ಗುರುವಾರ, ಡಿಸೆಂಬರ್ 26, 2013

ಗೌರ ಅಂದುಕೊಂಡ ಬದುಕಲ್ಲ ಅದು..

ನಾಲ್ಕೈದು ದಿನಗಳಾದರೂ ಕೆಲಸಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದ ಕೆಲಸದಾಳು ಶಂಕ್ರನನ್ನು ಮನದಲ್ಲೇ ಶಪಿಸುತ್ತಾ ಬಿಸಿಲಿನ ಜಳಕ್ಕೆ ಬಾಡಿಹೊಗುತ್ತಿದ್ದ ಹೂಗಿಡಗಳಿಗೆ ನೀರನ್ನು ಹಾಕುತ್ತಿದ್ದಳು ಗೌರಕ್ಕ. ಅದೇ ಸಮಯದಲ್ಲಿ ಹಳ್ಳದ ತಗ್ಗಿನ ಕಡೆಯಿಂದ ಯಾರೋ? ಬರುತ್ತಿರುವುದ ಕಂಡು ಯಾರೆಂದು? ಬರುತ್ತಿದ್ದವರ ಹಾದಿಯನ್ನು ಕುತೂಹಲದಿಂದ ನೋಡತೊಡಗಿದಳು, ಅದು ಶಂಕ್ರನೇ ಎಂದು ಗೊತ್ತಾಗಲು ಸದ್ಯ ಇವಾಗಲಾದರೂ ಬಂದನಲ್ಲ ಮಾರಾಯ! ಎಂದು ಮನಸಿನಲ್ಲೇ ಅಂದುಕೊಂಡಳು.

ಬಂದವನನ್ನು ಕುರಿತು ಎಲ್ಲಿ ಹಾಳಾಗಿ ಹೋಗಿದ್ಯೋ ಶಂಕ್ರ? ಎಂದು ಕೇಳಿದಳು ಗೌರಕ್ಕ.

ಅಯ್ಯೋ ಶಿವ! ಊರ್ನಾಗ ನಿಂಗೆ ಒಬ್ನೂ ವಿಷ್ಯನ ಹೇಳಿಲ್ವ? ಎಂದು ಮಾತನ್ನು ಮುಂದುವರೆಸಲು ಹೊರಟ ಶಂಕ್ರನಿಗೆ ಮಾತನಾಡಲು ಬಿಡದೆ ಲೋ ಶಂಕ್ರ, ನಾನಿರೋದು ತೋಟದ ಮನೆಲಿ ಅದು ಅಲ್ಲದೆ ಊರೊಳಗೆ ಹೋಗಿ ಸರಿಯಾಗಿ ಹದಿನೈದು ದಿವಸವಾದ್ವು ನನ್ ಮನೆತಕ ದಿನ ತಪ್ಪದೆ ಬರೋನು ನೀನ್ ಒಬ್ನೇ ನೋಡಿದ್ರೆ ಒಂದ್ವಾರದಿಂದ ನೀನ್ ಅಡ್ರೆಸ್ಸೆ ಇಲ್ಲ! ಅಂತಾದ್ರಾಗ ನಂಗೆ ಹ್ಯಾಂಗೋ ಗೊತ್ತಾಬೇಕು ವಿಷ್ಯ? ಎಂದಳು.

ಏನೋ ಅಕಾ, ನನ್ ಮಗ ಗೋಪಿ ಆಟ ಆಡ್ವಾಗ ಮರದ ಮ್ಯಾಲಿಂದ ಜಾರಿಬಿದ್ದು ಕೈನ ಮುರ್ಕೊಂಡವನೆ.ಆ ಬೇಕುಪ್ಪನ ಕರಕೊಂಡು ಕೈ ಕಟ್ಟಿಸೊಕೆ ಸಿಂಗೇನಹಳ್ಳಿ ಬಸಜ್ಜನತಕ ಹೋಗಿದ್ನಕೋ. ಅಲ್ಲಿ ನೋಡಿದ್ರೆ ನಮ್ಮ ಹಾಗೆ ಕೈ ಕಟ್ಟಿಸೊಕೆ ಶ್ಯಾನೆ ಜನ ಬಂದಿದ್ರು ಅವನ ಕೈ ಕಟ್ಟಿಸ್ವೊತ್ತಿಗೆ ಸಾಯಂಕಾಲ ಆಯಿತು. ತಿರುಗಿ ಊರಿಗೆ ಬರೋಕೆ ರಾತ್ರಿ ಏಳಾದ್ರೂ ಹಾಳಾದವು ಯಾವೊಂದು ಬಸ್ ಬರದೆ ರಾತ್ರಿ ಉಳಿದುಕೊಂಡಗೂ ಆಗುತ್ತೆ ಹಾಗೆ ನನ್ನ ನಾದ್ನಿ, ಅವಳ ಗಂಡನ್ನು ನೋಡಿಕೊಂಡು ಬಂದಗೂ ಆಗುತ್ತೆ ಅಂತ ಅಂದುಕೊಂಡು ಸಿಂಗೇನಹಳ್ಳಿ ಹತ್ತಿರದಲ್ಲಿ ಇದ್ದ ತಾಂಡ್ಯಕ್ಕೆ ನೆಡೆದು ಅವರ ಮನೆ ತಲುಪುವಷ್ಟರಲ್ಲಿ ರಾತ್ರಿ ಹತ್ತಾಗಿತ್ತು.

ಅಲ್ಲಿ ನನ್ ನಾದ್ನಿ, ಬಹಳ ದಿನವಾದ ಮ್ಯಾಗೆ ಬಂದಿದ್ದೀರ ಬಾವೋ ಅಲ್ಲದೆ ಗೋಪಿ ಬೇರೆ ಈ ಪರಿಸ್ಥಿತಿಲಿ ಅವೌನೇ. ಒಂದೆರಡು ದಿನ ಉಳ್ಕಳಿ ಹೋಗ್ರೊಂತೆ ಎಂದು ಒತ್ತಾಯ ಮಾಡಿ ಉಳಿಸ್ಕೊಂಡ್ಲು.

ಬಿಡಪ್ಪ ನೀನ್ ರಾಮಾಯಣನ ಕೇಳೋಕ್ಕೆ ಪುರಸೊತ್ತಿಲ್ಲ, ಸರಿ ಈಗ ಹೆಂಗವ್ನೇ ನಿನ್ ಮಗ? ಎಂದು ಖಾರವಾದ ಧ್ವನಿಯಲ್ಲಿ ಕೇಳಿದಳು ಗೌರಕ್ಕ.

