ಮಂಗಳವಾರ, ಜನವರಿ 10, 2017

ಯಾಂತ್ರಿಕ ಬದುಕಿನ ಓಟ, ಎಲ್ಲೂ ನಿಲ್ಲದಾಟ!


ದಿನೇದಿನೇ ಯಾಂತ್ರಿಕವಾಗುತ್ತಿರುವ ಬದುಕಿನೆಡೆಗೆ ತುಸು ಗಮನವನ್ನು ಹರಿಸುತ್ತಾ, ಈ ಯಾಂತ್ರಿಕವಾದ ಬದುಕಿನಿಂದ; ಜನರಲ್ಲಿ, ಸಮಾಜದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಾಕಷ್ಟು ಬದಲಾವಣೆಗಳನ್ನು ಎಳೆ,ಎಳೆಯಾಗಿ ಅವಲೋಕಿಸುವಾಗ, ಇಪ್ಪತ್ತು ವರ್ಷಗಳ ಹಿಂದಿನ ಚಿತ್ರಣವು ನನ್ನ ಕಣ್ಮುಂದೆ ಬಂತು. ಜನರ ಜೀವನ ಕ್ರಮವಾಗಲಿ ಹಾಗೂ ಅವರ ಸಮಾಜಯುಕ್ತ ಚಟುವಟಿಕೆಗಳಾಗಲಿ, ಯಾವುದೇ ತರಾತುರಿ ಇಲ್ಲದೆ ನಿಯಮಿತ ವೇಗದಲ್ಲಿ ಸಾಗುತ್ತಿದ್ದ ಕಾಲವದು.

ಆಗ ಬಹುತೇಕ ಜನರದ್ದು ಯಾಂತ್ರಿಕತೆಯಿರದ, ಒತ್ತಡರಹಿತ ಬದುಕದಾಗಿತ್ತು ಕೂಡ. ದಿನಗಳು ಸಾಗಿ ವಾರ; ವಾರಗಳು ಸಾಗಿ ತಿಂಗಳು; ತಿಂಗಳುಗಳು ಸಾಗಿ ವರ್ಷ; ಹೀಗೇ ಎಲ್ಲವೂ ರಭಸವಿಲ್ಲದೆ ಕಳೆದುಹೋದ ಅನುಭವೂ ಸಹ ಆಗುತ್ತಿತ್ತು. ಮೇಲಾಗಿ, ಆಗ ದುಡಿಮೆಯೆನ್ನೋದು ಬದುಕಿನೊಂದು ಭಾಗದಂತಿತ್ತೇ ವಿನಃ, ಈಗಿನಂತೆ ದುಡಿಮೆಯೇ ಬದುಕಾಗಿರಲಿಲ್ಲ!
ಹೆಚ್ಚಿನ ಕುಟುಂಬಗಳು ಆರ್ಥಿಕ ಸಂಕಷ್ಟದ ನಿಮಿತ್ತ; ಕಷ್ಟ-ಕಾರ್ಪಣ್ಯಗಳನ್ನು, ಹಣದ ಮುಗ್ಗಟ್ಟನ್ನು ಎದುರಿಸುವುದು, ಸಾಲ-ಸೂಲ ಮಾಡುವುದು ಸಾಮಾನ್ಯ ವಿಚಾರಗಳಾಗಿದ್ದ ಸಮಯವದು. ಆರ್ಥಿಕ ಪರಿಸ್ಥಿತಿ ಅದೇನೇ ಇದ್ದರೂ; ಮನೆಗೆ ಆಗಾಗ ಬರುತ್ತಿದ್ದ ನೆಂಟರಿಷ್ಟರು, ಬಂಧು-ಬಾಂಧವರೊಡನೆ ಇರುತ್ತಿದ ಒಡನಾಟಕ್ಕಂತೂ ಯಾವ ದಕ್ಕೆಇರುತ್ತಿರಲಿಲ್ಲ! ಹಬ್ಬ, ಜಾತ್ರೆ, ಇನ್ನಿತರ ಆಚರಣೆಗಳಲ್ಲಿ ಒಂದುಕಡೆ ಸೇರೋದು, ಒಬ್ಬರಿಗೊಬ್ಬರು ಪರಸ್ಪರ ಯೋಗಕ್ಷೇಮ, ಕಷ್ಟಸುಖವನ್ನು ವಿಚಾರಮಾಡೋದು, ಇವೆಲ್ಲವನ್ನೂ ಜನರು ಸಹಜವಾಗಿಯೇ ರೂಢಿಸಿಕೊಂಡಿದ್ದರು.

