ಮನದ ಸಂತೆಯಲ್ಲಿ ನಡೆದಿಹುದು ಕನ್ನಡ ಪದಗಳ ನಿನಾದ! ಈ ಬ್ಲಾಗಿನಲಿ ಪ್ರತಿಕ್ಷಣವೂ ಹರಿದಿಹುದು ಅ ನಿನಾದ ಸಂವಾದ! ಓದುಗರಿಗಂತೂ ದಿನನಿತ್ಯವೂ ಹೊಸ ವಿಚಾರದ ಆಸ್ವಾದ. ..
ಸೋಮವಾರ, ಜನವರಿ 19, 2009
ಓ ನನ್ನ ಬಡಕನ್ನಡವೇ..ನಿನಗೆಲ್ಲರಿಂದಲೂ ಸಂಕಟವೇ??
ಎಲ್ಲರಿಗೂ ಹೃತ್ಪೂರ್ವಕ ನಮಸ್ಕಾರ,
ಜನವರಿ ೨೬ ರ ಗಣರಾಜ್ಯೋತ್ಸವದ ಪ್ರಯುಕ್ತ ಎಲ್ಲ ಪ್ರಾಂತೀಯ ಭಾಷೆಗಳ ಪ್ರಾಮುಖ್ಯತೆಯನ್ನು ಮನಗಂಡು ಬರೆದ ಲೇಖನವಿದು.
ಮೊನ್ನೆ ಮೊನ್ನೆ ದೆಹಲಿಯಲ್ಲಿ ದುಂಡು ಮೇಜಿನ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸಕ್ರಿಯಾವಾಗಿ ಪಾಲ್ಗೋಳ್ಳಲು ಭಾರತ ದೇಶದ ಎಲ್ಲಾ ಪ್ರಾದೇಶಿಕ ಸಮ್ಮೇಳನಕ್ಕೆ ತುಂಬು ಹೃದಯದಿಂದ ಆಹ್ವಾನಿಸಲಾಗಿತ್ತು. ಆಯಾ ರಾಜ್ಯಗಳಲ್ಲಿ, ಆಯಾ ಭಾಷೆಗಳು ಎದುರಿಸುತ್ತಿರುವ ಎಡರು, ತೊಡರುಗಳನ್ನು ಕುರಿತು ಚರ್ಚಿಸುವುದು ಹಾಗೂ ಭಾರತೀಯ ಭಾಷೆಗಳಲ್ಲೇ ಇರುವ ಒಳಜಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ಮೂಲನೆ ಮಾಡುವುದು ಎನ್ನುವುದರ ಬಗ್ಗೆ ನಿರ್ಣಯ ಕೈಗೊಳ್ಳುವುದು, ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿತ್ತು. ಹಿಂದಿ ಭಾಷೆಯು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.
ಸಮಯಕ್ಕೆ ಸರಿಯಾಗಿ ಸಮ್ಮೇಳನ ಶುರುವಾಯಿತು. ಒಂದೊಂದೇ ಭಾಷೆಗಳು ತಮ್ಮ, ತಮ್ಮ ರಾಜ್ಯಗಳಲ್ಲಿ ತಾವುಗಳು ಗಳಿಸಿಕೊಂಡಿರುವ ಹಿರಿಮೆ ಹಾಗೂ ತಾವುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರವಾಗಿ ಹೇಳುತ್ತಾ ಬಂದವು. ಬಹುಮುಖ್ಯವಾಗಿ ಎಲ್ಲ ಭಾಷೆಗಳು ತೋಡಿಕೊಂಡಿದ್ದು ಒಂದೇ ಅಳಲು, ಅದು “ಇಂಗ್ಲೀಷ್ ಭಾಷೆಯು ತಮ್ಮ ನಾಡಿನ ಜನರ ಮೇಲೆ ಬೀರುತ್ತಿರುವ ಗಾಢ ಪ್ರಭಾವ ಹಾಗೂ ಅದರಿಂದ ತಮ್ಮ ಉಳಿವಿಗೆ ಬಂದಿರುವ ಆಪತ್ತು”.
ಉತ್ತರ ಭಾರತದ ಎಲ್ಲಾ ಭಾಷೆಗಳ ಸರದಿ ಮುಗಿಯುತ್ತಿದ್ದಂತೆಯೇ, ದಕ್ಷಿಣ ಭಾರತೀಯ ಭಾಷೆಗಳ ಸರದಿ ಬಂತು. ಅದರಲ್ಲಿ ಮೊದಲನೇ ಸರದಿ ಮಲೆಯಾಳಂ ಭಾಷೆಯದಾಗಿತ್ತು. ಸಮಾರಂಭಕ್ಕೆಂದು ಚೆನ್ನಾಗಿಯೇ ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದ ಮಲೆಯಾಳಂ ಭಾಷೆಯು ಎಲ್ಲ ಭಾಷೆಗಳಿಗೂ ನಮಸ್ಕಾರ ಹೇಳುತ್ತಾ, ತನ್ನ ಮಾತನ್ನು ಮುಂದುವರೆಸಿತು, “ನಾನು ಬಳಸಲ್ಪಡುವ ಕೇರಳ ರಾಜ್ಯ ದಕ್ಷಿಣ ಭಾರತದ ರಾಜ್ಯಗಳಲ್ಲೇ ಬಹಳ ಚಿಕ್ಕದಿರುಬಹುದು. ಆದರೆ ನನ್ನ ಜನ ನನ್ನನ್ನು ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ, ಅಲ್ಲದೇ ಈ ಭೂಮಿಯ ಮೇಲಿರುವ ಪ್ರತಿಯೊಂದು ದೇಶಗಳಲ್ಲೂ ಮಲಯಾಳಂ ಜನರಿದ್ದಾರೆ. ಅವರುಗಳು ಅಲ್ಲಿ ಮಲಯಾಳಂ ನಾಡು, ನುಡಿ ಸಂಸ್ಕೃತಿಯನ್ನು ಬಹಳ ಅಚ್ಚುಕಟ್ಟಾಗಿ ಮೆರೆಸುತ್ತಿದ್ದಾರೆ. ಅವರ ಬಗ್ಗೆ ನನಗೆ ತುಂಬು ಹೆಮ್ಮೆ ಇದೆ. ಸದ್ಯಕ್ಕಂತೂ ನನಗೆ ನನ್ನ ನಾಡಿನಲ್ಲಿ ಯಾವುದೇ ಎಡರು ತೊಡರುಗಳಿಲ್ಲ, ಜೊತೆಗೆ ಇಲ್ಲಿಯವರೆಗೂ ನನಗಾಗಲಿ, ನನ್ನ ನಾಡಿಗಾಗಲಿ ನೆರೆಹೊರೆಯ ಸಹೋದರಿಯರ ನಾಡಿನ ಜನರಿಂದ ಯಾವ ತೊಂದರೆ ಉಂಟಾಗಿಲ್ಲ!” ಎಂದು ಹೇಳುತ್ತಾ.. ಬಹಳ ಸಂತೋಷದಿಂದ ತನ್ನ ಮಾತನ್ನು ಮುಗಿಸಿತು.
