ಬುಧವಾರ, ಫೆಬ್ರವರಿ 11, 2009

ಪ್ರೀತಿ, ಪ್ರೇಮ ಅಂದರೆ ನನಗಿಷ್ಟು ಗೊತ್ತು..ನಿಮಗೆಷ್ಟು ಗೊತ್ತು??


ಪ್ರೀತಿ, ಪ್ರೇಮ ಅಂದರೆ ನನಗಿಷ್ಟು ಗೊತ್ತು..ನಿಮಗೆಷ್ಟು ಗೊತ್ತು??
"ಪ್ರೇಮಿಗಳ ದಿನದ" ಸುಸಂದರ್ಭದ ನಿಮಿತ್ತ ಎಲ್ಲರಿಗೂ ಒಪ್ಪಿಗೆ ಹಾಗೂ ಇಷ್ಟವಾಗುವಂತಹ ಒಂದು ಸರಳ, ಸುಂದರವಾದ ಲೇಖನವನ್ನು ಬರೆಯಬೇಕೆಂದು ಹಲವಾರು ಬಾರಿ ನಾನು ಮನದಲ್ಲೇ ಆಲೋಚಿಸಿದ್ದೆ. ಅದರಂತೆ ಪ್ರೀತಿ, ಪ್ರೇಮದ ಬಗ್ಗೆ ನನ್ನ ಮನದಾಳದ ಅನಿಸಿಕೆಗಳನ್ನು ತಿಳಿಸುವ ಸಲುವಾಗಿ ಒಂದು ಪರಿಪಕ್ವವೆನ್ನಿಸುವ ಲೇಖನವೊಂದನ್ನು ಬರೆದಿರುವೆನು. ದಯಮಾಡಿ ಬಿಡುವು ಇದ್ದಾಗ ಒಮ್ಮೆ ಓದಿರಿ..

ಮಿಂಚು, ಗುಡುಗು, ನ್ಯೂಕ್ಲಿಯರ್ ಪವರ್ ಗಳಿಗಿಂತಲೂ ಬಲಿಷ್ಟವಾದ "ಪ್ರೀತಿ ಹಾಗೂ ಪ್ರೇಮ"ಎನ್ನುವ ಎರಡು ಭಾವನಾತ್ಮಕ ಪದಗಳ ಬಗ್ಗೆ ಪ್ರೇಮಿಯಾಗದೆ ಬರೆಯುವ ಶಕ್ತಿ ನನಗೆ ಇರದಿದ್ದರೂ. ಅಲ್ಪ-ಸ್ವಲ್ಪ ಕವಿ ಚಿಂತನ ಮನೋಭಾವನ್ನು ನನ್ನಲಿ ಇಟ್ಟುಕೊಂಡಿರುವುದರಿಂದ, ಆ ಎರಡು ಭಾವನಾತ್ಮಕ ಪದಗಳ ಬಗ್ಗೆ ಬರೆಯುವ ಶಕ್ತಿ, ಸಾಮರ್ಥ್ಯ ನನ್ನಲಿ ಇದೆ ಎಂದು ಭಾವಿಸುತ್ತಾ. ಈ ಲೇಖನವನ್ನು ಬರೆದಿರುವೆನು.