ಅಲ್ಲದೇ, ಸ್ವಂತಕ್ಕೆ ಮನೆ ಕಟ್ಟಿಸುವುದೆಂದರೆ ತೀರ ಹಗುರವಾದ ವಿಷಯವಾಗಿರದೆ ಸಂಬಂಧಪಟ್ಟ ಕುಟುಂಬದ ಬಹುದೊಡ್ಡ ಸಾಧನೆಯಾಗಿರುತ್ತಿತ್ತು. ಕಾರು, ಇನ್ನಿತರ ದುಬಾರಿ ಬೆಲೆಯ ಮೋಟಾರು ವಾಹನಗಳಂತೂ ಯಾರೋ ಸಿರಿವಂತರ ಬಳಿ ಮಾತ್ರವೇ ಇರುತ್ತಿದ್ದವು. ಸರಕಾರೀ ಮತ್ತು ಖಾಸಗಿ ಬಸ್ಸುಗಳೇ ಜನರ ಬಹುದೊಡ್ಡ ಸಾರಿಗೆ ಮಾಧ್ಯಮಗಳಾಗಿದ್ದವು. ಪಟ್ಟಣದ ರಸ್ತೆಗಳಲ್ಲಂತೂ ಟ್ರಾಫಿಕ್ ಸಮಸ್ಯೆ ಅನ್ನೋದು ಇರಲಿಲ್ಲ. ಯಾರ ಮನೆಯಲ್ಲಾದರೂ ಸಾವು ನೋವು ಆದಾಗ; ನೆಂಟರಿಷ್ಟರು, ಆಪ್ತರು ನೀಡುತ್ತಿದ್ದ ಸಹಾಯ, ಸಹಕಾರ, ಹಾಗೂ ಸಾಂತ್ವನ, ಇವೆಲ್ಲವೂ ಮಾನವ ಸಂಬಂಧಗಳನ್ನು ಬಹಳ ಅಳವಾಗಿ ಬೆಸೆಯುತ್ತಿದ್ದವು.

ಆಗೆಲ್ಲ, ಮದುವೆಯಂತಹ ಶುಭ ಸಮಾರಂಭಗಳು ನೆರವೇರುವಲ್ಲಿ, ಕನಿಷ್ಟವೆಂದರೂ ಒಂದು ತಿಂಗಳಿಗೂ ಮುಂಚೆ ಸಕಲ-ಸಿದ್ದತೆಗಳ ಮಾಡಿಕೊಳ್ಳಲು ಸಜ್ಜಾಗುತ್ತಿದ್ದರು. ಅದು ಬಟ್ಟೆ-ಬರೆಗಳನ್ನು ಕೊಳ್ಳುವುದು, ವಧು ವರರಿಗೆ ಆಭರಣಗಳನ್ನು ಖರೀದಿಸುವುದು, ಮನೆಗೆ ಸುಣ್ಣ-ಬಣ್ಣ ಬಳಿಯುವುದು, ಆಹ್ವಾನ ಪತ್ರಿಕೆಗಳನ್ನು ಮಾಡಿಸುವುದು, ನೆಂಟರಿಷ್ಟರನ್ನು ಮನೆ-ಮನೆಗೂ ಹೋಗಿ ಆಹ್ವಾನಿಸುವುದು, ಮದುವೆ ಮನೆಯ ಅಂಗಳದಲ್ಲಿ ಚಪ್ಪರ ಹಾಕುವುದು, ಅಡುಗೆಯವರನ್ನು ಮುಂಗಡವಾಗಿ ಗುರುತು ಮಾಡುವುದು, ಅಡುಗೆಗೆ ಬೇಕಾದ ಸಾಮಾನು-ಪದಾರ್ಥಗಳನ್ನು ತರುವುದು, ದಿಬ್ಬಣಕ್ಕೆಂದು ವಾಹನವನ್ನು ಬುಕ್ ಮಾಡುವುದು, ದಿಬ್ಬಣದ ಜೊತೆ ಹೊರಡಲು ಊರ ಜನರ ಮನೆ-ಮನೆಗೂ ಹೋಗಿ ಆಮಂತ್ರಣ ನೀಡುವುದು, ಹೀಗೆ ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಸೊಬಗು ಹಾಗೂ ವಿಶಿಷ್ಟತೆಯಿರುತ್ತಿತ್ತು. ಅಲ್ಲದೇ ಜನರು ವಹಿಸಿದ ಕೆಲಸವನ್ನು ಬಹಳ ಉತ್ಸುಕತೆ ಹಾಗೂ ಸಾಂಘಿಕವಾಗಿ ಮಾಡುತ್ತಿದ್ದರು. ಹತ್ತಿರದ ಬಂಧು ವರ್ಗದವರಂತೂ ಮದುವೆಯ ಕೆಲಸಕಾರ್ಯದಲ್ಲಿ ಭಾಗಿಯಾಗಲೆಂದು ವಾರ ಅಥವಾ ಹದಿನೈದು ದಿನಗಳ ಮುಂಚಿತವಾಗಿಯೇ ಹಾಜರಿರುತ್ತಿದ್ದರು.