ನಂತರದ ಸರದಿ ಕನ್ನಡ ಭಾಷೆಯದಾಗಿತ್ತು. ಇವರೆಗೂ ಎಲ್ಲ ಭಾಷೆಗಳು ಹಿಂದಿಯಲ್ಲೇ ತಮ್ಮ ಅಭಿಪ್ರಾಯಗಳನ್ನು ಪ್ರಸ್ತಾವಿಸಿ, ಮಂಡಿಸಿದ್ದರಿಂದ ಕನ್ನಡ ಭಾಷೆಯು ಸಹ ಹಿಂದಿಯಲ್ಲೇ ತನ್ನ ಮನದಾಳದ ಮಾತುಗಳನ್ನು ತಿಳಿಸಲು ಮುಂದಾಯಿತು...
ಎಲ್ಲರಿಗೂ ನನ್ನ ನಮಸ್ಕಾರ, ಇಲ್ಲಿಯವರೆಗೂ ನೀವೆಲ್ಲರು ನಿಮ್ಮ, ನಿಮ್ಮ ನಾಡಿನಲ್ಲಿ, ನಿಮ್ಮ ಏಳಿಗೆಗೆ ಹಾಗೂ ಉಳಿವಿಗೆ ಇರುವ ಎಡರು ತೊಡರುಗಳನ್ನು ಮನ ಮುಟ್ಟುವಂತೆ ವಿವರಿಸಿ ಹೇಳಿದ್ದೀರಿ. ನಿಜ ಹೇಳಬೇಕೆಂದರೆ ಇವೊಂದು ಪರಿಸ್ಥಿತಿಯಿಂದ ನಾನು ಸಹ ಹೊರತಲ್ಲ. ನಿಮ್ಮಂತೆಯೇ ಜಾಗತೀಕರಣದ ಫಲವಾಗಿ ನನ್ನ ಉಳಿವು ಸಹ ಅನುಮಾನದ ವಿಷಯವಾಗಿ ಹೋಗಿದೆ.
“ಜಾಗತೀಕರಣ”ಇದು ಒಂದು ನೋವಿನ ವಿಷಯವಾದರೆ. ಇದರ ಜೊತೆಗೆ ನನ್ನವೇ ವೈವಿಧ್ಯಮಯವಾದ ನೋವುಗಳು ಇವೆ. ಅವುಗಳನ್ನು ಈ ಸಮಾರಂಭದಲ್ಲಿ ಹೇಳಲು ನನಗೆ ಹಕ್ಕು ಇದೆ ಎನ್ನುವ ಭಾವನೆ ನನ್ನದು, ಅದನ್ನು ಕೇಳುವ ಸಂಯಾಮ ನಿಮ್ಮಲ್ಲಿ ಇದೆ ಎಂದು ನಾ ಭಾವಿಸಿರುತ್ತೇನೆ,
1) ಈ ವಿಚಾರದಲ್ಲಿ ಮೊದಲನೆಯದಾಗಿ, ನನ್ನ ನಾಡಿನ ನೆರೆಹೊರೆಯಲ್ಲಿ ನಾಲ್ಕಾರು ಸಹೋದರಿಯರ ನಾಡುಗಳು ಇರುವುದು ನಿಮಗೆ ಗೊತ್ತಿದೆ. ಆ ನಾಡುಗಳ ಜನರಿಗಂತೂ ನನ್ನಿಂದ, ನನ್ನ ನಾಡಿನಿಂದ ಆದಷ್ಟು ಬೇಗ ಎಲ್ಲವನ್ನೂ ಕಸಿದುಕೊಳ್ಳುವ ಆಸೆ, ಕೇಂದ್ರ ಸರಕಾರವನ್ನೇ ಅಂಗೈಯಲ್ಲಿ ಇಟ್ಟಿಕೊಂಡಿರುವ ಆ ಜನರಿಗೆ ಹೆಜ್ಜೆ ಹೆಜ್ಜೆಗೂ ನನ್ನ ಏಳಿಗೆಗೆ ಮುಳ್ಳಾಗುವ ಆಸೆ. ಮತ್ತೊಂದೆಡೆ ನನ್ನ ನಾಡಿನ ಅವಿಭಾಜ್ಯ ಅಂಗವಾದ ಬೆಳಗಾವಿಯನ್ನು ಸಂಪೂರ್ಣವಾಗಿ ಕಸಿದುಕೊಳ್ಳುವ ಪ್ರಯತ್ನ. ಒಟ್ಟಾರೆ ನನ್ನ ನಾಡಿನ ಹೊರಗೂ ಎಲ್ಲೆಲ್ಲೂ ನನಗೆ ಉಳಿಗಾಲವೇ ಇಲ್ಲ.
