವ ಹವಣಿಕೆಯಲಿ ತೊಡಗಿತ್ತು. ಸರಿ ಯಾವುದನ್ನೇ ಆಗಲಿ ಬಚ್ಚಿಟ್ಟುಕೊಂಡಷ್ಟೂ ನೋವೇ ಜಾಸ್ತಿಯೆಂಬುದನ್ನು ಅರಿತು. ನಾನೇ ಮುಂದುವರೆದು, ಅಚಲ ಧೈರ್ಯವನ್ನು ಮನದಲ್ಲಿ ತಂದುಕೊಂಡು ಅಂತರಾಳದ "ಪ್ರೀತಿ ಇಂಗಿತವನ್ನು" ಒಂದೇ ಉಸಿರಲ್ಲಿ ಹೇಳಿಯೆಬಿಟ್ಟೆ!"
ಅದಕ್ಕವಳು ನಸುನಗುತ್ತಾ, "ನೀವಿದನ್ನ ನನ್ನಲ್ಲಿ ಕೇಳಿಯೇ ಕೇಳುತ್ತಿರಾ ಎಂದು ನಾನು ಆಗಲೇ ಊಹಿಸಿದ್ದೆ. ಸರಿ ನಾನೂ ಸಹ ನನ್ನ ಮನದ ಇಂಗಿತವನ್ನು ಹೇಳುತ್ತ್ತೇನೆ ಕೇಳಿ, ನನಗೆ ನೀವು ಇಷ್ಷವಾಗಿಲ್ಲವೆಂದಲ್ಲ ತುಂಬ ಇಷ್ಟವಾಗಿದ್ದೀರಿ, ನಿಮಗಿಂತ ನಿಮ್ಮ ಕವನಗಳು, ನಿಮ್ಮ ಮಾತೃಭಾಷಾ ಪ್ರೇಮ ಇನ್ನೂ ಇಷ್ಟವಾಯಿತು. ಆದರೆ ಈ ಇಷ್ಟವನ್ನು ಪ್ರೀತಿ, ಪ್ರೇಮ, ಹಾಗೂ ಬಾಂಧವ್ಯದಲ್ಲಿ ಕೊನೆಮಾಡಿಕೊಳ್ಳೋದು ನನಗೆ ಇಷ್ಟವಿಲ್ಲ. ನಿಮಗೆ, ನಿಮ್ಮ ಬರವಣಿಗೆಗೆ ನಾನು ಆಜೀವ ಪರ್ಯಂತ ಅಭಿಮಾನಿಯಾಗಿರುತ್ತೇನೆ. ಅಲ್ಲದೇ ನಿಮಗೆ ಗೊತ್ತಲ? ನಮ್ಮ ಸಮಾಜದಲ್ಲಿ ಮದುವೆಗೆ ಎದುರಾಗುವ ತೊಡಕುಗಳು ನೂರಾರು ಅಂತ. ಜಾತಿ, ಮತ, ಪಂಥ ಇತ್ಯಾದಿ. ನಮ್ಮದು ಮೊದಲೇ ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ "...ಇನ್ನೂ ಏನೇನೋ ಹೇಳಹೋಗಿದ್ದಳು.
ಅಷ್ಟರಲ್ಲಿ ಏ ದೀಪಾ, ಊರು ಬಂತು ಕಣೇ. ಇಲ್ಲೇ ಸ್ಟಾಪ್ ಕೇಳೋಣ ಇಲ್ಲಾಂದ್ರೆ ಹೆಬ್ರಿಗೆ ಹೋಗಿ ಇಳಿದು ಕೊಳ್ಳಬೇಕಾಗುತ್ತೇ ಎಂದೇಳುತ್ತಾ ಆಕೆಯ ಗೆಳತಿಯರಿಬ್ಬರು ತಾವು ತಂದಿದ್ದ ಭಾರೀ ಗಾತ್ರದ ಲಗೇಜ್‌ಗಳನ್ನು ಕೈಯಲ್ಲಿ ಹಿಡಿದು ಇಳಿಯಲು ಸನ್ನದ್ಧರಾಗಿ ಮುಂದೆಹೋದರು.
ಅವರ ಆ ಮಾತುಗಳನ್ನು ಕೇಳುತ್ತಲೇ ದೀಪಾಳಿಗಿಂತ ಬಿರುಸಾಗಿ ನಾನೇ ಎದ್ದು ಲಗೇಜ್ ಕ್ಯಾಬಿನ್‌ನಿಂದ ಅವಳ ಲಗೇಜ್ ತೆಗೆದುಕೊಡುತ್ತಾ ಪಕ್ಕಕ್ಕೆ ಸರಿದು ಅವಳಿಗೆ ಇಳಿದುಹೋಗಲು ಅನುವು ಮಾಡಿಕೊಟ್ಟು ಅವಳನ್ನು ಕೊನೆಯದಾಗಿ ನೋಡಲು ಒಮ್ಮೆ ಕತ್ತನ್ನು ಎತ್ತಲು, ಅದೇ ಕ್ಷಣದಲ್ಲಿ ಡ್ರೈವರ್ ಲೈಟ್ ಹಾಕಿದನು. ನಾನು ಒಬ್ಬನೇ ಅಳುತ್ತಿರುವುದೆಂದು ನಾ ಅಂದುಕೊಂಡಿದ್ದೆ. ಆದರೆ ವಾಸ್ತವ್ಯದ ಚಿತ್ರಣ ಬೇರೆಯೇ ಹಾಗಿತ್ತು ಕ್ಷಣಾರ್ಧದಲ್ಲಿ ದೀಪಾಳ ನಯನಗಳು ಕಣ್ಣೀರಿನ ಹೊಳೆಯಲ್ಲಿ ಮಿಂದು ಕೆಂಪಾಗಿರುವುದು ಮುಗ್ಧಮಗುವಿಗೂ ತಿಳಿಯುವಂತೆ ಇತ್ತು. ಅವಳ ಆ ಮುಖವನ್ನೊಮ್ಮೆ ನೋಡಿ ತಡೆಯಲಾರದೆ ಬಿಕ್ಕಳಿಸಿ ಜೋರಾಗಿಯೇ ಅತ್ತುಬಿಟ್ಟೆ. ದೀಪಾಳಲ್ಲಿ ಅಳುವಿತ್ತು, ಆದರೆ ಮನದಲ್ಲಿ ಪ್ರೀತಿ ಅನ್ನುವುದರ ಬಗ್ಗೆ ಕೊಂಚವೂ ಕರುಣೆ ಇರಲ್ಲಿಲ್ಲ.
