ಮಂಗಳವಾರ, ಸೆಪ್ಟೆಂಬರ್ 16, 2008

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 2)..
ಹೃದಯ ಬಿಚ್ಚಿ ಲೇಖನವೊಂದನ್ನು ಬರೆದಾಗ (ಭಾಗ 2)
ಮುಂದುವರೆದ ಭಾಗ ೨ - ನಿಮ್ಮ ಸುನಿಲ್ ಮಲ್ಲೇನಹಳ್ಳಿ
http://mallenahallipages.blogspot.com
ಹೆಚ್ಚಾಗಿ ಕನ್ನಡ ಪುಸ್ತಕಗಳನ್ನೇ ಓದುವ ನಾನು ಪಕ್ಕದಲ್ಲಿ ಹುಡುಗಿ ಕುಳಿತಿರುವುದನ್ನು ಮನಗಂಡು ನನ್ನ ಲೆವಲ್ಅನ್ನು ಕಾಯ್ದುಕೊಳ್ಳುವ ಸಲುವಾಗಿ ಓದಲು ಚೇತನ ಭಗತ್‌ರ “Five Point Someone ಎಂಬ ಇಂಗ್ಲೀಷ್ ಪುಸ್ತಕವನ್ನು ಬ್ಯಾಗಿನಿಂದ ಹೊರ ತೆಗೆದು, ಖರೀದಿಸಿದ ನಾಲ್ಕರಲ್ಲಿ ಮೊರು ಸೀಬೆಕಾಯಿಗಳನ್ನು ಬ್ಯಾಗಿನ ಒಳಗೆ ಹಾಕಿ, ಓದಲು ಅಣಿಯಾದೆ. ಆದರೆ ಬರಿ ಪುಟಗಳನ್ನು ತಿರುವಿಹಾಕಲು ಸಾಧ್ಯವಾಯಿತೇ ವಿನಹ: ಓದಲು ಮನಸ್ಸಾಗಲೇ ಇಲ್ಲ! ಅದಕ್ಕೆ ಮೊಲಕಾರಣ “ಕಿರುನೋಟದಲ್ಲಿ ನನ್ನ ಕಣ್ಣುಗಳು ಸೆರೆಹಿಡಿದಿದ್ದ ಆ ಹುಡುಗಿಯ ಸುಂದರವದನದ ರಂಗುರಂಗಿನ ಚಿತ್ರಣವು ನನ್ನಯ ಮನಸ್ಸಲ್ಲಿ ಸದ್ದಿಲ್ಲದ ಯಾವುದೋ ಆಹ್ಲಾದಕರ ನಾದವ ಮೀಟುತಿತ್ತು!”
ಇದರ ನಡುವೆ ನನಗೇನೆ ನನ್ನ ಬಗ್ಗೆ ನಾಚಿಕೆ ತರುವ ಘಟನೆಯೊಂದು ನೆಡೆದುಹೋಯಿತು. ಪಕ್ಕದಲ್ಲಿ ಕುಳಿತ ಆ ತರುಣಿಯ ಎದುರು ನನ್ನ ಲೆವಲ್ಅನ್ನು ಕಾಯ್ದುಕೊಳ್ಳುವ ಸಲುವಾಗಿ ನಾನು ಇಂಗ್ಲೀಷ್ ಭಾಷೆಯ ಪುಸ್ತಕವನ್ನು ಬ್ಯಾಗಿನಿಂದ ಹೊರತೆಗೆದು ಓದಲು ಮಗ್ನನಾದುದ್ದೆನೋ ನಿಜ. ಆದರೆ ಯಾವ ಹುಡುಗಿಯನ್ನು ನಾನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೋ ಆ ಹುಡುಗಿನೇ ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳು” ಪುಸ್ತಕವನ್ನು ಆಕೆಯ ಬ್ಯಾಗಿನಿಂದ ಹೊರತೆಗೆದು ಓದತೊಡಗಿದಳು.

