ಮಂಗಳವಾರ, ಜನವರಿ 10, 2017

ಯಾಂತ್ರಿಕ ಬದುಕಿನ ಓಟ, ಎಲ್ಲೂ ನಿಲ್ಲದಾಟ!


ದಿನೇದಿನೇ ಯಾಂತ್ರಿಕವಾಗುತ್ತಿರುವ ಬದುಕಿನೆಡೆಗೆ ತುಸು ಗಮನವನ್ನು ಹರಿಸುತ್ತಾ, ಈ ಯಾಂತ್ರಿಕವಾದ ಬದುಕಿನಿಂದ; ಜನರಲ್ಲಿ, ಸಮಾಜದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಾಕಷ್ಟು ಬದಲಾವಣೆಗಳನ್ನು ಎಳೆ,ಎಳೆಯಾಗಿ ಅವಲೋಕಿಸುವಾಗ, ಇಪ್ಪತ್ತು ವರ್ಷಗಳ ಹಿಂದಿನ ಚಿತ್ರಣವು ನನ್ನ ಕಣ್ಮುಂದೆ ಬಂತು. ಜನರ ಜೀವನ ಕ್ರಮವಾಗಲಿ ಹಾಗೂ ಅವರ ಸಮಾಜಯುಕ್ತ ಚಟುವಟಿಕೆಗಳಾಗಲಿ, ಯಾವುದೇ ತರಾತುರಿ ಇಲ್ಲದೆ ನಿಯಮಿತ ವೇಗದಲ್ಲಿ ಸಾಗುತ್ತಿದ್ದ ಕಾಲವದು.

ಆಗ ಬಹುತೇಕ ಜನರದ್ದು ಯಾಂತ್ರಿಕತೆಯಿರದ, ಒತ್ತಡರಹಿತ ಬದುಕದಾಗಿತ್ತು ಕೂಡ. ದಿನಗಳು ಸಾಗಿ ವಾರ; ವಾರಗಳು ಸಾಗಿ ತಿಂಗಳು; ತಿಂಗಳುಗಳು ಸಾಗಿ ವರ್ಷ; ಹೀಗೇ ಎಲ್ಲವೂ ರಭಸವಿಲ್ಲದೆ ಕಳೆದುಹೋದ ಅನುಭವೂ ಸಹ ಆಗುತ್ತಿತ್ತು. ಮೇಲಾಗಿ, ಆಗ ದುಡಿಮೆಯೆನ್ನೋದು ಬದುಕಿನೊಂದು ಭಾಗದಂತಿತ್ತೇ ವಿನಃ, ಈಗಿನಂತೆ ದುಡಿಮೆಯೇ ಬದುಕಾಗಿರಲಿಲ್ಲ!
ಹೆಚ್ಚಿನ ಕುಟುಂಬಗಳು ಆರ್ಥಿಕ ಸಂಕಷ್ಟದ ನಿಮಿತ್ತ; ಕಷ್ಟ-ಕಾರ್ಪಣ್ಯಗಳನ್ನು, ಹಣದ ಮುಗ್ಗಟ್ಟನ್ನು ಎದುರಿಸುವುದು, ಸಾಲ-ಸೂಲ ಮಾಡುವುದು ಸಾಮಾನ್ಯ ವಿಚಾರಗಳಾಗಿದ್ದ ಸಮಯವದು. ಆರ್ಥಿಕ ಪರಿಸ್ಥಿತಿ ಅದೇನೇ ಇದ್ದರೂ; ಮನೆಗೆ ಆಗಾಗ ಬರುತ್ತಿದ್ದ ನೆಂಟರಿಷ್ಟರು, ಬಂಧು-ಬಾಂಧವರೊಡನೆ ಇರುತ್ತಿದ ಒಡನಾಟಕ್ಕಂತೂ ಯಾವ ದಕ್ಕೆಇರುತ್ತಿರಲಿಲ್ಲ! ಹಬ್ಬ, ಜಾತ್ರೆ, ಇನ್ನಿತರ ಆಚರಣೆಗಳಲ್ಲಿ ಒಂದುಕಡೆ ಸೇರೋದು, ಒಬ್ಬರಿಗೊಬ್ಬರು ಪರಸ್ಪರ ಯೋಗಕ್ಷೇಮ, ಕಷ್ಟಸುಖವನ್ನು ವಿಚಾರಮಾಡೋದು, ಇವೆಲ್ಲವನ್ನೂ ಜನರು ಸಹಜವಾಗಿಯೇ ರೂಢಿಸಿಕೊಂಡಿದ್ದರು.