ಈಗ ಮದುವೆಗಳೆಂದರೇ, ಬಹುತೇಕ ಕೆಲಸಗಳನ್ನು ಹೊರಗುತ್ತಿಗೆ ಕೊಡುತ್ತಿರುವೆವು. ನೆಂಟರಿಷ್ಟರಿಗೆ, ಸ್ನೇಹಿತರಿಗೆ ಅಂಚೆ ಇಲ್ಲವೇ ಇ-ಮೇಲ್ ಮೂಲಕ ಆಹ್ವಾನ ಪತ್ರಿಕೆ ಕಳುಹಿಸುತ್ತೇವೆ. ನೆಂಟರಿಷ್ಟರು ಅಷ್ಟೇ ಅವಸರದಲ್ಲಿ ಮದುವೆಗೆ ಬರುತ್ತಾರೆ, ಅವಸರದಲ್ಲೇ ಮದುವೆ ಮಂಟಪದಿಂದ ಹೊರಟು ಹೋಗುತ್ತಾರೆ. ಜೊತೆಗೆ ಹಣವೇ ಎಲ್ಲದಕ್ಕೂ ಅವಶ್ಯಯೆನಿಸಿರುವ ಈಗಿನ ದಿನಗಳಲ್ಲಿ, ದುಡಿಮೆಯೇ ಬಾಳಿನ ಬಹುಮುಖ್ಯ ಅಂಶವಾಗಿ, ನಾವು ಹಣವಂತರೂ, ಸ್ಥಿತಿವಂತರೂ ಆಗುವತ್ತ ಗಮನವ ಹರಿಸಿಹರು. ಸ್ವಂತಮನೆ, ಕಾರು ಹಾಗೂ ಇನ್ನಿತರೇ ಐಷಾರಾಮಿ ವಸ್ತುಗಳನ್ನು ಹೊಂದುವುದರಲ್ಲಿ ಆಸಕ್ತರಾಗಿರುವೆವು. ಇದೇ ಸಮಯದಲ್ಲಿ, ನೆಂಟರಿಷ್ಟರೊಡನೆ ಮಾತುಕತೆ, ಮುಖಾಮುಖಿ ಭೇಟಿ, ಯೋಗಕ್ಷೇಮ ವಿಚಾರಣೆ ಹಾಗೂ ಕಷ್ಟ-ಸುಖದಲ್ಲಿ ಭಾಗಿಯಾಗೋದು, ಈ ಅಂಶಗಳು ಬಹುಪಾಲು ನಮಗೆ ದುಬಾರಿಯಾಗಿವೆ; ಯಾರಿಗೂ, ಯಾರೊಬ್ಬರನ್ನೂ ಭೇಟಿಮಾಡಿ, ಉಭಯ ಕುಶಲೋಪರಿ ವಿಚಾರಿಸುವಷ್ಟು ಸಮಯ, ತಾಳ್ಮೆ ಇಲ್ಲದಂತೆ ಆಗಿದೆ.