ಇದಕ್ಕಿಂತಾ ಅವಮಾನ ಬೇಕೆ?? ನಾನು ಓದುತ್ತಿದ್ದ ಆ ಇಂಗ್ಲೀಷ್ ಪುಸ್ತಕವನ್ನು ಹಾಗೆ ಬ್ಯಾಗಿನೊಳಗೆ ಇಟ್ಟು,
“ಹುಚ್ಚು ಮನಸ್ಸಿನ ಹನ್ನೊಂದನೆಯ ಮುಖ ನಾನೇ?” ಇರಬೇಕೆಂದು ಅಂದುಕೊಳ್ಳುತ್ತಾ ಕಿಟಕಿಯ ಗ್ಲಾಸ್ ಅನ್ನು ಸ್ವಲ್ಪ ಸರಿಸುತ್ತ ಹೊರಗಿನ ಗಿಡ, ಮರ, ಬೆಟ್ಟಗಳ ನಯನಾಕರ್ಷಕ ದೃಶ್ಯವನ್ನು ನೋಡುವ ಪ್ರಯತ್ನ ಮಾಡತೊಡಗಿದೆ. ಪ್ರಕೃತಿಯ ಈ ಸುಂದರ ದೃಶ್ಯಾವಳಿಯನ್ನೇ ನೋಡಲೇಬೇಕೆಂದು ಇಷ್ಟಪಟ್ಟು ಬಸ್ಸನ್ನೇರಿ ಬಂದಿದ್ದೇನೋ ನಿಜ. ಆದರೆ ಆ ಸೊಬಗನ್ನು ನೋಡಲು ಮನಸ್ಸಿದ್ದರೇ ತಾನೆ? ಮನಸ್ಸೆಲ್ಲಾ ಪಕ್ಕದಲ್ಲಿ ಆಸೀನಳಾಗಿದ್ದ “ಆ ತರುಣಿಯ ರೂಪರಾಶಿಯ ಬಲೆಯಲ್ಲಿ ಆಜೀವನ ಬಂಧಿಯಾಗಿತ್ತು!” ಅವಳನ್ನು ನಾನು ನೋಡಿದ “ಆ ಒಂದೇ ಒಂದು ಕುಡಿನೋಟ” ನನ್ನಲ್ಲಿ ಇಷ್ಟೆಲ್ಲಾ ಬದಲಾವಣೆ ತಂದಿತ್ತು!

“Excuse me, ದಯವಿಟ್ಟು Window Glass ಅನ್ನು ಪೂರ್ತಿ ತೆಗೆಯುತ್ತಿರಾ? ನನಗೆ ಗಿಡ, ಮರ, ಬೆಟ್ಟ, ಗುಡ್ಡಗಳನ್ನು ನೋಡುವುದೆಂದರೆ ತುಂಬಾ ಇಷ್ಟ” ಎಂದು ಮೃದುವಾದ ಮತ್ತು ಅಷ್ಟೇ ಸ್ಪಷ್ಟವಾದ ನುಡಿಗಳು ನನ್ನ ಪಕ್ಕದಲ್ಲಿ ಕುಳಿತ ಆ ತರುಣಿಯ ಬಾಯಿಯಿಂದ ಅಲೆ ಅಲೆಯಾಗಿ ಹೊರಬಂದವು. ನಾನು ಕಿಟಕಿಯ ಗ್ಲಾಸ್ ಅನ್ನು ಪೂರ್ತಿಯಾಗಿ ತೆರೆಯುತ್ತ “ಅಷ್ಟು ಇಷ್ಟವಿದ್ದರೆ ನೀವಿಲ್ಲಿ ಕೂರಬನ್ನಿ, ನಾನು ನಿಮ್ಮ ಜಾಗದಲ್ಲಿ ಕೂರುತ್ತಿನಿ” ಎಂದೇಳಿ ಅವಳಿಗೆ ಕಿಟಕಿಯ ಪಕ್ಕದಲ್ಲಿ ಕೂರಲು ಅನುವು ಮಾಡಿಕೊಟ್ಟೆ. ಕಿಟಕಿಯ ಪಕ್ಕದ ಸೀಟಿನಲ್ಲಿ ಕೂರುತ್ತಾ ಅವಳು “Thank you very much” ಎಂದು ನನ್ನ ಕಣ್ಣಲ್ಲಿ ಕಣ್ಣಿಡುತ್ತಾ ಹೇಳಿದಳು. “ಎಲ್ಲಾ ಹಲ್ಲುಗಳು ಕಾಣುವ ಹಾಗೆ ನಗುತ್ತಾ ಪರವಾಗಿಲ್ಲ ಬಿಡಿ” ಎಂದು ನಾನು ಹೇಳಿದೆ.