ಚನ್ನಾಗಿದ್ದಾನೆ. ಆದರೆ ಬಹಳ ಕೈ ನೋವು ಅಂತಿರ್ತಾನೇ ಅವನ ಕೈ ತುಂಬಾ ಏನು ಕಾಣದ ಹಾಗೆ ಬಿಳಿ ಬಟ್ಟೆನ ಸುತ್ತೌನೆ ಆ ಬಸಜ್ಜ ಎಂದ ಶಂಕ್ರ. ನೆತ್ತಿಗೆರಿ ಬಂದ ಕೋಪನ ತೋರ್ಪಡಿಸಿದೆ. ನಿಂಗೆ, ನಿಮ್ಮ ಹಟ್ಟಿ ಜನರಿಗೆ ಬುದ್ದಿ,ಗಿದ್ದಿ ಏನಾದರೂ ಇದ್ಯಾ? ಊರಿಗೊಬ್ರು ಡಾಕ್ಟ್ರು ಇರೋ ಇಂಥಾ ಕಾಲ್ದಾಗೆ, ಆ ಭದ್ರ ಹಾವಿಂತವ ಕಚ್ಚಿಸಿಕೊಂಡ ತನ್ನ ಅಪ್ಪನ ಆಸ್ಪತ್ರೆಗೆ ಕರಕೊಂಡು ಹೋಗೊದನ್ನು ಬಿಟ್ಟು, ನಾಟಿ ಔಷಧ ಕೊಡ್ಸೋಕ್ಕೆ ಹೋಗಿ ಅಪ್ಪನ ಕಳೆದುಕೊಂಡ. ಆ ಚಂದ್ರಿ, ಪೂಜಾರಪ್ಪನ ಮಾತು ಕೇಳಿಕೊಂಡು ಉಷಾರಿಲ್ಲದ ತನ್ನ ಗಂಡನ ದೇವಸ್ತಾನದಲ್ಲಿ ತಿಂಗಳುಗಟ್ಟಲೆ ಇಟ್ಕೊಂಡು ತಾಳಿ ಕಳೆದುಕೊಂಡಳು. ಈಗ ನೀನು..? ಆ ಮಗುನ ಹೋಗಿ, ಹೋಗಿ ಬಸಜ್ಜನತಕ ಕರಕೊಂಡು ಹೋಗಿದ್ದಿಯಲ್ಲ!

ಗೌರಕ್ಕನ ಮಾತುಗಳಿಂದ ಜ್ಞಾನೋದಯವಾದವನಂತೆ, ಈಗ ಏನು ಮಾಡೋದಕ್ಕ ಗೋಪಿಗೆ? ಎಂದು ತನಗೆ ಏನು ತೋಚದವನಾಗಿ ಮೂಕನಂತೆ ನಿಂತ ಶಂಕ್ರ. ಸರಿ ಹೋಗಿ ಮಿಕ್ಕ ಹೂವಿನ ಗಿಡಗಳಿಗೆ ನೀರನ್ನು ಹಾಕು ಅದಾದಮೇಲೆ ರಸ್ತೆ ಕಡೆಗೆ ತಂತಿ ಬೇಲಿ ಬಿಚ್ಚಿಕೊಂಡಿದೆ ಅದನ್ನ ಸರಿ ಮಾಡಿ ಬಾ, ಇಲ್ಲಾಂದ್ರೆ ದನಕರುಗಳು ನುಗ್ಗಿ ಗಿಡಗಳನ್ನು ತಿಂದು ಹಾಕ್ತಾವೆ. ಅಷ್ಟು ಹೊತ್ತಿಗೆ ಟೀ ಮಾಡಿರ್ತೀನಿ ಕುಡಿದು ಮನೆಗೆ ಹೋಗುವೆಯಂತೆ. ವತ್ತಾರೆ ಎದ್ದು ನೀನ್ ಮಗನ ಕರಕೊಂಡು ಬಾ, ಸಾರೋಗೆರೆನಾಗೆ ಇರೋ ಮೂಳೆಡಾಕ್ಟ್ರ ಹತ್ರಹೋಗೋಣ ಅವರ ಕೈಗುಣ ಬಹಳ ಚನ್ನಾಗಿ ಇದೆಯಂತೆ ಎಂದು ಹೇಳಿ ಮನೆಯೊಳಗಡೆ ನೆಡೆದಳು ಗೌರಕ್ಕ.

ಮಗನ ಧ್ಯಾನದಲ್ಲೇ ಹೂಗಿಡಗಳಿಗೆ ನೀರನ್ನು ಹಾಕಿ, ತಂತಿಬೇಲಿಯನ್ನು ಸರಿ ಮಾಡಿಬಂದು ಗೌರಕ್ಕನ ಮನೆಯ ಜಗುಲಿಯ ಮೇಲೆ ಕುಳಿತ ಶಂಕ್ರ. ಅಷ್ಟರಲ್ಲಿ ಟೀಯನ್ನು ಕುಡಿಯಲು ತಂದುಕೊಟ್ಟಳು ಗೌರಕ್ಕ. ಕೊಟ್ಟ ಟೀಯನ್ನು ಕುಡಿದು ಅಲ್ಲಿಂದ ಹೊರಡುತ್ತಾ "ವತ್ತಾರೆ ಎದ್ದು ಮಗನ ಜೊತೆ ಬರ್ತೀನಿ ಅಕ್ಕ " ಎಂದು ಹೇಳಿ ಹೊರಟ.

