ಸೋಮವಾರ, ಸೆಪ್ಟೆಂಬರ್ 8, 2008

ಹೃದಯಬಿಚ್ಚಿ ಲೇಖನವೊಂದನ್ನು ಬರೆದಾಗ...


ಪ್ರಿಯ ಓದುಗ ವೃಂದಕ್ಕೆ ನನ್ನ ಹೃದಯಪೂರ್ವಕ ನಮನ. ನೀವೇನೋ ಗೌರಿ,ಗಣೇಶ ಹಬ್ಬ ಮಾಡೊದಕ್ಕೆ ನಿಮ್ಮ ನಿಮ್ಮ ಊರಿಗೆ ಹೊರಟ್‌ಹೋಗಿಬಿಟ್ಟಿದ್ರಿ. ಆದ್ರೆ ಇಲ್ಲಿ..ನನ್ನ ಬ್ಲಾಗಿನಲ್ಲಿ ನಾ ಬರೆದ ಕವನಗಳು, ಲೇಖನಗಳು ಓದುವವರು ಯಾರೂ ಇಲ್ವಲಪ್ಪ ಅಂತ ಒಂದೇ ಸಮನೆ ಅಳ್ತಾ ಇದ್ದವು. ಅದನ್ನು ಬಿಟ್ಟ್‌ಹಾಕಿ ಅವುಗಳದ್ದು ಯಾವಾಗಲೂ ಅದೇ ಗೋಳು ಒಂದೊಂದು ಸಲ ಅಳ್ತವೆ, ಒಂದೊಂದು ಸಲ ನಗ್ತಾ ಇರುತ್ತವೆ. ಹೌದು ಮರೆತೇಬಿಟ್ಟಿದ್ದೆ! ಗೌರಿ,ಗಣೇಶ ಹಬ್ಬದ ಆಚರಣೆ ಹೇಗಿತ್ತು? “ನಿಮಗೆಲ್ಲ ತಡವಾದ ಗೌರಿ,ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು”.



ಗೌರಿ, ಗಣೇಶ ಹಬ್ಬದ ಅಂಗವಾಗಿಯೇ ಒಂದು ಲೇಖನ ಬರೆದಿರುವೆನು. ಸ್ವಲ್ಪ ದೀರ್ಘಲೇಖನವಾದ್ದರಿಂದ ಈ ಲೇಖನವನ್ನು ಕಂತುಗಳಲ್ಲಿ ಪ್ರಕಟಿಸುತ್ತಾ ಹೋಗುತ್ತೇನೆ.ಬಿಡುವು ಸಿಕ್ಕಾಗಲೆಲ್ಲ ಓದಿ.ಪ್ರತಿಯೊಂದು ಕಂತು ನಿಮಗೆ ಮೆಚ್ಚಿಗೆಯಾಗುವುದೆಂದು ನನ್ನ ಭಾವನೆ. ಇಷ್ಟವಾದರೆ ಮಾಮೂಲಿಯಂತೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ಅಂಕಣ-೧


ಆಗುಂಬೆಯ ಹತ್ತಿರ ಹೆಬ್ರಿಯಲ್ಲಿ ಶಿಕ್ಷಕನಾಗಿರುವ ನನ್ನ ಬಾಲ್ಯ ಸ್ನೇಹಿತ ಸತಿ ಫೋನ್ ಮಾಡಿದಾಗಲೆಲ್ಲ, "ಓ ಮಾರಾಯ ಅಲ್ಲೇನ್ ಬರಿ ಕಾಂಕ್ರೀಟ್ ಕಟ್ಟಡಗಳನ್ನು ನೋಡಿಕೊಂಡು ಇರ್ತಿ, ಒಮ್ಮೆ ಇಲ್ಲಿಗೆ ಬಂದೋಗಪ್ಪ, ಪ್ರಕೃತಿ ಮಾತೆಯೇ ಇಲ್ಲಿ ಹಚ್ಚಹಸಿರಿನ ಮನೆ ಮಾಡಿಕೊಂಡವ್ಳೆ. ಸ್ವರ್ಗಕ್ಕೂ ಇಲ್ಲಿಗೂ ಬರಿ ಮೂರೇ ಗೇಣು ಕಣೋ" ಎಂದು ಘಟ್ಟದ ಕೆಳಗಿನ ಜನರ ಭಾಷೆಯ ಶೈಲಿಯಲ್ಲಿ ಹೇಳ್ತಾ ಇದ್ದ. ಹಲವಾರು ಸಾರಿ ಅಲ್ಲಿಗೆ ಹೋಗಿ ಬರುವ ಯೋಜನೆಯನ್ನು ನಾನು ಹಾಕಿಕೊಂಡರೂ ಅದು ವ್ಯರ್ಥಪ್ರಯತ್ನವಾಗುತ್ತಿತ್ತೇ ಹೊರತು ಎಂದೂ ಕೈಗೂಡಿರಲಿಲ್ಲ!