ನಮ್ಮ ಈ ಎಲ್ಲಾ ಬದಲಾವಣೆಗಳಿಗೆ ಕಾರಣವಾದ ಅಂಶಗಳೆಂದರೆ; ಸಾಮಾಜಿಕ ಸ್ಥಿತಿಯಲ್ಲಿ ಆಗುತ್ತಿರುವ ತ್ವರಿತ ಬೆಳವಣಿಗೆ ಹಾಗೂ ಬದಲಾವಣೆಗಳು: ಅಂದರೆ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಉತ್ಪಾದನಾ ಹಾಗೂ ಸಾರ್ವಜನಿಕ ಕೈಗಾರಿಕಾ ವಲಯಗಳಲ್ಲಿ ವೇಗವಾದ ಪ್ರಗತಿ, ಅವು ಸೃಷ್ಟಿಸುತ್ತಿರುವ ವಿಫುಲ ಉದ್ಯೋಗಾವಕಾಶಗಳು. ಈ ಕಾರಣವಾಗಿ, ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಬರುತ್ತಿರುವರು, ಅಲ್ಲದೇ ಬಿಡುವಿಲ್ಲದ ದುಡಿಮೆ ಜನರಿಗೆ ಸ್ವತಂತ್ರವಾಗಿ ಬದುಕಲು ಬೇಕಾದ ಶಕ್ತಿ ನೀಡುತ್ತಿವೆ. ಆದರೆ, ಸ್ವತಂತ್ರವಾದ ಬದುಕೆಂದು ತಿಳಿದು ಜನರು ಒಂಟಿತನದ, ಜೊತೆಗೆ ಅಪ್ತರು, ನೆಂಟರಿಷ್ಟರೊಡನೆ ಪರಸ್ಪರ ಒಡನಾಟವಿಲ್ಲದ ಬಾಳನ್ನು ಬಾಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆರ್ಥಿಕ ಹಾಗೂ ಉದ್ಯೋಗದ ವಿಚಾರವಾಗಿ ಬಂದರೆ, ಇಂತಹವೊಂದು ಬೆಳವಣಿಗೆ ನಮ್ಮ ದೇಶದಲ್ಲಿ ಅತ್ಯಗತ್ಯವಾಗಿ ಬೇಕಿತ್ತು. ಈ ಬೆಳವಣಿಗೆಯಿಂದಾಗಿ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರ ಕಂಡಿದೆ. ಜನರು ಆರ್ಥಿಕವಾಗಿ ಸಬಲತೆಯನ್ನು ಕಂಡಿದ್ದಾರೆ.

ಆದರೆ, ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ; ಈ ಮೊದಲೇ ಹೇಳಿದ ಹಾಗೆ ದುಡಿಮೆಯೇ ನಮ್ಮ ಬಾಳಿನ ಸರ್ವವೂ ಅಲ್ಲ. ಅದಕ್ಕಿಂತ ಮುಖ್ಯವಾಗಿ; ಗೆಳೆತನ, ಸಂಬಂಧಗಳು ಮತ್ತು ಅವುಗಳನ್ನು ಅಚ್ಚುಕಟ್ಟಾಗಿ ನಿಭಾಯಿಸೋದು ಕೂಡ ನಮ್ಮ ಬದುಕಲ್ಲಿ ಬಹುಮುಖ್ಯ. ಅವುಗಳಲ್ಲಿ ಸಿಗುವ; ಪ್ರೀತಿ, ಕಾಳಜಿ, ಮಾರ್ಗದರ್ಶನ, ಸಹಕಾರ, ಪರಸ್ಪರ ಅನ್ಯೋನ್ಯತೆ, ಇವು ನಮ್ಮಬದುಕಿಗೆ ಇನ್ನಿಲ್ಲದ ಅರ್ಥ ಮತ್ತು ಮೆರುಗನ್ನು ತರುತ್ತವೆ. ಫೇಸ್ಬುಕ್, ಟ್ವಿಟರ್, ವಾಟ್ಸ್ ಆಪ್ಗಳಲ್ಲಿ….ಮುಂತಾದ ಸಾಮಾಜಿಕ ತಾಣಗಳಲ್ಲಿ ನೂರಾರು ಸ್ನೇಹಿತರುಗಳಿರಬಹುದು ನಮಗೆ. ಆದರೆ, ನಿಜವಾದ ಸ್ನೇಹಿತರು, ಮಾರ್ಗದರ್ಶಕರು ಹಾಗೂ ನಮ್ಮ ಜೀವನಕ್ಕೆ ಅವಶ್ಯವಾಗಿ ಬೇಕಾಗಿರುವವರು ಬೇರೆಯೇ ಇರುತ್ತಾರೆ. ಬನ್ನಿ ಅವರನ್ನು ಮೊದಲು ಗುರುತಿಸೋಣ.
ಇಂತಿ; ಸುನಿಲ್ ಮಲ್ಲೇನಹಳ್ಳಿ