“ಪ್ರೀತಿಯೆಂದರೇನು...?”
ಪ್ರೀತಿಯೆನ್ನುವುದು ಬಹುಮುಖ ಹಾಗೂ ಬಹುರೂಪವುಳ್ಳದ್ದು. ಅದರ ಬಾಹುಗಳ ವಿಸ್ತಾರ ಅಳತೆಗೆ ಮೀರಿದ್ದು, ಕಣ್ಣಿಗೆ ಕಾಣದ್ದು, ವಯಸ್ಸಿನ ಅಂಕೆಯಲ್ಲಿ ಒಳಪಡದ್ದು. ಸ್ವಾರ್ಥಕ್ಕೆ ಎಷ್ಟೂ ದೂರವಾದುದ್ದೋ ಅಷ್ಟೇ ಹತ್ತಿರವಾದುದ್ದು. ಇವರೆಗೂ ಎಷ್ಟೋ ಕವಿಗಳ, ಎಷ್ಟೋ ರಸಿಕರ ಕಾವ್ಯ ಕಾರಂಜಿಯ ಲಹರಿಯಲ್ಲಿ ಎಷ್ಟು ವಿಧವಾಗಿ ಬಣ್ಣಿಸಿದರೂ, ಎಷ್ಟು ವಿಧವಾಗಿ ವರ್ಣಿಸಿದರೂ ಮತ್ತೆ ಮತ್ತೆ ಎಲ್ಲೆಲ್ಲೋ, ಯಾರ್ಯಾರಿಂದಲೋ ಯಾರ್ಯಾರೋ ಮನದಲ್ಲೋ, ಕಲ್ಪನೆಯಲ್ಲೋ, ನರನಾಡಿಗಳ ಮಿಡಿತದಲ್ಲೋ ಚಿಗುರೊಡೆದು ಹೊಸ ಬಗೆಯ ರೂಪ, ಹೊಸ ಬಗೆಯ ಭಾವ, ಹೊಸ ಬಗೆಯ ಉತ್ಸಾಹ ಎಲ್ಲವನ್ನೂ ಪಡೆದು ಮತ್ತೆ ಮತ್ತೆ ವರ್ಣಿಸಲ್ ಪಡುವುದು, ಮತ್ತೆ ಮತ್ತೆ ಬಣ್ಣಿಸಲ್ ಪಡುವುದು... ಈ ಪ್ರೀತಿ!”

ಇದು ಕೇವಲ ಬರಿ ಹುಡುಗ-ಹುಡುಗಿ, ಗಂಡ-ಹೆಂಡತಿಗಳ ನಡುವೆ ಮಾತ್ರವೇ ವ್ಯಕ್ತವಾಗುವಂತಹದ್ದಲ್ಲ. ತಾಯಿ ತನ್ನ ಮಗುವಿನಲ್ಲಿ ಇರಿಸಿರುವ ಅನನ್ಯ ಮಮಕಾರ, ಅಕ್ಕರೆ ರೂಪದಲ್ಲೂ ಅಡಗಿರುತ್ತದೆ. ಬಂಧು-ಬಾಂಧವ್ಯ ರೂಪದಲ್ಲಿ ಇರುತ್ತದೆ, ಗೆಳೆತನದ ರೂಪದಲ್ಲೂ ಇರುತ್ತದೆ. ಆದರೆ ಇವುಗಳೆಲ್ಲವುಗಳಿಗಿಂತ ಸ್ವಲ್ಪ ವಿಭಿನ್ನವಾಗಿಯೂ, ಸ್ವಲ್ಪ ವಿಚಿತ್ರವಾಗಿಯೂ ಇರುವುದು ಹುಡುಗ-ಹುಡುಗಿ, ಗಂಡ-ಹೆಂಡತಿಯರ ನಡುವೆ ಇರುವ ಪ್ರೀತಿ! ಇವೊಂದು ಪ್ರೀತಿಯಲ್ಲಿ ವಯೋ ಸಹಜವಾದ ಆಕರ್ಷಣೆ ಇರುತ್ತದೆ, ನೂರಾರು ಹೊಂಗನಸುಗಳು ಇರುತ್ತವೆ, ಬರಿ ಇಷ್ಟೇ ಅಲ್ಲದೆ ಮನದ ಮೂಲೆಯಲ್ಲಿ ಎಲ್ಲೋ ಅದಮ್ಯ ಕಾಳಜಿ, ನವಿರು ರೋಮಾಂಚನ, ಮತ್ತೆಲ್ಲೋ ಒಂದು ಕಡೆಯಲ್ಲಿ ಸಮಾಜದ ಭೀತಿ, ಬೆಸುಗೆ ಕಳಚಿ ಬೀಳುವ ಭಯ ಹೀಗೆ ಎಲ್ಲವೂ ಸಂಮಿಶ್ರಣವಾಗಿರುತ್ತದೆ.

