ಬುಧವಾರ, ಆಗಸ್ಟ್ 20, 2008

ಕಾಲಕ್ಕೆ ಸರಿಯಾಗಿ ಬಾರದ ಮಳೆರಾಯನ ಕುರಿತೊಂದು ಕವನ

ಕಾಲಕ್ಕೆ ಸರಿಯಾಗಿ ಬಾರದ ಮಳೆರಾಯನ ಕುರಿತೊಂದು ಕವನ
ಮಳೆ..ಮಳೆ..ಮಳೆ..ಮಳೆ|
ಆಹಾ! ಮುಂಗಾರು ಮಳೆ|
ತಡವಾದರೂ ಕೊನೆಗೂ
ಬಂತೀ ಮುಂಗಾರು ಮಳೆ|

ಹೀಗೆ ಬಂದ ಹನಿಹನಿ ಮಳೆ|
ಅಲ್ಲಲ್ಲಿ ತೊಳೆದು ಹಾಕುತಿಹುದು
ಬರದ ಸೋಂಕಿನ ಕೊಳೆ|
ಅಗೋ ನೋಡಿ ಎಲ್ಲೆಲ್ಲೂ
ಮಿಣುಕುತಿಹುದು ಹೊಸ ಕಳೆ|

ಇದ ಕಂಡು ನಾಚುತಲಿರುವುದು
“ಮೇಘ ಪ್ರಿಯೆ” ಇಳೆ|
ಜೀವ ಸಂಕುಲಗಳ ಎದೆಯಲಿ
ಹರಿದಿಹುದು ನವೋಲ್ಲಾಸದ ಹೊಳೆ|

ಇಳೆಯ ಹೃದಯದೊಡಲ ಸೇರಿದ ಮಳೆ
ಹೇಳುತಿಹುದು, ಓ ಇಳೆ ನನ್ನ ಕ್ಷಮಿಸಿ ಬಿಡೆ|
ನಾ ಬಿಟ್ಟು ನನ್ನ ಮುಗಿಲ ಕರಿದಾದ ಮನೆ
ನಿನ್ನ ಸೇರುವುದರಲಿ ಸ್ವಲ್ಪ ತಡ ಆಯಿತು ಕಣೆ|
ನಿನ್ನ ಮನುಜ ಸುತರೇ ಇದಕ್ಕೆ ಕಾರಣ ಕಣೆ|
ನಾ ಬರುವ ಹಾದಿಯಲಿ ಮಾಲಿನ್ಯದ ಮುಳ್ಳ
ಅಡ್ಡಲಾಗಿ ಎಸೆಯುತಲಿವವರು ಅವರೇ ಕಣೆ|
ಆ ನಿನ್ನ ಮನುಜ ಸುತರು ಎಂದು ತಿಳಿಯುವರು
ಪರಿಸರವನು ಅರಿತು ಬಾಳುವ ಭವ್ಯ ಕಲೆ ?

(ಪದಗಳ ಅರ್ಥ
ಇಳೆ= ಭೂಮಿ, ಧರೆ, ಸುತರು= ಮಕ್ಕಳು, ಮಗ)

-ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಮಳೆಯೆಂಬ “ಮುಗಿಲ ಮಾಯೆ”



ಮಳೆಯೆಂಬ “ಮುಗಿಲ ಮಾಯೆ” ಬಾರದೆ
ಬಂದ ಬರಗಾಲಕ್ಕೆ ಕಂಗಾಲಾದ ರೈತಾಪಿ ಜನರನ್ನು ಗುರಿಯಾಗಿ ಇಟ್ಟುಕೊಂಡು ಬರೆದ ಕವನ.

(ಈಗ ವರಗಾಲ ಆದರೆ ಕೆಲ ದಿನಗಳ ಹಿಂದೆ ಬರಿ ಬರಗಾಲ) - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಹಾವೇರಿಯ ಕಾವೇರಿದ ಕಪ್ಪು ನೆಲದಲಿ|
ಮಳೆಗಾಗಿ ಕಾದು ಬಿರಿದ ಆ ಹೊಲದಲಿ|
ಬಾರದ ನಿದ್ರೆಯನು ತಾ ಬರಿಸಿಕೊಂಡು|
ಕಂಡ ಹೊಂಗನಸನು ತಾ ಕರಗಿಸಿಕೊಂಡು|
ಆ ಕಡೆ ಮುಖ ಮಾಡಿ ಮಲಗಿರುವ ಮಾನವ|
ಈ ಕಡೆ ಮುಖ ಮಾಡಿ ಮಲಗಿಸಿರುವ ತನ್ನ ಶ್ವಾನವ|

ಯೋಚನೆ, ಆಲೋಚನೆಯಲಿ ಮಾನವ, ಶ್ವಾನವ
ಇಬ್ಬರದೂ ಬಿಡಿಸಲಾಗದ ಅವಿನಾಭಾವ ಸಂಬಂಧ!