ಗುರುವಾರ, ಆಗಸ್ಟ್ 28, 2014

ಗೌರಿ-ಗಣೇಶ ಹಬ್ಬದಾಚರಣೆಯ ನೆನಪು

ನೆನಪಿನ ಅಂಗಳದಲ್ಲಿ ಹಾಗೆ ಹತ್ತಾರು ಮೆಟ್ಟಿಲು ಕೆಳಗಿಳಿದು ಬಾಲ್ಯದ ಘಟನಾವಳಿಯ ಕೋಣೆಯನು ಹೊಕ್ಕು ಅಲ್ಲಿ ನಮ್ಮೂರ ಜನರು ಪ್ರತಿವರ್ಷವು ಅಪರಿಮಿತ ಉತ್ಸಾಹ, ಅನನ್ಯ ಭಕ್ತಿ, ಶ್ರದ್ಧೆಗಳಿಂದ ಆಚರಿಸುತ್ತಿದ್ದ ಗೌರಿ-ಗಣೇಶ ಹಬ್ಬದ ಆಚರಣೆಯ ದೃಶ್ಯಾವಳಿಯ ಏಳೆಯನ್ನು ಹಾಗೆಯೇ ಬಿಚ್ಚುತ್ತಾಹೋದರೆ ಹಿರಿಮೆವುಳ್ಳ ಚಿತ್ರಣಗಳ ಸರಮಾಲೆ ನನ್ನ ಕಣ್ಮುಂದೆ ಬರುತ್ತದೆ. ಅಂದಿನ ದಿನಗಳಲ್ಲಿ ನಮ್ಮೂರ ಜನರು ಗಣೇಶ ಚತುರ್ಥಿಯ ಆಗಮನಕ್ಕೂ ಮುನ್ನಾ ಒಂದು ಸಮಿತಿಯನ್ನು ರಚಿಸಿ, ಆ ಸಮಿತಿಯ ಮೂಲಕ ಆಚರಣೆಯ ನಿಮಿತ್ತವಾಗಿ ಬೇಕಾದ ತಕ್ಕ ಕಾರ್ಯ-ಯೋಜನೆಗಳನ್ನು ಕೈಗೆತ್ತಿಕೊಂಡು ಅದರಂತೆ ಸಮಿತಿಯ ಕೆಲ ಸದಸ್ಯರುಗಳು ಮಂಟಪ, ಚಪ್ಪರ ಕಟ್ಟುವುದರಲ್ಲಿ, ಕೆಲವರು ನಾಟಕ, ಸಾಂಸ್ಕೃತಿಕ ಅಭ್ಯಾಸದಲ್ಲಿ, ಮತ್ತೆ ಕೆಲವರು ಇನ್ನುಳಿದ ಕೆಲಸಗಳ ಜವಾಬ್ದಾರಿಯನ್ನು ವಹಿಸಿಕೊಂಡು ಮುತುವರ್ಜಿ ಮಾಡಿಬಿಡುತ್ತಿದ್ದರು.

ಚಿಕ್ಕವರಾದ್ದರಿಂದ ಆಚರಣೆಗೆ ಸಂಬಂಧಿಸಿದ ಯಾವುದೇ ಜವಾಬ್ದಾರಿಯಿಲ್ಲದೆ ಮುಕ್ತರಾಗಿ ಇರುತ್ತಿದ್ದ ನಾನು ಮತ್ತು ನನ್ನ ಸಂಗಡಿಗರೆಲ್ಲ ಮಂಟಪ-ಚಪ್ಪರ ಕಟ್ಟುವುದನ್ನು, ನಾಟಕ ಅಭ್ಯಾಸ ಮಾಡುವುದನ್ನು ಮತ್ತು ಮಾಡುವವರನ್ನು ನೆಟ್ಟ ಮನಸ್ಸಿನಿಂದ ನೋಡುತ್ತಾ ನಿಲ್ಲುವುದೇ ನಮ್ಮ ಕಾಯಕವಾಗಿ ಬಿಟ್ಟಿತ್ತು. ಕೆಲವೊಮ್ಮೆ ನಿಯೋಜಿತ ಸದಸ್ಯರುಗಳು ಕೊಡುತ್ತಿದ್ದ ಚಿಕ್ಕಪುಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾದಷ್ಟೂ ಪ್ರಯತ್ನಿಸಿ, ಕೊನೆಯಲ್ಲಿ ಅವರು ಸಂದಾಯ ಮಾಡುತ್ತಿದ್ದ ಹೊಗಳಿಕೆ, ತೆಗಳಿಕೆ ಎಲ್ಲವನ್ನು ಯಾವುದೇ ಪ್ರತ್ಯುತ್ತರ ನೀಡದೆ ಸ್ವೀಕರಿಸುತ್ತಿದ್ದೆವು. ಏಕೆಂದರೆ ಮನದೊಳಗೆ ಪಸರಿಸಿದ ಹಬ್ಬದ ವಾತಾವರಣ ತಂದುಕೊಡುತ್ತಿದ್ದ ಸಂಭ್ರಮ-ಸಡಗರದ ಮುಂದೆ ಇನ್ಯಾವ ವಿಚಾರವೂ ನಮ್ಮ ಪರಿಗಣನೆಗೆ ಎಳ್ಳಷ್ಟು ಬರುತ್ತಿರಲಿಲ್ಲ! ಪ್ರತಿವರ್ಷವೂ ಮಂಟಪ ಹಾಗೂ ಚಪ್ಪರವನ್ನು ಭಿನ್ನ-ವಿಭಿನ್ನ ರೀತಿಯಲ್ಲಿ ಸಿದ್ದಪಡಿಸುತ್ತಿದ್ದ ನಿಯೋಜಿತ ಸದಸ್ಯರು ಮತ್ತು ಅವರಲ್ಲಿ ಒಬ್ಬೊಬ್ಬರಲ್ಲೂ ಇದ್ದ ಒಂದೊಂದು ವಿಶಿಷ್ಟತೆ, ಚಾಣಕ್ಷತೆ ಮತ್ತು ಕೈಚಳಕ ಇವೆಲ್ಲವೂ ಸಮಪ್ರಮಾಣದಲ್ಲಿ ಕೂಡಿ ಒಂದು ಸುಂದರ ಮಂಟಪವಾಗಿ ಸೃಷ್ಟಿ ಪಡೆದು ಗಣೇಶನ ಪೀಠರೋಹಣಕ್ಕೆ ಕಾಯುತ್ತಾ ಇರುತ್ತಿತ್ತು.

