ಗುರುವಾರ, ಅಕ್ಟೋಬರ್ 23, 2008

ದೀಪಾವಳಿಯು ಬಂದಿಹುದು..


ಎಲ್ಲರಿಗೂ ದೀಪಾವಳಿ ಹಬ್ಬದ ಮುಂಚಿತವಾದ ಶುಭಾಶಯಗಳು. ದೀಪಾವಳಿಯ ಹಬ್ಬಕೆಂದು ಒಂದು ಕವನ ಬರೆದಿರುವೆನು ಒಮ್ಮೆ ಓದಿರಿ.
ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು..
ನಾಡಿಗೆಲ್ಲ ಸಂಭ್ರಮದ ಸಡಗರವ ಹೊತ್ತು ತಂದಿಹುದು..
ಮನೆ ಮನೆಯಲಿ ಬೆಳಗೋ ಹಬ್ಬದ ಹುರುಪಿನ ದೀವಿಗೆ..
ನವೀರು ಕಳೆಯ ತಂದಿಹುದು ನಮ್ಮಯ ಈ ಬಾಳಿಗೆ..
ಸುಜ್ಞಾನದ ಹಾದಿಯನು ತೋರಿರುವುದು ಜೀವನದ ನಾಳಿಗೆ..

ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು..
ಬನ್ನಿ ಅರಿವಿನ ಸಂದೇಶವ ಕಳಿಸೋಣ ನರಕಾಸುರನೂರಿಗೆ..
ಬನ್ನಿ ಭಾವಯೈಕ್ಯದ ಬೆಸುಗೆ ಹಾಗೋಣ ಬಲಿಯೂರಿನ ಪಾಲಿಗೆ..
ಬನ್ನಿ ಎಲ್ಲರು ಜಯಕಾರ ಹಾಕೋಣ ಮಹಾಲಕ್ಷ್ಮಿಗೆ..
ಬನ್ನಿ ಎಲ್ಲರು ಒಟ್ಟಾಗಿ ತಿನ್ನೋಣ ಏಕತೆಯ ಹೋಳಿಗೆ..
ಬನ್ನಿ ಎಲ್ಲರು ಗುಟ್ಟಾಗಿ ಬೆಂಕಿ ಇಡೋಣ ಅಂಧಕಾರದ ಬೇಲಿಗೆ..
- ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಮಂಗಳವಾರ, ಅಕ್ಟೋಬರ್ 21, 2008

ಮುಂಬರುವ ದಿನಗಳಲ್ಲಿ ಬೆಂಗಳೂರು ಉದ್ಯಾನ ನಗರಿಯಾಗಿ ಉಳಿಯಲಿದೆಯೇ?


ಮತಾಂತರ, ಸರಣಿ ಬಾಂಬ್ ಸ್ಪೋಟ ಮುಂತಾದ ಅಹಿತಕರ ಘಟನೆಗಳಿಂದ ನಮ್ಮ ರಾಜ್ಯದಲ್ಲಿ ಅದರಲ್ಲೂ ಬೆಂಗಳೊರಿನಲ್ಲಿ ಒಂದು ರೀತಿಯ ಅಶಾಂತಿಯ ವಾತಾವರಣ ನೆಲಸಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಈ ಘಟನೆಗಳಿಗೆ ಪೂರಕವಾಗಿರುವ ಮತ್ತೊಂದು ಘಟನೆಯೆಂದರೆ ಬೆಂಗಳೂರಿನಲ್ಲಿ ಮಿತಿ ಮೀರಿ ಕಟಲ್ಪಡುತ್ತಿರುವ ಅಪಾರ್ಟ್‌ಮೆಂಟ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್‌ಗಳು ಬೆಂಗಳೂರಿನ ಹಸಿರನ್ನು ಹಾಳು ಗೆಡವುದರಲ್ಲಿ ಮಹತ್ತರವಾದ ಕಾಣಿಕೆಯನ್ನು ನೀಡುತ್ತಿವೆ. ಆ ವಿಷಯವಾಗಿ ಬರೆದ ಲೇಖನವಿದು ತಪ್ಪದೆ ಓದಿರಿ.

