ಮನದ ಸಂತೆಯಲ್ಲಿ ನಡೆದಿಹುದು ಕನ್ನಡ ಪದಗಳ ನಿನಾದ! ಈ ಬ್ಲಾಗಿನಲಿ ಪ್ರತಿಕ್ಷಣವೂ ಹರಿದಿಹುದು ಅ ನಿನಾದ ಸಂವಾದ! ಓದುಗರಿಗಂತೂ ದಿನನಿತ್ಯವೂ ಹೊಸ ವಿಚಾರದ ಆಸ್ವಾದ. ..
ಸೋಮವಾರ, ಜುಲೈ 28, 2008
ಪಪ್ಪ (ಅಪ್ಪ)
ಪಪ್ಪ ಪಪ್ಪ
ಮುದ್ದಿನ ಪಪ್ಪ
ಕೇಳಿದ್ದು ಕೊಡಿಸೋ ಪಪ್ಪ│
ಒಳ್ಳೇದು ಕಲಿಸೋ ಪಪ್ಪ│
ಕೆಟ್ಟದ್ದು ಬಿಡಿಸೋ ಪಪ್ಪ│
ಪಪ್ಪ ಪಪ್ಪ
ಇಂದೇಕೆ ನನ್ನಲಿ ನಿನಗೆ ಕೋಪ?│
ನೀ ಕುಡಿಯೋದನು ಅಮ್ಮನಿಗೆ
ನಾ ಹೇಳಿದ್ದೇ ತಪ್ಪಾ?│
ಪಪ್ಪ ಪಪ್ಪ
ನೀ ಹೀಗೆ ಮುನಿಸಿಕೊಂಡರೆ
ನನ್ನ ಹೋಮ್ ವರ್ಕ್ ಮಾಡೋರ್ಯಾರಪ್ಪ?
ಪಪ್ಪ ಪಪ್ಪ
ನನ್ನ ಮಾತನು ಕೇಳಪ್ಪ│
ನೀ ಕುಡಿಯೋದ್ ಬಿಟ್ರೆ
ನನ್ ಹೋಮ್ ವರ್ಕ್ ನಾನೇ
ಮಾಡಿಕೊಳ್ಳುವೆನಪ್ಪ│
ಮತ್ತೆ ಅಮ್ಮನ ಮುಖದಲಿ
ನಗುವಿನ ಅಲೆಯನು ನೀ ಕಾಣುವೆಯಪ್ಪ│
ರಚನೆ: ಸುನಿಲ್ ಮಲ್ಲೇನಹಳ್ಳಿ
ನಾ ಓದಿದ ಕಾದಂಬರಿ “ಮರಳಿ ಮಣ್ಣಿಗೆ”
ಶಿವರಾಮ ಕಾರಂತರ “ಮರಳಿ ಮಣ್ಣಿಗೆ” ಕಾದಂಬರಿಯು ಕನ್ನಡ ಸಾರಸ್ವತ ಲೋಕದಲ್ಲಿ ಮೆಚ್ಚುಗೆ ಪಡೆದ ಸಾಹಿತ್ಯದಾಕರಗಳಲೊಂದು. ಈ ಕಾದಂಬರಿಯಲ್ಲಿ ಕಾರಂತರು ಕರಾವಳಿ ತೀರ ಪ್ರದೇಶದ ಐತಾಳ ಕುಟುಂಬವೊಂದರ ತಲೆಮಾರನ್ನು ಕೇಂದ್ರಬಿಂದುವಾಗಿರಿಸಿಕೊಂಡು ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಎಣೆದಿದ್ದಾರೆ. ಕಾದಂಬರಿಯನ್ನು ಓದುತ್ತಾ ಹೋದರೆ ಕರಾವಳಿಯ ತೀರ ಪ್ರದೇಶಗಳಿಗೆ ನಮ್ಮನ್ನು ನಮಗರಿವಿಲ್ಲದೆ ಕರೆದೊಯ್ಯತ್ತದೆ.