ಶಂಕ್ರನನ್ನು ಕಳುಹಿಸಿ ಮನೆಯೊಳಗೇ ಬಂದು ಕುಳಿತಳು. ಎಲ್ಲ ಮರೆತು ಹಗುರವಾಗಿದ್ದ ತನ್ನ ಮನಸು ಇಂದೇಕೋ ಭಾರವಾಗುತ್ತಿರುವಂತೆ ತೋರಿತು ಅವಳಿಗೆ ಊಟ ಸೇರದೆ ಹೊತ್ತಿಗೆ ಮುಂಚೆ ಮಲಗಲು ಹೋದವಳಿಗೆ ನಿದ್ರೆ ಬಾರದೆ, ಭುಗಿಲೆದ್ದ ಮನಸ್ಸಿನಿಂದ ತನ್ನ ಜೀವನದಲ್ಲಿ ಆಗಿಹೋದ ಘಟನೆಗಳು ಒಂದೊಂದಾಗಿ ನೆನಪಿಗೆ ಬರಲಾರಂಭಿಸಿದವು. ತಾನು ಎರಡನೇ ತರಗತಿಯಲ್ಲಿರುವಾಗ, ಅಷ್ಟು ಚಿಕ್ಕವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡದ್ದು, ಅಪ್ಪ ಲೋಕಾರೂಢಿಯಂತೆ ಬೇರೊಂದು ಮದುವೆಯಾದದ್ದು, ಚಿಕ್ಕಮ್ಮ ಮೊದಮೊದಲು ತನ್ನನ್ನು ಅಕ್ಕರೆಯಿಂದ ನೋಡಿಕೊಂಡದ್ದು, ಶಾಲೆಯಲ್ಲಿ ತನ್ನ ಬುದ್ಧಿ ಸಾಮತ್ತೆ ಮತ್ತು ಅಂದವಾದ ಬರವಣಿಗೆಗೆ ಗುರವೃಂದ ಮೆಚ್ಚಿ, ಬೆನ್ನು ತಟ್ಟುತ್ತಿದದ್ದು, ಓದುವ ವಿಷಯದಲ್ಲಿ ತನ್ನನ್ನು ಪ್ರತಿಸ್ಪರ್ಧಿಯೆಂದೇ ಪರಿಗಣಿಸಿದ್ದ ಪಟೇಲರ ಮಗ ನಾಗರಾಜ ಅಷ್ಟೇ ಪ್ರೀತಿಸುತ್ತಿದದ್ದು , ಹತ್ತನೆಯ ತರಗತಿಯ ಪರೀಕ್ಷೆಯಲ್ಲಿ ಹೋಬಳಿಗೆ ಮೊದಲಿಗಳಾಗಿ ತೇರ್ಗಡೆಯಾದದ್ದು, ಮುಂದೆ ಓದಬೇಕೆಂಬ ತನ್ನ ಆಸೆಗೆ ಚಿಕ್ಕಮ್ಮ ಅಡ್ಡಗಾಲು ಹಾಕಿದ್ದು, ಖುದ್ದು ಪಟೇಲರು ತಮ್ಮ ಮಗ ನಾಗರಾಜನಿಗೆ ನಿಮ್ಮ ಮಗಳನ್ನು ಕೊಡುವಿರಾ? ಎಂದು ಕೇಳಿದಾಗ ಅಪ್ಪ ಒಪ್ಪಿದ್ದರೂ, ಚಿಕ್ಕಮ್ಮ ಆಕೆಯ ತಮ್ಮನಿಗೆ ಕೊಟ್ಟು ಮದುವೆ ಮಾಡಲು ಸಂಚು ಹೂಡಿ, ಆತನು ಕುಡುಕನೆಂದು ಗೊತ್ತಿದ್ದರೂ ತನ್ನನ್ನು ಕೊಟ್ಟು ಮದುವೆ ಮಾಡಿಸಿ, ಜವಾಬ್ದಾರಿಯ ಕೈ ತೊಳೆದುಕೊಂಡದ್ದು. ನೆನಪುಗಳು ಹೀಗೆ ಒಂದರ ಹಿಂದೆ ಒಂದರಂತೆ ಗೌರಕ್ಕನ ಕಣ್ಮುಂದೆ ಬರತೊಡಗಿದವು.

ಇದರ ಮಧ್ಯೆ ಪಡಸಾಲೆಯಲ್ಲಿ ಸಾಕುನಾಯಿ ರಾಮ ಅರಚುತ್ತಿರುವುದನ್ನು ಕೇಳಿ. ಏನೆಂದು? ನೋಡಲು ಅಲ್ಲಿಗೆ ಬಂದಳು. ರಾತ್ರಿ ತಾನು ಊಟವನ್ನು ಮಾಡದೆ, ಅದಕ್ಕೂ ಹಾಕದೆ ಮಲಗಲು ಹೋಗಿದ್ದು ಜ್ಞಾಪಕಕ್ಕೆ ಬಂದು ಅಡುಗೆ ಕೋಣೆಗೆ ಹೋಗಿ ಮಧ್ಯಾಹ್ನ ಊಟಮಾಡಿ ಉಳಿದಿದ್ದನ್ನು ತಂದು ಅದರ ತಟ್ಟೆಗೆ ಹಾಕಿದಳು..

************************

ತನಗಾದ ಅನ್ಯಾಯ, ಅನುಭವಿಸುತ್ತಿರುವ ನೋವು ಎಲ್ಲವನ್ನು ಸಹಿಸಿಕೊಂಡು ಕೊಟ್ಟಮನೆಯಲ್ಲಿ ಕುಡುಕ ಗಂಡ, ಅತ್ತೆ ಮಾವ ಅವರೆಲ್ಲರ ಚಾಕರಿ ಮಾಡಿ. ತೋಟ, ಹೊಲಗಳಲ್ಲಿ ಕೆಲಸಗಾರರೊಡನೆ ತಾನು ಹೆಗಲು ಸೇರಿಸಿ ದುಡಿಯುತ್ತಿದ್ದ ಅವಳಿಗೆ ದಿನಗಳು ಕಳೆದುಹೋದದ್ದು ಗೊತ್ತೇ ಆಗುತ್ತಿರಲಿಲ್ಲ. ಬೆಳಗ್ಗೆ ಎದ್ದು ಹೆಂಡದ ಇಲ್ಲವೇ ಇಸ್ಪಿಟ್ ಮನೆ ಸೇರುತ್ತಿದ್ದ ಅವಳ ಗಂಡ, ರಾತ್ರಿಯೇ ಮತ್ತೆ ಮನೆ ಸೇರುತ್ತಿದದ್ದು. ತನ್ನೂರಲ್ಲಿ ಎಲ್ಲರ ಬಾಯಿಂದ ಗೌರ ಎಂದು ಕರೆಸಿಕೊಳ್ಳುತ್ತಿದ್ದವಳು. ಮನೆ ಒಳಗೂ, ಹೊರಗೂ ಬಿಡುವಿಲ್ಲದ ಕೆಲಸ ಮಾಡಿ ದೈಹಿಕವಾಗಿ ಸಾಕಷ್ಟು ಬಳಲಿ, ಮಾನಸಿಕ ನೋವಿನಿಂದ ಸೊರಗಿ ಅವಳು ತನ್ನ ಕೊಟ್ಟ ಊರಲ್ಲಿ ಗೌರಕ್ಕನಾಗಿದ್ದಳು.

ಇಷ್ಟೆಲ್ಲಾ ಕಷ್ಟ ನೋವುಗಳ ನಡುವೆ ಅವಳಿಗೆ ಆಶಾಕಿರಣವಾಗಿ ಕಂಡಿದ್ದು ಅವಳ ಮಗ. ತನ್ನ ಕೆಲಸಗಳು ಎಷ್ಟೇ ಇರಲಿ, ತನ್ನ ನೋವುಗಳು ಏನೇ ಇರಲಿ ಎಲ್ಲವನ್ನು ಸುಧಾರಿಸುತ್ತಾ. ತನ್ನ ಮಗ ವೀರಾಜ್ ನನ್ನು ಬಹಳ ಅಕ್ಕರೆಯಿಂದ ಪಾಲನೆ, ಪೋಷಣೆ ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದಳು. ಎಲ್ಲರ ಮನೆಯ ಮಕ್ಕಳಂತೆ ತನ್ನ ಮಗನನ್ನು ಕಾನ್ವೆಂಟ್ಗೆ ಕಳುಹಿಸಲು ನಿರ್ಧರಿಸಿ. ಅದರಂತೆ ಪ್ರತಿದಿನ ಅವನ ಸ್ನಾನ ಮಾಡಿಸಿ, ಸಮವಸ್ತ್ರ ತೊಡಿಸಿ, ತಿಂಡಿ ತಿನಿಸಿ ಹಾಗೂ ಬಸ್ ನಿಲ್ದಾಣದವರೆಗೂ ಹೋಗಿ ಬಸ್ ಹತ್ತಿಸಿ ಬರುತ್ತಿದ್ದಳು. ಕಳೆದುಹೋದ ನೆಮ್ಮದಿ ಹಾಗು ಬದುಕು ತನ್ನ ಮಗನಿಂದ ಗೌರಕ್ಕನಿಗೆ ಮತ್ತೆ ಸಿಕ್ಕಿತ್ತು.