2) ನನ್ನ ಉಳಿವಿಗಾಗಿ ಚಿಂತನೆಗಳನ್ನು ಮಾಡುವವರಿಗೆ, ಕನ್ನಡದ ವಾತಾವರಣದಲ್ಲಿ ಇರೋರಿಗೆ, ಕನ್ನಡಕ್ಕಾಗಿ ಶ್ರಮಿಸುವವರಿಗೆ, ಕೆಲವೊಂದು ಸತ್ಯಾಸತ್ಯಗಳು ತಿಳಿಯಬೇಕಾಗಿದೆ. ಪಾಪ ಅವರು ಕನ್ನಡ ಎಲ್ಲ ಕಡೆ ಬೆಳೆಯುತ್ತಿದೆ ಎಂದು ತಿಳಿದಿದ್ದಾರೆ.. "ನನ್ನ ನಾಡಿನ ರಾಜಧಾನಿ ಬೆಂಗಳೂರು ಒಂದರಲ್ಲೇ ಲಕ್ಷಾಂತರ ಜನ ಕನ್ನಡಿಗರು ಒಳ್ಳೊಳ್ಳೆ ಉನ್ನತ ದರ್ಜೆಯ ಕೆಲಸಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅವರುಗಳು ಬಹಳ ಸುಖಮಯವಾದಂತಹ ಜೀವನವನ್ನೂ ನಡೆಸುತ್ತಿದ್ದಾರೆ. ಆದರೆ ಅವರುಗಳಲ್ಲಿ ಬಹುಪಾಲು ಮಂದಿ “ಮಾತೃ ಭಾಷೆ” ಎನ್ನುವ ವಿಷಯದಲ್ಲಿ ಎಂತಹ ಹೃದಯ ಶೂನ್ಯರಾಗಿದ್ದಾರೆ. ನನ್ನ ಉಳಿವಿನ ಮಹತ್ವದ ಬಗ್ಗೆ ತಿಳುವಳಿಕೆಯನ್ನು ಮೂಡಿಸುವಂತಹ ಒಂದು ಕಾರ್ಯಕ್ರಮವನ್ನು ಅವರಿಂದ ಏರ್ಪಡಿಸಲು ಆಗಿಲ್ಲ. ಒಮ್ಮೆಯಾದರೂ ಹಳ್ಳಿಗಾಡುಗಳ ಕಡೆ ಹೋಗಿ ಅಲ್ಲಿ ಇಂಗ್ಲೀಷ್ ಭಾಷೆಯ ಬಗ್ಗೆ ಹೆಚ್ಚು, ಹೆಚ್ಚು ಒಲವು ತೋರುತ್ತಿರುವರಿಗೆ ಕನ್ನಡ ಮಾಧ್ಯಮದಲ್ಲಿ ಓದಿ ಏನ್ನೆಲ್ಲ ಸಾಧಿಸಬಹುದೆಂದು ಅರಿವು ಮೂಡಿಸಿ ಬರಲು ಅವರಿಗೆ ಸಮಯವಿಲ್ಲದಂತಾಗಿದೆ".
3) ಅಲ್ಲದೇ ನನ್ನ ನಾಡಿನಲ್ಲಿ ನೂರಾರು ಕನ್ನಡ ಪರ ಸಂಘಟನೆಗಳನ್ನು ಸಂಘಟಿಸಿದ್ದಾರೆ. ಅವುಗಳು ಒಂದಿಷ್ಟು ಗಮನಾರ್ಹ ಕೆಲಸಗಳನ್ನು ಮಾಡಿವೆ. ಆ ವಿಷಯವಾಗಿ ಅವರುಗಳನ್ನು ಮೆಚ್ಚಲೇಬೇಕು. ಆದರೆ ಅವುಗಳಲ್ಲಿ ಹಲವಾರು ಸಂಘಟನೆಗಳ ಸದಸ್ಯರುಗಳ ಮಧ್ಯೆ ವೈಮನಸ್ಸು ಮೂಡಿ, ಕೆಲವೊಂದು ಸಂಘಟನೆಗಳು ಹರಿದು ಚೂರು, ಚೂರಾಗಿ ಅವುಗಳಲ್ಲಿ ಮತ್ತೊಂದೊಂದು ಬಣಗಳು ಹುಟ್ಟಿಕೊಂಡಿವೆ. ಇಂತಹ ಒಂದು ಪರಿಸ್ಥಿತಿ ಬೇಕಿತ್ತೇ? ಒಂದು ನಾಡು, ನುಡಿಯ ಬಗ್ಗೆ ಹೋರಾಡುವವರಿಗೆ ಮನಸ್ಸು, ಮೈಯಿ, ಅವನು, ಇವನು ಎಲ್ಲವೂ ಒಂದೇ ಆಗಿರಬೇಕು. ತನ್ನಲ್ಲೂ, ಅವನಲ್ಲೂ, ಎಲ್ಲದರಲ್ಲೂ ತನ್ನ ಭಾಷೆಯ ತನವನ್ನು ಕಾಣಬೇಕು ಆಗಲೇ ಒಂದು ನಾಡಿನ, ಒಂದು ಭಾಷೆಯ ಪರಿಪೂರ್ಣ ಏಳಿಗೆ ಸಾಧ್ಯ. ಇದನ್ನು ನನಗೆ ಮಾತ್ರ ಅನ್ವಯಿಸಿಕೊಂಡು ಹೇಳುತ್ತಿಲ್ಲ, ನನ್ನಂತೆಯೇ ನೂರಾರು ಸಮಸ್ಯೆಗಳನ್ನು, ಒಳನೋವುಗಳನ್ನು ಎದುರಿಸುತ್ತಿರುವ ಸಹೋದರಿಯ ಭಾಷೆಗಳಾದ ನಿಮ್ಮನ್ನೂ ಅನ್ವಯಿಸಿಕೊಂಡು ಹೇಳುತ್ತಿರುವೆನು. ಯಾಕೆಂದರೆ ನನ್ನ ನಾಡಿನಲ್ಲಿ, ನನ್ನ ಅಭ್ಯುದಯದ ಜೊತೆಗೆ ನೀವು ನಿಮ್ಮ, ನಿಮ್ಮ ನಾಡಿನಲ್ಲಿ ಬೆಳೆಯಬೇಕೆಂಬುದು ನನ್ನ ಮನೋಭಿಲಾಷೆ.