ಇನ್ನೇನಾದರೂ ಮುಂದುವರೆದು ಮಾತನಾಡೋಣವೆಂದರೆ ಹೊರಗಿನ ನಯನಮನೋಹರ ದೃಶ್ಯವನ್ನು ನೋಡಲು ಅತ್ತ ತಲೆಹಾಕಿದವಳು ಅರ್ಧತಾಸಾದರೂ ನನ್ನತ್ತ ತಿರುಗಲೇ ಇಲ್ಲ! ಆನಂತರ ನಾನೇ ಬೇಕಂತಲೇ ನನ್ನ ಬ್ಯಾಗಿನಿಂದ Chips ಪ್ಯಾಕೇಟ್ ಅನ್ನು ಹೊರತೆಗೆದು, ಒಂದೆರಡು ಚೂರುಗಳನ್ನು ಬಾಯಿಗೆ ಇಟ್ಟುಕೊಂಡು. ಅವಳತ್ತಾ ತಿರುಗಿ “Excuse me ನೀವು ಸ್ವಲ್ಪ ತಗೋಳಿ” ಎಂದೇಳುತ್ತಾ, ಆ ಪ್ಯಾಕೆಟ್‌ನ್ನು ಅವಳ ಮುಂದೆ ಹಿಡಿದೆ. ಕಿರುನಗೆ ಬೀರುತ್ತಾ “No Thanks” ಎಂದೇಳಿ, ಹೊರಗಿನ ರಮಣೀಯಚಿತ್ರಣವನ್ನು ನೋಡುವುದರಲ್ಲಿ ಮತ್ತೆ ತಲ್ಲಿನಳಾದಳು.

ಅವಳನ್ನು ಮಾತಾನಾಡಿಸುವ ನನ್ನೆಲ್ಲ ಪ್ರಯತ್ನಗಳು ಸತತವಾಗಿ ವಿಫಲವಾಗುತ್ತಿರುವಾಗಲೇ, ನನ್ನ ಮನದ ತೊಳಲಾಟವನ್ನು ಅರಿತ ಆ ಭಗವಂತ ನನಗೆ ಸಹಾಯ ಮಾಡಲೆಂದು ಮಳೆರಾಯನನ್ನು ಧರೆಗೆ ಕಳುಹಿಸಿದನು. ಮಳೆರಾಯನ ಆರ್ಭಟಕ್ಕೆ ವಿಧಿಯಿಲ್ಲದೆ ಅವಳು ಕಿಟಕಿಯ ಗ್ಲಾಸ್ ಅನ್ನು ಮುಚ್ಚಿದಳು. ಚಡಪಡಿಸುತ್ತಿದ್ದ ನನ್ನ ಬಾಯಿಗೆ ಹಾಕಿದ್ದ ಗಾಳವನ್ನು ಬಿಚ್ಚಿದಂತಾಯಿತು. “ಅಯ್ಯೋ ಹಾಳಾದ್ದು ಮಳೆ ಇವಾಗಲೇ ಬರಬೇಕಿತ್ತೇ?” ಎಂದು ಒಂದೇ ಸಮನೆ ಇನ್ನೂ ಏನೇನೋ ಹೇಳಲುಹೋದೆ. ಆದರೆ ಅವಳೇ ಮಧ್ಯದಲ್ಲಿ “ಬಾಯಿ ಹಾಕುತ್ತಾ ಪರವಾಗಿಲ್ಲ ಬಿಡಿ ಬರೋ ಮಳೆಗೆ ಹಾಗೆಲ್ಲ ಹೇಳಬಾರದು” ಎಂದಳು.