(ಅಂಕಣ ೨ ಮುಗಿದ ನಂತರ ಮತ್ತೆ ಅಂಕಣ ೧ ಶುರುವಾಗುವುದು)

ಅಂಕಣ ೨


ಯಾರು ಈ ಸತಿ? ಸರಿಸರಿ ಮೊದ್ಲು ಸತಿ ಬಗ್ಗೆ ಸ್ವಲ್ಪ ಹೇಳ್‌ಬಿಡ್ತಿನಿ, ಇವ ನನ್ನ ಬಾಲ್ಯದ ಗೆಳೆಯ. ಹತ್ತನೇಯ ತರಗತಿಯವರೆಗೂ ನಾನು, ಅವ ಒಟ್ಟೊಟ್ಟಿಗೆ ಬೆಳೆದವರು. ಪಾಠ, ಆಟ, ಊಟ ಎಲ್ಲದರಲ್ಲೂ ಎಷ್ಟು ಜಗಳವಾಡುತ್ತಿದ್ದೇವೋ ಅದಕ್ಕಿಂತ ಒಂದುಪಾಲು ಹೆಚ್ಚಾಗಿಯೇ ಆತ್ಮೀಯತೆಯಿಂದ ಇರ್ತಾಇದ್ವಿ.

ಚಿಕ್ಕಂದಿನಲ್ಲಿ ನಮ್ಮ ಗ್ಯಾಂಗಿನ ಸದಸ್ಯರುಗಳು ಮಾಡುತ್ತಿದ್ದ ಅನೇಕಾಕ ತುಂಟಾಟ ಕೆಲಸಗಳಲ್ಲಿ ನನ್ನಷ್ಟೇ ಸಹಭಾಗಿಯಾಗಿರುತ್ತಿದ್ದ. ಮುಗ್ಧತನ ಹಾಗೂ ಪೆದ್ಧತನಗಳ ಮಿಶ್ರಣದ ಫಲವಾಗಿ ನಾವು ಮಾಡುತ್ತಿದ್ದ ಕೀಟ್ಲೆ ಕೆಲ್ಸಗಳು ಒಂದಾ-ಎರಡಾ? ನಾನು ಸಹ ಆಗ ಈಗಿನಷ್ಟೂ ನಾಚಿಕೆ, ಹಿಂಜರಿಕೆ ಸ್ವಭಾವದ ಹುಡುಗನಾಗಿರಲಿಲ್ಲ, ಎಲ್ಲದರಲ್ಲೂ ಬಹಳ ಚಲಾಕು ಇದ್ದೆ! “ಬಾಲ್ಯದಲ್ಲಿ ಹಾಗೆ ಮಾಡಿದ್ದ ಹಲವಾರು ಘಟನೆಗಳು ಈಗಲೂ ಸಹ ಅಚ್ಚಳಿಯದ ನೆನಪಿನ ಚಿತ್ರಣಗಳಾಗಿ ನನ್ನ ಮನದಲ್ಲಿ ಹಾಗೆಯೇ ಉಳಿದಿವೆ!” ಸತಿಯ ಬಗ್ಗೆ ಹೇಳಲುಹೋಗಿ ಇಷ್ಟೆಲ್ಲ ಹೇಳಬೇಕಾಯಿತು ಈಗ "ಮೂಲಕಥೆ"ಗೆ ಬರೋಣ...

(ಅಂಕಣ ೧ ರ ಮುಂದುವರಿಕೆ..)