4) ಇನ್ನೂ ನನ್ನ ನಾಡಿನ ಪ್ರಾಧಿಕಾರಗಳು, ಪರಿಷತ್ತುಗಳು ಹಾಗೂ ಸರಕಾರ ಇವರುಗಳು ಕಲಿಯಬೇಕಿರುವುದು ಬಹಳಷ್ಟು ಇದೆ. ಚಿಕ್ಕಪುಟ್ಟ ಮಕ್ಕಳ ತರ ಸಣ್ಣ ಸಣ್ಣದಕ್ಕೂ ಜಗಳ ಕಾಯೋದನ್ನು ಬಿಟ್ಟು, ನನ್ನ ಹಾಗು ನನ್ನ ನಾಡಿನ ಏಳಿಗೆಗೆ ದಾರಿದೀಪಗಳಾಗಬೇಕಿದೆ. ಕನ್ನಡ ನಾಮಾಫಲಕ ಕಡ್ಡಾಯ ಅನ್ನುವ ನಿಯಮವನ್ನು ಇಷ್ಟು ವರುಶವಾದರೂ ಸರಿಯಾಗಿ ಅನುಷ್ಟಾನಕ್ಕೆ ತರಲಾಗಿಲ್ಲ ಅವರಿಗೆ. ಎರಡು ವರುಷಗಳಿಗೊಮ್ಮೆ ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೂರಾರು ಎಡರು-ತೊಡರುಗಳು ಜೊತೆಗೆ ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಾದ ಕೂಗುಗಳು.
4) ಬೆಳಗಾವಿಯಂತ ನಗರದಲ್ಲಿ ಹತ್ತು ದಿನಗಳ ಕಾಲ ಸರಕಾರದ ಕಾರ್ಯಕಲಾಪಗಳನ್ನು ನಡೆಸುವುದು ಸ್ವಾಗತರ್ಹ ಕ್ರಮ. ಆದರೆ ಹತ್ತು ದಿನದ ಸಮಾವೇಶಕ್ಕೆ ಇಪ್ಪತೈದು ಕೋಟಿ ಖರ್ಚು ಮಾಡುವ ಇವರು. ನಾಡಿನಲ್ಲಿ ಇರುವ ನಿರುದ್ಯೋಗಿ ಪಧವಿದರರಿಗೆ ಮಾಸಿಕವಾಗಿ ಒಂದು ಐದುನೂರು ರೂಪಾಯಿಗಳನ್ನು ಸಹಾಯ ಧನವಾಗಿ ಕೊಡುವ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗುದಿಲ್ಲವೇ? ವರುಶಕ್ಕೆ ಇನ್ನೂರರಿಂದ ಮೂನ್ನೂರು ಕೋಟಿ ವೆಚ್ಚವಾಗಬಹುದು ಸರಕಾರದ ಬೊಕ್ಕಸಕ್ಕೆ. ಅಷ್ಟನ್ನೂ ಭರಿಸಲಾಗುವುದಿಲ್ಲವೇ?
ನನ್ನ ನಾಡಿನ ಜನತೆಗೆ, ಪರಿಷತ್ತುಗಳಿಗೆ, ಪ್ರಾಧಿಕಾರಗಳಿಗೆ ಹಾಗೂ ನನ್ನ ನಾಡಿನ ಸರಕಾರಕ್ಕೆ ನನ್ನ ಏಳಿಗೆ ಬಗ್ಗೆ ಸಾಕಷ್ಟು ಕಾಳಜಿ ಬರಲೆಂದು ಭಾರತಮಾತೆಯಲ್ಲಿ ಪ್ರಾರ್ಥಿಸುತ್ತಾ, ಇಷ್ಟು ಹೊತ್ತು ಮಾತನಾಡಲು ಅವಕಾಶ ಕೊಟ್ಟ ಎಲ್ಲ ಸಹೋದರಿಯ ಭಾಷೆಗಳಿಗೆ ವಂದನೆಗಳನ್ನು ಹೇಳುತ್ತಾ... ಕನ್ನಡ ಭಾಷೆಯು ತನ್ನ ಮಾತುಗಳನ್ನು ಮುಗಿಸಿತು!!!!
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಸೋಮವಾರ, ಜನವರಿ 12, 2009
"ನಮ್ಮ ಅಪ್ಪಾಜಿ ಅಂದ್ರೆ ನನಗಿಷ್ಟ"
ಬರಹಗಾರ ವಸುಧೇಂದ್ರ ಅವರು ಬರೆದ "ನಮ್ಮ ಅಮ್ಮ ಅಂದ್ರೆ ನನಗಿಷ್ಟ" ಅನ್ನುವ ಪುಸ್ತಕವನ್ನು ಓದುವ ಅವಕಾಶ ಈಗ್ಗೆ ಕೆಲವು ದಿನಗಳ ಹಿಂದೆ ನನಗೆ ಒದಗಿಬಂದಿತ್ತು. ವಸುಧೇಂದ್ರ ಅವರು ತಮ್ಮ ಪೂಜ್ಯ ತಾಯಿಯವರು ಬಾಳಿ, ಬದುಕಿ ಹೋದ ಪರಿಯನ್ನು ಬಹಳ ಚಂದವಾಗಿ ವರ್ಣಿಸಿ ಬರೆದ ಪುಸ್ತಕವದು.