ಅಲ್ಲದೇ, ಸ್ವಂತಕ್ಕೆ ಮನೆ ಕಟ್ಟಿಸುವುದೆಂದರೆ ತೀರ ಹಗುರವಾದ ವಿಷಯವಾಗಿರದೆ ಸಂಬಂಧಪಟ್ಟ ಕುಟುಂಬದ ಬಹುದೊಡ್ಡ ಸಾಧನೆಯಾಗಿರುತ್ತಿತ್ತು. ಕಾರು, ಇನ್ನಿತರ ದುಬಾರಿ ಬೆಲೆಯ ಮೋಟಾರು ವಾಹನಗಳಂತೂ ಯಾರೋ ಸಿರಿವಂತರ ಬಳಿ ಮಾತ್ರವೇ ಇರುತ್ತಿದ್ದವು. ಸರಕಾರೀ ಮತ್ತು ಖಾಸಗಿ ಬಸ್ಸುಗಳೇ ಜನರ ಬಹುದೊಡ್ಡ ಸಾರಿಗೆ ಮಾಧ್ಯಮಗಳಾಗಿದ್ದವು. ಪಟ್ಟಣದ ರಸ್ತೆಗಳಲ್ಲಂತೂ ಟ್ರಾಫಿಕ್ ಸಮಸ್ಯೆ ಅನ್ನೋದು ಇರಲಿಲ್ಲ. ಯಾರ ಮನೆಯಲ್ಲಾದರೂ ಸಾವು ನೋವು ಆದಾಗ; ನೆಂಟರಿಷ್ಟರು, ಆಪ್ತರು ನೀಡುತ್ತಿದ್ದ ಸಹಾಯ, ಸಹಕಾರ, ಹಾಗೂ ಸಾಂತ್ವನ, ಇವೆಲ್ಲವೂ ಮಾನವ ಸಂಬಂಧಗಳನ್ನು ಬಹಳ ಅಳವಾಗಿ ಬೆಸೆಯುತ್ತಿದ್ದವು.

ಆಗೆಲ್ಲ, ಮದುವೆಯಂತಹ ಶುಭ ಸಮಾರಂಭಗಳು ನೆರವೇರುವಲ್ಲಿ, ಕನಿಷ್ಟವೆಂದರೂ ಒಂದು ತಿಂಗಳಿಗೂ ಮುಂಚೆ ಸಕಲ-ಸಿದ್ದತೆಗಳ ಮಾಡಿಕೊಳ್ಳಲು ಸಜ್ಜಾಗುತ್ತಿದ್ದರು. ಅದು ಬಟ್ಟೆ-ಬರೆಗಳನ್ನು ಕೊಳ್ಳುವುದು, ವಧು ವರರಿಗೆ ಆಭರಣಗಳನ್ನು ಖರೀದಿಸುವುದು, ಮನೆಗೆ ಸುಣ್ಣ-ಬಣ್ಣ ಬಳಿಯುವುದು, ಆಹ್ವಾನ ಪತ್ರಿಕೆಗಳನ್ನು ಮಾಡಿಸುವುದು, ನೆಂಟರಿಷ್ಟರನ್ನು ಮನೆ-ಮನೆಗೂ ಹೋಗಿ ಆಹ್ವಾನಿಸುವುದು, ಮದುವೆ ಮನೆಯ ಅಂಗಳದಲ್ಲಿ ಚಪ್ಪರ ಹಾಕುವುದು, ಅಡುಗೆಯವರನ್ನು ಮುಂಗಡವಾಗಿ ಗುರುತು ಮಾಡುವುದು, ಅಡುಗೆಗೆ ಬೇಕಾದ ಸಾಮಾನು-ಪದಾರ್ಥಗಳನ್ನು ತರುವುದು, ದಿಬ್ಬಣಕ್ಕೆಂದು ವಾಹನವನ್ನು ಬುಕ್ ಮಾಡುವುದು, ದಿಬ್ಬಣದ ಜೊತೆ ಹೊರಡಲು ಊರ ಜನರ ಮನೆ-ಮನೆಗೂ ಹೋಗಿ ಆಮಂತ್ರಣ ನೀಡುವುದು, ಹೀಗೆ ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಸೊಬಗು ಹಾಗೂ ವಿಶಿಷ್ಟತೆಯಿರುತ್ತಿತ್ತು. ಅಲ್ಲದೇ ಜನರು ವಹಿಸಿದ ಕೆಲಸವನ್ನು ಬಹಳ ಉತ್ಸುಕತೆ ಹಾಗೂ ಸಾಂಘಿಕವಾಗಿ ಮಾಡುತ್ತಿದ್ದರು. ಹತ್ತಿರದ ಬಂಧು ವರ್ಗದವರಂತೂ ಮದುವೆಯ ಕೆಲಸಕಾರ್ಯದಲ್ಲಿ ಭಾಗಿಯಾಗಲೆಂದು ವಾರ ಅಥವಾ ಹದಿನೈದು ದಿನಗಳ ಮುಂಚಿತವಾಗಿಯೇ ಹಾಜರಿರುತ್ತಿದ್ದರು.