“ಯಾರ್ರೀ ಇಳಿಯೋರು? ಬೇಗ ಬನ್ರೀ, ಎಷ್ಟು ಹೊತ್ತು ಮಾಡ್ತೀರ?” ಎಂದು ಕಂಡಕ್ಟರ್ ಗಡುಸುಧ್ವನಿಯಲ್ಲಿ ಕೂಗಲು, ತಕ್ಷಣ ಎಚ್ಚೆತ್ತುಕೊಂಡ ದೀಪಾ ಅಳುತ್ತಾ ಅಲ್ಲಿಂದ ಹೊರಟುಹೋದಳು. ಆ ಕ್ಷಣದಲ್ಲಿ ನನ್ನ ಕಣ್ಣಂಚಲ್ಲಿ ಕಣ್ಣೀರಿನ ಹನಿಬಿಂದುಗಳು ಹೆಚ್ಚಾಗುತ್ತಿದ್ದಂತೆ ಅವಳ ಭೌತಿಕ ಚಿತ್ರಣ ಅಸ್ಪಷ್ಟವಾಗುತ್ತಾ ಹೋಯಿತು.
ಅವಳು ಕೆಳಗೆ ಇಳಿಯುತ್ತಲೇ ಅವಳ ಗೆಳತಿಯೊಬ್ಬಳು, “ಯಾಕೆ ಅಳ್ತಿದ್ದೀಯಾ? ಏನೇ ವಿಷಯಾ? ಯಾರು ಆ ಹುಡುಗ?” ಎಂದು ಕೇಳಿದ ಪ್ರಶ್ನೆ ನನ್ನ ಕಿವಿಯಂಚನ್ನು ತಾಕುತ್ತಿದ್ದಂತೆ ಬಸ್ಸು ಹೊರಟಿತು.
ನಾನೇ ಹಚ್ಚಿಕೊಂಡ “ಪ್ರೀತಿಯ ದೀಪ” ದೂರ ಹೋಗಿ ಮನದ ಮನೆಯಲ್ಲಿ ಬೆಳಕನ್ನೇ ನುಂಗುವಂತೇ ಆವರಿಸಿದ್ದ ಕತ್ತಲೆ ಹಾಗೂ ನಯನಗಳ ಒಡಲಿನಿಂದ ತುಂಬಿಬರುತ್ತಿದ್ದ ಕಣ್ಣೀರಧಾರೆ ಇವುಗಳ ನಡುವೆಯೂ..... "ಸಹಪ್ರಯಾಣಿಕಳಾಗಿದ್ದ ಅವಳೊಂದಿಗೆ ಕಳೆದ ಪ್ರಯಾಣದ ಮಧುರ ಕ್ಷಣಗಳು ನನ್ನ ಅಂತರಾಳದಲ್ಲಿ ಬಾಲ್ಯದ ನೆನಪುಗಳಂತೆಯೇ ಅಚ್ಚಳಿಯದ ನೆನಪಾಗಲು ಆಗಲೇ ಯಥಾವತ್ತಾಗಿ ತರ್ಜುಮೆಯಾಗುತ್ತಿದ್ದವು" .-----------ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಮಂಗಳವಾರ, ಸೆಪ್ಟೆಂಬರ್ 16, 2008
ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 2)..

ಹೃದಯ ಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 2)
ಮುಂದುವರೆದ ಭಾಗ ೨ - ನಿಮ್ಮ ಸುನಿಲ್ ಮಲ್ಲೇನಹಳ್ಳಿ
http://mallenahallipages.blogspot.com
ಹೆಚ್ಚಾಗಿ ಕನ್ನಡ ಪುಸ್ತಕಗಳನ್ನೇ ಓದುವ ನಾನು ಪಕ್ಕದಲ್ಲಿ ಹುಡುಗಿ ಕುಳಿತಿರುವುದನ್ನು ಮನಗಂಡು ನನ್ನ ಲೆವಲ್ಅನ್ನು ಕಾಯ್ದುಕೊಳ್ಳುವ ಸಲುವಾಗಿ ಓದಲು ಚೇತನ ಭಗತ್‌ರ “Five Point Someone” ಎಂಬ ಇಂಗ್ಲೀಷ್ ಪುಸ್ತಕವನ್ನು ಬ್ಯಾಗಿನಿಂದ ಹೊರ ತೆಗೆದು, ಖರೀದಿಸಿದ ನಾಲ್ಕರಲ್ಲಿ ಮೊರು ಸೀಬೆಕಾಯಿಗಳನ್ನು ಬ್ಯಾಗಿನ ಒಳಗೆ ಹಾಕಿ, ಓದಲು ಅಣಿಯಾದೆ. ಆದರೆ ಬರಿ ಪುಟಗಳನ್ನು ತಿರುವಿಹಾಕಲು ಸಾಧ್ಯವಾಯಿತೇ ವಿನಹ: ಓದಲು ಮನಸ್ಸಾಗಲೇ ಇಲ್ಲ! ಅದಕ್ಕೆ ಮೊಲಕಾರಣ “ಕಿರುನೋಟದಲ್ಲಿ ನನ್ನ ಕಣ್ಣುಗಳು ಸೆರೆಹಿಡಿದಿದ್ದ ಆ ಹುಡುಗಿಯ ಸುಂದರವದನದ ರಂಗುರಂಗಿನ ಚಿತ್ರಣವು ನನ್ನಯ ಮನಸ್ಸಲ್ಲಿ ಸದ್ದಿಲ್ಲದ ಯಾವುದೋ ಆಹ್ಲಾದಕರ ನಾದವ ಮೀಟುತಿತ್ತು!”
ಇದರ ನಡುವೆ ನನಗೇನೆ ನನ್ನ ಬಗ್ಗೆ ನಾಚಿಕೆ ತರುವ ಘಟನೆಯೊಂದು ನೆಡೆದುಹೋಯಿತು. ಪಕ್ಕದಲ್ಲಿ ಕುಳಿತ ಆ ತರುಣಿಯ ಎದುರು ನನ್ನ ಲೆವಲ್ಅನ್ನು ಕಾಯ್ದುಕೊಳ್ಳುವ ಸಲುವಾಗಿ ನಾನು ಇಂಗ್ಲೀಷ್ ಭಾಷೆಯ ಪುಸ್ತಕವನ್ನು ಬ್ಯಾಗಿನಿಂದ ಹೊರತೆಗೆದು ಓದಲು ಮಗ್ನನಾದುದ್ದೆನೋ ನಿಜ. ಆದರೆ ಯಾವ ಹುಡುಗಿಯನ್ನು ನಾನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೋ ಆ ಹುಡುಗಿನೇ ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳು” ಪುಸ್ತಕವನ್ನು ಆಕೆಯ ಬ್ಯಾಗಿನಿಂದ ಹೊರತೆಗೆದು ಓದತೊಡಗಿದಳು.