ಆ ಪುಸ್ತಕವನ್ನು ಓದಿ ಮುಗಿಸಿದಾಗಿನಿಂದಲೂ ನನ್ನ ಅಪ್ಪಾಜಿಯವರ ಬಗ್ಗೆ ಏನಾದರೂ ಬರೆಯಬೇಕೆಂಬ ವಿಚಾರವೂ ಸದಾ ಮನದ ಕಾರ್ಮುಗಿಲಲ್ಲಿ ಮಿಂಚುತ್ತಲೇ ಇತ್ತು. ಎಲೆಮರೆ ಕಾಯಿಯಂತೆ ಬಾಳಿ, ಬದುಕಿ ಹೋದ ನನ್ನ ಬಾಳಿನ ದಿವ್ಯ ಧ್ರುವತಾರೆ ಅಪ್ಪಾಜಿ ಅವರು. ನನಗಂತೆ ಅಲ್ಲ ಎಲ್ಲರಿಗೂ ಅವರ, ಅವರ ಹೆತ್ತವರ ಬಗ್ಗೆ ಅದಮ್ಯ ಪ್ರೀತಿ, ಗೌರವ, ಪೂಜ್ಯನೀಯ ಭಾವ ಮನದಲ್ಲಿ ತನ್‌ತಾನೇ ಮನೆಮಾಡಿಕೊಂಡಿರುವುದು ಸಹಜ. ನಮ್ಮ ಹಾಗೂ ಅವರ ನಡುವಿನ ಸಂಬಂಧ ತ್ಯಾಗ, ಅಕ್ಕರೆ, ಮಮಕಾರ, ಸಹಕಾರ, ತೀರದ ಒಲವು ಇನ್ನು ಹಲವಾರು ಪವಿತ್ರ ಸಂಕೋಲೆಗಳಿಂದ ಆದಂತಹ ಒಂದು ಪವಿತ್ರ ಬಂಧನ ಅಲ್ಲವೇ?.
ನಿಜ ಹೇಳಬೇಕೆಂದರೆ ನನ್ನ ಅಪ್ಪಾಜಿಯವರು ಭೌತಿಕವಾಗಿ ಈ ಲೋಕದಿಂದ ಮರೆಯಾದ ಮೇಲೇನೆ “ಬರವಣಿಗೆ” ಅನ್ನುವ ಲೋಕಕ್ಕೆ ನಾನು ಕಾಲಿರಿಸಿದ್ದು. ಅದರಂತೆ ಇವರೆಗೂ ಕೆಲವಾರು ಪ್ರಕಾರಗಳ ಲೇಖನಗಳನ್ನು, ಕವನಗಳನ್ನು ಬರೆದು, ನಿಮ್ಮ ಮುಂದಿರಿಸಿದ್ದೀನಿ. ಏಕೆಂದರೆ ಒಂದೇ ಬಗೆಯ, ಒಂದೇ ವಿಚಾರದ ಲೇಖನಗಳು, ಕವನಗಳು ಎಂದೂ, ಯಾರಿಗೂ ಒಪ್ಪಿಗೆಯಾಗುವುದಿಲ್ಲ ಎನ್ನುವುದು ನನ್ನ ಭಾವನೆ.
ಅಪ್ಪಾಜಿಯವರ ಬದುಕಿನಲ್ಲಿ ನೆಡೆದ ವಿವಿಧ ಘಟನೆಗಳ ಚಿತ್ರಣವನ್ನು ಬರೆಯಲೇಬೇಕು ಅನ್ನುವ ಪಣವನ್ನು ಮನದಲ್ಲಿ ತೊಟ್ಟು. ಈ ಬಾರಿ ಕ್ರಿಸ್ಮಸ್ ಸಲುವಾಗಿ ಸಿಕ್ಕ ರಜೆಯಲ್ಲಿ ಈ ಲೇಖನವನ್ನು ಬರೆದಿರುವೆನು. ಒಂದು ಹತ್ತಾರು ನಿಮಿಷಗಳ ಕಾಲ ಬಿಡುವು ಮಾಡಿಕೊಂಡು ಓದಿರಿ,
ನನ್ನ ಅಪ್ಪಾಜಿಯವರ ಹೆಸರು ಶಾಂತಲಿಂಗಪ್ಪ ಅಂತ, ನನ್ನ ಅಪ್ಪಾಜಿಯವರ ತಾತನವರ ಹೆಸರು ಸಹ ಶಾಂತಲಿಂಗಪ್ಪ ಅಂತ ಇತ್ತಂತೆ. ಅವರ ನೆನಪಿನಗಾಗಿ ನನ್ನ ಅಪ್ಪಾಜಿಯವರಿಗೆ "ಶಾಂತಲಿಂಗಪ್ಪ" ಅನ್ನುವ ಹೆಸರನ್ನು ನನ್ನ ಅಜ್ಜ ಇಟ್ಟರಂತೆ.
ಅಪ್ಪಾಜಿಯವರು ಹೆಸರಿಗೆ ತಕ್ಕಹಾಗೆ ಬಲು ಶಾಂತ,ಅಷ್ಟೇ ಮೃದು ಸ್ವಭಾವದವರಾಗಿದ್ದರು. ತಾವಾಯಿತು, ತಮ್ಮ ಕೆಲಸವಾಯಿತು ಒಂದು ದಿನವೂ, ಒಂದು ಕ್ಷಣವೂ ಬೇರೆಯವರ ಗೋಜಿಗೆ ಹೋದವರಲ್ಲ. ಆದರೆ ವ್ಯವಹಾರದ ವಿಷಯದಲ್ಲಿ ಮಾತ್ರ ಯಾರಿಗೂ, ಎಂದೂ ತಲೆಬಾಗಿದವರಲ್ಲ ಅಷ್ಟೂ ಕಠಿಣ, ಅಷ್ಟೂ ಪಾರದರ್ಶಕ ಕೈಯಿ ಅವರದಾಗಿತ್ತು.