ಈಗ ಮದುವೆಗಳೆಂದರೇ, ಬಹುತೇಕ ಕೆಲಸಗಳನ್ನು ಹೊರಗುತ್ತಿಗೆ ಕೊಡುತ್ತಿರುವೆವು. ನೆಂಟರಿಷ್ಟರಿಗೆ, ಸ್ನೇಹಿತರಿಗೆ ಅಂಚೆ ಇಲ್ಲವೇ ಇ-ಮೇಲ್ ಮೂಲಕ ಆಹ್ವಾನ ಪತ್ರಿಕೆ ಕಳುಹಿಸುತ್ತೇವೆ. ನೆಂಟರಿಷ್ಟರು ಅಷ್ಟೇ ಅವಸರದಲ್ಲಿ ಮದುವೆಗೆ ಬರುತ್ತಾರೆ, ಅವಸರದಲ್ಲೇ ಮದುವೆ ಮಂಟಪದಿಂದ ಹೊರಟು ಹೋಗುತ್ತಾರೆ. ಜೊತೆಗೆ ಹಣವೇ ಎಲ್ಲದಕ್ಕೂ ಅವಶ್ಯಯೆನಿಸಿರುವ ಈಗಿನ ದಿನಗಳಲ್ಲಿ, ದುಡಿಮೆಯೇ ಬಾಳಿನ ಬಹುಮುಖ್ಯ ಅಂಶವಾಗಿ, ನಾವು ಹಣವಂತರೂ, ಸ್ಥಿತಿವಂತರೂ ಆಗುವತ್ತ ಗಮನವ ಹರಿಸಿಹರು. ಸ್ವಂತಮನೆ, ಕಾರು ಹಾಗೂ ಇನ್ನಿತರೇ ಐಷಾರಾಮಿ ವಸ್ತುಗಳನ್ನು ಹೊಂದುವುದರಲ್ಲಿ ಆಸಕ್ತರಾಗಿರುವೆವು. ಇದೇ ಸಮಯದಲ್ಲಿ, ನೆಂಟರಿಷ್ಟರೊಡನೆ ಮಾತುಕತೆ, ಮುಖಾಮುಖಿ ಭೇಟಿ, ಯೋಗಕ್ಷೇಮ ವಿಚಾರಣೆ ಹಾಗೂ ಕಷ್ಟ-ಸುಖದಲ್ಲಿ ಭಾಗಿಯಾಗೋದು, ಈ ಅಂಶಗಳು ಬಹುಪಾಲು ನಮಗೆ ದುಬಾರಿಯಾಗಿವೆ; ಯಾರಿಗೂ, ಯಾರೊಬ್ಬರನ್ನೂ ಭೇಟಿಮಾಡಿ, ಉಭಯ ಕುಶಲೋಪರಿ ವಿಚಾರಿಸುವಷ್ಟು ಸಮಯ, ತಾಳ್ಮೆ ಇಲ್ಲದಂತೆ ಆಗಿದೆ.