ಯುವಕ, ಯುವತಿಯರು ಪ್ರೀತಿ ಮಾಡಬಾರದೆಂದು ನಮ್ಮ ಸಂಪ್ರದಾಯ, ನಮ್ಮ ಧರ್ಮ ಎಂದೂ, ಯಾವತ್ತೂ ಹೇಳಿಲ್ಲ. ಇದಕ್ಕೆ ಪೂರಕವಾಗಿರುವಂತೆ ಆಗಿನ ಕಾಲದಲ್ಲೇ ನಳ ದಮಯಂತಿ ಪ್ರೀತಿ ಮಾಡಿರಲಿಲ್ಲವೇ? ರಾಧಾ ಕೃಷ್ಣರು ಪ್ರೀತಿ ಮಾಡಿರಲಿಲ್ಲವೇ? ಹೆತ್ತವರು, ಒಡಹುಟ್ಟಿದವರು, ಬಂಧು-ಬಾಂಧವರು ಹಾಗೂ ಗೆಳೆಯರು ಇವರೆಲ್ಲರ ಪ್ರೀತಿಯ ಜೊತೆಗೆ ನಮ್ಮನ್ನು, ನಮ್ಮಷ್ಟೇ ಅರ್ಥಮಾಡಿಕೊಂಡು ಪ್ರೀತಿ ಮಾಡುವ ಜೀವವಿದ್ದರೆನೇ ಈ ನಮ್ಮ ಬದುಕು ಒಂದು ಪರಿಪೂರ್ಣವಾದದ್ದು ಎಂದು ಹೇಳಿಕೊಳ್ಳಬಹುದು.
ಆದರೆ ನಾವು ಮಾಡುವ ಈ ಪ್ರೀತಿ, ಪ್ರೇಮ ಬರಿ ವಯೋ ಸಹಜವಾದ ಆಕರ್ಷಣೆಯಿಂದ ಬಂದಂತದ್ದು ಆಗಿರಬಾರದು. ಏಕೆಂದರೆ ಆ ರೀತಿ ಬಂದಂತದ್ದು ತಾತ್ಕಾಲಿಕವಾಗಿರುತ್ತದೆ. ನಮ್ಮ ಭವ್ಯ ಸಂಸ್ಕೃತಿ, ಪರಂಪರೆಗಳನ್ನು, ಕಟ್ಟುಪಾಡುಗಳನ್ನು ಮುರಿಯಲು ದಾರಿಯಾಗುತ್ತದೆ. ಅದ್ದರಿಂದ ನಮ್ಮ ಅಂತರಾಳದಲ್ಲಿ ಮೂಡಿ ಬಂದ ಪ್ರೀತಿ, ಪ್ರೇಮ, ಆಕರ್ಷಣೆ ಶಾಶ್ವತವಾಗಿರಬೇಕು, ನಂಬಿಕೆಯುತವಾಗಿರಬೇಕು ಮತ್ತು ಎಲ್ಲರೂ ಒಪ್ಪಿ ಮೆಚ್ಚುವಂತಿರಬೇಕು

ನಮಗೆ ಇಷ್ಟವಾದವರ ಪ್ರೀತಿಯನ್ನು ಹೇಗೆ ಒಲಿಸಿಕೊಳ್ಳುವುದು??