(ಹಸಿರೇ ಉಸಿರು ಎಂದನ್ನುವವರು ಇವರೇ.. ಕಂಡ ಕಂಡಲೇಲ್ಲ ಹಸಿರಿನ ಉಸಿರನು ತೆಗೆಯಲು ಅನುಮತಿ ಕೊಡುವವರೂ ಇವರೇ..)
ಈಗ್ಗೆ ಸುಮಾರು ದಿನಗಳ ಹಿಂದೆ ಎಂದಿನಂತೆ ನಮ್ಮ ಕಂಪನಿಯ ವಾಹನದಲ್ಲಿ ಕುಳಿತು ಆಫೀಸಿಗೆ ಹೋಗುತ್ತಿದ್ದೆ. ಮಾಮೂಲಿಯಂತೆ ನಮ್ಮ ಕಂಪನಿಯ ವಾಹನವು ಶೇಷಾದ್ರಿಪುರಂ ಕಾಲೇಜ್ ಮಾರ್ಗವಾಗಿ ಶಿವಾನಂದ ಸರ್ಕಲ್ ದಾಟಿ ರೇಸ್‌ಕೋರ್ಸ್ ರಸ್ತೆಯನ್ನು ಪ್ರವೇಶಿಸಿ ಖನಿಜ ಭವನದ ಹತ್ತಿರ ಬರುತ್ತಿದ್ದಂತೆಯೇ ನನ್ನ ಅಂತರಾಳದಲ್ಲಿ ಸುಪ್ತವಾಗಿ ಅಡಗಿಕೊಂಡಿದ್ದ ಪುಟ್ಟ ಪರಿಸರ ಪ್ರೇಮಿಯೊಬ್ಬ ಅಯ್ಯೋ ಎಂದು ಚಿತ್ಕಾರ ಮಾಡಿಬಿಟ್ಟ.

ಅದಕ್ಕೆ ಮೂಲಕಾರಣವೇನೆಂದರೆ? “ಮೆಟ್ರೋರೈಲು”ಯೆಂಬ ಮಹತ್ವಾಕಾಂಕ್ಷಿ ಯೋಜನೆಯ ಅಡಿಯಲ್ಲಿ ರೈಲು ಮಾರ್ಗವನ್ನು ನಿರ್ಮಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿ ಮೈತುಂಬ ಹಸಿರು ಎಲೆಗಳನ್ನು ಹೊದ್ದುಕೊಂಡು ಬೃಹದಾಕಾರದಲ್ಲಿ ಬೆಳೆದು ನಿಂತಿದ್ದ ಹೆಮ್ಮರಗಳನ್ನು ನಿಕೃಷ್ಟವಾಗಿ ಬುಡ ಸಮೇತ ಕಡಿದು ಉರುಳಿಸುತ್ತಿದ್ದ ದೃಶ್ಯವನ್ನು ನಾನು ಕಣ್ಣಾರೆ ಕಂಡದ್ದೇ ಕಾರಣ. ನಾನೊಬ್ಬ ಅಂತ ಅಲ್ಲ ಆ ಹೃದಯ ವಿದ್ರಾವಕ ದೃಶ್ಯವನ್ನು ಕಂಡ ಬಹುತೇಕ ನಾಗರೀಕರು ಸಹ ಅಯ್ಯೋ ಎಂದು ಮಮ್ಮಲು ಮರುಗಿಯೇ ಇರುತ್ತಾರೆ. ಏಕೆಂದರೆ ಅವು ಸರ್ವೇಸಾಮಾನ್ಯವಾದಂತಹ ಮರಗಳಲ್ಲ ಬೆಂಗಳೂರಿನ ಗತವೈಭವನ್ನು ಸಾರುವಂತಿದ್ದ ತೀರ ಹಳೆಯ ಮರಗಳವು.

ಈಂತಹ ಸನ್ನಿವೇಶಗಳನ್ನು ನೋಡುತ್ತಿದ್ದರೆ ನಮ್ಮ ಕಣ್ಣೆದುರಿಗೆ ನಮ್ಮ ಬೆಂಗಳೂರಿನ ಪರಿಸ್ಥಿತಿ ಹೀಗಾಗಿ ಹೋಗುತ್ತಿರುವುದಲ್ಲಾ ಎನ್ನುವ ಕ್ರೂರ ನೋವು ಹಾಗೂ ಸಂಕಟ ಹಿತೈಷಿಗಳಾದ ನಮ್ಮನ್ನು ಕಾಡುತ್ತಿರುವುದು ನಿಜ. ಒಮ್ಮೆ ಮಹಾತ್ಮ ಗಾಂಧಿ ರಸ್ತೆ, ರೇಸ್‌ಕೋರ್ಸ್ ರಸ್ತೆ ಇನ್ನೂ ಹತ್ತು ಹಲವಾರು ಕಡೆ ಹೋಗಿ ನೋಡಿದರೆ ಗೊತ್ತಾಗುತ್ತೆ ಎಷ್ಟು ಅಂದವಾಗಿ ಮರಗಳನ್ನು ಬುಡ ಸಮೇತ ನಿರ್ನಾಮ ಮಾಡಿದ್ದಾರೆ ಎಂದು.