ನಾನು ಚಿಕ್ಕವನಿರುವಾಗ ಪ್ರತಿದಿನ ರಾತ್ರಿಯ ಬೀಡುವಿನ ವೇಳೆಯಲ್ಲಿ ತಮ್ಮ ಜೀವನದಲ್ಲಿ ನೆಡೆದ ಅನೇಕಾನೇಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಅಪ್ಪಾಜಿಯವರು ಹೇಳುತ್ತಾ ಇದ್ದರು. ಅವರು ಹೇಳಿದ ಹಲವಾರು ಘಟನೆಗಳಲ್ಲಿ ನನ್ನ ನೆನಪಿನಂಗಳದಲ್ಲಿ ಮಾಸದಂತೆ ಇರುವ ಕೆಲವನ್ನು ಇಲ್ಲಿ ಬರೆದಿರುವೆನು. ಓದುತ್ತಾ ಸಾಗಿರಿ...
*************************
1977 ರಲ್ಲಿ ನಡೆಯಲ್ಪಟ್ಟ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಫರ್ಧಿಸಿದ್ದರು. ಎಲ್ಲ ಪಕ್ಷದವರಿಂದ ಅಬ್ಬರದ ಚುನಾವಣಾ ಪ್ರಚಾರ ನಡೆಯುತ್ತಿತ್ತಂತೆ. ಇಂತಹ ಸನ್ನಿವೇಶದಲ್ಲಿ ಚುನಾವಣಾ ಪ್ರಚಾರಕ್ಕೆಂದು ಖುದ್ದಾಗಿ ಇಂದಿರಾಗಾಂಧಿ ನಮ್ಮೂರಿಗೆ ಬಂದಾಗ ನಮ್ಮೂರಿನ ಹೊರಭಾಗದಲ್ಲಿರುವ ಬಸ್ಸ್‌ಸ್ಟ್ಯಾಂಡಿನ ಸುತ್ತಲೂ ಬಹಳ ಜನ ಸೇರಿದ್ದರಂತೆ. ಆ ಸಂದರ್ಭದಲ್ಲಿ ಇಂದಿರಾಗಾಂಧಿಯವರು ತಾವು ಹಾಕಿಕೊಂಡಿದ್ದ ಹೂವಿನ ಹಾರವನ್ನು ಮಹಾ ಜನತೆಯತ್ತಾ ಎಸೆದಾಗ, ಇದ್ದ ಭಾರಿ ನೂಕುನುಗ್ಗಲಲ್ಲೂ ಇಂದಿರಾಗಾಂಧಿಯವರು ಎಸೆದ ಹಾರವನ್ನು ಅಪ್ಪಾಜಿಯವರು ಹಿಡಿದು, ಮನೆಯಲ್ಲಿ ತುಂಬಾ ದಿನಗಳವರೆಗೆ ಇಟ್ಟುಕೊಂಡಿದ್ದರಂತೆ.
*************************
ಅಪ್ಪಾಜಿಯವರು ಚಿಕ್ಕವರಿದ್ದಾಗ ಅವರ ಮೂರನೇ ಅಣ್ಣನ (ಅಂದರೆ ನನ್ನ ಮೂರನೇ ದೊಡ್ಡಪ್ಪ) ಜೊತೆ ದಿನಾಲೂ ತೋಟಕ್ಕೆ ಹೋಗಿ ಬರುತ್ತಿದ್ದರಂತೆ. ಆಗಿನ ಸಮಯದಲ್ಲಿ ಹಳ್ಳಿಗಾಡುಗಳ ಕಡೆ ಬೋರ್‌ವೇಲ್ ವ್ಯವಸ್ಥೆ ಇರಲಿಲ್ಲವಾದ್ದರಿಂದ ಕೆರೆ ನೀರನ್ನು ಹೊತ್ತು ತಂದು, ತೆಂಗಿನ ಸಸಿಗಳಿಗೆ ಹಾಯಿಸಿ ಅವುಗಳನ್ನು ಬೆಳೆಸುತ್ತಿದ್ದರು. ರಸ್ತೆಯ ಪಕ್ಕದಲ್ಲಿ ತೋಟವಿದ್ದರಿಂದ ಆಗಾಗ ಓಡಾಡುವ ವಾಹನಗಳಿಗೆಲ್ಲ ತೆಂಗಿನ ಗರಿಗಳು ಬಡಿಯುತ್ತಿದ್ದವಂತೆ. ತೆಂಗಿನ ಗರಿಗಳಿಗೆ ಆಗುತ್ತಿದ್ದ ನೋವನ್ನು ಸಹಿಸಲಾಗದೆ, ನಮ್ಮ ದೊಡ್ಡಪ್ಪ ಕೋಪಗೊಂಡು ತೆಂಗಿನ ಗರಿಯೊಂದಕ್ಕೆ ಕಲ್ಲು ಕಟ್ಟಿದ್ದರಂತೆ. ಪಂಚನಹಳ್ಳಿಯ ಕಡೆಯಿಂದ ಬಂದ ಗಜಾನನ ಎನ್ನುವ ಬಸ್ಸಿನ ಮುಂಭಾಗದ ಗ್ಲಾಸಿಗೆ ಕಲ್ಲು ಬಡಿದು ಗ್ಲಾಸು ಕ್ಷಣಾರ್ಧದಲ್ಲಿ ಪುಡಿಪುಡಿಯಾಯಿತಂತೆ. ನಮ್ಮ ದೊಡ್ಡಪ್ಪ ಅಲ್ಲಿಂದ ಮಿಂಚಿನ ವೇಗದಲ್ಲಿ ಪರಾರಿಯಾಗಿ ಹೋದರಂತೆ. ಆದರೆ ಅಪ್ಪಾಜಿಯವರು ಬಸ್ಸಿನವರ ಕೈಗೆ ಸಿಕ್ಕು ಅವರಿಂದ ಒಂದೆರಡು ಒದೆಯನ್ನು ತಿಂದಿದ್ದರಂತೆ. ಅದೂ ಅಲ್ಲದೇ ಬಸ್ಸಿನವರು ಅಪ್ಪಾಜಿಯವರನ್ನು ಬಸ್ಸಿನಲ್ಲಿ ಕೂರಿಸಿಕೊಂಡು ಹೋಗಿ ನಮ್ಮೂರಿನಿಂದ ನಾಲ್ಕು ಕೀಲೋಮೀಟರು ದೂರದಲ್ಲಿರುವ ಬಿದರೆ ಗುಡ್ಡದ ಹತ್ತಿರ ಬಿಟ್ಟು ಹೋಗಿದ್ದರಂತೆ!