************************

ರಾಮ ತಟ್ಟೆಯಲ್ಲಿ ಹಾಕಿದ್ದನ್ನು ತಿನ್ನುವರೆಗೂ ಅಲ್ಲಿದ್ದು ನಂತರ ಒಳ ನೆಡೆದು, ಮಂಚಕ್ಕೆ ಒರಗುತ್ತಾ ನೆಲದಮೇಲೆ ಕುಳಿತಳು. ನೆನಪುಗಳು ಮತ್ತೆ ಒಂದೊಂದಾಗಿ ಬರಲಾರಂಭಿಸಿದವು. ಸ್ವಾತಂತ್ರೋತ್ಸವ ದಿನಾಚರಣೆಗೆಂದು ಸುಭಾಶ್ ಚಂದ್ರ ಬೋಸ್ ರನ್ನು ಹೋಲುವ ಬಟ್ಟೆಗಳನ್ನು ಧರಿಸಿ ಹೋಗಿದ್ದ ಮಗ ವೀರಾಜ್, ತಾನು ಅವನ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದು. ಕಾರ್ಯಕ್ರಮ ಮುಗಿಸಿಕೊಂಡು, ಊರಿಗೆ ಹೊರಟುನಿಂತಿದ್ದ ಬಸ್ಸನ್ನು ಎರಲೆಂದು ಶಾಲಾ ಮೈದಾನದಿಂದ ಬೇಗನೆ ಬರುವಾಗ ಆಕಸ್ಮಿಕವಾಗಿ ನುಗ್ಗಿ ಬಂದ ಲಾರಿ ವೀರಾಜ್ ನ ಸಾವಿಗೆ ಕಾರಣವಾದದ್ದು. ತನ್ನ ಗಂಡ ಕುಡಿತವೆಂಬ ದುಶ್ಚಟಕ್ಕೆ ಬಲಿಯಾದದ್ದು, ವಿದಿಯಿಲ್ಲದೆ ಕೊಟ್ಟ ಮನೆಯಲ್ಲಿ ಒಬ್ಬಂಟಿಗಳಾಗಿರಲು ತೀರ್ಮಾನಿಸಿದ್ದು.

ಅಕೋ.. ಬಾಗಿಲು ತಗಿಯಕೋ ಎನ್ನುವ ಶಬ್ಧ ಕೇಳುತ್ತಲೇ ಬೆಳಕಾಗಿ ಆಗಿರುವುದು ಗೊತ್ತಾಗಿ, ಎದ್ದವಳೇ ಬಾಗಿಲನ್ನು ತೆರೆದಳು. ಬಾಗಿಲಲ್ಲಿ ಇದ್ದ ಶಂಕ್ರ ಮತ್ತು ಗೋಪಿನ ಒಳ ಕರೆದು, ಕುಳಿತುಕೊಳ್ಳಲು ಹೇಳಿ. ಕೆಲವೇ ನಿಮಿಷಗಳಲ್ಲಿ ಸಾರೋಗೆರೆಗೆ ಹೊರಡಲು ಸಿದ್ದಳಾಗಿ ಬಂದಳು. ಇವರು ಸಾರೋಗೆರೆ ತಲುಪಿ, ಆಸ್ಪತ್ರೆ ಸೇರುವುದರಲ್ಲಿ ಆಗಲೇ ಡಾಕ್ಟರ ಭೇಟಿಗೆಂದು ರೋಗಿಗಳ ಉದ್ದನೆಯ ಸಾಲಿತ್ತು. ಗೋಪಿಯ ಸರದಿ ಬಂದಾಗ ಗೌರಕ್ಕ ಹಾಗೂ ಶಂಕ್ರ ಸಹ ಗೋಪಿ ಜೊತೆಗೂಡಿದರು. ಯಾರ್ರೀ? ಇದು ದನಕ್ಕೆ ಸುತ್ತಿದ ಹಾಗೆ ಈ ಹುಡುಗನ ಕೈಗೆ ಬಟ್ಟೆ ಸುತ್ತಿರೋದು? ಎಂದು ಕೇಳಿದರು ಮೂಳೆ ಕಟ್ಟಿಸುವರ ಹತ್ರ ಕರ್ಕೊಂಡು ಹೋಗಿದ್ದೆ ಸಾರ್ ಎಂದು ಶಂಕ್ರ. ಸುತ್ತಿದ ಆ ಬಟ್ಟೆಯನ್ನು ತೆಗೆದು ಗೋಪಿಯ ಕೈಯನ್ನು ಕೂಲಂಕುಶವಾಗಿ ಪರಿಶೀಲಿಸಿ ಬ್ಯಾಂಡೇಜ್ ಹಾಕಿ, ಅಗತ್ಯವಾದ ಚಿಕಿತ್ಸೆ ಕೊಟ್ಟು. ಹದಿನೈದು ದಿವಸ ಆದ ಮೇಲೆ ಬನ್ನಿ ಎಂದು ಕಳುಹಿಸಿದರು.