ಕೆಲವರಿಗೆ ಪ್ರೀತಿಯ ವಿಚಾರವೊಂದೇ ಅಲ್ಲ ಮಿಕ್ಕೆಲ್ಲ ವಿಚಾರದ ಬಗ್ಗೆಯೂ ಸಹ ತಮ್ಮ ಮನದಾಳದಲ್ಲಿ ಹೊಮ್ಮಿಬಂದ ಹೊಸ ಬಯಕೆಯನ್ನ, ಹೊಸ ಭಾವನೆಯನ್ನ, ನವಿರು ಪುಳಕವನ್ನ ಹಾಗೆ ಬರಲು ಕಾರಣರಾದವರ ಮುಂದೆ ಸುಂದರವಾಗಿ ಹೇಳಿ ಅವರ ಪ್ರೀತಿಯನ್ನ, ಅವರ ಒಲವನ್ನ, ಅವರ ಪ್ರೇಮವನ್ನ, ಕೊನೆಗೆ ಅವರ ಬಾಂಧವ್ಯವನ್ನೂ ಸಹ ಪಡೆದುಕೊಳ್ಳುವ ಕಲೆ ಇರುತ್ತದೆ (ಸಿದ್ದಿಸಿರುತ್ತದೆ). ಹೌದು ಇದು ಅದ್ಬುತವಾದ ಒಂದು ಕಲೆ. ಪ್ರೀತಿ ಮಾಡುವ ಅವಕಾಶ, ಸೌಭಾಗ್ಯ, ಎಲ್ಲರಿಗೂ ಒಲಿದು ಬರುವುದಿಲ್ಲ.

ಆದರೆ ಪಾಪ ಇನ್ನು ಕೆಲವರಿಗೆ ತಮ್ಮ ಮನದಲ್ಲಿ ಮೂಡಿಬಂದ ಅಪರಿಮಿತ ಮಧುರ ಭಾವ, ಹೊಚ್ಚ ಹೊಸ Feelingsಗಳನ್ನು, ಆಸೆ, ಆಕಾಂಕ್ಷೆಗಳನ್ನು ಹೇಳುವ ಧೈರ್ಯ ಬಾರದೆ ತಮ್ಮ ಮನದಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ತಮ್ಮೊಳಗೇನೆ ಆ ಮಧುರ ಭಾವವನ್ನು ಹೆಮ್ಮರವಾಗಿಸಿ ಬಿಡುತ್ತಾರೆ.

ನೆನಪಿರಲಿ, ಎಲ್ಲೂ ಹೇಳಲಾರದೆ ಮನದ ತಿಜೋರಿಯ, ಮಧುರ ಭಾವಗಳ ಖಾನೆಯೊಳಗೆ ಬಚ್ಚಿಟ್ಟುಕೊಂಡ ಪ್ರೀತಿಯು ನಿಜಕ್ಕೂ ಬಹಳ ಪ್ರಬಲವಾದುದ್ದು, ಅದರ ಜೊತೆಗೆ ಅಷ್ಟೇ ನೋವನ್ನು ಯಾತನೆಯನ್ನು ತರುವಂತಹದ್ದು...ಮತೆ ಹಾಗೆ ಇರದೆ ನಮ್ಮ ಪ್ರೀತಿಯನ್ನು ಹೇಗೆ ವ್ಯಕ್ತ ಪಡಿಸುವುದು? ಪ್ರೇಮಿಗಳ ದಿನದೊಂದು ಅದ್ದೂರಿಯಾಗಿ ಮಾಡುವ ಆಚರಣೆ ತರವೇ?? ಎಲ್ಲವನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ!!

ಒಂದು ಸರಳವಾದ ಕವನವನ್ನೂ ಕೆಳಗೆ ಬರೆದಿರುವೆನು ಒಮ್ಮೆ ಓದಿರಿ
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಆ ಹಾಲು ಬೆಳದಿಂಗಳ ಚಂದಿರ│ ಅವನಿದ್ದರೂ ಅಷ್ಟು ಸುಂದರ│
ನಿನ್ನಯ ಚೆಲುವಿನಲಿ ಒಂದಿಷ್ಟು ಪಾಲು│ ಪಡೆಯಲು ತೋರಿಹನಂತೆ ಕಾತರ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?

ಹೊನ್ನಕಾಂತಿ ತುಂಬಿಕೊಂಡ ಆ ನೇಸರ│
ಕಂಡು ನಿನ್ನ ಕಣ್ಣಕಾಂತಿ ತಾಳಿಹನಂತೆ ಬೇಸರ│
ನಿನ್ನ ಭೇಟಿಗೊಮ್ಮೆ ತೋರಿಹನಂತೆ ಬಲು ಆತುರ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?