ನಮ್ಮ ಬೆಂಗಳೂರಿನ ಹಿರಿಮೆ-ಗರಿಮೆಗೆ ಇಲ್ಲಿನ ವಾತಾವರಣ, ಇಲ್ಲಿರುವ ಅತಿಸುಂದರ ಉದ್ಯಾನವನಗಳು ಹಾಗೂ ಯಥೇಚ್ಛಾಗಿ ಬೆಳೆದು ನಿಂತಿರುವ ಕರಿಹಸಿರಿನ ಗಿಡಮರಗಳೇ ಕಾರಣ ಅಂತ ನಮಗೆ ಗೊತ್ತು.

ಆದರೆ ಜಾಗತೀಕರಣದ ಫಲವಾಗಿ 1997ರ ಈಚೆಗೆ ಸಾವಿರಾರು ಸಾಪ್ಟ್‌ವೇರ್ ಕಂಪನಿಗಳು ಹಾಗೂ ಬೆರಳೆಣಿಕೆಗೆ ಸಿಗದಷ್ಟು ಹಲವಾರು ಬೇರೆ ಬೇರೆ ಉದ್ಯಮೆಗಳು ಈ ನಮ್ಮ ಉದ್ಯಾನ ನಗರಿಗೆ ಕಾಲಿರಿಸಿದವು. ಅದರ ಜೊತೆ ಜೊತೆಗೇನೆ ಲಕ್ಷೋಪ ಲಕ್ಷ ವಿದ್ಯಾವಂತರುಗಳು ನಮ್ಮ ದೇಶದ ನಾನಾ ಮೂಲೆ ಮೂಲೆ ಗಳಿಂದ ಉದ್ಯೋಗವನ್ನು ಅರಸಿ ಇಲ್ಲಿಗೆ ಬಂದರು. ಅಲ್ಲದೇ ಕುಬೇರನ ವಂಶಜರೆಂದೇ ಪರಿಗಣಿಸಲಾದ ಅನೇಕಾನೇಕ ವ್ಯಾಪಾರಸ್ಥರುಗಳು ಸಹ ತಮ್ಮ ವ್ಯಾಪಾರಿ ಮಳಿಗೆಗಳನ್ನು ತೆರೆಯಲು ಇಲ್ಲಿಗೆ ಬಂದರು. ಎಲ್ಲ ಇಷ್ಟೇ ಆಗಿದ್ದರೇ ಹೋಗ್ಲಿ ಬಿಡಿ ಅನ್ನಬಹುದಿತ್ತು.

ಆದರೆ ಹೀಗೆ ಬಂದವರು ಸುಮ್ಮನೆ ಇದ್ದರೆ? ಇಲ್ಲ, ಬರುತ್ತಿದ್ದ ಕೈ ತುಂಬ ಸಂಬಳ, ಆದಾಯ ತಂದ ಆಸೆ, ದುರಾಸೆಗಳು ಇವರಲ್ಲಿ ಚಿತ್ರವಿಚಿತ್ರದ ಕನಸುಗಳಿಗೆ ದಾರಿ ಮಾಡಿಕೊಟ್ಟವು. ಅದರಂತೆ ಈ ಉದ್ಯಾನ ನಗರಿಯಲ್ಲಿ ತಮ್ಮದೇ ಆದ ಮನೆ ಇರಬೇಕೆಂದು ಇಚ್ಚಿಸಿದರು ಅದರ ಜೊತೆಗೆ ಶಾಪಿಂಗ್ ಮಾಡಲು, ವಾರಾಂತ್ಯದಲ್ಲಿ ಮೋಜು ಮಾಡಲು ದೊಡ್ಡ ದೊಡ್ಡ ಮಹಲುಗಳು ಇದ್ದರೆ ಇನ್ನೂ ಚೆಂದ ಎಂದೆಣಿಸಿದರು. ಇವರುಗಳ ಆಸೆಯನ್ನು ತಣಿಸಲು ರಿಯಲ್‌ಎಸ್ಟೇಟ್ ಎಜೆನ್ಸಿಗಳು ಹಾಗೂ ದೊಡ್ಡ ದೊಡ್ಡ ಪ್ರಭಾವಿ ಬಂಡವಾಳಗಾರರು ಸಹಕಾರಿಯಾಗಿ ನಿಂತರು.