ಡಾಕ್ಟರು ಬರೆದು ಕೊಟ್ಟ ಔಷಧಿ, ಮಾತ್ರೆಗಳನ್ನು ಅಂಗಡಿಯಲ್ಲಿ ತೆಗೆದುಕೊಂಡು, ಅಲ್ಲಿಂದ ಊರಿಗೆ ಹೊರಡುವ ಬಸ್ನಲ್ಲಿ ಹತ್ತಿ ಕುಳಿತರು. ಬೆಳಗ್ಗೆ ಮನೆಯಿಂದ ಹೊರಟಾಗಿನಿಂದಲೂ ಗೌರಕ್ಕ ಏನೋ ಯೋಚನೆಯಲ್ಲಿ ಇರುವುದ ಗಮನಿಸಿದ ಶಂಕ್ರ. ಯಾಕಕ್ಕ ಬೇಜಾರನಲ್ಲಿ ಇದ್ದೀಯಾ? ನಿನ್ನ ಕಷ್ಟ ನಂಗೆ ಚನ್ನಾಗಿ ಅರ್ಥ ಆಗ್ತದೆ.ನೀನು ಇಷ್ಟು ದಿನ ಎಲ್ಲ ಮರೆತು ಹೇಗಿದ್ಯೋ, ಇನ್ಮುಂದೆ ಹಾಗೆ ಇದ್ಬಿಡು. ನಾವೆಲ್ಲಾ ನಿಮ್ಮ ಜೊತೆ ಇದ್ದೀವಿ.ಗೌರಕ್ಕನಿಗೆ ಕಣ್ಣುಗಳಲ್ಲಿ ನೀರು ತುಂಬಿಕೊಂಡವು. ಒಬ್ಬಳೇ ಎಷ್ಟು ದಿನ, ಈ ಭಾರವಾದ ಬದುಕನ್ನು ಸಾಗಿಸಲಿ ಎಂದ ಗೌರಕ್ಕನಿಗೆ. ಏನು ಉತ್ತರಕೊಡಬೇಕೆಂದು ಗೊತ್ತಾಗದೆ ಸುಮ್ಮನಾದ ಶಂಕ್ರ. ಅಷ್ಟರಲ್ಲಿ ಬಸ್ ಊರನ್ನು ತಲುಪಿತ್ತು. ಗೌರಕ್ಕನ ತೋಟದ ಮನೆಯತ್ತಿರ ಬಿಟ್ಟು. ಶಂಕ್ರ ಮತ್ತು ಗೋಪಿ ಮನೆಯ ದಾರಿಯನ್ನು ಹಿಡಿದರು.

ಟೀ ಮಾಡಿಕೊಂಡು, ಕುಡಿದು. ಮನೆಯೊಳಗೇ ಇದ್ದರೆ ಅದೇ ಯೋಚನೆಗಳು ಪದೇ ಪದೇ ಕಾಡುತ್ತವೆಂದು ತೋಟದ ಕಡೆ ಬಂದಳು ಗೌರಕ್ಕ. ಸೂರ್ಯನು ಪಡುವಣ ದಿಕ್ಕಿನಲ್ಲಿ ಬಂಗಾರದ ಒಕುಳಿಯನ್ನು ಎರಚಿ ಗುಡ್ಡದ ಕಡೆಯಿಂದ ಮುಳುಗುತ್ತಾ ಇದ್ದನು, ಪ್ರಕೃತಿಯ ವಿಸ್ಮಯ ಎಷ್ಟೊಂದು ಸೊಗಸು? ಎಂದು ಬೆರಗಾಗುತ್ತಾ, ಕೈಯಾರೆ ತಾನು ಬೆಳೆಸಿದ ಹೂಗಿಡಗಳನ್ನು ನೋಡಲು ಬಂದಳು. ಹೂಗಿಡಗಳಲ್ಲಿ ಬಿರಿದು ಮೊಗ್ಗುಗಳು ಇರವುದನ್ನು ಕಂಡು ಸಂತೋಷಪಟ್ಟಳು. ಅಷ್ಟರಲ್ಲಿ ಕೆಲವು ತಾಸುಗಳ ಕೆಳಗೆ ತಾನೇ ಮನೆಗೆ ಹೋಗಿದ್ದ ಶಂಕ್ರ ಪುನ: ಬರುತ್ತಿರುವುದನ್ನು ಕಂಡಳು. ಅವನನ್ನು ಕಾಣುತ್ತಲೇ ಲೋ ಶಂಕ್ರ ಯಾಕೋ ಮತ್ತೆ ಬಂದೇ?. ತೋಟದಲ್ಲಿ ಏನೋ ಕೆಲಸ ಇಲ್ಲ ಕಣೋ, ಒಂದೆರಡು ದಿನ ನೀನು ಬರದೆ ಹೋದರು ಪರವಾಗಿಲ್ಲ. ನಿನ್ನ ಮಗ ಗೋಪಿನ ಚನ್ನಾಗಿ ನೋಡಿಕೋ.

ಅಕೋ, ನಿನ್ ಹತ್ರ ಏನೋ ಮಾತಾಡೋಕ್ಕೆ ಬಂದಿದ್ದೀನಿ ಎಂದ ಶಂಕ್ರ. ಏನೋ ಅದು ವಿಷ್ಯ? ಅವಾಗಲೇ ಹೇಳಿಹೋಗಬಹುದಿತ್ತಲ್ಲ? ಮತ್ತೆ ಬರೋದು ತಪ್ಪುತ್ತಿತ್ತು ಎಂದಳು ಗೌರಕ್ಕ. ಹೆಂಗೆ ಹೇಳಬೇಕು ಅಂತ ಗೊತ್ತಾಗ್ತಿಲ್ಲ, ನಿಂಗೆ ಮೇಲ್ ಜಾತಿ, ಕೆಳಜಾತಿ ನಂಬಿಕೆ ಇಲ್ಲ ಅಂತಾದರೆ. ಗೋಪಿನ ನಿನ್ ಹತ್ರನೇ ಬೆಳಸೋಣ ಅಂತ ಇದ್ದೀವಿ. ಇದ್ರ ಬಗ್ಗೆ ನಾನು, ನಮ್ಮ ಮನೆಯವಳು ಕೂತು ಯೋಚನೆ ಮಾಡಿವಿ. ಮಗನನ್ನು ಕಳೆದುಕೊಂಡ ನೋವು, ಒಬ್ಬಳೇ ನಿನ್ ಇಲ್ಲಿ ಪಡೋ ಕಷ್ಟ ಏನು ಅಂತ ಹತ್ರದಿಂದ ನೋಡಿವಿ ಎಂದು ಹೇಳಿದ ಶಂಕ್ರ. ಶಂಕ್ರನ ಈ ಮಾತುಗಳಲ್ಲಿ ಕರುಣೆಗಿಂತ ವಾಸ್ತವತೆಯ ಅರಿವು ಹೆಚ್ಚು ಇದ್ದಂತೆ ತೋರುತಿತ್ತು.

ಇದರ ಬಗ್ಗೆ ಏನೋ ಹೇಳಲು ಇಚ್ಚಿಸದ ಗೌರಕ್ಕ. ಯಾವುದಕ್ಕೂ ಯೋಚ್ನೆ ಮಾಡಿ ನಾಳೆ ಹೇಳ್ತೀನಿ ಎಂದಷ್ಟೇ ಹೇಳಿ. ವಿದಿಯು ಇನ್ನಾದರೂ ತನಗೆ ನೆಮ್ಮದಿಯ ಬದುಕನ್ನು ನಡೆಸಲು ಬಿಡುವುದೇ? ಎಂದು ಮನಸ್ಸಿನಲ್ಲಿ ಅಂದುಕೊಂಡು ಮನೆಯತ್ತ ನೆಡೆದಳು.


