ಶನಿವಾರ, ಫೆಬ್ರವರಿ 1, 2014

ಕಂಪ್ಯೂಟರ್ ನಲ್ಲಿ ಕನ್ನಡ ಬರವಣಿಗೆ ಎಷ್ಟು ಸುಲಭ?


ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ನನ್ನನ್ನು ಕೇಳುತ್ತಾ ಕಂಪ್ಯೂಟರ್ ನಲ್ಲಿ ಕನ್ನಡದ ಅಕ್ಷರಗಳನ್ನು ಬರೆಯುವುದು ಹೇಗೆ? ಯಾವ ತಂತ್ರಾಂಶ (Software) ಅಳವಡಿಸಿಕೊಳ್ಳಬೇಕು? ಇಂಟರ್ನೆಟ್ ಸಹಾಯವಿಲ್ಲದೆ ಬರೆಯಬಹುದಾ? ವಿವರವಾಗಿ ತಿಳಿಸೆಂದು ಹೇಳಿದ್ದರು. ನಾಲ್ಕಾರು ವರುಷಗಳಿಂದ ಕಂಪ್ಯೂಟರ್ ನಲ್ಲಿ ಕನ್ನಡ ಪದಗಳನ್ನು ನಿಯತವಾಗಿ ಬರೆಯುವುದ ಅಭ್ಯಾಸ ಮಾಡಿಕೊಂಡು ಬಂದಿರುವ ಮತ್ತು ಬರವಣಿಗೆಯನ್ನೇ ಹವ್ಯಾಸವಾಗಿರಿಸಿಕೊಂಡಿರುವ ನನ್ನಂಥ ಬಹಳಷ್ಟು ಕನ್ನಡ ಬಾಂಧವರಿಗೆ ಕಂಪ್ಯೂಟರ್ ನಲ್ಲಿ ಕನ್ನಡ ಪದಗಳನ್ನು ಬರೆಯುವುದೆಂದರೆ ಅದರಲ್ಲೇನಿದೆ ಕಷ್ಟ? ಬಹಳ ಸುಲಭವಾಗಿ ಬರೆದುಬಿಡಬಹುದು ಎಂದು ನಿಸ್ಸಂಶಯವಾಗಿ ಹೇಳುತ್ತೇವೆ. ಆದರೆ ನಿತ್ಯ ಕಂಪ್ಯೂಟರ್ ಬಳಸುತ್ತಿದ್ದರೂ ಕನ್ನಡದ ಒಂದು ಪದವನ್ನು ಬರೆಯಲು ಪ್ರಯತ್ನಿಸದವರು ಅಥವಾ ಬರೆಯುವ ಇಚ್ಚೆ ಇದ್ದರೂ ಬರವಣಿಗೆಗಾಗಿ ಅಭಿವೃದ್ದಿಪಡಿಸಿರುವ ತಂತ್ರಾಂಶಗಳ ಬಗ್ಗೆ ಪೂರ್ಣವಾದ ಮಾಹಿತಿ ಸಂಗ್ರಹಿಸದವರು ಇಂತಹವರಿಗೆ ಕಂಪ್ಯೂಟರ್ ನಲ್ಲಿ ಕನ್ನಡದ ಪದಗಳನ್ನು ಬರೆಯುವುದೆಂದರೆ ತುಸು ತ್ರಾಸದ ಕೆಲಸವೇ ಸರಿ!