ಇದಕ್ಕಿಂತಾ ಅವಮಾನ ಬೇಕೆ?? ನಾನು ಓದುತ್ತಿದ್ದ ಆ ಇಂಗ್ಲೀಷ್ ಪುಸ್ತಕವನ್ನು ಹಾಗೆ ಬ್ಯಾಗಿನೊಳಗೆ ಇಟ್ಟು,
“ಹುಚ್ಚು ಮನಸ್ಸಿನ ಹನ್ನೊಂದನೆಯ ಮುಖ ನಾನೇ?” ಇರಬೇಕೆಂದು ಅಂದುಕೊಳ್ಳುತ್ತಾ ಕಿಟಕಿಯ ಗ್ಲಾಸ್ ಅನ್ನು ಸ್ವಲ್ಪ ಸರಿಸುತ್ತ ಹೊರಗಿನ ಗಿಡ, ಮರ, ಬೆಟ್ಟಗಳ ನಯನಾಕರ್ಷಕ ದೃಶ್ಯವನ್ನು ನೋಡುವ ಪ್ರಯತ್ನ ಮಾಡತೊಡಗಿದೆ. ಪ್ರಕೃತಿಯ ಈ ಸುಂದರ ದೃಶ್ಯಾವಳಿಯನ್ನೇ ನೋಡಲೇಬೇಕೆಂದು ಇಷ್ಟಪಟ್ಟು ಬಸ್ಸನ್ನೇರಿ ಬಂದಿದ್ದೇನೋ ನಿಜ. ಆದರೆ ಆ ಸೊಬಗನ್ನು ನೋಡಲು ಮನಸ್ಸಿದ್ದರೇ ತಾನೆ? ಮನಸ್ಸೆಲ್ಲಾ ಪಕ್ಕದಲ್ಲಿ ಆಸೀನಳಾಗಿದ್ದ “ಆ ತರುಣಿಯ ರೂಪರಾಶಿಯ ಬಲೆಯಲ್ಲಿ ಆಜೀವನ ಬಂಧಿಯಾಗಿತ್ತು!” ಅವಳನ್ನು ನಾನು ನೋಡಿದ “ಆ ಒಂದೇ ಒಂದು ಕುಡಿನೋಟ” ನನ್ನಲ್ಲಿ ಇಷ್ಟೆಲ್ಲಾ ಬದಲಾವಣೆ ತಂದಿತ್ತು!
“Excuse me, ದಯವಿಟ್ಟು Window Glass ಅನ್ನು ಪೂರ್ತಿ ತೆಗೆಯುತ್ತಿರಾ? ನನಗೆ ಗಿಡ, ಮರ, ಬೆಟ್ಟ, ಗುಡ್ಡಗಳನ್ನು ನೋಡುವುದೆಂದರೆ ತುಂಬಾ ಇಷ್ಟ” ಎಂದು ಮೃದುವಾದ ಮತ್ತು ಅಷ್ಟೇ ಸ್ಪಷ್ಟವಾದ ನುಡಿಗಳು ನನ್ನ ಪಕ್ಕದಲ್ಲಿ ಕುಳಿತ ಆ ತರುಣಿಯ ಬಾಯಿಯಿಂದ ಅಲೆ ಅಲೆಯಾಗಿ ಹೊರಬಂದವು. ನಾನು ಕಿಟಕಿಯ ಗ್ಲಾಸ್ ಅನ್ನು ಪೂರ್ತಿಯಾಗಿ ತೆರೆಯುತ್ತ “ಅಷ್ಟು ಇಷ್ಟವಿದ್ದರೆ ನೀವಿಲ್ಲಿ ಕೂರಬನ್ನಿ, ನಾನು ನಿಮ್ಮ ಜಾಗದಲ್ಲಿ ಕೂರುತ್ತಿನಿ” ಎಂದೇಳಿ ಅವಳಿಗೆ ಕಿಟಕಿಯ ಪಕ್ಕದಲ್ಲಿ ಕೂರಲು ಅನುವು ಮಾಡಿಕೊಟ್ಟೆ. ಕಿಟಕಿಯ ಪಕ್ಕದ ಸೀಟಿನಲ್ಲಿ ಕೂರುತ್ತಾ ಅವಳು “Thank you very much” ಎಂದು ನನ್ನ ಕಣ್ಣಲ್ಲಿ ಕಣ್ಣಿಡುತ್ತಾ ಹೇಳಿದಳು. “ಎಲ್ಲಾ ಹಲ್ಲುಗಳು ಕಾಣುವ ಹಾಗೆ ನಗುತ್ತಾ ಪರವಾಗಿಲ್ಲ ಬಿಡಿ” ಎಂದು ನಾನು ಹೇಳಿದೆ.
ಇನ್ನೇನಾದರೂ ಮುಂದುವರೆದು ಮಾತನಾಡೋಣವೆಂದರೆ ಹೊರಗಿನ ನಯನಮನೋಹರ ದೃಶ್ಯವನ್ನು ನೋಡಲು ಅತ್ತ ತಲೆಹಾಕಿದವಳು ಅರ್ಧತಾಸಾದರೂ ನನ್ನತ್ತ ತಿರುಗಲೇ ಇಲ್ಲ! ಆನಂತರ ನಾನೇ ಬೇಕಂತಲೇ ನನ್ನ ಬ್ಯಾಗಿನಿಂದ Chips ಪ್ಯಾಕೇಟ್ ಅನ್ನು ಹೊರತೆಗೆದು, ಒಂದೆರಡು ಚೂರುಗಳನ್ನು ಬಾಯಿಗೆ ಇಟ್ಟುಕೊಂಡು. ಅವಳತ್ತಾ ತಿರುಗಿ “Excuse me ನೀವು ಸ್ವಲ್ಪ ತಗೋಳಿ” ಎಂದೇಳುತ್ತಾ, ಆ ಪ್ಯಾಕೆಟ್‌ನ್ನು ಅವಳ ಮುಂದೆ ಹಿಡಿದೆ. ಕಿರುನಗೆ ಬೀರುತ್ತಾ “No Thanks” ಎಂದೇಳಿ, ಹೊರಗಿನ ರಮಣೀಯಚಿತ್ರಣವನ್ನು ನೋಡುವುದರಲ್ಲಿ ಮತ್ತೆ ತಲ್ಲಿನಳಾದಳು.
ಅವಳನ್ನು ಮಾತಾನಾಡಿಸುವ ನನ್ನೆಲ್ಲ ಪ್ರಯತ್ನಗಳು ಸತತವಾಗಿ ವಿಫಲವಾಗುತ್ತಿರುವಾಗಲೇ, ನನ್ನ ಮನದ ತೊಳಲಾಟವನ್ನು ಅರಿತ ಆ ಭಗವಂತ ನನಗೆ ಸಹಾಯ ಮಾಡಲೆಂದು ಮಳೆರಾಯನನ್ನು ಧರೆಗೆ ಕಳುಹಿಸಿದನು. ಮಳೆರಾಯನ ಆರ್ಭಟಕ್ಕೆ ವಿಧಿಯಿಲ್ಲದೆ ಅವಳು ಕಿಟಕಿಯ ಗ್ಲಾಸ್ ಅನ್ನು ಮುಚ್ಚಿದಳು. ಚಡಪಡಿಸುತ್ತಿದ್ದ ನನ್ನ ಬಾಯಿಗೆ ಹಾಕಿದ್ದ ಗಾಳವನ್ನು ಬಿಚ್ಚಿದಂತಾಯಿತು. “ಅಯ್ಯೋ ಹಾಳಾದ್ದು ಮಳೆ ಇವಾಗಲೇ ಬರಬೇಕಿತ್ತೇ?” ಎಂದು ಒಂದೇ ಸಮನೆ ಇನ್ನೂ ಏನೇನೋ ಹೇಳಲುಹೋದೆ. ಆದರೆ ಅವಳೇ ಮಧ್ಯದಲ್ಲಿ “ಬಾಯಿ ಹಾಕುತ್ತಾ ಪರವಾಗಿಲ್ಲ ಬಿಡಿ ಬರೋ ಮಳೆಗೆ ಹಾಗೆಲ್ಲ ಹೇಳಬಾರದು” ಎಂದಳು.