ಮಂಗಳವಾರ, ಡಿಸೆಂಬರ್ 10, 2013

ಅಜ್ಜಿಯ ನೆನಪಲೊಂದು ಲೇಖನ..

ಬರವಣಿಗೆಯ ಮೇಲೆ ನಾಲ್ಕು ವರುಷಗಳ ಕೆಳಗೆ ಇದ್ದ ಆ ಹಿಡಿತ, ಆ ಸರಾಗ ನನಗೀಗ ಇಲ್ಲವೇನೋ ಎಂದು ಅನ್ನಿಸುತ್ತೆ. ಬರವಣೆಗೆ ಲೋಕದಿಂದ ದೂರ ಇದ್ದರೂ, ಬರೆಯಬೇಕೆಂಬ ಹಂಬಲ ಮಾತ್ರ ನನ್ನನ್ನು ಸದಾ ಕಾಡುತ್ತಾ ಇದ್ದದ್ದು ನಿಜ.ಆದರೆ ಈಗ ಲೇಖನ,ಪ್ರವಾಸ ಕಥನ ಅಥವಾ ಕವಿತೆ ಹೀಗೆ ಯಾವುದಾದರೊಂದನ್ನು ಬರೆಯಲು ಹೋದರೆ ಹೇಗೆ ಪ್ರಾರಂಭಿಸಬೇಕು? ಹೇಗೆ ಮುಂದುವರೆಸಬೇಕು? ಹೇಗೆ ಮುಗಿಸಬೇಕು? ಹೀಗೆ ಹತ್ತಾರು ವಿಚಾರಗಳು ಮನಸ್ಸಿನಲ್ಲಿ ಮೂಡಿ ಬರುತ್ತಿವೆ.ಹೇಗೆ ಕೆಲವೊಂದು ಸನ್ನಿವೇಶ ಮತ್ತು ಘಟನೆಗಳು ನಮ್ಮನ್ನು ಬರವಣಿಗೆ ಹಾಗು ಭಾವನಲೋಕದಿಂದ ದೂರ ಕರೆದೊಯುತ್ತವೆಯೋ,ಹಾಗೆಯೇ ಕೆಲವೊಂದು ಸನ್ನಿವೇಶ ಮತ್ತು ಘಟನೆಗಳು ನಮ್ಮನ್ನು ಬರವಣಿಗೆ ಹಾಗು ಭಾವನಲೋಕದ ಹತ್ತಿರ ಕರೆದುತರುತ್ತವೆ.ನಾನು ಬಹಳವಾಗಿ ಗೌರವಿಸುತ್ತಿದ್ದ ಹಾಗು ಪ್ರೀತಿಸುತ್ತಿದ್ದ ನನ್ನ ಅಜ್ಜಿ (ಅಮ್ಮನ ಅಮ್ಮ)ಈಗ್ಗೆ ಕೆಲವು ತಿಂಗಳುಗಳ ಕೆಳಗೆ ಸ್ವರ್ಗಸ್ತರಾದರು.ಅವರ ನೆನಪಲ್ಲಿ ಒಂದು ಲೇಖನ.

ನಾವು ಹಿರಿಯವರಿಂದ ಕಲಿಯಬೇಕಾಗಿರುವುದು ಬಹಳಷ್ಟು ಇರುತ್ತೆ.ಅವರ ಜೀವನದ ಅನುಭವ,ಕಷ್ಟ-ಸುಖಗಳನ್ನು ಸರಿಸಮವಾಗಿ ತೆಗೆದುಕೊಳ್ಳುವ ಮನೋಭಾವ,ಎಲ್ಲಕ್ಕಿಂತ ಮುಖ್ಯವಾಗಿ ಸ್ವಾಭಿಮಾನ ಮತ್ತು ಸ್ವಾವಲಂಬನೆ ತುಂಬಿಕೊಂಡ ಅವರ ಬದುಕು.ನಮ್ಮೂರಿಂದ ಎರಡೂವರೆ ಮೈಲಿ ದೂರದಲ್ಲಿ ನನ್ನಜ್ಜಿಯ ಊರು,ಅಲ್ಲಿಗೆ ಬಸ್ಸುಗಳ ಸೌಕರ್ಯವಿಲ್ಲ,ನೆಡಿಗೆಯಲ್ಲಿ ಹೋಗಬೇಕು,ಇಲ್ಲವೇ ಸೈಕಲ್ಲು,ಮೋಟಾರು ವಾಹನಗಳಲ್ಲಿ ಹೋಗಬೇಕು.ನಾನು ಚಿಕ್ಕಂದಿನಲ್ಲಿ ಸೈಕಲ್ಲು ಕಲಿಯುವವರೆಗೂ ಅಜ್ಜಿಯೂರಿಗೆ ನೆಡಿಗೆಯಲ್ಲೇ ಹೋಗುತ್ತಿದ್ದೆ.ಮನೆಯಿಂದ ಹೊರಟ ಸ್ವಲ್ಪ ಸಮಯದಲ್ಲೇ ತೆಂಗಿನ ತೋಟಗಳ ಸಾಲು, ತೋಟಗಳ ಸಾಲಿನ ಕೊನೆಯಲ್ಲಿ ಬೃಹದಾಕಾರದ ನಮ್ಮೂರಿನ ಕಲ್ಲುಬಂಡೆ,ಬಂಡೆ ಕೆಳಗಡೆ “ಜಲರಕಟ್ಟೆ”ಎನ್ನುವ ಕಟ್ಟೆ. ಆ ದಿನಗಳಲ್ಲಿ ನಮ್ಮೂರಿನ ಹೆಂಗಸರು ತಮ್ಮ,ತಮ್ಮ ಮನೆಯ ಕೊಳೆತುಂಬಿದ ಬಟ್ಟೆಗಳನ್ನು ಇಲ್ಲೆಯೇ ತೊಳೆಯುತ್ತಿದ್ದದ್ದು (ಈಗ ಕಾಲ ಬಹಳಷ್ಟು ಬದಲಾಗಿದೆ!).ಆ ಕಟ್ಟೆಯನ್ನು ದಾಟಿ ಸ್ವಲ್ಪ ದೂರ ನೆಡೆದರೆ ಬಯಲು ಹೊಲಗಳು,ನಂತರದಲ್ಲಿ ನನ್ನಜ್ಜಿಯೂರಿನ ಕೆರೆ (ಅದರ ಹೆಸರು ಬೊಮ್ಮೇನಹಳ್ಳಿ ಕೆರೆ). ಆ ಕೆರೆಯನ್ನು ದಾಟಿ ಸ್ವಲ್ಪ ದೂರ ನೆಡೆದರೆ ಅಜ್ಜಿಯ ಊರು ಬೊಮ್ಮೇನಹಳ್ಳಿ. ಆ ಊರನ್ನು ಲಕ್ಷ್ಮೀಪುರ ಮತ್ತು ದಿಬ್ಬ ಅನ್ನುವ ಹೆಸರಗಳಿಂದ ಕರೆಯುತ್ತಿದ್ದದ್ದು ಉಂಟು.