2006ರ ಮಧ್ಯಭಾಗದಲ್ಲಿ ನಾನು ಕಂಪ್ಯೂಟರ್ ಎಂಬ ಮಾಯಾ ಪೆಟ್ಟಿಗೆಯಲ್ಲಿ ಕನ್ನಡದ ಪದಗಳನ್ನು ಹೇಗೆ ಬರೆಯುವುದು ಎಂದು ತಲೆ ಕೆಡಿಸಿಕೊಂಡು, ಏನೂ ತೋಚದೆ ಸುಮ್ಮನಿದ್ದೆ. ಇದಕ್ಕೆ ಹೊಂದುವಂತೆ ಅಂತರ್ಜಾಲದಲ್ಲಿ (Internet) ಯಾವ್ಯಾವ ತಂತ್ರಾಂಶಗಳು ಕನ್ನಡದ ಬರವಣಿಗೆಗಾಗಿಯೇ ಜನ್ಮ ಪಡೆದುಕೊಂಡಿದ್ದಾವೆ ಎನ್ನುವ ವಿಚಾರವೂ ನನಗೆ ಆಗ ಗೊತ್ತಿರಲಿಲ್ಲ. ಒಮ್ಮೊಮ್ಮೆ ಕನ್ನಡ ರಾಜ್ಯೋತ್ಸವದ ಶುಭ ಸಂದೇಶಗಳನ್ನು ಕಳುಹಿಸುವಾಗ MS Paintನಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯವೆಂದು (ಕಲರ್ ಕಲರಾಗಿ)ಬರೆದು JPEGಗೆ ಪರಿವರ್ತಿಸಿ ಸ್ನೇಹಿತರಿಗೆಲ್ಲ ಇ-ಮೇಲ್ ಮಾಡುತ್ತಿದ್ದದ್ದುಂಟು!

ದಿನಗಳು ಕಳೆದಂತೆ ಗೆಳೆಯರಿಂದ ಬರಹ ಹಾಗೂ ನುಡಿ ತಂತ್ರಾಂಶಗಳ ಬಗ್ಗೆ ಅಲ್ಪ-ಸ್ವಲ್ಪ ಅರಿವು ಸಂಪಾದಿಸಿ. ಈ ಎರಡೂ ತಂತ್ರಾಂಶಗಳನ್ನು ನನ್ನ ಕಂಪ್ಯೂಟರ್ ನಲ್ಲಿ ಅಳವಡಿಸಿ (Install) ಕನ್ನಡದಲ್ಲಿ ಬರೆಯುವುದನ್ನು ರೂಢಿ ಮಾಡಿಕೊಂಡೆ. ಆ ಸಮಯದಲ್ಲಿ ಯೂನಿಕೋಡ್ (Unicode) ಬಗ್ಗೆ ಗೊತ್ತಿರಲಿಲ್ಲವಾದ್ದರಿಂದ ಬರಹ ಅಥವಾ ನುಡಿಯನ್ನು ಉಪಯೋಗಿಸಿಕೊಂಡು ಬರೆದ ಲೇಖನಗಳನ್ನು PDF ರೂಪಕ್ಕೆ ತಂದು ಸ್ನೇಹಿತರಿಗೆ ಕಳುಹಿಸುತ್ತಿದ್ದೆ! ನಂತರದ ದಿನಗಳಲ್ಲಿ ಬರಹ ಅಥವಾ ನುಡಿಯಲ್ಲಿ ಬರೆದ ಲೇಖನಗಳನ್ನು ಯೂನಿಕೋಡ್ ರೂಪಕ್ಕೆ ಪರಿವರ್ತಿಸುವುದನ್ನು ಕಲಿತೆ, ಇದರಿಂದ ಬ್ಲಾಗ್ ನಲ್ಲಿ ಲೇಖನಗಳನ್ನು ಪ್ರಕಟಿಸಲು ಅನುಕೂಲವಾಯಿತು (ಬ್ಲಾಗ್ ಅನ್ನು ಕಟ್ಟಿದ್ದು ಸ್ನೇಹಿತರ ಸಹಾಯದಿಂದಲೇ!). ನೋಡು, ನೋಡುತ್ತಿದ್ದಂತೆಯೇ ಭಾಷಾ ಬರಹಗಳ ಬಗ್ಗೆ ಮಾಹಿತಿ ತಂತ್ರಜ್ಞಾನದಲ್ಲಿ ವಿವಿಧ ಅವಿಷ್ಕಾರಗಳಾಗಿ ಕನ್ನಡ ಹಾಗೂ ಇನ್ನಿತರ ಭಾರತೀಯ ಭಾಷೆಗಳಲ್ಲಿ ಬರೆಯಲು ಗೂಗಲ್ ನವರು “Google Indic Transliteration” ಅನ್ನುವುದನ್ನು ಸುಲಭವಾಗಿ ಮತ್ತು ಸರಾಗವಾಗಿ ಬರೆಯುವ ರೀತಿಯಲ್ಲಿ ಅಭಿವೃದ್ದಿಪಡಿಸಿದ್ದರು.