ನಿನ್ನ ಮುದ್ದುನಗು│ ಕಂಡ ಮುಗ್ದ ಮಗು│
ಮಾಡಿವುದಂತೆ ಹಠ│ ನಿನ್ನ ಜೊತೆಯಲಿ ಆಡಬೇಕೆಂದು ಆಟ!
ಇದು ನಿಜವೇನೇ? ಗೆಳತಿ, ಇದು ನಿಜವೇನೇ?

ಇರಲಿ ಇರಲಿ ಗೆಳತಿ, ಹೀಗೆ ಇರಲಿ ಇರಲಿ
ನಿನ್ನ ಚಲುವಿನಲಿ ಕಾಂತಿ│ ನಿನ್ನ ನಯನದಲೂ ಕಾಂತಿ│
ನಿನ್ನ ನಗುವಿನಲಿ ಸ್ಫೂರ್ತಿ│ ನಿನ್ನ ಬದುಕಲಿ ಕೀರ್ತಿ│
ಆದರೆ ನಿನ್ನಲಿ ನಾ ಇಟ್ಟಿರುವ ಪ್ರೀತಿ│ ಎಂದೂ ಆಗದಿರಲಿ ಒಂದು ಭ್ರಾಂತಿ!

ಭಾನುವಾರ, ಫೆಬ್ರವರಿ 1, 2009

ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│
ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
Americaದಲಿ Europeನಲಿ
Indiaದಲಿ, ಎಲೆಡೆಯಲಿ
ಆಗುತಿದೆ ಆಗುತಿದೆ ಆಗುತಿದೆ
ಷೇರು ಸೂಚ್ಯಂಕದಲ್ಲಿ ಇಳಿತ│
ಕೆಲಸಗಳ ಹಿಗ್ಗ ಮುಗ್ಗಾ ಕಡಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ಈಗೀಗ ಆಗಿದೆ ಆಗಿದೆ ತಣ್ಣಗಾಗಿದೆ
Party, Outingಗಳ ಮೊರೆತ│
Bar-Pubಗಳಲಿ ಅಬ್ಬರದ ಕುಣಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
Career Lifeನಲಿ ಆಗುವ ಅನಾಹುತಕ್ಕೆ
ಯಾರನೂ ಮಾಡಲಾಗದು ದೂಷಣೆ│
ಆದರೂ ನಾಜೂಕಾಗಿ ಮಾಡಿಕೊಳ್ಳಬೇಕಿದೆ
ನಮ್ಮ ನಮ್ಮ ಕೆಲಸಗಳನು ರಕ್ಷಣೆ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ನಮ್ಮ ನಮ್ಮಯ ದುಂದು ವೆಚ್ಚಕ್ಕೆ
ಇಂದೇ ನಾವ್ ಹಾಕೋಣ ಕಡಿವಾಣ!
ಕಾಯಕ ಕೈ ತಪ್ಪಿ ಹೋದವರಿಗೆ
ನುಗ್ಗಿ ಮುಂದೇ ಹೇಳೋಣ ಸಮಾಧಾನ

ಬಂದಿದೆ ಬಂದಿದೆ ಬಂದಿದೆ│ ಪ್ರಬಲ ಆರ್ಥಿಕ ಹಿಂಜರಿತ│
ಅವರಿಗಾದರೇನು? ನಮಗಾದರೇನು? ಯಾರಿಗಾದರೇನು?
ಎಲ್ಲರ ಸಂಕಷ್ಟದಲ್ಲಿ ಸ್ವಲ್ಪವಾದರೂ ಸಹಭಾಗಿಯಾಗೋಣ
ಕಾಲಕ್ರಮೇಣ ಆರ್ಥಿಕ ಹಿಂಜರಿತವನು ಹಿಮ್ಮೆಟ್ಟಿಸೋಣ!

ರಚನೆ ಸುನಿಲ್ ಮಲ್ಲೇನಹಳ್ಳಿ