ಚಿಕ್ಕಂದಿನಲ್ಲಿ ಬೊಮ್ಮೇನಹಳ್ಳಿಗೆ ಹೋದಾಗಲೆಲ್ಲ ‘ಅಜ್ಜಿಮನೆ’ಗೆ ಹೋಗದೆ ನೇರವಾಗಿ ತೋಟಕ್ಕೆ ಹೋಗುತ್ತಿದೆ. ಏಕೆಂದರೆ ಬಹಳಷ್ಟು ಸಮಯವನ್ನು ಅವರು ಅಲ್ಲೆಯೇ ಕಳೆಯುತ್ತಿದ್ದರು. ಅವಳ ಜೀವಾಳವೇ ಅಲ್ಲಿ ಇತ್ತು. ಬಡಕಲು ಶರೀರದ ನನ್ನಜ್ಜಿ ಬಿಸಿಲಿನ ಶಾಖ ತಲೆಗೆ ತಾಗದಂತೆ ಹರಿವೆಯೊಂದನ್ನು ಕಟ್ಟಿಕೊಂಡು,ಎರಡು-ಮೂರು ಆಕಳುಗಳನ್ನು ಹಗ್ಗದ ಸಹಾಯದಿಂದ ಹಿಡಿದುಕೊಂಡು ಬದುವಿನ ಮೇಲೆ ಬೆಳೆದ ಹಸಿರು ಹುಲ್ಲನ್ನು ಮೇಯಿಸುತ್ತಿರುತ್ತಿದ್ದರು.ನಾನು ಅವರನ್ನು ನೋಡಲು ಹೋದಾಗಲೆಲ್ಲ,ಅಮ್ಮ ಮಲ್ಲೇನಹಳ್ಳಿಯಿಂದ ಅಜ್ಜಿಗೆ ಏನಾದರೂ ತಿನ್ನಲು ಕೊಟ್ಟಿರುತ್ತಿದ್ದರು ಅದನ್ನು ಅಜ್ಜಿಗೆ ಕೊಡುತ್ತಿದ್ದೆ. ತೋಟದಲ್ಲಿ ಇರುತ್ತಿದ್ದ ಎಳನೀರಿನ ಕಾಯಿಯನ್ನು ಕುಡಿಯಲು ನನಗೆ ಕೊಡುತ್ತಿದ್ದರು ಅಜ್ಜಿ. ಮಲ್ಲೇನಹಳ್ಳಿಗೆ ಹೊರಡಲು ನಾನು ಇನ್ನೇನು ಸಿದ್ದನಾಗಬೇಕು ಅನ್ನುವಷ್ಟರಲ್ಲಿ ತಮ್ಮ ಸೆರಗಿನ ಗಂಟಿನಲ್ಲಿ ಕಟ್ಟಿಇಟ್ಟುಕೊಂಡಿರುತ್ತಿದ್ದ ಒಂದು ಅಥವಾ ಎರಡು ರೂಪಾಯಿ ಬಿಲ್ಲೆ ಅಥವಾ ನೋಟನ್ನು ನನಗೆ ಕೊಡುತ್ತಿದ್ದರು.ಆಗ ನನಗಂತೂ ಇನ್ನೀಲ್ಲದ ಖುಷಿಯಾಗುತ್ತಿತ್ತು.ನಾನು ಗಮನಿಸಿದ ಹಾಗೆ ಅವರಲ್ಲಿದ್ದ ಒಂದು ವಿಶೇಷ ಗುಣವೆಂದರೆ ಒಬ್ಬರಿಗೆ ಕೊಟ್ಟಿದ್ದನ್ನು ಮತ್ತೊಬ್ಬರಿಗೆ ಹೇಳುತ್ತಿರಲಿಲ್ಲ.‘ಅಜ್ಜಿಮನೆ’ಯೆಂದರೆ ಭವ್ಯವಾದ ಮನೆಯೇನು ಅದಾಗಿರಲಿಲ್ಲ ಅದು ಅಪ್ಪಟ ಗುಡಿಸಲು. ಆ ದಿನಗಳಲ್ಲಿ ಅದರಲ್ಲೇ ಅಜ್ಜಿ ಮತ್ತು ಇಬ್ಬರು ಮಾವಂದಿರು ವಾಸವಿದ್ದದ್ದು.

ನಮ್ಮಜ್ಜಿಯ ತೌರೂರು ನನ್ನೂರೇ. ನನಗೆ ಗೊತ್ತಿರುವ ಹಾಗೆ ನಾನು ಮೂರನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮಜಿಯ ಅಮ್ಮನಿಗೆ (ಅಂದರೆ ನನ್ನ ಮುತ್ತಜ್ಜಿ)ಆರೋಗ್ಯ ಸರಿಯಿಲ್ಲದೆ ಹಾಸಿಗೆಯನ್ನು ಹಿಡಿದಾಗ ಅವರ ಹಾರೈಕೆ ಮಾಡಲು ನಾಲ್ಕೈದು ತಿಂಗಳು ಕಾಲ ದಿನನಿತ್ಯ ನನ್ನೂರಿಗೆ (ಮಲ್ಲೇನಹಳ್ಳಿ) ಕಾಲು ನೆಡಿಗೆಯಲ್ಲೇ ಬಂದು ಹೋಗುತ್ತಿದ್ದರು.ಅಜ್ಜಿ ನಮ್ಮೂರಿಗೆ ಬಂದರೆ ಏನೋ ಒಂದು ತರಹ ಖುಷಿ ನಮಗೆ,ಏನಾದರೂ ತಿನ್ನಲು ತರುತ್ತಿದ್ದರು ಬಹಳಷ್ಟು ಸಮಯ ಸೌತೆಕಾಯಿ ರೂಪದ ಮೃದು ಹಣ್ಣನ್ನು ತರುತ್ತಿದ್ದರು(ನಮ್ಮ ಕಡೆ ಅದಕ್ಕೆ ಕ್ಯಾಕರಿಕೆ ಹಣ್ಣು ಎಂದು ಕರೆಯುತ್ತಾರೆ),ಅದಕ್ಕೆ ಸಕ್ಕರೆ ಮತ್ತು ತೆಂಗಿನಕಾಯಿ ತುರಿ ಮಿಶ್ರಣ ಮಾಡಿಕೊಂಡು ತಿನ್ನುತ್ತಿದ್ದೆವು.ಹಬ್ಬ,ಹರಿದಿನಗಳು ಇದ್ದಾಗ ಎದ್ದು ಹೋಳಿಗೆ,ಕೀಲ್ಸ(ರಾಗಿಯಿಂದ ಮಾಡುವ ಸಿಹಿ ತಿನಿಸು)ಮಾಡಿಕೊಂಡು ತರುತ್ತಿದ್ದರು.