ಕೆಲವು ವರುಷಗಳ ಸಾರ್ಥಕ ಸೇವೆಯ ನಂತರ ಈಗ್ಗೆ ಬೆರಳೆಣಿಕೆ ದಿನಗಳ ಹಿಂದೆಯಷ್ಟೆ “Google Indic Transliteration” ಅನ್ನು ಅಂತರ್ಜಾಲ ಜಗತ್ತಿನಿಂದ ಹಿಂತೆಗೆದು ಅದಕ್ಕಿಂತಲೂ ಹೆಚ್ಚು ಸ್ನೇಹಿಯಾದ ತಂತ್ರಜ್ಞಾನವನ್ನು http://www.google.com/inputtools/ ನಲ್ಲಿ ಗೂಗಲ್ ನವರು ಅಭಿವೃದ್ದಿಪಡಿಸಿದ್ದಾರೆ. ಗೂಗಲ್ ನವರ ಈ ಹೊಸ ಉತ್ಪನ್ನದ ಬಗ್ಗೆ ಸ್ವಲ್ಪ ವಿಸ್ತಾರವಾಗಿ ಬರೆಯುವುದು ಹೆಚ್ಚು ಸೂಕ್ತವೆಂದು ನನ್ನ ಅಭಿಪ್ರಾಯ. ಏಕೆಂದರೆ ಇದರಲ್ಲಿರುವ ತಂತ್ರಜ್ಞಾನವು ಉಪಯೋಗಿಸುವವರ ಅಪ್ತ ಸ್ನೇಹಿಯಾಗಿದೆ ಮತ್ತು “Google Indic Transliteration” ಗಿಂತ ಹೆಚ್ಚು ನಿಖರ ಹಾಗೂ ಸರಾಗತೆಯನ್ನು ಹೊಂದಿದೆ ಅಲ್ಲದೆ ಇಂಟರ್ನೆಟ್ ಸಹಾಯವಿಲ್ಲದೆ ವರ್ಡ್ ಡಾಕ್ಯುಮೆಂಟ್ ಅಥವಾ ನೋಟ್ ಪ್ಯಾಡ್ ನಲ್ಲಿ ಕನ್ನಡದ ಪದಗಳನ್ನು ಬರೆಯಬಹುದು.

ಗೂಗಲ್ ಇನ್ಪುಟ್ ಟೂಲ್ (Google Input Tools)ಅನ್ನು ಕಂಪ್ಯೂಟರ್ ನಲ್ಲಿ ಅಳವಡಿಸಿಕೊಳ್ಳುವ ವಿಧಾನಗಳು;