*************************
ನಾನು ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಓದುತ್ತಾ ಇದ್ದೆ. ಮನೆಯ ಖರ್ಚು, ನನ್ನ ಓದಿನ ಖರ್ಚು ಹಾಗೂ ಇನ್ನಿತರೆ ಖರ್ಚುಗಳು ಅಪ್ಪಾಜಿಯವರಿಗೆ ಸ್ಪಲ್ಪ ಹೊರೆಯಾಗಿದ್ದವು. ಅಲ್ಲದೆ ಅವರಿಗೆ ಪಿತ್ರಾರ್ಜಿತವಾಗಿ ಬಂದದ್ದು ಕಣ್ಣ ಅಳತೆಯಲ್ಲೇ ಅಳೆಯ ಬಹುದಾದಷ್ಟು ಆಸ್ತಿ. ಆದರೆ ಇದರ ಬಗ್ಗೆ ಅರೆಕ್ಷಣ ಯೋಚಿಸುತ್ತಾ ಕುಳಿತವರಲ್ಲ. ಅವರಲ್ಲಿದ್ದ ಮುಗ್ಧ ಉತ್ಸಾಹ ಹಾಗೂ ಗಾಢ ಅಲೋಚನಾ ಲಹರಿಯ ಪರಿಣಾಮವಾಗಿ ಎಲ್ಲವನ್ನೂ ಬಹಳ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು. ಅದೇ ಸಮಯದಲ್ಲಿ ಅಪ್ಪಾಜಿಯವರು ನಮ್ಮ ಜಮೀನಿನ ಪಕ್ಕದಲ್ಲಿ ಒಂದಿಷ್ಟು ಹೊಸ ಜಮೀನನ್ನು ಖರೀದಿಸಿದರು. ಆಳುಗಳ ಸಹಾಯದಿಂದ ಅದರ ಸುತ್ತಲೂ ತಂತಿ ಕಂಬ ಹಾಕಿಸಿ, ತೆಂಗಿನಸಸಿಗಳನ್ನು ನೆಡಿಸಿದರು. ಅಮ್ಮನಿಗೆ ಇದು ಎಳ್ಳಷ್ಟೂ ಇಷ್ಟವಾಗದೇ ಅಪ್ಪಾಜಿಯವರ ಜೊತೆ ಜಗಳ ಮಾಡಿಕೊಂಡಿದ್ದರು. ಎಷ್ಟೋ ಸಾರಿ ಆಳುಗಳು ಕೆಲಸಕ್ಕೆ ಬರುತ್ತೇವೆ ಎಂದು ಹೇಳಿ ಕೈಕೊಡುತ್ತಿದ್ದಂತಹ ಸಮಯದಲ್ಲಿ ಅಮ್ಮ,, ಅಪ್ಪಾಜಿ ಇಬ್ಬರೂ ಸೇರಿ ಕೆರೆಯಿಂದ ನೀರನ್ನು ಹೊತ್ತುತಂದು ತೆಂಗಿನ ಸಸಿಗಳಿಗೆ ಹಾಕುತ್ತಿದ್ದರು. ಅವರ ಒಂದು ಅವಿರತ ಪರಿಶ್ರಮದ ಫಲವಾಗಿ ಐದಾರು ವರುಷಗಳಲ್ಲಿ ತೆಂಗಿನ ಸಸಿಗಳು ಫಲಕೊಡಲು ಆರಂಭಿಸಿದವು.
*************************
ಮದುವೆ ಇಲ್ಲವೇ ಇನ್ನಿತರ ಶುಭ ಸಮಾರಂಭಗಳಿಗೆ ಆಹ್ವಾನ ಬಂದಾಗಲೆಲ್ಲ ಅಪ್ಪಾಜಿಯವರು ಹೋಗುತ್ತಿದ್ದದ್ದು ತೀರ ಕಡಿಮೆ. ಆದರೆ ಅಮ್ಮ ಯಾವ ಸಮಾರಂಭಗಳಿಗೆ ತಪ್ಪಿಸದೆ ಹೋಗುತ್ತಿದ್ದರು. ಅಮ್ಮ ಮನೆಯಲ್ಲಿ ಇರದ ಸಂದರ್ಭದಲ್ಲಿ ಅಡುಗೆ ಮನೆಯ ಉಸ್ತುವಾರಿಯನ್ನು ಅನ್ಯಮಾರ್ಗವಿಲ್ಲದೇ ಅಪ್ಪಾಜಿಯವರೇ ವಹಿಸಿಕೊಳ್ಳಬೇಕಾಗಿತ್ತು.ಅಪ್ಪಾಜಿಯವರಿಗೆ ಮಾಡಲು ಬರುತ್ತಿದ್ದ ಅಡುಗೆ ಒಂದೇ ಒಂದು ಅದು ಉಪ್ಪಿಟ್ಟು! ಬೆಳಗಿನ ತಿಂಡಿಗೆಂದು ಮಾಡಿದ ಉಪ್ಪಿಟ್ಟುನ್ನು ಮಧ್ಯಾಹ್ನದ ಊಟಕ್ಕೂ ಅದನ್ನೇ ತಿನ್ನಬೇಕಾಗಿತ್ತು.