ಕೋದಂಡರಾಮ ಐತಾಳರ ಮಗ ರಾಮ ಐತಾಳರು ನಾರಾಯಣ ಮಯ್ಯನವರ ಮಗಳು ಪಾರ್ವತಿಯನ್ನು ವಿವಾಹವಾಗುವುದರಿಂದ ಕಥೆಯು ಪ್ರಾರಂಭವಾಗುತ್ತದೆ. ಇವರೀರ್ವರ ಮದುವೆಯಾದ ಕಲವೇ ವರುಷಗಳಲ್ಲಿ ಇಬ್ಬರು ಬೀಗರು ಅಂದರೆ ಕೋದಂಡರಾಮ ಐತಾಳರು ಹಾಗೂ ನಾರಾಯಣ ಮಯ್ಯನವರು ಕಾಲವಶವಾಗಿಬಿಡುತ್ತಾರೆ. ಮನೆಯ ಜವಾಬ್ದಾರಿ ಹಾಗೂ ಅಪ್ಪನಿಂದ ಬಳುವಳಿಯಾಗಿ ಬಂದ ಪೌರೋಹಿತ್ಯದ ಕೆಲಸವು ರಾಮ ಐತಾಳರ ಹೆಗಲ ಮೇಲೆ ಬೀಳುತ್ತದೆ. ರಾಮ ಐತಾಳರದು ಸ್ವಲ್ಪ ಆಸೆಬುರಕ ಸ್ವಭಾವ, ಪೌರೋಹಿತ್ಯದಲ್ಲಿ ತಮಗೆ ಸಿಕ್ಕ ಯಾವ ವಸ್ತುವನ್ನೂ ಬಿಡದೆ ಎಲ್ಲವನ್ನೂ ಮನೆಗೆ ಬಾಚಿಕೊಂಡು ಬರುತ್ತಿರುತ್ತಾರೆ. ಚಿಕ್ಕವಯಸಿನಲ್ಲೇ ತನ್ನ ಗಂಡನನ್ನು ಕಳೆದಕೊಂಡು ರಾಮ ಐತಾಳರ ತಂಗಿ ಸರಸ್ವತಿ ತನ್ನ ತೌವರು ಮನೆಯಲ್ಲೇ ಇರುತ್ತಾಳೆ. ರಾಮ ಐತಾಳರು ಹಾಗೂ ಪಾರ್ವತಿ ದಂಪತಿಗಳಿಗೆ ಮಕ್ಕಳಾಗದ ಕಾರಣ ರಾಮ ಐತಾಳರು ಸತ್ಯಭಾಮೆ ಎನ್ನುವ ಕನ್ಯೆಯನ್ನು ವಿವಾಹವಾಗಿತ್ತಾರೆ. ಈ ದಂಪತಿಗಳಿಗೆ ಗಂಡು ಮಗುವೊಂದು ಜನಿಸುತ್ತದೆ. ಆ ಮಗುವಿಗೆ ಲಕ್ಷ್ಮಿ ನಾರಾಯಣ (ಲಚ್ಚ) ಎಂಬ ಹೆಸರನ್ನು ಇಡುತ್ತಾರೆ. ಆ ಲಚ್ಚನೇ ಮರಳಿ ಮಣ್ಣಿಗೆ ಕಾದಂಬರಿಯ ಪ್ರಮುಖ ಪಾತ್ರಧಾರಿ. ಅವನು ಐತಾಳರ ಕುಟುಂಬಕ್ಕೆ ಕೀರುತಿ ತರುತ್ತಾನೋ ಇಲ್ಲ ಅಪಕೀರುತಿಯನ್ನು ತರುತ್ತಾನೋ ಅಲ್ಲದೆ ತನ್ನ ಪತ್ನಿಯಾಗಿ ಬರುವ ಸುಸಂಸ್ಕೃತ ಸಂಪ್ರಾದಯದ ಮನೆತನದ ಹುಡುಗಿ ನಾಗವೇಣಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದೇ ಈ ಕಾದಂಬರಿಯ ಪ್ರಮುಖ ತಿರುಳು.