ಸ್ವಲ್ಪ ಸಮಯ ಕಾದು ನಿಮ್ಮ ಹೆಸರೇನು? ನಿಮ್ಮದು ಯಾವೂರು? ಇನ್ನು ಏನೇನೋ ಕೇಳಲು ಅವಳತ್ತಾ ತಿರುಗಿದರೆ ಅವಳಾಗಲೇ ನಿದ್ರಾದೇವಿಯ ವಶವಾಗಿದ್ದಳು. ತಲೆ ಕೆಟ್ಟಂತೆ ಆಯಿತು. ಮಲಗಿದ್ದ ಅವಳನ್ನು ನೋಡುತ್ತಲೇ ಬಾಯಿಯಿಂದ ಮಾತುಗಳು ತನ್ತಾನೇ ಬಾರದಾದವು. ಅರೆಕ್ಷಣದಲ್ಲಿ ನನ್ನ ಕಣ್ಣುಗಳು ಇದ್ದಕ್ಕಿದ್ದಂತೆ ಕಾರ್ಯೊನ್ಮುಖವಾದವು. ಶಿಲಾಬಾಲಕೆಯಂತಿದ್ದ ಅವಳ ಆ “ಚೆಲುವಿನ ಚಿತ್ರಣವನ್ನು ನೋಡಲೆಂದು ನನ್ನ ಕಣ್ಣುಗಳು ಸಹಜ ಸ್ಥಿತಿಯಿಂದ ೬೦ ಡಿಗ್ರಿ ಓರೆಯಾಗಿದ್ದವು. ನಿಜಕ್ಕೂ ಇವಳು ಅಪ್ಸರೆಯರ ಪ್ರತಿರೂಪವೋ? ಏನೋ? ಒಂದೂ ನಮ್ಮಗರಿಯದು ಎನ್ನುವ ಸಂದೇಶವನ್ನು ನನ್ನ ಕಣ್ಣುಗಳು ಮನಸ್ಸಿಗೆ ರವಾನೆ ಮಾಡಿದವು”.
ಆಹಾ...! ಅವಳು!, ಬಣ್ಣಿಸಲು ಯಾವ ಭಾಷೆಯ ಪದಗಳಿಗೂ ನಿಲುಕದಂತಹ “ಆಗರ್ಭ ಚೆಲುವು” ಅವಳದು. ಅಂಥವಳನ್ನು ಕಂಡಾಗ ನನ್ನ ಕಣ್‌ರೆಪ್ಪೆಗಳು ಒಂದನ್ನೊಂದು ಆಲಂಗಿಸುವುದನ್ನೇ ಅರೆಗಳಿಗೆ ಮರೆತವು, ನಯನಗಳೆರಡೂ ಎಂದೂ ಕಾಣದ ಆ ನೋಟವನ್ನು ಕಂಡು ಹಿರಿಹಿರಿ ಹಿಗ್ಗಿದ್ದವು, ತುಂಬು ತಂಪನೀಯುವ ಆಹ್ಲಾದಕರ ಸಂಚಾರ ನರನರದಲ್ಲಿ ಆರಂಭವಾಗಿತ್ತು, ಮನವು ಕಲ್ಪನಾಲೋಕಕ್ಕೆ ಲಗ್ಗೆಯಿಟ್ಟು ಅವಳ ಆ “ಅಪೂರ್ವ ಸೌಂದರ್ಯ”ದ ವರ್ಣನೆಗಾಗಿ ಪದಗಳ ಹುಡುಕಾಟದಲ್ಲಿ ತೊಡಗಿತ್ತು, ಹೃದಯದ ಊರೊಳಗೆ ಎಲ್ಲೆಲ್ಲೂ ಪ್ರೀತಿ ನಿನಾದ ಮೊಳಗಿತ್ತು, ಆ ನಿನಾದಕ್ಕೆ ಮೈಯಲ್ಲಿನ ರೋಮ ರೋಮವೂ ಹುಚ್ಚೆದ್ದು ಕುಣಿಯುತ್ತಿದ್ದವು. “ಹಿಂದೂಸಂಸ್ಕೃತಿಯ ಭವ್ಯಪ್ರತಿರೂಪವಾಗಿದ್ದ ಅವಳನ್ನು ನೋಡುನೋಡುತ್ತಲೇ ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಕೊಡುಗೆ ಇವಳೆಂದು ಕ್ಷಣಾರ್ಧದಲ್ಲೇ ನನಗರಿವಾಯಿತು”.
ಹೌದು ನಿಜವಾಗಿಯೂ ಅವಳ ರೂಪ ಹಾಗೆಯೇ ಇತ್ತು! ನುಣುಪಾದ ಕೂದಲುವುಳ್ಳ ಅವಳ ನೀಳವಾದ ಜಡೆ, ಅವಳ ಆ ರೂಪಕ್ಕೆ ಮೆರುಗು ನೀಡುವಂತೆ ಎಷ್ಟು ಬೇಕೋ ಅಷ್ಟು ಮಾತ್ರ ಹೊರಚಾಚಿದ ಮುಂಗುರುಳು, ಪ್ರಾಯದ ಸುಳಿವನ್ನು ಸಾರುವ ಒಂದು ಮೊಡವೆ ಕೂಡ ಇರದ ಮುದ್ದಾದ ಮುಖ, ಮೊದಲ ನೋಟದಲ್ಲೇ ನಾನು ಕಂಡಿದ್ದ ಭಯವೇ ಇರದ, ಬರಿ ನಿರ್ಮಲತೆ ತುಂಬಿಕೊಂಡಿರುವ, ಹುಣ್ಣಿಮೆಯ ಚಂದಿರನ ಕಾಂತಿಯನ್ನೂ ತುಸು ಮೀರಿಸುವ ಕಣ್ಣುಗಳು, ಇನ್ನೂ ಮೂಗುತಿಯನ್ನು ಚುಚ್ಚಿಸಿಕೊಂಡಿರದ ಮುಖಕ್ಕೆ ತಕ್ಕವಾದ ಕಿರುಮೊಗು, ಯಾವುದೇ ಸೌಂದರ್ಯವರ್ಧಕ ಲೇಪಿಸದೇ ಹೋದರೂ ಪಳಪಳನೆ ಹೊಳೆಯುತ್ತಿದ್ದ ಅವಳ ಆ ಕೆಂದುಟಿ, ಮೆಲ್ದುಟಿಯ ಸ್ವಲ್ಪ ಪಕ್ಕಕ್ಕೆ ಇದ್ದ ಕಿರುಕಪ್ಪನೆಯ ಮಚ್ಚೆ, ಕಿರುನಗೆಯನ್ನು ಬೀರುವಾಗ ಮಂಜಿನ ಹೊಳಪಿನಂತೆ ಇದ್ದ ಹಲ್ಲುಗಳು, ತನ್ನ ಸುಂದರ ಉಡುಪಿನ ಬಣ್ಣಕ್ಕೆ ಹೋಲುವ ಹಾಗೆ ಇಟ್ಟುಕೊಂಡ ಬಿಂದಿಗೆ, ಹಚ್ಚಿಕೊಂಡ ಉಗುರು ಬಣ್ಣ, ತೊಟ್ಟ ಕೈ ಬಳೆಗಳು, ನೀಳವಾದ ಜಡೆಗೆ ಹಾಕಿಕೊಂಡ ರಿಬ್ಬನ್ ಒಟ್ಟಾರೆ “ಅರಸಿಕನಲ್ಲೂ ರಸಿಕತೆಯನ್ನ ಬಡಿದೆಬ್ಬಿಸಿ ತರುವ ರೂಪರಾಶಿಯನ್ನು ಮೈಗೂಡಿಸಿಕೊಂಡಿದ್ದ ಅಪ್ರತಿಮ ಲಾವಣ್ಯದ ದಿವ್ಯಾಂಗನೆ ಅವಳು”.
ಅವಳ ಆ “ಸೌಂದರ್ಯರಾಶಿಯನ್ನು ನನ್ನ ನಯನಗಳಲ್ಲಿ ತುಂಬಿಕೊಂಡು, ನಿದ್ರಾದೇವಿಯ ಪರವಶವಾಗುತ್ತಿರುವಾಗಲೇ” ಬಸ್ಸಿನ ಚಾಲಕನು ಹಠಾತ್ತನೆ ವಾಹನದ ಬ್ರೇಕ್ ಹಾಕಿದನು. ಕ್ಷಣಾರ್ಧದಲ್ಲಿ ನನ್ನ ಅವಳ ಹಣೆಗಳೆರಡು ಎದುರಿನ ಸೀಟಿಗೆ ನೋವು ತರುವ ಮುತ್ತನ್ನಿಟ್ಟವು...
(ಮುಂದುವರೆಯುವುದು..........) - ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಸೋಮವಾರ, ಸೆಪ್ಟೆಂಬರ್ 8, 2008
ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ...
ಪ್ರಿಯ ಓದುಗ ವೃಂದಕ್ಕೆ ನನ್ನ ಹೃದಯಪೂರ್ವಕ ನಮನ. ನೀವೇನೋ ಗೌರಿ,ಗಣೇಶ ಹಬ್ಬ ಮಾಡೊದಕ್ಕೆ ನಿಮ್ಮ ನಿಮ್ಮ ಊರಿಗೆ ಹೊರಟ್‌ಹೋಗಿಬಿಟ್ಟಿದ್ರಿ. ಆದ್ರೆ ಇಲ್ಲಿ..ನನ್ನ ಬ್ಲಾಗಿನಲ್ಲಿ ನಾ ಬರೆದ ಕವನಗಳು, ಲೇಖನಗಳು ಓದುವವರು ಯಾರೂ ಇಲ್ವಲಪ್ಪ ಅಂತ ಒಂದೇ ಸಮನೆ ಅಳ್ತಾ ಇದ್ದವು. ಅದನ್ನು ಬಿಟ್ಟ್‌ಹಾಕಿ ಅವುಗಳದ್ದು ಯಾವಾಗಲೂ ಅದೇ ಗೋಳು ಒಂದೊಂದು ಸಲ ಅಳ್ತವೆ, ಒಂದೊಂದು ಸಲ ನಗ್ತಾ ಇರುತ್ತವೆ. ಹೌದು ಮರೆತೇಬಿಟ್ಟಿದ್ದೆ! ಗೌರಿ,ಗಣೇಶ ಹಬ್ಬದ ಆಚರಣೆ ಹೇಗಿತ್ತು? “ನಿಮಗೆಲ್ಲ ತಡವಾದ ಗೌರಿ,ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು”.
ಗೌರಿ, ಗಣೇಶ ಹಬ್ಬದ ಅಂಗವಾಗಿಯೇ ಒಂದು ಲೇಖನ ಬರೆದಿರುವೆನು. ಸ್ವಲ್ಪ ದೀರ್ಘಲೇಖನವಾದ್ದರಿಂದ ಈ ಲೇಖನವನ್ನು ಕಂತುಗಳಲ್ಲಿ ಪ್ರಕಟಿಸುತ್ತಾ ಹೋಗುತ್ತೇನೆ.ಬಿಡುವು ಸಿಕ್ಕಾಗಲೆಲ್ಲ ಓದಿ.ಪ್ರತಿಯೊಂದು ಕಂತು ನಿಮಗೆ ಮೆಚ್ಚಿಗೆಯಾಗುವುದೆಂದು ನನ್ನ ಭಾವನೆ. ಇಷ್ಟವಾದರೆ ಮಾಮೂಲಿಯಂತೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ - ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಅಂಕಣ-೧
ಆಗುಂಬೆಯ ಹತ್ತಿರ ಹೆಬ್ರಿಯಲ್ಲಿ ಶಿಕ್ಷಕನಾಗಿರುವ ನನ್ನ ಬಾಲ್ಯ ಸ್ನೇಹಿತ ಸತಿ ಫೋನ್ ಮಾಡಿದಾಗಲೆಲ್ಲ, "ಓ ಮಾರಾಯ ಅಲ್ಲೇನ್ ಬರಿ ಕಾಂಕ್ರೀಟ್ ಕಟ್ಟಡಗಳನ್ನು ನೋಡಿಕೊಂಡು ಇರ್ತಿ, ಒಮ್ಮೆ ಇಲ್ಲಿಗೆ ಬಂದೋಗಪ್ಪ, ಪ್ರಕೃತಿ ಮಾತೆಯೇ ಇಲ್ಲಿ ಹಚ್ಚಹಸಿರಿನ ಮನೆ ಮಾಡಿಕೊಂಡವ್ಳೆ. ಸ್ವರ್ಗಕ್ಕೂ ಇಲ್ಲಿಗೂ ಬರಿ ಮೂರೇ ಗೇಣು ಕಣೋ" ಎಂದು ಘಟ್ಟದ ಕೆಳಗಿನ ಜನರ ಭಾಷೆಯ ಶೈಲಿಯಲ್ಲಿ ಹೇಳ್ತಾ ಇದ್ದ. ಹಲವಾರು ಸಾರಿ ಅಲ್ಲಿಗೆ ಹೋಗಿ ಬರುವ ಯೋಜನೆಯನ್ನು ನಾನು ಹಾಕಿಕೊಂಡರೂ ಅದು ವ್ಯರ್ಥಪ್ರಯತ್ನವಾಗುತ್ತಿತ್ತೇ ಹೊರತು ಎಂದೂ ಕೈಗೂಡಿರಲಿಲ್ಲ!