ಸ್ವಲ್ಪ ಸಮಯ ಕಾದು ನಿಮ್ಮ ಹೆಸರೇನು? ನಿಮ್ಮದು ಯಾವೂರು? ಇನ್ನು ಏನೇನೋ ಕೇಳಲು ಅವಳತ್ತಾ ತಿರುಗಿದರೆ ಅವಳಾಗಲೇ ನಿದ್ರಾದೇವಿಯ ವಶವಾಗಿದ್ದಳು. ತಲೆ ಕೆಟ್ಟಂತೆ ಆಯಿತು. ಮಲಗಿದ್ದ ಅವಳನ್ನು ನೋಡುತ್ತಲೇ ಬಾಯಿಯಿಂದ ಮಾತುಗಳು ತನ್ತಾನೇ ಬಾರದಾದವು. ಅರೆಕ್ಷಣದಲ್ಲಿ ನನ್ನ ಕಣ್ಣುಗಳು ಇದ್ದಕ್ಕಿದ್ದಂತೆ ಕಾರ್ಯೊನ್ಮುಖವಾದವು. ಶಿಲಾಬಾಲಕೆಯಂತಿದ್ದ ಅವಳ ಆ “ಚೆಲುವಿನ ಚಿತ್ರಣವನ್ನು ನೋಡಲೆಂದು ನನ್ನ ಕಣ್ಣುಗಳು ಸಹಜ ಸ್ಥಿತಿಯಿಂದ ೬೦ ಡಿಗ್ರಿ ಓರೆಯಾಗಿದ್ದವು. ನಿಜಕ್ಕೂ ಇವಳು ಅಪ್ಸರೆಯರ ಪ್ರತಿರೂಪವೋ? ಏನೋ? ಒಂದೂ ನಮ್ಮಗರಿಯದು ಎನ್ನುವ ಸಂದೇಶವನ್ನು ನನ್ನ ಕಣ್ಣುಗಳು ಮನಸ್ಸಿಗೆ ರವಾನೆ ಮಾಡಿದವು”.

ಆಹಾ...! ಅವಳು!, ಬಣ್ಣಿಸಲು ಯಾವ ಭಾಷೆಯ ಪದಗಳಿಗೂ ನಿಲುಕದಂತಹ “ಆಗರ್ಭ ಚೆಲುವು” ಅವಳದು. ಅಂಥವಳನ್ನು ಕಂಡಾಗ ನನ್ನ ಕಣ್‌ರೆಪ್ಪೆಗಳು ಒಂದನ್ನೊಂದು ಆಲಂಗಿಸುವುದನ್ನೇ ಅರೆಗಳಿಗೆ ಮರೆತವು, ನಯನಗಳೆರಡೂ ಎಂದೂ ಕಾಣದ ಆ ನೋಟವನ್ನು ಕಂಡು ಹಿರಿಹಿರಿ ಹಿಗ್ಗಿದ್ದವು, ತುಂಬು ತಂಪನೀಯುವ ಆಹ್ಲಾದಕರ ಸಂಚಾರ ನರನರದಲ್ಲಿ ಆರಂಭವಾಗಿತ್ತು, ಮನವು ಕಲ್ಪನಾಲೋಕಕ್ಕೆ ಲಗ್ಗೆಯಿಟ್ಟು ಅವಳ ಆ “ಅಪೂರ್ವ ಸೌಂದರ್ಯ”ದ ವರ್ಣನೆಗಾಗಿ ಪದಗಳ ಹುಡುಕಾಟದಲ್ಲಿ ತೊಡಗಿತ್ತು, ಹೃದಯದ ಊರೊಳಗೆ ಎಲ್ಲೆಲ್ಲೂ ಪ್ರೀತಿ ನಿನಾದ ಮೊಳಗಿತ್ತು, ಆ ನಿನಾದಕ್ಕೆ ಮೈಯಲ್ಲಿನ ರೋಮ ರೋಮವೂ ಹುಚ್ಚೆದ್ದು ಕುಣಿಯುತ್ತಿದ್ದವು. “ಹಿಂದೂಸಂಸ್ಕೃತಿಯ ಭವ್ಯಪ್ರತಿರೂಪವಾಗಿದ್ದ ಅವಳನ್ನು ನೋಡುನೋಡುತ್ತಲೇ ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಕೊಡುಗೆ ಇವಳೆಂದು ಕ್ಷಣಾರ್ಧದಲ್ಲೇ ನನಗರಿವಾಯಿತು”.