ನೆಡೆಸಲು ಬದುಕಿನ ತೇರು| ಕಾಣಲೊಂದು ಕಿರು ಸೂರು
ಮಳೆಯನೇ ನಂಬಿ ಉಳುಮೆ ಮಾಡಿ ಸೋತಿಹನು ಅವ|

ತನ್ನೊಡಯನ ಸ್ಥಿತಿಯನು ಕಂಡು| ಅವಗೆ ನೆರವಾಗಲೆಂದು
ಬಾರದ ಮಳೆಯನು ಕೂಗಿ ಕರೆದು ಸೋತಿಹುದು ಅದು|

ಹೀಗೆ ಹೊಲಕ್ಕೆರಡು ಜೀವಗಳಂತೆ ಅದೇಷ್ಟೊ ಜೀವಗಳನು
ಪ್ರಕೃತಿಯು ಮಾತೆಯೂ ಕೈಬಿಟ್ಟಿರುವುದೊ? ಯಾರು ಬಲ್ಲರು?

(ಪದಗಳ ಅರ್ಥ, ಅವಿನಾಭಾವ= ಒಂದೇ ರೀತಿಯ, ಶ್ವಾನ = ನಾಯಿ)

ಭಾನುವಾರ, ಆಗಸ್ಟ್ 3, 2008

ಸ್ನೇಹ..


(ಸ್ನೇಹಿತರ ದಿನದ ಶುಭ ಸೂಚಕವಾಗಿ ಬರೆದ ಕವನ )

ಸ್ನೇಹ.. ಸ್ನೇಹ.. ಸ್ನೇಹ.. ಸ್ನೇಹ│
ಬಾಳ ಪಯಣದ ಗೀತೆಗೆ ಅದುವೇ ಗೇಯ│
ಗೆಳೆಯ ಗೆಳತಿಯರ ಅಕ್ಕರೆಯ ಗೆಳೆತನ│
ಬಾಳಲಿ ನಾವ್ ಪಡೆಕೊಂಡ ನಿಜ ಸಿರಿತನ│

ಜಗದಣ್ಣ ಕನಸಲಿ ಬಂದು ಹೇಳಿದ ಒಂದು ನೀತಿ│
ನಲ್ಲ ನಲ್ಲೆಯರಲಿ ಇರುವುದು ಆಗಸದೆತ್ತರದ ಪ್ರೀತಿ
ಎಂದಾದರೊಂದು ದಿನ ಅದು ಮುಗಿಯುವ ಭೀತಿ│
ಸ್ನೇಹದಲ್ಲಿ ಇರುವುದು ಎಂದೂ ತೀರದ ಪ್ರೀತಿ│

ಬಂಧು ಬಳಗ ಬಾಂಧವ್ಯವೊಂದು ಅವಿಭಾಜ್ಯ ಬಂಧನ│
ಅದರ ನಡುವೆ ಗೆಳೆತನವೊಂದು ನೆಮ್ಮದಿಯ ಸ್ಪಂದನ│
-ನಿಮ್ಮ ಸುನಿಲ್ ಮಲ್ಲೇನಹಳ್ಳಿ

(ಪದಗಳ ಅರ್ಥ
ಗೇಯ =ಸಂಗೀತ , ಅವಿಭಾಜ್ಯ= ಬಿಡಿಸಲಾಗದ , ಜಗದಣ್ಣ= ಶಿವ, ಈಶ್ವರ)

ಶನಿವಾರ, ಆಗಸ್ಟ್ 2, 2008

ಬಂಗಾರದ ಮನುಷ್ಯನಿಗೆ ಹೃದಯಸ್ಫರ್ಶಿ ನಮನ


ಶಿವಪ್ಪನಿಗೆ ಕಣ್ಣನ್ನು ಕೊಟ್ಟು│
ಶಬ್ಧವೇದಿಯ ಜಾಡನ್ನು ಹಿಡಿದು│
ದೂರದ ಬೆಟ್ಟ ಏರಿ ಗಿರಿ ಕನ್ಯೆ ರೂಪಕ್ಕೆ ಕರಗಿ│
ಗುರಿ ಮರೆತು ದಾರಿ ತಪ್ಪಿದ ಮಗನಾಗಿ│
ಪ್ರಾಯಶ್ಚಿತ್ತಕೊಸ್ಕರ ಮನದಲ್ಲಿ ಅನುರಾಗ ಅರಳಿಸಿಕೊಂಡು│
ಅದೇ ಕಣ್ಣಲ್ಲಿ ಸಾಧನೆಗೈದು│ ತ್ರಿಮೂರ್ತಿಗಳ ವರ ಪಡೆದು│
ಭಲೇ ಹುಚ್ಚನಾಗಿ ಜಾಣ್ಮೆಯನ್ನು ತೋರಿ│
ಬಹದ್ದೂರ್ ಗಂಡಾಗಿ ಶೌರ್ಯವನ್ನು ಬೀರಿ│