ಗಣೇಶ ಹಬ್ಬಕ್ಕೆ ಒಂದೆರಡು ತಿಂಗಳುಗಳ ಮುಂಚಿತವಾಗಿಯೇ ನಮ್ಮೂರ ಶಾಲಾವರಣದಲ್ಲಿ ಪ್ರತಿದಿನ ಸಂಜೆಯಿಂದ ರಾತ್ರಿಯವರೆಗೂ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಭ್ಯಾಸ ಜರಗುತ್ತಾ ಇರುತ್ತಿತ್ತು. ಅಲ್ಲಿ ಸಹಜವಾಗಿ ನಾನು ಮತ್ತು ನನ್ನ ಸಂಗಡಿಗರು ಇಂದೆಂದು ನೋಡಿರದ ಹಾವಭಾವ ತೋರಿಸುವ ಅಭ್ಯಾಸಿಗರು, ಅರ್ಥ-ದ್ವಂದ್ವರ್ಥಗಳಿಂದಾಗಿ ಒಮ್ಮೊಮ್ಮೆ ಒಡೆದು ಮೂಡುತ್ತಿದ್ದ ನಗೆ ಚಟಾಕಿ, ನಾಟಕದ ಮಾಸ್ತರರು ಹೋರ್ಮೊನಿಯಂ ನುಡಿಸುವುದು, ಅಭ್ಯಾಸಿಗರಿಗೆ ಹಾಡನ್ನು ಹೇಳಿಕೊಡುವುದು, ವೀರಗಾಸೆ ಅಭ್ಯಾಸಿಗರ ರಣಘರ್ಜನೆ ಒಟ್ಟಾರೆ ಎಲ್ಲವೂ ಒಂದು ರೀತಿಯ ಹಾಸ್ಯ, ವಿನೋದ, ಮನೋರಂಜನೆಯನ್ನು ನಮಗೆ ತಂದುಕೊಡುತ್ತಿತ್ತು. ಒಂದೊಂದು ದಿನ ಕಾರ್ಯಕ್ರಮಗಳ ಅಭ್ಯಾಸವನ್ನು ನೋಡುತ್ತಾ, ಅಲ್ಲೇ ಮಲಗಿ ಬಿಡುತ್ತಿದ್ದೆವು. ಕೊನೆಯಲ್ಲಿ ಅಭ್ಯಾಸಿಗರು ನಮ್ಮನ್ನು ಎದ್ದೇಳಿಸಿ, ನಮ್ಮ, ನಮ್ಮ ಮನೆಯವರೆಗೂ ಬಂದು ನಮ್ಮನ್ನು ಬಿಟ್ಟುಹೋಗುತ್ತಿದ್ದರು