ಹೌದು ನಿಜವಾಗಿಯೂ ಅವಳ ರೂಪ ಹಾಗೆಯೇ ಇತ್ತು! ನುಣುಪಾದ ಕೂದಲುವುಳ್ಳ ಅವಳ ನೀಳವಾದ ಜಡೆ, ಅವಳ ಆ ರೂಪಕ್ಕೆ ಮೆರುಗು ನೀಡುವಂತೆ ಎಷ್ಟು ಬೇಕೋ ಅಷ್ಟು ಮಾತ್ರ ಹೊರಚಾಚಿದ ಮುಂಗುರುಳು, ಪ್ರಾಯದ ಸುಳಿವನ್ನು ಸಾರುವ ಒಂದು ಮೊಡವೆ ಕೂಡ ಇರದ ಮುದ್ದಾದ ಮುಖ, ಮೊದಲ ನೋಟದಲ್ಲೇ ನಾನು ಕಂಡಿದ್ದ ಭಯವೇ ಇರದ, ಬರಿ ನಿರ್ಮಲತೆ ತುಂಬಿಕೊಂಡಿರುವ, ಹುಣ್ಣಿಮೆಯ ಚಂದಿರನ ಕಾಂತಿಯನ್ನೂ ತುಸು ಮೀರಿಸುವ ಕಣ್ಣುಗಳು, ಇನ್ನೂ ಮೂಗುತಿಯನ್ನು ಚುಚ್ಚಿಸಿಕೊಂಡಿರದ ಮುಖಕ್ಕೆ ತಕ್ಕವಾದ ಕಿರುಮೊಗು, ಯಾವುದೇ ಸೌಂದರ್ಯವರ್ಧಕ ಲೇಪಿಸದೇ ಹೋದರೂ ಪಳಪಳನೆ ಹೊಳೆಯುತ್ತಿದ್ದ ಅವಳ ಆ ಕೆಂದುಟಿ, ಮೆಲ್ದುಟಿಯ ಸ್ವಲ್ಪ ಪಕ್ಕಕ್ಕೆ ಇದ್ದ ಕಿರುಕಪ್ಪನೆಯ ಮಚ್ಚೆ, ಕಿರುನಗೆಯನ್ನು ಬೀರುವಾಗ ಮಂಜಿನ ಹೊಳಪಿನಂತೆ ಇದ್ದ ಹಲ್ಲುಗಳು, ತನ್ನ ಸುಂದರ ಉಡುಪಿನ ಬಣ್ಣಕ್ಕೆ ಹೋಲುವ ಹಾಗೆ ಇಟ್ಟುಕೊಂಡ ಬಿಂದಿಗೆ, ಹಚ್ಚಿಕೊಂಡ ಉಗುರು ಬಣ್ಣ, ತೊಟ್ಟ ಕೈ ಬಳೆಗಳು, ನೀಳವಾದ ಜಡೆಗೆ ಹಾಕಿಕೊಂಡ ರಿಬ್ಬನ್ ಒಟ್ಟಾರೆ “ಅರಸಿಕನಲ್ಲೂ ರಸಿಕತೆಯನ್ನ ಬಡಿದೆಬ್ಬಿಸಿ ತರುವ ರೂಪರಾಶಿಯನ್ನು ಮೈಗೂಡಿಸಿಕೊಂಡಿದ್ದ ಅಪ್ರತಿಮ ಲಾವಣ್ಯದ ದಿವ್ಯಾಂಗನೆ ಅವಳು”.

