ಮನದ ಸಂತೆಯಲ್ಲಿ ನಡೆದಿಹುದು ಕನ್ನಡ ಪದಗಳ ನಿನಾದ! ಈ ಬ್ಲಾಗಿನಲಿ ಪ್ರತಿಕ್ಷಣವೂ ಹರಿದಿಹುದು ಅ ನಿನಾದ ಸಂವಾದ! ಓದುಗರಿಗಂತೂ ದಿನನಿತ್ಯವೂ ಹೊಸ ವಿಚಾರದ ಆಸ್ವಾದ. ..
ಸೋಮವಾರ, ಜುಲೈ 28, 2008
ನಾ ಓದಿದ ಕಾದಂಬರಿ “ಮರಳಿ ಮಣ್ಣಿಗೆ”
ಶಿವರಾಮ ಕಾರಂತರ “ಮರಳಿ ಮಣ್ಣಿಗೆ” ಕಾದಂಬರಿಯು ಕನ್ನಡ ಸಾರಸ್ವತ ಲೋಕದಲ್ಲಿ ಮೆಚ್ಚುಗೆ ಪಡೆದ ಸಾಹಿತ್ಯದಾಕರಗಳಲೊಂದು. ಈ ಕಾದಂಬರಿಯಲ್ಲಿ ಕಾರಂತರು ಕರಾವಳಿ ತೀರ ಪ್ರದೇಶದ ಐತಾಳ ಕುಟುಂಬವೊಂದರ ತಲೆಮಾರನ್ನು ಕೇಂದ್ರಬಿಂದುವಾಗಿರಿಸಿಕೊಂಡು ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಎಣೆದಿದ್ದಾರೆ. ಕಾದಂಬರಿಯನ್ನು ಓದುತ್ತಾ ಹೋದರೆ ಕರಾವಳಿಯ ತೀರ ಪ್ರದೇಶಗಳಿಗೆ ನಮ್ಮನ್ನು ನಮಗರಿವಿಲ್ಲದೆ ಕರೆದೊಯ್ಯತ್ತದೆ.
ಕೋದಂಡರಾಮ ಐತಾಳರ ಮಗ ರಾಮ ಐತಾಳರು ನಾರಾಯಣ ಮಯ್ಯನವರ ಮಗಳು ಪಾರ್ವತಿಯನ್ನು ವಿವಾಹವಾಗುವುದರಿಂದ ಕಥೆಯು ಪ್ರಾರಂಭವಾಗುತ್ತದೆ. ಇವರೀರ್ವರ ಮದುವೆಯಾದ ಕಲವೇ ವರುಷಗಳಲ್ಲಿ ಇಬ್ಬರು ಬೀಗರು ಅಂದರೆ ಕೋದಂಡರಾಮ ಐತಾಳರು ಹಾಗೂ ನಾರಾಯಣ ಮಯ್ಯನವರು ಕಾಲವಶವಾಗಿಬಿಡುತ್ತಾರೆ. ಮನೆಯ ಜವಾಬ್ದಾರಿ ಹಾಗೂ ಅಪ್ಪನಿಂದ ಬಳುವಳಿಯಾಗಿ ಬಂದ ಪೌರೋಹಿತ್ಯದ ಕೆಲಸವು ರಾಮ ಐತಾಳರ ಹೆಗಲ ಮೇಲೆ ಬೀಳುತ್ತದೆ. ರಾಮ ಐತಾಳರದು ಸ್ವಲ್ಪ ಆಸೆಬುರಕ ಸ್ವಭಾವ, ಪೌರೋಹಿತ್ಯದಲ್ಲಿ ತಮಗೆ ಸಿಕ್ಕ ಯಾವ ವಸ್ತುವನ್ನೂ ಬಿಡದೆ ಎಲ್ಲವನ್ನೂ ಮನೆಗೆ ಬಾಚಿಕೊಂಡು ಬರುತ್ತಿರುತ್ತಾರೆ. ಚಿಕ್ಕವಯಸಿನಲ್ಲೇ ತನ್ನ ಗಂಡನನ್ನು ಕಳೆದಕೊಂಡು ರಾಮ ಐತಾಳರ ತಂಗಿ ಸರಸ್ವತಿ ತನ್ನ ತೌವರು ಮನೆಯಲ್ಲೇ ಇರುತ್ತಾಳೆ. ರಾಮ ಐತಾಳರು ಹಾಗೂ ಪಾರ್ವತಿ ದಂಪತಿಗಳಿಗೆ ಮಕ್ಕಳಾಗದ ಕಾರಣ ರಾಮ ಐತಾಳರು ಸತ್ಯಭಾಮೆ ಎನ್ನುವ ಕನ್ಯೆಯನ್ನು ವಿವಾಹವಾಗಿತ್ತಾರೆ. ಈ ದಂಪತಿಗಳಿಗೆ ಗಂಡು ಮಗುವೊಂದು ಜನಿಸುತ್ತದೆ. ಆ ಮಗುವಿಗೆ ಲಕ್ಷ್ಮಿ ನಾರಾಯಣ (ಲಚ್ಚ) ಎಂಬ ಹೆಸರನ್ನು ಇಡುತ್ತಾರೆ. ಆ ಲಚ್ಚನೇ ಮರಳಿ ಮಣ್ಣಿಗೆ ಕಾದಂಬರಿಯ ಪ್ರಮುಖ ಪಾತ್ರಧಾರಿ. ಅವನು ಐತಾಳರ ಕುಟುಂಬಕ್ಕೆ ಕೀರುತಿ ತರುತ್ತಾನೋ ಇಲ್ಲ ಅಪಕೀರುತಿಯನ್ನು ತರುತ್ತಾನೋ ಅಲ್ಲದೆ ತನ್ನ ಪತ್ನಿಯಾಗಿ ಬರುವ ಸುಸಂಸ್ಕೃತ ಸಂಪ್ರಾದಯದ ಮನೆತನದ ಹುಡುಗಿ ನಾಗವೇಣಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದೇ ಈ ಕಾದಂಬರಿಯ ಪ್ರಮುಖ ತಿರುಳು.
ಕಾರಂತರು ಕಥೆಯನ್ನು ಎಳೆ ಎಳೆಯಾಗಿ ಬರೆದಿದ್ದಾರೆ. ಈ ಕಥೆಯಲ್ಲಿ ಕಡಲತೀರದ ಜನರ ಆಚಾರ-ವಿಚಾರವಿದೆ, ಕನ್ನಡ ಸಾಹಿತ್ಯಲೋಕಕ್ಕೆ ಉಡುಗೊರೆಯಾಗಿ ಹರಿದು ಬಂದಿರುವ ಹೊಸಹೊಸ ನುಡಿಮುತ್ತುಗಳಿವೆ, ಹಾಗೇನೇ ಪ್ರಾಯದ ಯುವಕರ ಕೆಡುಕಿನ ವಿಚಾರವೂ ಇದೆ, ಇವೆಲ್ಲಕ್ಕಿಂತ ಮಿಗಿಲಾಗಿ ಹೆಂಗಳೆಯರು ಹೊರಗಿನ ಕೆಲಸಕಾರ್‍ಯಗಳಲ್ಲಿ ಗಂಡಸರಿಗಿಂತ ಕಡಿಮೆ ಇಲ್ಲ ಎಂಬುದನ್ನು ತಿಳಿಸುವ ಮಾರ್ಮಿಕ ಸಂದೇಶವಿದೆ ಹಾಗೂ ಅವರು ಸಂಸಾರದಲ್ಲಿ ಅನುಭವಿಸುವ ಒಣ ನೋವುಗಳ ವ್ಯಾಕ್ಯಾನವಿದೆ. ನಿಜ ಹೇಳಬೇಕೆಂದರೆ ನಲವಿಗಿಂತ ನೋವೇ ಕಾರಂತರ ಈ ಕಥೆಯಲ್ಲಿದೆ. ಕೊನೆಯಲ್ಲಿ ನಗುವಿನ ಆಶಾಕಿರಣವೊಂದನ್ನು ಹುಟ್ಟಿಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.
- ಸುನಿಲ್ ಮಲ್ಲೇನಹಳ್ಳಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