ಗಣೇಶಮೂರ್ತಿಯ ಪೀಠರೋಹಣ ದಿನದಿಂದ ಆರಂಭಿಸಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ದಿನದವರೆಗೂ ಅಂದರೆ ಸುಮಾರು ಹದಿನೈದು ದಿನಗಳ ಕಾಲ ಮಿತಿಯಿಲ್ಲದ ಪುಳಕ, ನಿತ್ಯ ನವನವೀನ ಉತ್ಸಾಹ ನಮ್ಮ ಪಾಲಿಗೆ ಜಮಾವಾಗುತ್ತಿತ್ತು . ಊರಲ್ಲಿ ದೊಡ್ಡ ಗಣೇಶನನ್ನು ಕೂರಿಸುವುದರ ಜೊತೆಗೆ ನಾನು, ನನ್ನ ಸಹಪಾಠಿಗಳು ಸೇರಿದಂತೆ ಬಹುತೇಕ ಹುಡುಗರು ತಮ್ಮ,ತಮ್ಮ ಮನೆಗಳಲ್ಲಿ ಚಿಕ್ಕದಾದ ಮಂಟಪವನ್ನು ಕಟ್ಟಿ, ಚಿಕ್ಕ ಗಣೇಶಮೂರ್ತಿಯನ್ನು ಕೂರಿಸುತ್ತಿದ್ದೆವು. ಒಂದುಸಾರಿ ಗಣೇಶಮೂರ್ತಿ ಅಕ್ಕಪಕ್ಕದ ಊರಲ್ಲಿ ಎಲ್ಲೂ ಸಿಗದೇ, ನಮ್ಮೂರಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಊರಿಗೆ ಸೈಕಲ್ಲಿನಲ್ಲಿ ಪ್ರಯಾಣಿಸಿ ಗಣೇಶಮೂರ್ತಿಯನ್ನು ಖರೀದಿಸಿ ಬಂದದ್ದುಂಟು!

ಪ್ರತಿದಿನ ಬೆಳಗ್ಗೆ ಎದ್ದು ಮನೆಯಲ್ಲಿನ ಚಿಕ್ಕ ಗಣೇಶನಿಗೆ ಪೂಜೆ, ಪುನಸ್ಕಾರ ಅರ್ಪಿಸಿ, ಶಾಲೆಗೆ ಹೋಗುವ ವೇಳೆಯವರೆಗೂ ದೊಡ್ಡ ಗಣಪತಿಯ ಪೆಂಡಾಲ್ ನಲ್ಲೇ ಕಾಲ ಕಳೆಯುತ್ತಿದ್ದೆವು. ಪುನಃ ಸಂಜೆ ಶಾಲೆಯನ್ನು ಮುಗಿಸಿಕೊಂಡು ಬಂದ ನಂತರವೂ ಓಡೋಡಿ ಹೋಗಿ ಪೆಂಡಾಲ್ ಅನ್ನು ಸೇರಿ ಅಲ್ಲಿ ಆಟವಾಡುತ್ತಿದ್ದೆವು, ಕುಣಿಯುತ್ತಿದೆವು, ಪೂಜೆಯ ವೇಳೆಯಲ್ಲಿ ಕೈಮುಗಿದು ನಿಲ್ಲುತ್ತಿದ್ದೆವು ಮತ್ತು ಸಂಜೆ ಮಹಮಂಗಳಾರತಿಯ ನಂತರ ಕೊಡುವ ಫಲಾಹಾರಕ್ಕೆ ಮುಗಿಬೀಳುತ್ತಿದ್ದೆವು. ಇಷ್ಟೇ ಅಲ್ಲದೇ ಬೆಳಗ್ಗೆ ಹಾಗೂ ಸಂಜೆ ಊರಿನ ಎಲ್ಲ ಮನೆಗಳಿಗೆ ಕೇಳುಸುವಂತೆ ಧ್ವನಿ ವರ್ಧಕದಿಂದ ಮೂಡಿಬರುತ್ತಿದ್ದ ಭಕ್ತಿಗೀತೆಗಳನ್ನೂ ದಿನ-ದಿನ ಆಲಿಸುತ್ತಾ ಇದ್ದೆವು, ಕಾಲಕ್ರಮೇಣ ಕೆಲವು ಭಕ್ತಿಗೀತೆಗಳು ನಮಗೆ ಕಂಠಪಾಠವಾಗಿದ್ದವು. [ಉದಾಹರಣೆಗೆ :೧) ಗಜಮುಖನೇ ಗಣಪತಿಯ ನಿನಗೆ ವಂದನೆ|, ನಂಬಿದವರ ಬಾಳಿನ ಕಲ್ಪತರು ನೀನೇ|, ೨) ಅಷ್ಟ ಗಣಪತಿಯ ಆರಾಧನೆ,ವಿಶಿಷ್ಟ ರೀತಿಯಲ್ಲಿ ಔಪಾಸನೆ|, ೩)ಶರಣು ಶರಣಯ್ಯಾ, ಶರಣು ಬೆನಕ|, ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕ! ೪)ಮೂಷಿಕ ವಾಹನ ಮೋದಕ ಹಸ್ತ, ವಾಮನ ರೂಪ ಮಹೇಶ್ವರ ಪುತ್ರ| ಹೀಗೆ ಇತ್ಯಾದಿ ಭಕ್ತಿ ಗೀತೆಗಳು ನಮ್ಮನ್ನು ಬಹಳವಾಗಿ ಆವರಿಸಿಕೊಂಡಿದ್ದವು ಈಗಲೂ ಅಷ್ಟೇ, ಈ ಮೇಲೆ ಹೆಸರಿಸಿದ ಭಕ್ತಿಗೀತೆಗಳ ಸಾಲು ಶ್ರವಣದ ಅಂಚನ್ನು ತಾಗಿದ ಕ್ಷಣದಲ್ಲಿ ಮೈ-ಮನದಲ್ಲಿ ನವಿರು ಸ್ಪಂದನವಾಗುವುದು], ಎಲ್ಲಿ ಗಣೇಶನಿರುವನೋ ಅಲ್ಲಿ ತಾಯಿ ಗೌರಮ್ಮ ಇರಲೇ ಬೇಕಲ್ಲವೇ? ಹಾಗಾಗಿ ದೊಡ್ಡ ಗಾತ್ರದ ಗಣೇಶಮೂರ್ತಿಯ ಪಕ್ಕದಲ್ಲಿ ಅಂಗೈ ಉದ್ದದ ಗೌರಮ್ಮನ ಮೂರ್ತಿಯುನ್ನು ಸಹ ಕೂರಿಸುತ್ತಿದ್ದರು.