(ಅಂಕಣ ೨ ಮುಗಿದ ನಂತರ ಮತ್ತೆ ಅಂಕಣ ೧ ಶುರುವಾಗುವುದು)
ಅಂಕಣ ೨
ಯಾರು ಈ ಸತಿ? ಸರಿಸರಿ ಮೊದ್ಲು ಸತಿ ಬಗ್ಗೆ ಸ್ವಲ್ಪ ಹೇಳ್‌ಬಿಡ್ತಿನಿ, ಇವ ನನ್ನ ಬಾಲ್ಯದ ಗೆಳೆಯ. ಹತ್ತನೇಯ ತರಗತಿಯವರೆಗೂ ನಾನು, ಅವ ಒಟ್ಟೊಟ್ಟಿಗೆ ಬೆಳೆದವರು. ಪಾಠ, ಆಟ, ಊಟ ಎಲ್ಲದರಲ್ಲೂ ಎಷ್ಟು ಜಗಳವಾಡುತ್ತಿದ್ದೇವೋ ಅದಕ್ಕಿಂತ ಒಂದುಪಾಲು ಹೆಚ್ಚಾಗಿಯೇ ಆತ್ಮೀಯತೆಯಿಂದ ಇರ್ತಾಇದ್ವಿ.
ಚಿಕ್ಕಂದಿನಲ್ಲಿ ನಮ್ಮ ಗ್ಯಾಂಗಿನ ಸದಸ್ಯರುಗಳು ಮಾಡುತ್ತಿದ್ದ ಅನೇಕಾಕ ತುಂಟಾಟ ಕೆಲಸಗಳಲ್ಲಿ ನನ್ನಷ್ಟೇ ಸಹಭಾಗಿಯಾಗಿರುತ್ತಿದ್ದ. ಮುಗ್ಧತನ ಹಾಗೂ ಪೆದ್ಧತನಗಳ ಮಿಶ್ರಣದ ಫಲವಾಗಿ ನಾವು ಮಾಡುತ್ತಿದ್ದ ಕೀಟ್ಲೆ ಕೆಲ್ಸಗಳು ಒಂದಾ-ಎರಡಾ? ನಾನು ಸಹ ಆಗ ಈಗಿನಷ್ಟೂ ನಾಚಿಕೆ, ಹಿಂಜರಿಕೆ ಸ್ವಭಾವದ ಹುಡುಗನಾಗಿರಲಿಲ್ಲ, ಎಲ್ಲದರಲ್ಲೂ ಬಹಳ ಚಲಾಕು ಇದ್ದೆ! “ಬಾಲ್ಯದಲ್ಲಿ ಹಾಗೆ ಮಾಡಿದ್ದ ಹಲವಾರು ಘಟನೆಗಳು ಈಗಲೂ ಸಹ ಅಚ್ಚಳಿಯದ ನೆನಪಿನ ಚಿತ್ರಣಗಳಾಗಿ ನನ್ನ ಮನದಲ್ಲಿ ಹಾಗೆಯೇ ಉಳಿದಿವೆ!” ಸತಿಯ ಬಗ್ಗೆ ಹೇಳಲುಹೋಗಿ ಇಷ್ಟೆಲ್ಲ ಹೇಳಬೇಕಾಯಿತು ಈಗ "ಮೂಲಕಥೆ"ಗೆ ಬರೋಣ...
(ಅಂಕಣ ೧ ರ ಮುಂದುವರಿಕೆ..)
ಆದರೆ ಕಳೆದ ವಾರ ಇದ್ದಕ್ಕಿದ್ದ ಹಾಗೆ ಎಲ್ಲಾದರೂ ಹೋಗಿಬರಬೇಕೆಂಬ ಆಲೋಚನೆಯು ಮನಸ್ಸಲ್ಲಿ ಮೂಡಿತು. ನನ್ನ ಕವನ, ಲೇಖನಗಳನ್ನು ಬರೆವ ಹವ್ಯಾಸಕ್ಕೆ ತಾತ್ಕಾಲಿಕ ತಿಲಾಂಜಲಿಯನ್ನಿಟ್ಟು, ಶುಕ್ರವಾರ ಮಧ್ಯಾಹ್ನ ಹನ್ನೆರಡಕ್ಕೆ ಮೆಜೆಸ್ಟಿಕ್ ತಲುಪಿ, ಅಲ್ಲಿಂದ ಹೆಬ್ರಿಯತ್ತ ಹೋಗುವ ರಾಜಹಂಸ ಬಸ್ಸನ್ನೇರಿ ಹೇಗೋ ಮಟ್ಟಮಧ್ಯದಲ್ಲೇ ಸೀಟುದಕ್ಕಿಸಿಕೊಂಡು ಕುಳಿತೆ.
ಹಾಸನ ಮಾರ್ಗವಾಗಿ ಇದೇ ಮೊದಲ ಸಲ ಪ್ರಯಾಣಿಸುತ್ತಿದ್ದೆನಾದ್ದರಿಂದ ಅಲ್ಲಿನ ಪ್ರಕೃತಿ ಸೊಬಗು “ಹಾಗೆ ಇರಬಹುದು..ಹೀಗೆ ಇರಬಹುದು” ಎಂದು ಮನದಲ್ಲಿ ಕಲ್ಪಿಸುತ್ತಾ, ಪಕ್ಕದಲ್ಲಿ ಯಾರು? ಕುಳಿತಿರುವರು ಎಂದು ನೋಡುವ ಗೋಜಿಗೆ ಹೋಗದೆ ಹಾಗೆಯೇ ನಿದ್ರೆಹೋದೆ. ಹಾಸನ ಹತ್ತಿರ, ಹತ್ತಿರವಾಗುತ್ತಿದ್ದಂತೆ ನನಗೆ ಎಚ್ಚರವಾಯಿತು. ಕಣ್ತೆರದು ನೋಡಿದಾಗ ನನ್ನ ಪಕ್ಕದಲ್ಲಿ ಕುಳಿತಿರುವರು 60ರ ಆಸುಪಾಸಿನ ಹಿರಿಯ ನಾಗರೀಕರು ಎಂದು ಆಗಲೇ ನನಗರಿವಾದುದ್ದು. ಅವರು ಪರಿಚಯ ಮಾಡಿಕೊಳ್ಳದಿದ್ದರೆ ಏನೆಂದುಕೊಂಡಾರು? ಎಂದು ಯೋಚಿಸಿ, ನಾನೇ ಅವರ ಹೆಸರು, ಊರು ಕೇಳುತ್ತಾ ಔಪಚಾರಿಕವಾಗಿ ಒಂದೆರಡು ಮಾತನಾಡಿದೆ. ಅಷ್ಷರಲ್ಲಿ ಹಾಸನದ ಬಸ್ಸ್ ನಿಲ್ದಾಣ ಬಂದೇಬಿಟ್ಟಿತು. ಸರಿ ನಮ್ಮೂರು ಬಂತಪ್ಪ ಮತ್ತೆಸಿಗೋಣ ಎಂದು ಹೇಳಿ ಆ ಹಿರಿಯರು ಬಸ್ಸಿನಿಂದ ಇಳಿದುಹೋದರು.