ಅಂಧಾಭಿಮಾನವಿದೆಂದು ಎನ್ದೆಣಿಸದಿರಿ. ಇರುವ ವಾಸ್ತವ್ಯತೆಯನ್ನು ಹೇಗೆ ಹೇಳಬೇಕೋ ಹಾಗೆ ಹೇಳಿರುವೆನು.

ನಂತರ ಮುಂದೇನು ಮಾಡಿದರು ಅಂತ ನಿಮಗೆ ಚೆನ್ನಾಗಿಯೇ ತಿಳಿದಿದೆ. ಈ ಉದ್ಯಾನ ನಗರದ ಹೊರವಲಯ, ಒಳವಲಯ ಎಲ್ಲೆಂದರಲ್ಲಿ ಸೊಂಪಾಗಿ ಬೆಳೆದು ನಿಂತಿದ್ದ ಅಮಾಯಕ ಗಿಡ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಪರ್ವತಗಳ ಸಾಲುಗಳನ್ನೇ ನೆನಪಿಸುವಂತಹ ಎತ್ತರೆತ್ತರದ ಸಾವಿರಾರು ಅಪಾರ್ಟ್‌ಮೆಂಟ್, ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಕಟ್ಟಿದರು, ಈಗಲೂ ಕಟ್ಟುತ್ತಿರುವರು.
ಇದಕ್ಕೆ ಉದಾಹರಣೆಯಂತೆ, ವೈಟ್‌ಫೀಲ್ಡ್‌ನ ಸುತ್ತಾಮುತ್ತಾ, ಎಲೆಕ್ಟ್ರಾನಿಕ್ಸ್ ಸಿಟಿ ಸುತ್ತಾಮುತ್ತಾ, ಮಾರುತಹಳ್ಳಿ ಸುತ್ತಾಮುತ್ತಾ, ಯಲಹಂಕ ಉಪನಗರದ ಸುತ್ತಾಮುತ್ತಾ ಇನ್ನೂ ಹಲವಾರು ಕಡೆ ಕಣ್ಣಳತೆಗೂ ನಿಲುಕದಷ್ಟು ಉದ್ದಗಲವಾಗಿ ನಾನಾ ಆಕೃತಿಗಳುಳ್ಳ ಬಿಲ್ಡಿಂಗ್‌ಗಳನ್ನು ಕಟ್ಟುತ್ತಿರುವರು.

ಇಷ್ಟೆಲ್ಲ ಆದರೂ ಬೆಂಗಳೂರು ತನ್ನ ಹಿರಿಮೆಯನ್ನು ಇನ್ನು ಕಳೆದುಕೊಂಡಿಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದಲ್ಲಿ ಇರುವ ಕಾರ್ಖಾನೆಗಳ ಹಾಗೂ ಕಛೇರಿಗಳ ಆವರಣದಲ್ಲಿ ಗಿಡಮರಗಳು ಈಗಲೂ ಸಹ ಬಹಳ ಸುರಕ್ಷಿತವಾಗಿ ಇವೆ. ಅಲ್ಲದೇ ನೂರಾರು ಉದ್ಯಾನವನಗಳು ಸಹ ಅದಕ್ಕೆ ಪೂರಕವಾಗಿ ಇವೆ. ಆದರೆ ಬರೀ ಇಷ್ಟಿದ್ದರೆ ಸಾಕೇ?

ಈವೂರಿನಲ್ಲಿ ಹೇಗೆ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ಕಟ್ಟಡಗಳ ಸಂಖ್ಯೆ ವೃದ್ಧಿಯಾಗುತ್ತಿದೆಯೋ ಅದೇ ರೀತಿ ಗಿಡಮರಗಳ ಸಂಖ್ಯೆಯಲ್ಲೂ ದುಪ್ಪಟ್ಟು ವೃದ್ಧಿಯಾಗಬೇಕು ಅಲ್ಲವೇ? ಆಗ ಮಾತ್ರ ನಮ್ಮ ಬೆಂಗಳೂರು ಸುಂದ ನಗರಿ, ಉದ್ಯಾನ ನಗರಿ ಎನ್ನುವ ಹೆಸರನ್ನು ಉಳಿಸಿಕೊಳ್ಳಲು ಸಾಧ್ಯ ಅಲ್ಲವೇ? ಇಲ್ಲವೆಂದರೆ ಬೆಂಗಳೂರು ಎಂಬ ಹೆಸರು ಹೋಗಿಬಿಟ್ಟು “ಬೋಳೂರು” ಎಂದ ಹೆಸರು ಬಂದರೂ ಬರಬಹುದು
ಇದಕ್ಕೆ ಯಾರನ್ನು ದೂಷಿಸಬಹುದು??
ಹೀಗೆ ಕಂಡ ಕಂಡವರಿಗೆಲ್ಲ ಭರ್ಜರಿ ಸುತ್ತಳತೆಗಳುಳ್ಳ ವಾಣಿಜ್ಯ ಸಂಕೀರ್ಣಗಳನ್ನು, ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲು ಅಸ್ತು ಎಂದು ಹೇಳುವ ಸರಕಾರವನ್ನೇ?