೧. http://www.google.com/inputtools/ ಈ ಲಿಂಕ್ ಅನ್ನು ಇಂಟರ್ನೆಟ್ ನಲ್ಲಿ ತೆರೆದಾಗ, ಕಾಣಸಿಗುವ “on windows”ನ ಮೇಲೆ ಕ್ಲಿಕ್ಕಿಸಿ. ನಂತರ ಬರುವ Choose Your Language ಅನ್ನುವಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಂಡು ತಂತ್ರಾಂಶವನ್ನು ಡೌನ್ಲೋಡ್ ಮಾಡಿ ನಿಮ್ಮ ಕಂಪ್ಯೂಟರ್ ನಲ್ಲಿ ಅಳವಡಿಸಿಕೊಳ್ಳಿ. ಅಲ್ಲಿಗೆ ಅಳವಡಿಸಿಕೊಳ್ಳುವ ಕೆಲಸ ಮುಗಿದ ಹಾಗೆ. ನಿಮ್ಮ ಕಂಪ್ಯೂಟರ್ ನಲ್ಲಿರುವ "ಟ್ಯಾಸ್ಕ್ ಬಾರ್" ಬಲ ಬದಿಯಲ್ಲಿ "EN" ಅಥವಾ "KD" ಎಂದು ಇರುತ್ತೆ. "EN" ಅನ್ನು ಆಯ್ಕೆ ಮಾಡಿಕೊಂಡರೆ ಇಂಗ್ಲೀಷ್ ನಲ್ಲಿ ಬರೆಯಲು , "KD" ಅನ್ನು ಆಯ್ಕೆ ಮಾಡಿಕೊಂಡರೆ ಕನ್ನಡದಲ್ಲಿ ಬರೆಯಲು ತಂತ್ರಾಂಶವು ಅನುವುಮಾಡಿಕೊಡುತ್ತೆ.

ಬರಿ ಗೂಗಲ್ ನವರ ತಂತ್ರಾಂಶವಲ್ಲದೆ ಕನ್ನಡ ಹಾಗೂ ಇನ್ನಿತರ ಭಾರತೀಯ ಭಾಷೆಗಳ ಬರವಣೆಗೆಗೆ ಹುಟ್ಟಿಕೊಂಡಿರುವ ವೈವಿದ್ಯ ರೀತಿಯ ತಂತ್ರಾಂಶಗಳನ್ನು ಈ ಕೆಳಗೆ ನಮೂದಿಸಿರುವ ಬೇರೆ,ಬೇರೆ ವೆಬ್ ಲಿಂಕ್ ಗಳಿಂದ ಡೌನ್ಲೋಡ್ ಮಾಡಕೊಳ್ಳಬಹುದು.

೨. http://www.baraha.com/ (ಇದು ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾದ ಮತ್ತು ಬಹಳಷ್ಟು ಕನ್ನಡ ಬರಹಗಾರರು ಉಪಯೋಗಿಸುವ ವೆಬ್ ತಾಣ. ಬರಹ ಡಾಟ್ ಕಾಮ್ ನಲ್ಲಿ ತಂತ್ರಾಂಶದ ಜೊತೆ ಇಂಗ್ಲೀಷ್ ಪದಗಳಿಗೆ ಕನ್ನಡ ಪದಗಳನ್ನು ತಿಳಿಸುವ “ಕನ್ನಡ ನಿಘಂಟು” ಕೂಡ ಇದೆ, ಅದಲ್ಲದೆ ಓದಲು ಸಾಕಷ್ಟು ಕನ್ನಡದ ಬ್ಲಾಗ್ ಬರಹಗಳು ಸಹ ಇಲ್ಲಿವೆ)

೩. http://www.quillpad.in/index.html

೪. http://kannada.indiatyping.com/

೫. http://www.karunadu.gov.in/pages/nudi.aspx

ಇಲ್ಲಿಯವರೆಗೂ ಕಂಪ್ಯೂಟರ್ ಗಾಗಿ ಅಭಿವೃದ್ದಿಪಡಿಸಿರುವ ಕನ್ನಡ ತಂತ್ರಾಂಶಗಳ ಬಗ್ಗೆ ತಿಳಿದುಕೊಂಡೆವು. ಅದೇ ರೀತಿ ಮೊಬೈಲ್ ಗಳಲ್ಲಿ ಕನ್ನಡ ಬರಹವನ್ನು ಬರೆಯಬಹುದೇ? ಹೌದೆನ್ನುವುದಾದರೆ, ಹೇಗೆ ಬರೆಯಬಹುದು ಅನ್ನುವುದನ್ನು ತಿಳಿಯೋಣ.