ಅವರು ಹೋದ ಕ್ಷಣಾರ್ಧದಲ್ಲೇ ಭಾರಿಗಾತ್ರದ ಲಗೇಜ್‌ಗಳನ್ನೊತ್ತು ಮೂರುಜನ ತರುಣಿಯರ ಗುಂಪೊಂದು ಬಸ್ಸಿನ ಒಳಗಡೆ ಪ್ರವೇಶಿಸಿ ಖಾಲಿ ಇರುವ ಸೀಟುಗಳನ್ನು ಹುಡುಕತೊಡಗಿದರು. ಬಸ್ಸು ಭಾಗಶ: ಭರ್ತಿಯಾಗಿದ್ದರಿಂದ ಅವರಿಗೆ ಸೀಟು ಸಿಗುವುದು ದುಸ್ತರವಾಗಿತ್ತು. ನನ್ನ ಪಕ್ಕದಲ್ಲಿ ಇದ್ದ ಒಂದು ಸೀಟ್ ಬಿಟ್ಟರೆ ತೀರಾ ಹಿಂದಗಡೆಯಲ್ಲಿ ಒಂದೆರಡು ಸೀಟ್‌ಗಳು ಖಾಲಿ ಇದ್ದವೂ. ಆ ಗುಂಪಿನ ಇಬ್ಬರು ತರುಣಿಯರು ಮತ್ತೊಬ್ಬಳನ್ನು ಕುರಿತು ನೀನು ಇಲ್ಲೇ ಕುಳಿತುಕೋ ನಾವಿಬ್ಬರು ಹಿಂದಗಡೆ ಹೋಗಿ ಕುಳಿತುಕೊಳ್ಳುತ್ತೇವೆ ಎಂದೇಳಿ ಹಿಂದೆ ಖಾಲಿ ಇದ್ದ ಸೀಟುಗಳತ್ತ ಹೆಜ್ಜೆ ಹಾಕಿದರು.
ಇದನ್ನೆಲ್ಲಾ ಮೂಕಪ್ರೇಕ್ಷಕನಾಗಿ ನೋಡುತ್ತಾ ಇದ್ದ ನಾನು ಪಕ್ಕಕ್ಕೆ ಸರಿದು “ಆ ಹುಡುಗಿ” ಕುಳಿತುಕೊಳ್ಳಲು ಅನುವು ಮಾಡಿಕೊಟ್ಟೆ. ಲಗೇಜ್ ಕ್ಯಾಬಿನ್‌ನಲ್ಲಿ ತನ್ನ ಲಗೇಜ್ ಇಟ್ಟು ನನ್ನ ಪಕ್ಕದಲ್ಲಿ ಕುಳಿತಳು ಆ ಹುಡುಗಿ. ನಾನಾಗಿಯೇ ಮೇಲೆಬಿದ್ದು ಮಾತನಾಡಿಸುವ ಗೋಜಿಗೆ ಹೋಗದೆ ನನ್ನ ಪಾಡಿಗೆ ನಾನು ಇರಲು ನಿಶ್ಚಯಿಸಿದೆ. ಅಷ್ಷರಲ್ಲಿ ಬಸ್ಸುಹೊರಡುವ ವೇಳೆಯಾಗುತ್ತಿತ್ತು. ಕಿಟಕಿಯ ಸಮೀಪ ಬಂದ ಸೀಬೆಕಾಯಿ ಮಾರುವವನಲ್ಲಿ ನಾಲ್ಕು ಸೀಬೆಕಾಯಿ ಖರೀದಿಸಿ, ಹತ್ತು ರೂಪಾಯಿಯನ್ನು ಅವನ ಕೈಯಲ್ಲಿಡುತ್ತಾ,..ಚಿಲ್ಲರೆ ನೀನೇ ಇಟ್ಟುಕೊಳ್ಳಪ್ಪ ಎಂದೇಳಿದೆ. “ಪಕ್ಕದಲ್ಲಿ ಹುಡುಗಿ ಕುಳಿತ್ತಿದ್ದರಿಂದಲೋ ಏನೋ? ನನ್ನಲ್ಲಿ ಧಾರಾಳತನ ತಾನಾಗಿಯೇ ಮನೆ ಮಾಡಿತ್ತು!” ಬಸ್ಸು ಹಾಸನದ ನಿಲ್ದಾಣವನ್ನು ಬಿಟ್ಟು ಹೊರಟ್ಟಿತು.
(ಮುಂದುವರೆಯುವುದು...)
ಮಂಗಳವಾರ, ಸೆಪ್ಟೆಂಬರ್ 2, 2008
ಗೌರಿ ಗಣೇಶ ಹಬ್ಬಕ್ಕೊಂದು ಕವನ

ಹಬ್ಬ..ಹಬ್ಬ..ಗೌರಿ ಗಣೇಶ ಹಬ್ಬ ಬಂತು ನಾಡಲಿ|
ಹಬ್ಬಕ್ಕೆಂದು ಅಮ್ಮ ಮಾಡಿದ ಬಿಸಿಬಿಸಿ ಚಕ್ಕುಲಿ
ತಿನ್ನುತಾ ನಾ ಏರಿದ ಮನೆಯಂಗಳದ ಜಗುಲಿ|
ಪೂಜೆಗೆ ಮುಂಚಿತವಾಗಿ ಚಕ್ಕುಲಿ ನಾ ತಿನ್ನವುದಾ
ಮರೆಯಲಿ ಓರೆಗಣ್ಣಲಿ ಕಂಡ ದಪ್ಪನೆಯ ಮೂಗಿಲಿ|
ದೂರನು ಹೇಳಲು ಶರವೇಗದಲಿ ಓಡಿತು ಗಣಪನ ಬಳಿ|
ಗಜಾನನನಲಿ ನನ್ನ ಬಗ್ಗೆ ಚಾಡಿ ಹೇಳಿತು ವಿಧವಿಧ ಪರಿ|
ಚಾಡಿ ಮಾತನು ಕೇಳಿ ಮೈಯೆಲ್ಲ ಹಸಿ ಕೋಪ ಮೂಡಿ|
ಗೌಡರ ಮನೆಯಲಿ ಕಡುಬನು ತಿನ್ನುವುದಾ ಅರ್ಧಕ್ಕೆ ಬಿಟ್ಟೆದ್ದ ಗಣಪ|
ಮೂಗಿಲಿಯೊಡನೆ ಪ್ರತ್ಯಕ್ಷನಾದ ನಮ್ಮ ಮನೆಯಂಗಳದ ಸಮೀಪ|
ಆದರೆ ತಿನ್ನುತ್ತಾ ತಿನ್ನುತ್ತಾ ಬಿಸಿಬಿಸಿ ಚಕ್ಕುಲಿ
ನಾ ಆಗಲೇ ಸೆರೆಯಾಗಿದ್ದೆ ನಿದ್ರಾದೇವಿಯ ಮಡಿಲಲಿ
ಇನ್ನೂ ವಿನಾಯಕ ಬಂದ ಅರಿವು ನನಗೆಲ್ಲಿ?