೨೦೦೭ರಲ್ಲಿ ನನ್ನ ಅಪ್ಪಾಜಿ ತೀರಿ ಹೋದಾಗಿನಿಂದ ಅಮ್ಮನ ಜೊತೆಗೆ ಇರಲು ಒತ್ತಾಯ ಮಾಡಿ ಅಜ್ಜಿಯನ್ನು ನಮ್ಮೂರಿಗೆ ಕರೆದುಕೊಂಡು ಬಂದಿದ್ದೆವು. ನನ್ನ ಅಜ್ಜಿಯ ಬಗ್ಗೆ ಮೊದಲಿಗಿಂತ ಹೆಚ್ಚು ವಿಷಯಗಳು ತಿಳಿದುಬಂದದ್ದು ಆ ಸಮಯದಲ್ಲೇ.ಬೆಳಗ್ಗೆ ಆರರಿಂದ ಅವರ ದಿನ ಶುರುವಾಗುತ್ತಿತ್ತು.ದಿನನಿತ್ಯ ಮನೆ ಮತ್ತು ಅಂಗಳದ ಕಸ ಗೂಡಿಸುವುದು,ಮನೆಯ ಮುಂದೆ ಅಂಗಳ ಮತ್ತು ಹಟ್ಟಿಯಲ್ಲಿ ನೀರನ್ನು ಚುಮುಕಿಸುವುದು ಮತ್ತು ಹೂವನ್ನು ಹಾಕುವುದು, ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದು,ಸ್ನಾನ ಮಾಡಿ ದೇವರ ಪೂಜೆ ಮಾಡುವುದು,ಅಚ್ಚುಕಟ್ಟಾದ ಅಡುಗೆ ಮಾಡುವುದು. ಅಜ್ಜಿ ನಮ್ಮೂರಿನಲ್ಲಿ ಇರುವಾಗ ಅಮ್ಮನಿಗೆ ತೋಟದ ಕೆಲಸ ಬಿಟ್ಟು ಬೇರೇನು ಕೆಲಸವೇ ಇರುತ್ತಿರಲಿಲ್ಲ! ಊಟದ ವಿಷಯದಲ್ಲೂ ಅಜ್ಜಿ ಬಹಳ ಕಟ್ಟುನಿಟ್ಟು,ಅಪ್ಪಿತಪ್ಪಿಯು ಸಹ ಮಿತಿ ತಪ್ಪಿ ಊಟ ಮಾಡುತ್ತಿರಲಿಲ್ಲ,ಊಟಕ್ಕೆ ಒಪ್ಪುವ ಹಾಗೆ ಅಷ್ಟೇ ಮಿತವ್ಯಯದ ಮಾತು ಹಾಗು ಮನೆಯಲ್ಲಿ ಅದೇ ಎಷ್ಟೇ ಜನ ನೆಂಟರು ಇರಲಿ ಹರಟು ಮಾತಿಗೆ ಕೂರದೆ ರಾತ್ರಿ ಹತ್ತಕ್ಕೆ ಮಲಗಿಬಿಡುತ್ತಿದ್ದರು.

ನಮ್ಮಜ್ಜಿ ಅಂದರೆ ತೀರ ಸಾಧಾರಣ ವ್ಯಕ್ತಿತ್ವದ ವ್ಯಕ್ತಿ ಎಂದು ನನಗೆ ಯಾವತ್ತು ಅನ್ನಿಸಿಲ್ಲ. ಏಕೆಂದರೆ ಬದುಕಲಿ ಬಹಳ ಕಷ್ಟ ಅನುಭವಿಸಿದರು, ಕಷ್ಟಗಳನ್ನು ಸಹಿಸಿ, ಸಹಿಸಿ.ಕಷ್ಟಗಳಿಗೆ ಹೆದರದಷ್ಟು ಗಟ್ಟಿಯಾಗಿದ್ದ ಮನೋಸ್ಥೈರ್ಯ ಅವರದಾಗಿತ್ತು.ಅದರಂತೆಯೇ ಯಾವುದಕ್ಕೂ ಹೆದರದೇ,ಎಲ್ಲ ಕೆಲಸಗಳನ್ನು ತಾಳ್ಮೆ,ಶಿಸ್ತಿನಿಂದ ಮಾಡುತ್ತಿದ್ದರು. ನನ್ನ ದೃಷ್ಟಿಯಲ್ಲಿ ನನ್ನಜ್ಜಿಯೆಂದರೆ ಅವರು ಸದಾ ಮಂದಸ್ಮಿತ,ಚಟುವಟಿಕೆಯಿಂದ ಇರುವಂತಹ ವ್ಯಕ್ತಿ ಹಾಗು ನನಗೆ ತಿಳಿದ ಮಟ್ಟಿಗೆ ಬದುಕನ್ನು ಅರ್ಥಪೂರ್ಣವಾಗಿ ಬಾಳಿ ಹೋದ ಕೆಲವರಲ್ಲಿ ಒಬ್ಬರು.

ಕೊನೆಯಲ್ಲಿ ಹೇಳುವುದಾದರೆ ದೊಡ್ಡ,ದೊಡ್ಡ ವ್ಯಕ್ತಿಗಳನ್ನು ನಮ್ಮ ಬದುಕಿನ ಆದರ್ಶವಾಗಿ ಇರಿಸಿಕೊಳ್ಳುವುದಕ್ಕಿಂತ ನಮ್ಮ ಹತ್ತಿರವೇ ಇರುವ ಹಾಗು ನಮ್ಮಲ್ಲಿ ಆಗಾಧವಾದ ಕನಸು ಕಟ್ಟಿಕೊಂಡಿರುವ ನಮ್ಮ ತಂದೆ,ತಾಯಯಿಂದಿರು ಅಥವಾ ಅಜ್ಜ,ಅಜ್ಜಿಯಿಂದಿರು ಇಲ್ಲವೇ ನಮ್ಮ ಶಿಕ್ಷಕರುಗಳು ಇವರಲ್ಲಿ ಯಾರನ್ನಾದರೂ ನಮ್ಮ ಆದರ್ಶವಾಗಿ ನೋಡುವುದು ಹೆಚ್ಚು ಸೂಕ್ತವೆಂದು ನನಗೆ ತೋರುತ್ತೆ.

- ಸುನಿಲ್ ಮಲ್ಲೇನಹಳ್ಳಿ, ದಿನಾಂಕ ೬-ಡಿಸೆಂಬರ್ -೨೦೧೩