ಕಾರಂತರು ಕಥೆಯನ್ನು ಎಳೆ ಎಳೆಯಾಗಿ ಬರೆದಿದ್ದಾರೆ. ಈ ಕಥೆಯಲ್ಲಿ ಕಡಲತೀರದ ಜನರ ಆಚಾರ-ವಿಚಾರವಿದೆ, ಕನ್ನಡ ಸಾಹಿತ್ಯಲೋಕಕ್ಕೆ ಉಡುಗೊರೆಯಾಗಿ ಹರಿದು ಬಂದಿರುವ ಹೊಸಹೊಸ ನುಡಿಮುತ್ತುಗಳಿವೆ, ಹಾಗೇನೇ ಪ್ರಾಯದ ಯುವಕರ ಕೆಡುಕಿನ ವಿಚಾರವೂ ಇದೆ, ಇವೆಲ್ಲಕ್ಕಿಂತ ಮಿಗಿಲಾಗಿ ಹೆಂಗಳೆಯರು ಹೊರಗಿನ ಕೆಲಸಕಾರ್‍ಯಗಳಲ್ಲಿ ಗಂಡಸರಿಗಿಂತ ಕಡಿಮೆ ಇಲ್ಲ ಎಂಬುದನ್ನು ತಿಳಿಸುವ ಮಾರ್ಮಿಕ ಸಂದೇಶವಿದೆ ಹಾಗೂ ಅವರು ಸಂಸಾರದಲ್ಲಿ ಅನುಭವಿಸುವ ಒಣ ನೋವುಗಳ ವ್ಯಾಕ್ಯಾನವಿದೆ. ನಿಜ ಹೇಳಬೇಕೆಂದರೆ ನಲವಿಗಿಂತ ನೋವೇ ಕಾರಂತರ ಈ ಕಥೆಯಲ್ಲಿದೆ. ಕೊನೆಯಲ್ಲಿ ನಗುವಿನ ಆಶಾಕಿರಣವೊಂದನ್ನು ಹುಟ್ಟಿಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.
- ಸುನಿಲ್ ಮಲ್ಲೇನಹಳ್ಳಿ
ಬುಧವಾರ, ಜುಲೈ 23, 2008
ಓ ಕನ್ನಡ ಬಾಲೆ│
ಈ ಬ್ಲಾಗಿನ ಹಾಳೆ
ಹರಿಸುತಿಹುದು
ನಿನ್ ವರ್ಣನೆಯ ಸಾಲೆ│
ಅನ್ನದಿರು ನಾಳೆ
ಇಂದೇ ನೀ ಬಂದು ನೋಡೆ
ಈ ಬ್ಲಾಗಿನ ಹಾಳೆ│
ಇಷ್ಟವಾದರೆ ನಿನ್ನ ಗೆಳತಿಗೂ ಫಾರ್ವರ್ಡ್ ಮಾಡೆ│
ಓ ನನ್ನ ಕನ್ನಡ ಗೆಳೆಯ│
ಒಮ್ಮೆ ನೀ ಬಾರೆಯಾ.. ಬಂದು ನೋಡೆಯಾ
ಈ ಸುಂದರ ಬ್ಲಾಗಿನ ಹಾಳೆಯ│
ಹಾಗೆಯೇ ಬಂದಾಗಲೆಲ್ಲಾ│
ನವ್ಯ ಕವನಗಳ ಸಿಹಿಯ.. ನೀ ಸವಿದು ಹೋಗೆಯಾ│
ಸವಿದ ನವ್ಯ ಕವನಗಳ ಸಿಹಿಯು ಹಿತವೆನ್ನಿಸಿದರೆ
ಈ ಬ್ಲಾಗಿನ ಲಿಂಕನು ನಿನ್ನ ಗೆಳೆಯರಿಗೂ ಫಾರ್ವರ್ಡ್ ಮಾಡೆಯಾ│
ನನ್ನೊಲವಿನ ಬಿಂದು
ಛೇಡಿಸಿದಳು ನನ್ನೊಲವಿನ ಬಿಂದು│
ನನ್ನೆದೆಯ ಛಲವು ಮನನೊಂದು
ರಚಿಸಿತು ಸುಮಧುರ ಗೀತೆಯೊಂದು│
ಓದಿದವಳ ಮನವು ಮಿಡಿಯಿತು, ಎ ಬಿಂದು
ನಿತ್ಯ ನಿನ್ನ ಕನಸಲಿ ಬಳಿ ಸಾರುವ
ರಸಿಕರ ರಸಿಕ ಇವನೇ ಎಂದು!