ನಮ್ಮ ಈ ಎಲ್ಲಾ ಬದಲಾವಣೆಗಳಿಗೆ ಕಾರಣವಾದ ಅಂಶಗಳೆಂದರೆ; ಸಾಮಾಜಿಕ ಸ್ಥಿತಿಯಲ್ಲಿ ಆಗುತ್ತಿರುವ ತ್ವರಿತ ಬೆಳವಣಿಗೆ ಹಾಗೂ ಬದಲಾವಣೆಗಳು: ಅಂದರೆ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಉತ್ಪಾದನಾ ಹಾಗೂ ಸಾರ್ವಜನಿಕ ಕೈಗಾರಿಕಾ ವಲಯಗಳಲ್ಲಿ ವೇಗವಾದ ಪ್ರಗತಿ, ಅವು ಸೃಷ್ಟಿಸುತ್ತಿರುವ ವಿಫುಲ ಉದ್ಯೋಗಾವಕಾಶಗಳು. ಈ ಕಾರಣವಾಗಿ, ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಬರುತ್ತಿರುವರು, ಅಲ್ಲದೇ ಬಿಡುವಿಲ್ಲದ ದುಡಿಮೆ ಜನರಿಗೆ ಸ್ವತಂತ್ರವಾಗಿ ಬದುಕಲು ಬೇಕಾದ ಶಕ್ತಿ ನೀಡುತ್ತಿವೆ. ಆದರೆ, ಸ್ವತಂತ್ರವಾದ ಬದುಕೆಂದು ತಿಳಿದು ಜನರು ಒಂಟಿತನದ, ಜೊತೆಗೆ ಅಪ್ತರು, ನೆಂಟರಿಷ್ಟರೊಡನೆ ಪರಸ್ಪರ ಒಡನಾಟವಿಲ್ಲದ ಬಾಳನ್ನು ಬಾಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆರ್ಥಿಕ ಹಾಗೂ ಉದ್ಯೋಗದ ವಿಚಾರವಾಗಿ ಬಂದರೆ, ಇಂತಹವೊಂದು ಬೆಳವಣಿಗೆ ನಮ್ಮ ದೇಶದಲ್ಲಿ ಅತ್ಯಗತ್ಯವಾಗಿ ಬೇಕಿತ್ತು. ಈ ಬೆಳವಣಿಗೆಯಿಂದಾಗಿ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರ ಕಂಡಿದೆ. ಜನರು ಆರ್ಥಿಕವಾಗಿ ಸಬಲತೆಯನ್ನು ಕಂಡಿದ್ದಾರೆ.

ಆದರೆ, ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ; ಈ ಮೊದಲೇ ಹೇಳಿದ ಹಾಗೆ ದುಡಿಮೆಯೇ ನಮ್ಮ ಬಾಳಿನ ಸರ್ವವೂ ಅಲ್ಲ. ಅದಕ್ಕಿಂತ ಮುಖ್ಯವಾಗಿ; ಗೆಳೆತನ, ಸಂಬಂಧಗಳು ಮತ್ತು ಅವುಗಳನ್ನು ಅಚ್ಚುಕಟ್ಟಾಗಿ ನಿಭಾಯಿಸೋದು ಕೂಡ ನಮ್ಮ ಬದುಕಲ್ಲಿ ಬಹುಮುಖ್ಯ. ಅವುಗಳಲ್ಲಿ ಸಿಗುವ; ಪ್ರೀತಿ, ಕಾಳಜಿ, ಮಾರ್ಗದರ್ಶನ, ಸಹಕಾರ, ಪರಸ್ಪರ ಅನ್ಯೋನ್ಯತೆ, ಇವು ನಮ್ಮಬದುಕಿಗೆ ಇನ್ನಿಲ್ಲದ ಅರ್ಥ ಮತ್ತು ಮೆರುಗನ್ನು ತರುತ್ತವೆ. ಫೇಸ್ಬುಕ್, ಟ್ವಿಟರ್, ವಾಟ್ಸ್ ಆಪ್ಗಳಲ್ಲಿ….ಮುಂತಾದ ಸಾಮಾಜಿಕ ತಾಣಗಳಲ್ಲಿ ನೂರಾರು ಸ್ನೇಹಿತರುಗಳಿರಬಹುದು ನಮಗೆ. ಆದರೆ, ನಿಜವಾದ ಸ್ನೇಹಿತರು, ಮಾರ್ಗದರ್ಶಕರು ಹಾಗೂ ನಮ್ಮ ಜೀವನಕ್ಕೆ ಅವಶ್ಯವಾಗಿ ಬೇಕಾಗಿರುವವರು ಬೇರೆಯೇ ಇರುತ್ತಾರೆ. ಬನ್ನಿ ಅವರನ್ನು ಮೊದಲು ಗುರುತಿಸೋಣ.
ಇಂತಿ; ಸುನಿಲ್ ಮಲ್ಲೇನಹಳ್ಳಿ