ರಾತ್ರಿ ಊಟಕ್ಕೆ ಅನ್ನ ಮಾಡುತ್ತಿದ್ದರು ಅವರಿಗೆ ಸಂಬಾರು ಮಾಡಲು ಬರುತ್ತಿರಲ್ಲಿಲ್ಲವಾದ್ದರಿಂದ ಅನ್ನಕ್ಕೆ ಕಲಸಿಕೊಳ್ಳಲು ಮೊಸರೇ ಗತಿಯಾಗಿರುತ್ತಿತ್ತು, ಅದರ ಜೊತೆಗೆ ಉಪ್ಪಿನಕಾಯಿ ನೆಂಚಿಕೆಗೆ ಇರುತ್ತಿತ್ತು. ಅಮ್ಮ ಏನಾದರೂ ದೀರ್ಘ ದಿನಗಳ ಕಾಲ ನೆಂಟರ ಊರುಗಳಿಗೆ ಪ್ರವಾಸ ಹೋದರೆ ಅಪ್ಪಾಜಿಯವರು ತಮ್ಮ ಅಡುಗೆ ಮಾಡುವ ಕೆಲಸಕ್ಕೆ ತೀಲಾಂಜಲಿಯನ್ನು ಇಟ್ಟು. ಬೆಳಗಿನ ತಿಂಡಿಗೆಂದು ನಮ್ಮೂರ ಪಕ್ಕದ ಬಿದರೆಯ ನಟರಾಜ್ ಅಣ್ಣನ ಹೋಟೆಲಿನಿಂದ ಬಿಸಿ ಬಿಸಿ ಇಡ್ಲಿ ತರುತ್ತಿದ್ದರು. ಆ ದಿನಗಳಲ್ಲಿ ಹತ್ತು ರೂಪಾಯಿಗಳಲ್ಲಿ ಅಪ್ಪಾಜಿ, ನಾನು ಹಾಗೂ ಶೀಲಾ ಮೂವರು ತಿಂದರೂ ಇನ್ನೂ ಮಿಗುವಷ್ಟು ಇಡ್ಲಿ ಬರುತ್ತಿದ್ದವು. ಒಮ್ಮೊಮ್ಮೆ ರಾತ್ರಿಯ ವೇಳೆಯ ಊಟಕ್ಕೆ ಮೊದಲನೇ ದೊಡ್ಡಪ್ಪನವರ ಮನೆಗೆ ಹೋಗುತ್ತಿದ್ವಿ. ನಮ್ಮ ದೊಡ್ಡಮ್ಮನ ಕೈಯಿಯ ಬಹಳ ಖಾರವಾದ ಸಂಬಾರಿನ ಸವಿಯನ್ನು ಸವಿದು ಬರುತ್ತಿದ್ದೇವು/ (ಮುಂದುವರೆಯುವುದು.....).
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಸೋಮವಾರ, ಜನವರಿ 5, 2009
ಈ ಹೊಸದಾದ ವರುಷ│ ಪ್ರತಿ ಕ್ಷಣ ಪ್ರತಿ ನಿಮಿಷ│
ಹೊಸ ವರುಷಕ್ಕೆರಡು ಕವನಗಳು, ಕವನ ೧
ಈ ಹೊಸದಾದ ವರುಷ│ ಪ್ರತಿ ಕ್ಷಣ ಪ್ರತಿ ನಿಮಿಷ│
ಎಲ್ಲರ ಬಾಳಲಿ ತರಲಿ ತುಂಬು ಹರುಷ│
ಈ ದಿನದಿಂದ│ ಈ ಕ್ಷಣದಿಂದ│
ಮುಖದಲಿ ಸದಾ ಬೀರುತಾ ಸಂತಸ│
ಬದುಕಲಿ ಸದಾ ತೋರುತಾ ಸೊಗಸ│
ಇರುವೆಡೆಯೆಲ್ಲ ನಾವ್ ಹಂಚುತಾ ಉಲ್ಲಾಸ│
ಧರೆಯ ಆಗಿಸೋಣ ನವಿರು ಕಳೆಯ ನಿವಾಸ│
ಅದ ನೋಡಿ ಬೆಕ್ಕಸ ಬೆರಗು ಆಗಲಿ ಆ ಕೈಲಾಸ!
ಹೀಗೆ ಮೂಡಿಬಂದ ಮುಗುಳ್ನಗೆ│
ನಾಂದಿಯಾಗಲಿ ಹೊಸ ಬಗೆಯ ಗೆಲುವಿಗೆ│
ಔಷದವಾಗಲಿ ಒಳಮನದ ನೋವಿಗೆ│
ಅರಳಿಸಲಿ ಹೊಸಬಯಕೆಗಳ ಮಲ್ಲಿಗೆ│
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
(ಚಿತ್ರಕೃಪೆ http://www.shubhashaya.com)
ಬನ್ನಿ ಗೆಳೆಯರೇ ಬನ್ನಿ
ಎಲ್ಲರೂ ಒಂದುಗೂಡಿ ಬನ್ನಿ│
ನಾವು ನೀವೆಲ್ಲರೂ ಸೇರಿ
ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ│
ಆಚರಿಸುವ ಹೊಸ ವರುಷವ│
ಸಂಭ್ರಮಿಸಿ ಸವಿಯುವ ನವ ಹರುಷವ│
ಹಿಂದಣದ ಕಹಿಯನು
ಮರೆವಿನ ಹಾದಿಯಲ್ಲೇ ಮರೆತು│
ಮುಂದಣದ ಏಳಿಗೆಯ ಹಾದಿಯನು
ಮರೆಯದ ಮನದಿಂದ ನೆನೆದು│
ಒಬ್ಬರನೊಬ್ಬರು ಅಂತರಾಳದಿಂದ ಅರಿತು│
ಸಂತಸದ ಸವಿ ಸೊದೆಯಲಿ ಬೆರೆತು│
ನಮ್ಮೆಲ್ಲರ ಭವಿಷ್ಯದ ಹಾಡಿಗೆ ಬೆಳಕಾಗುವ ರಸ ಕವಿತೆಯೊಂದು
ರಚಿಸುತಾ ಕಣಿದು ಕುಣಿದು ಹಾಡುವ ಬನ್ನಿ!
- ನಿಮ್ಮ ಸುನಿಲ್ ಮಲ್ಲೇನಹಳ್ಳಿ