ಸೋಮವಾರ, ಜುಲೈ 21, 2008
ಗೆಳತಿಗಾಗಿ ಒಂದು ಕವನ
ನಿತ್ಯ ನಿನಗಾಗಿ ಕವನ ಬರೆಯಲು
ನನ್ನಾಣೆಗೂ ನಾ ಕವಿಯಲ್ಲ│
ಕಾವ್ಯ, ಕವನದ ಒಗಟು│
ನನಗೆ ತಿಳಿಯದ ಗುಟ್ಟು│
ಅದರೆ ಏನು ಮಾಡಲಿ?
ನಿನ್ನೊಮ್ಮೆ ನೆನೆದ ಕ್ಷಣದಲಿ│
ಮನದ ಭಾವಗಳ ಸರಮಾಲೆ
ಪದಗಳ ರೂಪದಲಿ ಉದ್ಭವಿಸಿ│
ನರನಾಡಿಗಳಲಿ ಸಾಲು ಸಾಲಾಗಿ ಹರಿದು│
ಉಸಿರಿನ ಕಣಗಳಲಿ ಪ್ರಾಸಬದ್ಧವಾಗಿ ಬೆರೆತು│
ಎದೆಯ ಗುಡಿಯ ಒಳಗೆ ಒಂದು ಹೊಸ ಮಿಡಿತ│
ಒಲವಿನ ಪುಟದ ಹಾಳೆಯ ಮೇಲೆ ಒಂದು ಹೊಸ ಕವನ│
ಒಮ್ಮಿಂದೊಮ್ಮೆಲೆ ಉದಯಿಸುವುದು!
ಹೃದಯದಂಗಳದ ಅಣೆಕಟ್ಟೆಯಲಿ
ಮುಗಿಲೆತ್ತರದ ಪ್ರೀತಿ ತುಂಬಿ ತುಳುಕುತ್ತಿದ್ದರೂ│
ಆ ನನ್ನ ಹೊಸ ಕವನಕ್ಕೆ│ಆ ನನ್ನ ಹೊಸ ಮಿಡಿತಕ್ಕೆ│
ಸ್ನೇಹದ ಬಣ್ಣ ಹಚ್ಚಿ│ಪ್ರೇಮದ ಕಾಲುವೆಯನು ಮುಚ್ಚಿ│
ಓದಲು ಗೆಳತಿ ನಿನ್ನ ಕೈಯಂಚಲಿ ಇಟ್ಟಿರುವೆನು!
ಶುಕ್ರವಾರ, ಜುಲೈ 18, 2008
ಓ ನಗು..
ಗಾಳಿಯ ಹಾಗೆ
ಎಲ್ಲೆಲ್ಲೂ ನೀ ಸಿಗು│
ಧನಿಕ, ತಿರುಕ
ಶ್ರಮಿಕ, ಭಾವುಕರೆನ್ನದೇ
ಎಲ್ಲರ ಪಾಲಲಿ ಸಮವಾಗಿ ನೀ ಇರು│
ಪ್ರತಿಯೊಬ್ಬರ ಮುಖದಲ್ಲೂ ಸದಾ ನೀ ಉಕ್ಕಿ ಬರು│
ನೀ ಇರಲೂ ದ್ವೇಷಭಾವ ತೋರಲ್ಲ ಯಾರು│
ಆಗ ಜಗ ಆಗುವುದು ನಿತ್ಯ ನೆಮ್ಮದಿಯ ಸೂರು│
- ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಗುರುವಾರ, ಜುಲೈ 17, 2008
ಬಾಲ್ಯದ ಒಂದು ಘಟನೆ
ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರುತ್ತಿದ್ದು.