ಇದನ್ನು ಕಂಡು ಕೋಪದಲಿ ಮೂಗಿಲಿ ಏರಿತು ಜಗುಲಿ
ನನ್ನ ಮೈ ಮೇಲೆ ಓಡಾಡುತಾ ಇಟ್ಟಿತು ಕಚಗುಳಿ
ನಂತರದಲಿ ಕೈಯಲಿ ಇದ್ದ ಚಕ್ಕುಲಿ ಕಿತ್ತೊಯ್ದಿತು ಮೂಗಿಲಿ
ನಿಂತಿತು ಗಣಪನ ಸನಿಹದಲಿ! ನಾ ತಪ್ಪಿನ ಅರಿವಿನಲಿ
ಗಣಪನ ಕ್ಷಮೆ ಕೇಳಲು| ಜಗುಲಿಯಿಂದ ಎದ್ದೇಳಲು
ಇದ್ದೆನು ಹಾಸಿಗೆಯಲಿ| ಸೊಗಸಾದ ಕನಸ ಕಂಡಿದ್ದೆನು ನಿದ್ರೆಯಲಿ!
- ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಬುಧವಾರ, ಆಗಸ್ಟ್ 20, 2008
ಕಾಲಕ್ಕೆ ಸರಿಯಾಗಿ ಬಾರದ ಮಳೆರಾಯನ ಕುರಿತೊಂದು ಕವನ
ಮಳೆ..ಮಳೆ..ಮಳೆ..ಮಳೆ|
ಆಹಾ! ಮುಂಗಾರು ಮಳೆ|
ತಡವಾದರೂ ಕೊನೆಗೂ
ಬಂತೀ ಮುಂಗಾರು ಮಳೆ|
ಹೀಗೆ ಬಂದ ಹನಿಹನಿ ಮಳೆ|
ಅಲ್ಲಲ್ಲಿ ತೊಳೆದು ಹಾಕುತಿಹುದು
ಬರದ ಸೋಂಕಿನ ಕೊಳೆ|
ಅಗೋ ನೋಡಿ ಎಲ್ಲೆಲ್ಲೂ
ಮಿಣುಕುತಿಹುದು ಹೊಸ ಕಳೆ|
ಇದ ಕಂಡು ನಾಚುತಲಿರುವುದು
“ಮೇಘ ಪ್ರಿಯೆ” ಇಳೆ|
ಜೀವ ಸಂಕುಲಗಳ ಎದೆಯಲಿ
ಹರಿದಿಹುದು ನವೋಲ್ಲಾಸದ ಹೊಳೆ|
ಇಳೆಯ ಹೃದಯದೊಡಲ ಸೇರಿದ ಮಳೆ
ಹೇಳುತಿಹುದು, ಓ ಇಳೆ ನನ್ನ ಕ್ಷಮಿಸಿ ಬಿಡೆ|
ನಾ ಬಿಟ್ಟು ನನ್ನ ಮುಗಿಲ ಕರಿದಾದ ಮನೆ
ನಿನ್ನ ಸೇರುವುದರಲಿ ಸ್ವಲ್ಪ ತಡ ಆಯಿತು ಕಣೆ|
ನಿನ್ನ ಮನುಜ ಸುತರೇ ಇದಕ್ಕೆ ಕಾರಣ ಕಣೆ|
ನಾ ಬರುವ ಹಾದಿಯಲಿ ಮಾಲಿನ್ಯದ ಮುಳ್ಳ
ಅಡ್ಡಲಾಗಿ ಎಸೆಯುತಲಿವವರು ಅವರೇ ಕಣೆ|
ಆ ನಿನ್ನ ಮನುಜ ಸುತರು ಎಂದು ತಿಳಿಯುವರು
ಪರಿಸರವನು ಅರಿತು ಬಾಳುವ ಭವ್ಯ ಕಲೆ ?
(ಪದಗಳ ಅರ್ಥ
ಇಳೆ= ಭೂಮಿ, ಧರೆ, ಸುತರು= ಮಕ್ಕಳು, ಮಗ)
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಮಳೆಯೆಂಬ “ಮುಗಿಲ ಮಾಯೆ”

ಮಳೆಯೆಂಬ “ಮುಗಿಲ ಮಾಯೆ” ಬಾರದೆ
ಬಂದ ಬರಗಾಲಕ್ಕೆ ಕಂಗಾಲಾದ ರೈತಾಪಿ ಜನರನ್ನು ಗುರಿಯಾಗಿ ಇಟ್ಟುಕೊಂಡು ಬರೆದ ಕವನ.
(ಈಗ ವರಗಾಲ ಆದರೆ ಕೆಲ ದಿನಗಳ ಹಿಂದೆ ಬರಿ ಬರಗಾಲ) - ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಹಾವೇರಿಯ ಕಾವೇರಿದ ಕಪ್ಪು ನೆಲದಲಿ|
ಮಳೆಗಾಗಿ ಕಾದು ಬಿರಿದ ಆ ಹೊಲದಲಿ|
ಬಾರದ ನಿದ್ರೆಯನು ತಾ ಬರಿಸಿಕೊಂಡು|
ಕಂಡ ಹೊಂಗನಸನು ತಾ ಕರಗಿಸಿಕೊಂಡು|
ಆ ಕಡೆ ಮುಖ ಮಾಡಿ ಮಲಗಿರುವ ಮಾನವ|
ಈ ಕಡೆ ಮುಖ ಮಾಡಿ ಮಲಗಿಸಿರುವ ತನ್ನ ಶ್ವಾನವ|
ಯೋಚನೆ, ಆಲೋಚನೆಯಲಿ ಮಾನವ, ಶ್ವಾನವ
ಇಬ್ಬರದೂ ಬಿಡಿಸಲಾಗದ ಅವಿನಾಭಾವ ಸಂಬಂಧ!
ನೆಡೆಸಲು ಬದುಕಿನ ತೇರು| ಕಾಣಲೊಂದು ಕಿರು ಸೂರು
ಮಳೆಯನೇ ನಂಬಿ ಉಳುಮೆ ಮಾಡಿ ಸೋತಿಹನು ಅವ|
ತನ್ನೊಡಯನ ಸ್ಥಿತಿಯನು ಕಂಡು| ಅವಗೆ ನೆರವಾಗಲೆಂದು
ಬಾರದ ಮಳೆಯನು ಕೂಗಿ ಕರೆದು ಸೋತಿಹುದು ಅದು|
ಹೀಗೆ ಹೊಲಕ್ಕೆರಡು ಜೀವಗಳಂತೆ ಅದೇಷ್ಟೊ ಜೀವಗಳನು
ಪ್ರಕೃತಿಯು ಮಾತೆಯೂ ಕೈಬಿಟ್ಟಿರುವುದೊ? ಯಾರು ಬಲ್ಲರು?
(ಪದಗಳ ಅರ್ಥ, ಅವಿನಾಭಾವ= ಒಂದೇ ರೀತಿಯ, ಶ್ವಾನ = ನಾಯಿ)