ದಿನಂಪ್ರತಿ ಏನಾದರೂ ಒಂದು ಮನೋರಂಜನೀಯ ಕಾರ್ಯಕ್ರಮವಿರುತ್ತಿತ್ತು ಚಿಕ್ಕ-ಪುಟ್ಟ ನಾಟಕ, ಭಕ್ತಿ ಪ್ರಧಾನ ಚಲನಚಿತ್ರಗಳನ್ನು ಹಾಕುವುದು, ಹೀಗೆ ಇತ್ಯಾದಿ ಕಾರ್ಯಕ್ರಮಗಳು ಇರುತ್ತಿದ್ದವು. ಆದರೆ ಒಂದು ಸ್ವಲ್ಪವೂ ಹೇಳದೇ-ಕೇಳದೆ ಬರುತ್ತಿದ್ದ ಮಳೆ. ಮಳೆಯನ್ನು ಕಂಡು ಯಾರಿವನೆಂದು? ಅದೇಕೋ? ಮೂನಿಸಿಕೊಂಡು ಎರಡು-ಮೂರು ದಿನಗಳಾದರೂ ಬಾರದೆ ಇರುತ್ತಿದ್ದ ವಿದ್ಯುತ್, ಇವೆರಡು ಆ ಸಮಯದಲ್ಲಿ ನಮ್ಮ ದೊಡ್ಡ ಶತ್ರುಗಳಂತೆ ತೋರುತಿದ್ದವು.

ಹೀಗೆ ವಿಜ್ರುಂಬಣೆಯಿಂದ ನಡೆಯುತ್ತಿತ್ತು ಹಬ್ಬದ ಆಚರಣೆ ನಮ್ಮ ಊರಿನಲ್ಲಿ ಎಂದು ಹೇಳಲು ಕುಶಿಯಾಗುತ್ತದೆ. ಆ ಸಡಗರ ಈಗ ನೆನೆಸಿಕಂಡರೂ ಮನಸ್ಸಿಗೆ ಮುದನೀಡುತ್ತದೆ. ಹಬ್ಬದ ಈ ಸಂಬ್ರಮ-ಸಡಗರ ನಾಡಿನಲ್ಲಿ ಯಾವಾಗಲೂ ಹೀಗೆ ಇರಲಿ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಸಿಹಿ ಹಾರೈಕೆಗಳು!

ದಿನಾಂಕ ೨೬-ಆಗಸ್ಟು-೨೦೧೪ - ಸುನಿಲ್ ಮಲ್ಲೇನಹಳ್ಳಿ
ಸ್ಥಳ: ಸಂತ ಕ್ಲಾರ

(ಚಿತ್ರಕೃಪೆ: http://www.polyvore.com)