ಕ್ರಿಕೆಟ್ ಆಡೋದು, ಚಿನ್ನಿದಾಂಡು ಆಡೋದು, ಈಜಾಡೋದು, ಮಾವಿನಕಾಯಿ, ಗೋಡುಂಬಿ ಹಣ್ಣುಗಳನ್ನು ಅವರಿವರ ಮರಗಳಲ್ಲಿ ಕಿತ್ತು ತಿನ್ನೊದು, ಇವೇ ರಜೆಯಲ್ಲಿ ನಮ್ಮ ದಿನನಿತ್ಯದ ಕೆಲಸಗಳಾಗಿರುತ್ತಿದ್ದವು. ವಿಶೇಷವಾಗಿ ಊರಿನಲ್ಲಿ ಏನೇ ತರಲೆ ಕೆಲಸಗಳು ನೆಡೆದಿದ್ದರೆ ಅದರ ಹಿಂದೆ ನಮ್ಮ ಗ್ಯಾಂಗಿನ ಸದಸ್ಯರುಗಳ ಕೈವಾಡವಿರುತಿತ್ತು.
ನಮ್ಮೂರು ಮೊದಲೇ ಹೇಳಿಕೇಳಿ ಚಿಕ್ಕದಾದ ಊರು ಏನಾದರೂ ಘಟನೆಗಳು ನೆಡೆದರೆ ಬಹುಬೇಗನೆ ವಿಷಯ ಊರತುಂಬೆಲ್ಲಾ ಹರಡುತ್ತಿತ್ತು. ಅಂತಹ ಅನೇಕ ಘನಂಧಾರಿ ಕೆಲಸಗಳಿಗೆ ನಾವುಗಳು ಕಾರಣವಾಗಿದ್ದೇವು. ಓಮ್ಮೆ ಕ್ರಿಕೆಟ್ ಆಡಿ ದಣಿದು ಬಿರುಬಿಸಿಲ ದಾಹ ನೀಗಿಸಿಕೊಳ್ಳಲು ನಮ್ಮ ಗ್ಯಾಂಗ್ ಲೀಡ್ರು ಪರಮೇಶಿ ಜೊತೆ ಸೇರಿ ಅಪಾಯಕಾರಿ ಯೋಜನೆಯೊಂದನ್ನು ಎಲ್ಲರೂ ನಿರ್ಧರಿಸಿ ಅದರಂತೆ ನಮ್ಮೂರ ರೇವೇಗೌಡ್ರ ತೆಂಗಿನತೋಟದಲ್ಲಿ ಒಬ್ಬರಿಗೆ ತಲಾ ಎರಡೆರಡರಂತೆ ಹನ್ನೆರಡು ಎಳನೀರನ್ನು ನಮ್ಮತ್ತೆ ಮಗ ಮಂಜ ಮರ ಏರಿ ಕಿತ್ತುಹಾಕಿದ. ಆಸೆ ದುರಾಸೆಯಾಗಿ ತೆಂಗಿನಕಾಯಿಯನ್ನು ಸಹ ಮರದಿಂದ ಕಿತ್ತುಹಾಕಲು ನಾವುಗಳು ಅವನಿಗೆ ಆದೇಶ ಕೊಟ್ಟೆವು. ಕಂಠಪೂರ್ತಿ ಎಳನೀರನ್ನು ಕುಡಿದು, ತೆಂಗಿನಕಾಯಿಯನ್ನು ಚನ್ನಬಸವಯ್ಯನವರ ಅಂಗಡಿಗೆ ಹಾಕಲು ಹೊರಟೆವು ಆಗಲೇ ನಮ್ಮ ಈ ಸತ್ಕಾರ್ಯದ ವಿಷಯ ಊರಲ್ಲೆಲ್ಲಾ ಹರಡಿತ್ತು!