ಆಕಸ್ಮಿಕವಾಗಿ ಕಸ್ತೂರಿ ನಿವಾಸಕ್ಕೆ ಬಂದು│
ಜೀವನ ಚೈತ್ರದಲ್ಲಿ ಮಿಂದು│
ಒಡಹುಟ್ಟಿದವರೊಡಗೂಡಿ│
ಶ್ರಾವಣ ಬಂತೆಂದು ಹಾಡಿ│
ಭಾಗ್ಯದ ಬಾಗಿಲಲ್ಲಿ│
ಹೊಸ ಬೆಳಕನು ಚೆಲ್ಲಿ│

ನೀತಿ ಇಲ್ಲದ ಸಿರಿವಂತರ ಸಂಪತ್ತಿಗೆ ಸವಾಲ್ ಹಾಕಿ│
ಮೇಯರ್ ಮುತ್ತಣ್ಣನಾಗಿ│
ಭಾಗ್ಯದ ಲಕ್ಷ್ಮಿ ಬಾರಮ್ಮನಿಗೆ ಮನಸೋತು│
ಎರಡು ಕನಸನು ಹೊತ್ತು│
ಚೂರಿ ಚಿಕ್ಕಣ್ಣನ ವೇಷ ಧರಿಸಿ│
ಅಪರೇಷನ್ ಡೈಮಂಡ್ ರಾಕೆಟ್‌ನಲ್ಲಿ ಬಾನಂಗಳಕ್ಕೆ ಹೋಗಿ│
ಧ್ರುವತಾರೆಯನು ಹೊತ್ತು ತಂದು ಸಂಭ್ರಮಿಸಿ│
ಗಂಧದ ಗುಡಿಯಲಿ ಇರಿಸಿ│
ಕಾಮನಬಿಲ್ಲಿನಲ್ಲಿ ಬೆಸೆದು ಉಡುಗೊರೆಯಾನ್ನಾಗಿಸಿ│
ಪ್ರೇಮದಕಾಣಿಕೆಯಾಗಿ ನೀಡಿ│
ಯಾವ ಕವಿಯು ಬರೆಯಲಾರದ ಗೀತೆಯನ್ನು ಹಾಡಿ│


ಕನ್ನಡಿಗರ ಹೃದಯವನ್ನು ಸದ್ದಿಲ್ಲದೆ ಕದ್ದು ತನ್ನ ಅಭಿನಯನದಲ್ಲಿ ಇರಿಸಿ│
ಬಂಗಾರದ ಮನುಷ್ಯಯೆಂಬ ಹೆಸರನಿಟ್ಟ ತಾಯಿಗೆ ತಕ್ಕಮಗನಾಗಿ ಬಾಳಿ│
ಒಲವನ್ನು ಸಾಕ್ಷಾತ್ಕಾರಿಸಿಕೊಂಡು ಹೋದರು ನಮ್ಮಣ್ಣ ರಾಜಣ್ಣ│
ನೆಡೆ ನುಡಿ ನಟನೆಯಲ್ಲಿ ಎಂದೆದಿಂಗೂ ಅವರಿಗೆ ಅವರೇ ಸಾಟಿ│
ವಿಧಿಕರೆಗೆ ಓಗೊಟ್ಟು ಅವರು ಹೋದಾಗ ಕಂಬನಿ ಧಾರೆ ಹರಿಸಿದ ಜೀವಗಳವು ಕೋಟಿ│
ರಚನೆ, ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಶುಕ್ರವಾರ, ಆಗಸ್ಟ್ 1, 2008

ಬಾಳ ಗೆಳತಿಗೊಂದು ಕವನ (ಕಲ್ಪನೆಯಲಿ ಅರಳಿದ ಕಾವ್ಯ)

ಆ ಹುಣ್ಣಿಮೆ ರಾತ್ರಿಯದು
ಬಲು ಸೊಗಸು│

ಅಂದು ನಾ ಕಂಡ ನನ್ನ ಅವಳ
ಬಾಂಧವ್ಯದ ಮಧುರ ಸವಿಗನಸು│

ತನುಮನದಲ್ಲಿ ತಂದಿಹುದು
ಬಗೆ ಬಗೆ ರೂಪದ ಹುಮ್ಮಸ್ಸು│

ಇಂದಾಗಿಹುದು ಅವಳ ಚೆಲುವಿನ ವರ್ಣನೆಯ
ಕವನವಾಗಿ ಬರೆಯುವ ಮನಸು│

ಓ ಭಾವವೇ ನೀ ಅದಕ್ಕೆ ಸಹಕರಿಸು│
ನಿನ್ನೊಡಲಿನಿನ್ದ ಸುಲಲಿತ ಪದಗಳನು ಹೂಂಕರಿಸು│
- ಸುನಿಲ್ ಮಲ್ಲೇನಹಳ್ಳಿ
(ಮುಂದಿನ ಕವನದಲಿ ಅವಳ ಚೆಲುವಿನ ವರ್ಣನೆ)