ಮೊಬೈಲ್ ಗಳು ಅನ್ ಡ್ರಾಯಿಡ್ ದಾಗಿದ್ದರೆ ವಿಭಿನ್ನ ಭಾಷಾ ಬರಹಕ್ಕೆ ಸಹಾಯ ಮಾಡುವ Application (App)ಗಳನ್ನು ಪ್ಲೇ ಸ್ಟೋರ್ ನಿಂದ ಉಚಿತವಾಗಿ ಡೌನ್ ಲೋಡ್ ಮಾಡಿ ಮೊಬೈಲ್ ನಲ್ಲಿ ಅಳವಡಿಸಿಕೊಳ್ಳಬೇಕು. ಅವುಗಳಲ್ಲಿ ಪ್ರಮುಖವಾದ Appsಗಳೆಂದರೆ
೧. ಮಲ್ಟಿ ಲಿಂಗ್ ಕೀಬೋರ್ಡ್ ( https://play.google.com/store/apps)

೨. ಕನ್ನಡ ಪ್ರೈಡ್ ಎಡಿಟರ್ (https://play.google.com/store/apps/details?id=nichetech.kannad.editor&hl=en)

ಕಂಪ್ಯೂಟರ್ ನಲ್ಲೋ ಇಲ್ಲವೇ ಮೊಬೈಲ್ ನಲ್ಲೋ ಒಮ್ಮೆ ಕನ್ನಡ ಅಕ್ಷರಗಳ ಬರೆಯುವ ಪ್ರಯತ್ನ ಮಾಡಿನೋಡಿ. ಮತ್ತೆ ಇಂಗ್ಲೀಷ್ ನಲ್ಲಿ ಬರೆಯುವ ಮನಸ್ಸು ನಿಮ್ಮದಾಗಿರುವುದಿಲ್ಲ. ನೀವೇ ಹೇಳುವಿರಿ ಕಂಪ್ಯೂಟರ್ ನಲ್ಲಿ ಕನ್ನಡ ಬರವಣಿಗೆ ಎಷ್ಟು ಸುಲಭ ಅಲ್ಲವೇ? ಎಂದು.

2 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ತಾಳೆಗರಿ ಹೇಳಿದರು...

windows ನಲ್ಲಿ ಕನ್ನಡ ಅಕ್ಷರ ಮೂಡಿಸುವ ಬಗ್ಗೆ ಗೂಗಲ್ input tools ಬಗ್ಗೆ ಬರೆದಿದ್ದೀರಿ. ಅದರೆ ಯಾವ ಪರಿಕರ ಯಾವ ಕೀಬೋರ್ಡ್ ಗಳನ್ನು ಬಳಸುತ್ತವೆ ಅಂತ ಬರೆದಿಲ್ಲ. ಈಗ KP, inscript ಮತ್ತು inscript ಅನ್ನೋ standard ಕೀಬೋರ್ಡ್ ಮಾದರಿಗಳಿವೆ. ಗೂಗಲ್ಲು ತನ್ನದೇ ಆದ probabilistic ಆದ ತಂತ್ರವನ್ನ ಬಳಸುತ್ತದೆ ಅಂತ ಕಾಣತ್ತೆ, ಇದು technically 'transliteration', ಆದರೆ 'keyboard layout' ಅಲ್ಲ.

ಕನ್ನಡಕ್ಕೆ windowsನಲ್ಲಿ native support ಇದೆ. microsoftನ bhasaindia (https://www.bhashaindia.com/) ಅನ್ನೋ ತಾಣದಲ್ಲಿ ಈ ಮೇಲೆ ಹೇಳಿದ ಮಾದರಿಯ ಎಲ್ಲ keyboard layout ನಲ್ಲಿ ಬರೆಯುವ ಸೌಲಭ್ಯ ಉಂಟು. ಇದು free software. pada ಅನ್ನೋ ಪರಿಕರವನ್ನೂ ಬಳಸಬಹುದು. ( http://www.pada.pro )