ವಿಷಯ ಸೋರಿಕೆ ಮಾಡಿದವನು ನಮ್ಮ ಗ್ಯಾಂಗಿನ ಸದಸ್ಯ ಸತಿ. ಒಂದು ಎಳನೀರನ್ನು ಅವನಿಗೆ ಕಡಿಮೆ ಕೊಟ್ಟಿದ್ದಕ್ಕೆ ಸಿಡಿದ್ದೆದ್ದು ನಮಗೆ ಮುಳುವಾಗಿದ್ದನು. ಬೇರೆಯವರ ತೋಟದಲ್ಲಿ ತೆಂಗಿನ ಕಾಯಿಯನ್ನು ಮರದಿಂದ ಕೆಡವುದು ಇರಲಿ, ಬಿದ್ದ ಒಂದು ಕಾಯಿಯನ್ನು ತೆಗೆದು ಕೊಂಡರೆ ಐವತ್ತು ರೂಪಾಯಿ ದಂಡ ತೆರಬೇಕಾದ ನಿಯಮ ನಮ್ಮೂರಲ್ಲಿ ಇತ್ತು. ಇನ್ನೂ ನಾವುಗಳು ಮಾಡಿದ್ದು ಮಹಾಪರಾಧವೇ ಆಗಿತ್ತು. ಆದರೆ ಅರಿವಿಲ್ಲದ ಹುಡುಗರು ಎಂಬ ಶ್ರೀರಕ್ಷೆ ನಮ್ಮನ್ನು ಕಾಪಾಡಿತ್ತು. ನಿಯಮದ ಪ್ರಕಾರ ನಮಗೆ ಶಿಕ್ಷೆ ಕೊಟ್ಟಿದ್ದರೆ ಎರಡುದಿನ ಕತ್ತಲೆ ಕೋಣೆಯಲ್ಲಿ ನಮ್ಮನ್ನು ಕೂಡಿಹಾಕಬೇಕಿತ್ತು!
ಕಾಲಚಕ್ರ ಉರುಳಿದೆ. ಅಂದು ನಮ್ಮೂರಿನ ಜನರೆದರು ಖಳನಾಯಕರಾಗಿದ್ದ ನಮ್ಮ ಗುಂಪಿನ ಗೆಳೆಯರೆಲ್ಲ ಇಂದು ನಾಡಿನ ಸತ್ ಪ್ರಜೆಗಳಾಗಿದ್ದಾರೆ. ನನ್ನ ಬಾಲ್ಯ ಸ್ನೇಹಿತ ಸತಿ ಸದ್ಯ ಹೆಬ್ರಿ (ಆಗುಂಬೆ ಹತ್ತಿರ) ಎಂಬಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಹೈಸ್ಕೂಲ್ ಅಧ್ಯಾಪಕರ ಆಯ್ಕೆಗೆ ಕರ್ನಾಟಕ ಸರಕಾರ ನೆಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇಡೀ ಜಿಲ್ಲೆಗೇ ಎರಡನೇ ಸ್ಥಾನ ಪಡೆದ ಹಿರಿಮೆ ಈತನದು. ನಮ್ಮ ಗ್ಯಾಂಗ್ ಲೀಡ್ರು ಪರಮೇಶಿ ಮನೆಯಲ್ಲಿ ಆರ್ಥಿಕ ವ್ಯವಸ್ಥೆ ಸರಿಯಾಗಿಲ್ಲದ್ದರಿಂದ ಕಷ್ಟಪಟ್ಟು ದುಡಿದು ತಂಗಿಯನ್ನು ಅಧ್ಯಾಪಕಿಯನ್ನಾಗಿಸಿ, ತನ್ನ ಸ್ವಂತ ಖರ್ಚಿನಿಂದ ಅವಳ ಮದುವೆ ಮಾಡಿದಂತಹ ಸಾಧಕ ಅವನು. ಇನ್ನೂ ನಮ್ಮತ್ತೆ ಮಗ ಮಂಜ ಇವನಿಗೆ ಸರಿಯಾದ ಮಾರ್ಗದರ್ಶನ ಮತ್ತು ಆರ್ಥಿಕ ವ್ಯವಸ್ಥೆ ಇದ್ದಿದ್ದರೆ ಇಂಡಿಯಾ ಕ್ರಿಕೆಟ್ ಟೀಮಿನಲ್ಲಿ ಅಲ್ಲದಿದ್ದರೂ ರಣಜಿ ಮಟ್ಟದಲ್ಲಿನ ಕ್ರಿಕೆಟ್ ತಂಡದ ಖಾಯಂ ಸದಸ್ಯನಾಗುವ ಪ್ರತಿಭೆ ಈತನದು. ಅಷ್ಟು ಸೊಗಸಾಗಿ ಕ್ರಿಕೆಟ್ ಆಡುತ್ತಾನೆ. ಅವನ ಆಟದ ಶೈಲಿಯನೊಮ್ಮೆ ನೋಡುವಾಸೆ ಇದ್ದರೆ ನನ್ನ ಜೊತೆ ಒಂದುಸಲ ನಮ್ಮೂರಿಗೆ ಹೋಗುವ ಬನ್ನಿ. - ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಶುಕ್ರವಾರ, ಜುಲೈ 11, 2008
ಆ ದೈವ ಕೊಟ್ಟ ಈ ಬದುಕು..