ಇಲ್ಲ ಒಳಗೊಳಗೆ ಕೋಟ್ಯಾನುಕೋಟಿ ಹಣವನ್ನು ಗುಳುಂ ಮಾಡಿ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲು ಅನುಮತಿಯನ್ನು ಮಂಜೂರು ಮಾಡಿಸಿಕೊಡುವ ತುಚ್ಛಮಟ್ಟದ ಪಟ್ಟಭದ್ರ ಹಿತಾಸಕ್ತಿಯುಳ್ಳ ಸರಕಾರಿ ಅಧಿಕಾರಿಗಳನ್ನೇ?
ಇಲ್ಲ ಎಲ್ಲೆಲ್ಲಿಂದಲೋ ಬಂದು ಬೆಂಗಳೂರಿನ ವಾತಾವರಣ, ನೆಮ್ಮದಿಗೆ ಮನಸೋತು ಇಲ್ಲೇ ಠಿಕಾಣಿ ಹೂಡಿ ತಮ್ಮ ವಾಸಕ್ಕೆ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಕೊಂಡು ಅಲ್ಲದೆ ತಮ್ಮ ಮೋಜಿಗಾಗಿ ದೊಡ್ಡ ದೊಡ್ಡ ಮಹಲುಗಳು ಇರಬೇಕೆಂದು ಬಯಸುವ ಅವರುಗಳನ್ನು ದೂಷಿಸಲೇ?

ಇಲ್ಲ ಇವೆಲ್ಲವನ್ನೂ ನೋಡಿಯೂ ಕಿಂಚಿತೂ ಪ್ರತಿಭಟನೆ ಮಾಡದೆ ತಮ್ಮ ಪಾಡಿಗೆ ತಮ್ಮ ಬದುಕನ್ನು ಸಾಗಿಸುತ್ತಿರುವ ಬೆಂಗಳೂರಿಗರನ್ನು ಅರ್ಥಾತ್ ಕನ್ನಡಿಗರನ್ನು ದೂಷಿಸಬಹುದೇ?
ಸಧ್ಯಕ್ಕೆ ನಮ್ಮ ಸರಕಾರ ಮಾಡಬೇಕಾಗಿರುವ ಕೆಲಸಗಳೇನು?

೧.ಬೆಂಗಳೂರಿನಲ್ಲಿ ಸಾಪ್ಟವೇರ್ ಕಂಪನಿಗಳು ಮಿತಿ ಮೀರಿಯೇ ಇವೆ. ಅಲ್ಲದೇ ಇಲ್ಲಿ ಇರುವ ಕಂಪನಿಗಳಲ್ಲಿ ಕನ್ನಡಿಗರು ಇರುವುದು ಅಷ್ಟಕ್ಕೆ ಅಷ್ಟೆಯೇ. ಇನ್ನು ಮುಂದೆ ಯಾವುದೇ ಕಂಪನಿಗಳ ಅಂಗ ಕಛೇರಿಯನ್ನು ಬೆಂಗಳೂರಿನಲ್ಲಿ ತೆರೆಯಲು ಅನುಮತಿ ಕೊಡಬಾರದು. ಇದಕ್ಕೆ ಪರ್ಯಾಯವಾಗಿ ಧಾರವಾಡ, ಮಂಗಳೂರು, ಹಾಸನ ಇನ್ನೂ ಮುಂತಾದ ನಗರಗಳಲ್ಲಿ ಕಂಪನಿಗಳನ್ನು ತೆರೆಯಲು ಆಹ್ವಾನ ನೀಡುವುದು. ಅಲ್ಲಿ ಅವರಿಗೆ ಎಲ್ಲ ವಿಧದ ಸೌಕರ್ಯಗಳನ್ನು ಕಲ್ಪಸಿ ಕೊಡುವುದು.