ಆದರೆ ಕಳೆದ ವಾರ ಇದ್ದಕ್ಕಿದ್ದ ಹಾಗೆ ಎಲ್ಲಾದರೂ ಹೋಗಿಬರಬೇಕೆಂಬ ಆಲೋಚನೆಯು ಮನಸ್ಸಲ್ಲಿ ಮೂಡಿತು. ನನ್ನ ಕವನ, ಲೇಖನಗಳನ್ನು ಬರೆವ ಹವ್ಯಾಸಕ್ಕೆ ತಾತ್ಕಾಲಿಕ ತಿಲಾಂಜಲಿಯನ್ನಿಟ್ಟು, ಶುಕ್ರವಾರ ಮಧ್ಯಾಹ್ನ ಹನ್ನೆರಡಕ್ಕೆ ಮೆಜೆಸ್ಟಿಕ್ ತಲುಪಿ, ಅಲ್ಲಿಂದ ಹೆಬ್ರಿಯತ್ತ ಹೋಗುವ ರಾಜಹಂಸ ಬಸ್ಸನ್ನೇರಿ ಹೇಗೋ ಮಟ್ಟಮಧ್ಯದಲ್ಲೇ ಸೀಟುದಕ್ಕಿಸಿಕೊಂಡು ಕುಳಿತೆ.

ಹಾಸನ ಮಾರ್ಗವಾಗಿ ಇದೇ ಮೊದಲ ಸಲ ಪ್ರಯಾಣಿಸುತ್ತಿದ್ದೆನಾದ್ದರಿಂದ ಅಲ್ಲಿನ ಪ್ರಕೃತಿ ಸೊಬಗು “ಹಾಗೆ ಇರಬಹುದು..ಹೀಗೆ ಇರಬಹುದು” ಎಂದು ಮನದಲ್ಲಿ ಕಲ್ಪಿಸುತ್ತಾ, ಪಕ್ಕದಲ್ಲಿ ಯಾರು? ಕುಳಿತಿರುವರು ಎಂದು ನೋಡುವ ಗೋಜಿಗೆ ಹೋಗದೆ ಹಾಗೆಯೇ ನಿದ್ರೆಹೋದೆ. ಹಾಸನ ಹತ್ತಿರ, ಹತ್ತಿರವಾಗುತ್ತಿದ್ದಂತೆ ನನಗೆ ಎಚ್ಚರವಾಯಿತು. ಕಣ್ತೆರದು ನೋಡಿದಾಗ ನನ್ನ ಪಕ್ಕದಲ್ಲಿ ಕುಳಿತಿರುವರು 60ರ ಆಸುಪಾಸಿನ ಹಿರಿಯ ನಾಗರೀಕರು ಎಂದು ಆಗಲೇ ನನಗರಿವಾದುದ್ದು. ಅವರು ಪರಿಚಯ ಮಾಡಿಕೊಳ್ಳದಿದ್ದರೆ ಏನೆಂದುಕೊಂಡಾರು? ಎಂದು ಯೋಚಿಸಿ, ನಾನೇ ಅವರ ಹೆಸರು, ಊರು ಕೇಳುತ್ತಾ ಔಪಚಾರಿಕವಾಗಿ ಒಂದೆರಡು ಮಾತನಾಡಿದೆ. ಅಷ್ಷರಲ್ಲಿ ಹಾಸನದ ಬಸ್ಸ್ ನಿಲ್ದಾಣ ಬಂದೇಬಿಟ್ಟಿತು. ಸರಿ ನಮ್ಮೂರು ಬಂತಪ್ಪ ಮತ್ತೆಸಿಗೋಣ ಎಂದು ಹೇಳಿ ಆ ಹಿರಿಯರು ಬಸ್ಸಿನಿಂದ ಇಳಿದುಹೋದರು.

ಅವರು ಹೋದ ಕ್ಷಣಾರ್ಧದಲ್ಲೇ ಭಾರಿಗಾತ್ರದ ಲಗೇಜ್‌ಗಳನ್ನೊತ್ತು ಮೂರುಜನ ತರುಣಿಯರ ಗುಂಪೊಂದು ಬಸ್ಸಿನ ಒಳಗಡೆ ಪ್ರವೇಶಿಸಿ ಖಾಲಿ ಇರುವ ಸೀಟುಗಳನ್ನು ಹುಡುಕತೊಡಗಿದರು. ಬಸ್ಸು ಭಾಗಶ: ಭರ್ತಿಯಾಗಿದ್ದರಿಂದ ಅವರಿಗೆ ಸೀಟು ಸಿಗುವುದು ದುಸ್ತರವಾಗಿತ್ತು. ನನ್ನ ಪಕ್ಕದಲ್ಲಿ ಇದ್ದ ಒಂದು ಸೀಟ್ ಬಿಟ್ಟರೆ ತೀರಾ ಹಿಂದಗಡೆಯಲ್ಲಿ ಒಂದೆರಡು ಸೀಟ್‌ಗಳು ಖಾಲಿ ಇದ್ದವೂ. ಆ ಗುಂಪಿನ ಇಬ್ಬರು ತರುಣಿಯರು ಮತ್ತೊಬ್ಬಳನ್ನು ಕುರಿತು ನೀನು ಇಲ್ಲೇ ಕುಳಿತುಕೋ ನಾವಿಬ್ಬರು ಹಿಂದಗಡೆ ಹೋಗಿ ಕುಳಿತುಕೊಳ್ಳುತ್ತೇವೆ ಎಂದೇಳಿ ಹಿಂದೆ ಖಾಲಿ ಇದ್ದ ಸೀಟುಗಳತ್ತ ಹೆಜ್ಜೆ ಹಾಕಿದರು.