ಅವಳ ಆ “ಸೌಂದರ್ಯರಾಶಿಯನ್ನು ನನ್ನ ನಯನಗಳಲ್ಲಿ ತುಂಬಿಕೊಂಡು, ನಿದ್ರಾದೇವಿಯ ಪರವಶವಾಗುತ್ತಿರುವಾಗಲೇ” ಬಸ್ಸಿನ ಚಾಲಕನು ಹಠಾತ್ತನೆ ವಾಹನದ ಬ್ರೇಕ್ ಹಾಕಿದನು. ಕ್ಷಣಾರ್ಧದಲ್ಲಿ ನನ್ನ ಅವಳ ಹಣೆಗಳೆರಡು ಎದುರಿನ ಸೀಟಿಗೆ ನೋವು ತರುವ ಮುತ್ತನ್ನಿಟ್ಟವು...
(ಮುಂದುವರೆಯುವುದು..........) - ನಿಮ್ಮ ಸುನಿಲ್ ಮಲ್ಲೇನಹಳ್ಳಿ

8 ಕಾಮೆಂಟ್‌ಗಳು:

Prashanth Urala. G ಹೇಳಿದರು...

ಆತ್ಮೀಯ ಸುನಿಲ್ ಮಲ್ಲೇನಹಳ್ಳಿ ಅವರಿಗೆ ನನ್ನ ನಮಸ್ಕಾರಗಳು...

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ

ನಿಮ್ಮ ಈ ಲೇಖನವನ್ನ ಓದುತ್ತಾ ನಾನೇ ಆ ಬಸ್ಸಿನಲ್ಲಿ ಸಹ ಪ್ರಯಾಣಿಗನೆಂಬಂತೆ, ಪ್ರತಿಯೊಂದು ದೃಷ್ಯವೂ ಕಣ್ಮುಂದೆ ನಡೆದಂತೆ ಅನಿಸಿತು....

ನಿಜಕ್ಕೂ ನಿಮ್ಮ ಲೇಖನ ಅಧ್ಬುತವಾಗಿದೆ, ಬರವಣಿಗೆ ಸುಂದರವಾಗಿದೆ... ಮುಂದಿನ ಭಾಗಕ್ಕಗಿ ಕಾದು ಕುಳಿತಿದ್ದೇನೆ...ವಂದನೆಗಳೊಂದಿಗೆ,
ಪ್ರಶಾಂತ. ಜಿ. ಉರಾಳ

ಅನಾಮಧೇಯ ಹೇಳಿದರು...

kathe thumbaa chennagide. hudugina swalpa jaasthee ne varNisthaa iddera !!!!!(mostly idu nanna hottekichina maathu irabahudu, antha chance nanage siglilvalla antha).

ಅನಾಮಧೇಯ ಹೇಳಿದರು...

thumbane chennagi moodi barthidhe kano sunila......Am so curious to read,,,,,Keep going..:-)

ವಿ.ರಾ.ಹೆ. ಹೇಳಿದರು...

ಕುತೂಹಲ ಹುಟ್ಟಿಸಿದೆ...

ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ......

Srik ಹೇಳಿದರು...

Wa Wa!!
ninna aa varnisuva shaily, aaha!!
illiyavarege Mooru sala odiddenne, ninna mundina ankanakke kaadiruva

Aathmiya Geleya
Srikanth

Unknown ಹೇಳಿದರು...

ಪ್ರಶಾಂತ್ ಅವರೇ, ವಲ್ಲಿಶ್ ಅವರೇ, ಸುನಿಲಾ, ವಿಕಾಸ್ ಅವರೇ, ಶ್ರೀಕಾಂತ್ ನಿಮಗೆಲ್ಲರಿಗೂ ಹೃದಯಪೂರ್ವಕ ವಂದನೆಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಭಾಗ -೧ ಹಾಗೂ ೨ ಒಟ್ಟಿಗೇ ಓದಿದೆ.. ತುಂಬಾ ಆಸಕ್ತಿಕರ ಹಗೂ ಕುತೂಹಲಕರವಾಗಿವೆ ನಿಮ್ಮ ಬರಹ. ಆದಷ್ಟು ಬೇಗ ಮುಂದಿನ ಭಾಗ ಹಾಗೂ ಕೊನೆಯ ಭಾಗಗಳು ಬರಲಿ ಎಂದು ಆಶಿಸುವೆ.

Harish ಹೇಳಿದರು...

Hello Sunil,

I have read all your episodes, that was very nice. Congrats, I hope, surely she will get you in your future life. All the best.

Thanks for sharing your expirience.
Harish.