೨.ಇನ್ನು ಮುಂದೆ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು , ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಲು ಕೊಡುವ ಅನುಮತಿಯನ್ನು ಖಡಾ ಖಂಡಿತವಾಗಿ ನಿರಾಕರಿಸುವುದು. ಒಂದು ಅಪಾರ್ಟ್‌ಮೆಂಟ್ ಇಲ್ಲವೇ ವಾಣಿಜ್ಯ ಸಂಕೀರ್ಣಗಳಲ್ಲಿ ದಿನನಿತ್ಯ ಉಪಯೋಗಿಸುವ ನೀರು, ವಿದ್ಯುತ್. ಅವುಗಳ ಬೆಲೆಯನ್ನು ಸರಕಾರ ಇನ್ನು ಅರಿತು ಕೊಂಡಿಲ್ಲವೇ? ಅರಿತು ಕೊಂಡರೆ ಗೊತ್ತಾಗುವುದು ಮಾನವನ ಆಸೆಗೆ ಕೊನೆಯಲ್ಲಿ?

೩.ಈಗಿರುವ ಕಂಪನಿಗಳು, ವಾಣಿಜ್ಯ ಸಂಕೀರ್ಣಗಳ ಆವರಣದಲ್ಲಿ ಇಂತಿಷ್ಟು ಅಂತ ಮರಗಳನ್ನು ಬೆಳೆಸಲೇ ಬೇಕೆಂದು ತಾಕೀತು ಮಾಡುವ ನಿಯಮವನ್ನು ಕೂಡಲೇ ಜಾರಿಗೆ ತರುವುದು.

೪.ಯಾವುದೇ ಪರಿಸ್ಥಿತಿಯಲ್ಲೂ ಮರಗಳನ್ನು ಕಡಿಯಲು ಅವಕಾಶ ಮಾಡಿಕೊಡಬಾರದು. ಮರವನ್ನು ಕಡಿಯಲೇಬೇಕೆಂಬ ಸಂದರ್ಭ, ಪ್ರಸಂಗಗಳು ಒದಗಿಬಂದ ಪಕ್ಷದಲ್ಲಿ ಅದಕ್ಕೆ ಪರ್ಯಾಯವಾಗಿ ಕನಿಷ್ಟ ಪಕ್ಷ 5 ಮರಗಳನ್ನಾದರೂ ಬೆಳೆಸಲೇಬೇಕು ಎಂಬ ಕಠಿಣ ಕಾನೂನು ಜಾರಿಗೆ ತರುವುದು.

೫.ಎಲ್ಲ ಕನ್ನಡ ಕುಲ ಬಾಂಧವರಲ್ಲಿ ಒಂದು ಕಳಕಳಿಯ ಮನವಿ ನಾವುಗಳೂ ಸಹ ನಮ್ಮ ನಮ್ಮ ಜೀವಿತಾವಧಿಯಲ್ಲಿ ಹೆಚ್ಚಿಗೆ ಅಲ್ಲ ಒಂದೊಂದು ಗಿಡ ನೆಟ್ಟು ಅದನ್ನು ಮರವಾಗಿ ಬೆಳೆಸುವ ಪ್ರಯತ್ನ ಮಾಡೋಣ.

ಕೊನೆಯದಾಗಿ ಹೇಳಬೇಕೆಂದರೆ ನಮ್ಮ ಬೆಂಗಳೂರು ನಮಗೆ ಬರಿ ದುಡ್ಡು ಗಳಿಸಿ ಕೊಡುವ ತಾಣವಾಗಬಾರದು ಜೊತೆಗೇನೇ ನೆಮ್ಮದಿಯನ್ನು, ಉಲ್ಲಾಸವನ್ನು, ಆರೋಗ್ಯವನ್ನು ವೃದ್ಧಿಸುವ ತಾಣವಾಗಬೇಕು ಅಲ್ಲವೇ?
ಇದು ಒಬ್ಬ ಕನ್ನಡಿಗನ ಆಶಯವಲ್ಲ, ಪಂಚ ಕೋಟಿ ಕನ್ನಡಿಗರ ಆಶಯವೆಂದು ನಾನು ಭಾವಿಸಿರುತ್ತೇನೆ.-

-ನಿಮ್ಮ ಸುನಿಲ್ ಮಲ್ಲೇನಹಳ್ಳಿ (http://mallenahallipages.blogspot.com/)