ಇದನ್ನೆಲ್ಲಾ ಮೂಕಪ್ರೇಕ್ಷಕನಾಗಿ ನೋಡುತ್ತಾ ಇದ್ದ ನಾನು ಪಕ್ಕಕ್ಕೆ ಸರಿದು “ಆ ಹುಡುಗಿ” ಕುಳಿತುಕೊಳ್ಳಲು ಅನುವು ಮಾಡಿಕೊಟ್ಟೆ. ಲಗೇಜ್ ಕ್ಯಾಬಿನ್‌ನಲ್ಲಿ ತನ್ನ ಲಗೇಜ್ ಇಟ್ಟು ನನ್ನ ಪಕ್ಕದಲ್ಲಿ ಕುಳಿತಳು ಆ ಹುಡುಗಿ. ನಾನಾಗಿಯೇ ಮೇಲೆಬಿದ್ದು ಮಾತನಾಡಿಸುವ ಗೋಜಿಗೆ ಹೋಗದೆ ನನ್ನ ಪಾಡಿಗೆ ನಾನು ಇರಲು ನಿಶ್ಚಯಿಸಿದೆ. ಅಷ್ಷರಲ್ಲಿ ಬಸ್ಸುಹೊರಡುವ ವೇಳೆಯಾಗುತ್ತಿತ್ತು. ಕಿಟಕಿಯ ಸಮೀಪ ಬಂದ ಸೀಬೆಕಾಯಿ ಮಾರುವವನಲ್ಲಿ ನಾಲ್ಕು ಸೀಬೆಕಾಯಿ ಖರೀದಿಸಿ, ಹತ್ತು ರೂಪಾಯಿಯನ್ನು ಅವನ ಕೈಯಲ್ಲಿಡುತ್ತಾ,..ಚಿಲ್ಲರೆ ನೀನೇ ಇಟ್ಟುಕೊಳ್ಳಪ್ಪ ಎಂದೇಳಿದೆ. “ಪಕ್ಕದಲ್ಲಿ ಹುಡುಗಿ ಕುಳಿತ್ತಿದ್ದರಿಂದಲೋ ಏನೋ? ನನ್ನಲ್ಲಿ ಧಾರಾಳತನ ತಾನಾಗಿಯೇ ಮನೆ ಮಾಡಿತ್ತು!” ಬಸ್ಸು ಹಾಸನದ ನಿಲ್ದಾಣವನ್ನು ಬಿಟ್ಟು ಹೊರಟ್ಟಿತು.

(ಮುಂದುವರೆಯುವುದು...)

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ANTU INTU SUNIL AVRIGE ONDU AVKASHA SIKKTU ANTA OOHISTAIDDINI. NIJA HELI HUDIGINA NODOKE HOGIDDO ATAVA FRIEND NA ?

ಅನಾಮಧೇಯ ಹೇಳಿದರು...

aamele yenaaythoooo? bega bariyiri... suspense thadkoLakke aagtha ille. climax chennagirabeku.

Unknown ಹೇಳಿದರು...

Munde yenaitu??

Parisarapremi ಹೇಳಿದರು...

nice one... bega bega mundvarsi pa... :-)

Unknown ಹೇಳಿದರು...

ಮುಂದೇನಾಯಿತು?? ಖಂಡಿತಾ ಗೊತ್ತಾಗುವುದು ಮುಂದಿನ ಲೇಖನದಲ್ಲಿ :)

ಅನಾಮಧೇಯ ಹೇಳಿದರು...

CHANNAGIDE ADRE.......

NIVUUU NIVUU...

NIVU NODIDA HUDGIIII....

"YARU ANTA HELBIDRI"

Kumar ಹೇಳಿದರು...

Nimma story muduvarshi