ಆ ದೈವ ಕೊಟ್ಟ ಈ ಬದುಕು..
ಒಬ್ಬನ ಪಾಲಿಗೆ ಆಗಿಹುದು ಥಳುಕು..
ಮತ್ತೊಬ್ಬನ ಪಾಲಿಗೆ ಆಗಿಹುದು ಹುಳುಕು..
ಇನ್ನೊಬ್ಬನ ಪಾಲಿಗೆ ಆಗಿಹುದು ಬಳುಕು..
ಮಗದೊಬ್ಬನ ಪಾಲಿಗೆ ಆಗಿಹುದು ಮುರುಕು..
ಥಳುಕೋ..ಹುಳುಕೋ..ಬಳುಕೋ..ಮುರುಕೋ..
ಅದೃಷ್ಟದಾಟ ಮುಗಿದಾಗ ಬರುವುದು ಉಸಿರಿಗೆ ತೊಡಕು..
ಕೊನೆಯಲಿ ಈ ಬದಕು ಆಗುಹುದು ಯಮನ ಪಾಲಿನ ಸರುಕು!!
ಕವನದ ಸಾರಾಂಶ..
ಆ ದೈವನು ಕೊಟ್ಟು ನಮ್ಮಗಳ ಬದುಕು ನಮಗೆ ತಿಳಿದಿರುವ ಹಾಗೆ ಒಬ್ಬನು ಹುಟ್ಟುವಾಗಲೇ ಸಿರಿವಂತನಾಗಿ ಹುಟ್ಟುತ್ತಾನೆ. ಅಂಥವರ ಪಾಲಿಗೆ ಬದುಕೆಂಬುದು ಬಹಳ ಹಿತವಾಗಿರುತ್ತದೆ. ಆದರೆ ಇನ್ನೂ ಕೆಲವರು ಜನಿಸುವಾಗಲೇ ಬಹಳ ಬಡತನದ ಕುಟುಂಬದಲ್ಲಿ ಜನಿಸುತ್ತಾರೆ ಅಂಥವರ ಪಾಲಿಗೆ ಬದುಕೆಂಬುದು ಹುಳುಕಿನ ತರಹ ಇರುತ್ತದೆ. ಮತ್ತೆ ಕೆಲವರ ಪಾಲಿಗೆ ಬದುಕು ಬಳುಕು ಆಗಿರುತ್ತದೆ. ಅಂದರೆ ಅವರು ಜೀವನದಲ್ಲಿ ಏನು ಬಯಿಸುತ್ತಾರೋ ಅದು ಅವರಿಗೆ ಒಲಿದು ಬರುತ್ತದೆ. ಅವರು ಬಹಳ ಅದೃಷ್ಟವನ್ತರಾಗಿರುತ್ತಾರೆ. ಮತ್ತೆ ಇನ್ನೂ ಕೆಲವರ ಪಾಲಿಗೆ ಬದುಕು ಮುರುಕು ಆಗಿರುತ್ತದೆ. ಅಂದರೆ ಅವರು ಜೀವನದಲ್ಲಿ ಏನ್ನೆಲ್ಲಾ ಕಷ್ಟಪಟ್ಟರು ಅದೃಷ್ಟ ಅವರ ಜೊತೆಯಲ್ಲಿ ಇರುವುದಿಲ್ಲ.
ಆದರೆ ಬದುಕಲ್ಲಿ ಯಾರು ಏನೇ ಆಗಿರಲಿ ಕೊನೆಗೆ ಕಾಲ ಬಂದಾಗ ಎಲ್ಲರೂ ಒಬ್ಬರ ಮೇಲೆ ಒಬ್ಬರಾದಂತೆ ಭಗವಂತನ ಸನಿಹಕ್ಕೆ ಹೋಗಲೇ ಬೇಕು.
-ಸುನಿಲ್ ಮಲ್ಲೇನಹಳ್ಳಿ